ಹಂಜ಼ಾ

-ಫಾದ್ವಾ ತುಖ಼ಾನ್

(ಫಾದ್ವಾ ತುಖ಼ಾನ್,ಆಕ್ರಮಿತ ಪ್ಯಾಲೇಸ್ತೈನ್ ಪ್ರದೇಶದ ಕ್ರಾಂತಿಕಾರಿ,ಸ್ತ್ರೀ ವಾದಿ ಕವಿ. ಈ ಕವನವನ್ನು ೧೯೬೯ ರಲ್ಲಿ ನಖ಼್ಬಾ ಸಂದರ್ಭದಲ್ಲಿ,ಇಸ್ರೇಲ್ ಪ್ಯಾಲೇಸ್ತೈನ್ ಅನ್ನುಆಕ್ರಮಿಸಿದ್ದ ಸಮಯದಲ್ಲಿ ರಚಿಸಲಾಗಿದೆ. ಪ್ಯಾಲೇಸ್ತೈನ್ ನಲ್ಲಿ ನಡೆಯುತ್ತಲೇ ಇರುವ ಹತ್ಯೆಯನ್ನು ನಖ಼್ಬಾದೊಂದಿಗೆ ಹೋಲಿಸಲಾಗಿದ್ದು ತುಖ಼ಾನ್ ಅವರ ಈ ಕವನವನ್ನು ಬಹಳಷ್ಟು ಪ್ಯಾಲೇಸ್ತೈನಿಯನ್ನರು ಹಾಡುತ್ತಾರೆ. ಇದರ ಹಲವು ಭಾಗಗಳನ್ನು ಅಲ್ಲಲ್ಲಿ ಬಳಸುತ್ತಾರೆ. ಹೆರಿಗೆಯಂತೆಯೇ ಈ ಹೋರಾಟ ಯಾತನಾದಾಯಕ ಎಂಬುದು ಕವಿತೆಯ ಆಂತರ್ಯವಾಗಿದೆ.) ಹಂಜ಼ಾ

ಇದನ್ನೂ ಓದಿ: ಸ್ವಿಮಿಂಗ್ ಪೂಲ್ ಸ್ವಚ್ಛಗೊಳಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಕೋಚ್ ಸಾವು; ಹುಬ್ಬಳ್ಳಿಯಲ್ಲಿ ಘಟನೆ

ಹಂಜ಼ಾ ,
ನನ್ನೂರಿನ ಒಬ್ಬನಂತೆ
ಶ್ರಮದ ಉಳುಮೆಯ ಮೂಲಕ ತನ್ನ ಅನ್ನ
ಗಳಿಸಿಕೊಳ್ಳುತ್ತಿದ್ದ ಸರಳ ಮನುಷ್ಯ.
ಸೋಲಿನ ಮಹಾಬರಡುಭೂಮಿಯಲ್ಲಿ ಕಾಲಾಡುವಾಗ
ನನಗವನು ಕಂಡಿದ್ದ,
ಆಗವನು ಹೇಳಿದ್ದ:
“ಸೋದರ,ಸ್ವಲ್ಪ ನಿಲ್ಲು,ಹತಾಶನಾಗಬೇಡ
ಈ ನೆಲವು ಅಪರಾಧಗಳ ಬೆಂಕಿಯಿಂದ ಉರಿಯುತ್ತಿದೆ,
ಮೌನ,ವಿಷಾದ ಒಣಗುತ್ತಿದೆ.”
– ಈ ನೆಲವು ತನ್ನ ವಂಚಿತ ಹೃದಯವನ್ನು ಸಾಯಲು ಬಿಡದು.ಈ ನೆಲವೊಂದು ಹೆಣ್ಣು. ಇದಕ್ಕೆಗರ್ಭ ಹಾಗೂ ತಿಟ್ಟು ತೆವರಿಗಳಿವೆ.
– ಈ ಎರಡರ ಫಲವತ್ತತೆಯ ವಿಸ್ಮಯ ಒಂದೇ:
– ತಾಳೆಮರಗಳನ್ನು,ಗೋಧಿಯನ್ನು ಬೆಳೆಯುವ ಇದರ ಫಲವಂತಿಕೆ
– ಸೋಲದೆ ಪುಟಿದೇಳುವ ಜನರನ್ನೂ ಬೆಳೆಯುತ್ತದೆ.
– ನಾನು ನನ್ನ ಬಂಧುವನ್ನು ಕಾಣದೆ
– ದಿನಗಳು ಉರುಳಿಹೋದವು
– ಆದರೆ ನನಗರಿವಿತ್ತು
– ಈ ನೆಲವು ಹೊಸ ಹುಟ್ಟಿನ ಪ್ರಸವ ಬೇನೆಯಿಂದ ಮುಲುಗುತ್ತಿದೆ ಎಂದು.
– ( ೨)
– ಅರವತ್ತೈದು ವರ್ಷಗಳು ಉರುಳಿದವು.
– ಊರಿನ ಪಾಲಕನು-
– ” ಅವನ ಮನೆಯನ್ನು ಧ್ವಂಸಮಾಡಿ,ಅವನ ಮಗನನ್ನು ಹಿಂಸಾಕೊಠಡಿಯಲ್ಲಿ‌ಕೂಡಿಹಾಕಿ”
– ಎಂದು ಆದೇಶಿಸಿದಾಗ.
– ಅವನ ಬೆನ್ನೆಲುಬನ್ನು ದೊಡ್ಡದೊಂದು ಬಂಡೆಗಲ್ಲು ಚೂರುಮಾಡಿತು.
– ಆಗವನು,
– ಪ್ರೀತಿ,ರಕ್ಷಣೆ ಹಾಗೂ ಶಾಂತಿಸ್ಥಾಪನೆಯನ್ನು ಪಠಿಸಲು ಎದ್ದು ನಿಂತ.
– ಸಿಪಾಯಿಗಳು ಮನೆಯನ್ನು
– ಆವರಿಸಿದಾಗ
– ಅಪಾಯಕಾರಿ ಸರ್ಪವು ಸುತ್ತಿಕೊಂಡು ವೃತ್ತವನ್ನು ಪೂರ್ಣಗೊಳಿಸಿತು.
– ಕಟ್ಟಪ್ಪಣೆಯು ಅಬ್ಬರಿಸಿತು,
– ” ಮನೆಯನ್ನು ತೆರವು ಮಾಡಿ”
– ಬಹಳ ಉದಾರವಾಗಿ ಅವರು ಒಂದೆರಡು ಗಂಟೆಗಳ ಸಮಯ ನೀಡಿದರು.
ಹಂಜ಼ಾ
ಸೂರ್ಯನಿಗೆ ತೆರೆದುಕೊಂಡಿದ್ದ ಬಾಲ್ಕನಿಯ ಬಾಗಿಲನ್ನು ಸಿಪಾಯಿಗಳ ಕಣ್ಣೆದುರೇ ತೆರೆದು ಜೋರಾಗಿ ಕೂಗಿದ‌
” ಅಲ್ಲಾಹು ಅಕ್ಬರ್”
ಮತ್ತೆ ಹೇಳಿದ:
” ಓ ಪ್ಯಾಲೇಸ್ತೈನ್ ತಿಳಿದುಕೋ,
ಇವತ್ತು ಈ ಮನೆ ಮತ್ತು ವಿಮೋಚನೆಗಾಗಿ
ನಾನು ನನ್ನ ಮಕ್ಕಳು ತ್ಯಾಗಮಾಡಿದ್ದೇವೆ
ನಿನಗಾಗಿ ನಾವು ಬದುಕುತ್ತೇವೆ ,ನಿನಗಾಗಿ ಸಾಯುತ್ತೇವೆ:
ಪಟ್ಟಣದ ನರನಾಡಿಗಳಲಿ ಹಂಜ಼ಾನ ಅಳಲು ಹರಡಿ,
ಮತ್ತೆ ಮತ್ತೆ ಪ್ರತಿಧ್ವನಿಸಿತು.
ಮೌನ ಹಾಗೂ ಶರಣಾಗತಿ
ಆ ಮನೆಯನ್ನು ಆವರಿಸಿತು.
ಒಂದು ಗಂಟೆ
ಹುತಾತ್ಮರ ಮನೆಯ ಮುಂಚಾವಣಿಯನ್ನು ಮೇಲೆ ಎತ್ತಲಾಯಿತು ಮತ್ತದು ಕುಸಿಯಿತು.
ಅದರ ಅವಶೇಷಗಳು ಸುತ್ತಲೂ ಬಿದ್ದಿದ್ದವು.
ಯಾವ ಬಿಸುಪು ಒಮ್ಮೆ ಜೀವಿತಾವಧಿಯ ವಸಂತನನ್ನು ಅಪ್ಪಿಕೊಂಡಿತ್ತೋ
ಆ ಕನಸುಗಳನ್ನು ಅಪ್ಪಿಕೊಳ್ಳಲು:
ವರ್ಷಾನುಗಟ್ಟಲೆಯ ಶ್ರಮ,ಹಠ ನೋವಿನ ಪ್ರತಿಫಲ; ಖುಷಿ ಹಾಗೂ ನೋವಿನಿಂದ ಕಟ್ಟಿಕೊಂಡದ್ದು ಅದು.

ನಿನ್ನೆ ನನ್ನ ಬಂಧುವು ತನ್ನ ತಿರುಗಣಿ ದಾರಿಯಲ್ಲಿ ನಡೆವುದ ಕಂಡೆ,ಬಹಳ‌ ದೃಢತೆ ಹಾಗೂ ವಿಶ್ವಾಸದಿಂದ.
ಹಂಜ಼ಾ,

ಈಗಲೂ ಎದೆಸೆಟೆಸಿ,ತಲೆ ಎತ್ತಿಕೊಂಡೇ ಇದ್ದಾನೆ.

ಮೂಲ : ಫಾದ್ವಾ ತುಖ಼ಾನ್

ಅನುವಾದ: ಸಿ.ಎಚ್.ಭಾಗ್ಯ.

 

ಇದನ್ನೂ ನೋಡಿ: ಮಧ್ಯಪ್ರದೇಶ: ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು Janashakthi Media

Donate Janashakthi Media

Leave a Reply

Your email address will not be published. Required fields are marked *