ಮಾಜಿ ಸಚಿವ, ಶಾಸಕ ಸಿಎಂ ಉದಾಸಿ ನಿಧನ

ಬೆಂಗಳೂರು : ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ (ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ) ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಇಂದು (ಜೂನ್ 8) ಮಧ್ಯಾಹ್ನ ನಿಧನರಾಗಿದ್ದಾರೆ. 85 ವರ್ಷದ ಅವರು ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಜನತಾ ಪರಿವಾರ ಹಿನ್ನೆಲೆಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅವರು ಹಲವು ಬಾರಿ ಆಯ್ಕೆಯಾಗಿದ್ದರು. ಸದ್ಯ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಸಿ ಎಂ ಉದಾಸಿ ಅವರೂ ಒಬ್ಬರಾಗಿದ್ದರು.

ಸಿಎಂ ಉದಾಸಿ ಮಧ್ಯಾಹ್ನ 2 ಗಂಟೆ 54 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಉದಾಸಿ ಪುತ್ರ ಹಾಗೂ ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ್ ಉದಾಸಿ ಹೇಳಿಕೆ ನೀಡಿದ್ದಾರೆ.

ಸಿ.ಎಂ. ಉದಾಸಿ ಅವರು ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು. ಫೆಬ್ರವರಿ 2, 1937ರಲ್ಲಿ ಸಾವಿತ್ರಮ್ಮ ಮತ್ತು ಮಹಾಲಿಂಗಪ್ಪ ದಂಪತಿಗೆ ಜನಿಸಿದ್ದರು. ಎಂಟನೆ ತರಗತಿ ವಿದ್ಯಾಭಾಸ ಮಾಡಿದ್ದ ಉದಾಸಿ, ನೀಲಮ್ಮ(ನೀಲಾಂಬಿಕಾ) ಎಂಬವರನ್ನು ವರಿಸಿದ್ದರು. ಉದಾಸಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. ಪುತ್ರ ಶಿವಕುಮಾರ ಉದಾಸಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

1974ರಲ್ಲಿ ಹಾನಗಲ್ ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1974ರಿಂದ 1980ರವರೆಗೆ ಪುರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1983ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಮೂರನೆ ಬಾರಿಗೆ ಶಾಸಕರಾಗಿದ್ದರು. 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆರನೆ ಬಾರಿಗೆ ಗೆಲುವು ಸಾಧಿಸಿದ್ದರು.

ಅಷ್ಟೇ ಅಲ್ಲದೆ, ಸಿ.ಎಂ. ಉದಾಸಿ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. 1994ರಲ್ಲಿ ದಿವಂಗತ ಜೆ.ಎಚ್.ಪಟೇಲ್​ರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. 2004ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕೆಲಸ ಮಾಡಿದ್ದರು. ಜವಳಿ ಸಚಿವರಾಗಿ ಮತ್ತು‌ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಜಕೀಯಕ್ಕೆ ಬರುವ ಮೊದಲು ಭತ್ತದ ವ್ಯಾಪಾರ ಮಾಡುತ್ತಿದ್ದ ಉದಾಸಿ, ನಂತರ ಹಾನಗಲ್ ಪಟ್ಟಣದಲ್ಲಿ ರೈಸ್ ಮಿಲ್ ಆರಂಭಿಸಿದ್ದರು. ಆ ಬಳಿಕ ಹಿರಿಯರ ಒತ್ತಾಯಕ್ಕೆ ಮಣಿದು ಪುರಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *