- ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಮತದಾನ
- ಹಣ ಹಂಚಿಕೆ ಕುರಿತು ಬಿಜೆಪಿ ನಾಯಕರ ಆರೋಪ
ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಣ ಹಂಚಿಕೆ ಆರೋಪದಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿ ಆದಿತ್ಯ ಆಮ್ಲನ್ ಬಿಸ್ವಾಸ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಪ್ರಕಾಶ್ ಹುಕ್ಕೇರಿಗೆ ಮತ ಹಾಕುವಂತೆ ಅವರ ಬೆಂಬಲಗರು ನಗರದ ಸೆಟ್‌ಲೈಟ್ ಬಸ್ ನಿಲ್ದಾಣದ ಬಳಿ ಹಣ ಹಂಚುವ ವೇಳೆ ಸಿಕ್ಕಿಬಿದಿದ್ದು, ಹಣವನ್ನು ವಶಪಡಿಸಿ ಕೊಳ್ಳಲಾಗಿದೆ. ಭಾನುವಾರ (ಜೂನ್ 12) ವಿಜಯಪುರ ನಗರದಲ್ಲಿ ಸುಮಾರು ₹17.40 ಲಕ್ಷ ಹಣದ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಭ್ಯರ್ಥಿಯ ಕರಪತ್ರಗಳು ಸಿಕ್ಕಿವೆ.
ಬೆಳಗಾವಿಯ ಗ್ರಾಮೀಣ ಪ್ರದೇಶದಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತಮ್ಮ ಹಿಂಬಾಲಕರ ಮೂಲಕ ಹಣ ಹಂಚಿದ್ದಾರೆ ಎಂಬ ಆರೋಪವಿದೆ. ಹಾಗಾಗಿ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಕಾಂಗ್ರೆಸ್ ಪಕ್ಷವು ಅಕ್ರಮವಾಗಿ, ಆಸೆ-ಆಮಿಷಗಳ ಮೂಲಕ ಗೆಲ್ಲಲು ಹವಣಿಸುತ್ತಿರುವುದು ಖಂಡನೀಯ’ ಎಂದು ದೂರು ಸಲ್ಲಿಸಿದ್ದಾರೆ.
‘ಪ್ರಕಾಶ ಹುಕ್ಕೇರಿ ಅವರ ಮೇಲೆ ‘ಪ್ರಜಾಪ್ರತಿನಿಧಿ ಕಾಯ್ದೆ’ಯಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಪರಿಷತ್ ಚುನಾವಣೆಯಿಂದ ಅವರನ್ನು ವಜಾಗೊಳಿಸಬೇಕು ಎಂದೂ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಒತ್ತಾಯಿಸಿದ್ದಾರೆ.