ಬೆಂಗಳೂರು : ಸಾಮಾಜಿಕ ಭದ್ರತೆಗಾಗಿ ಬಜೆಟ್‌ನಲ್ಲಿ ಅನುದಾನಕ್ಕಾಗಿ, ಎಲ್ಲಾ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇಂದಿನಿಂದ ಎರಡು ದಿನಗಳ ಹಮಾಲಿ ಕಾರ್ಮಿಕರ ಅಹೋರಾತ್ರಿ ಧರಣಿಯು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಆರಂಭವಾಗಿದೆ.
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ರಿ.) ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಪ್ರತಿಭಟನಾ ಧರಣಿಗೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಿಲ್‌ಗಳು, ಗೌಡನ್‌ಗಳು, ಮಾರುಕಟ್ಟೆ, ಬಜಾರುಗಳಲ್ಲಿ ಕೆಲಸ ನಿರ್ವಹಿಸುವ ಸಾವಿರಕ್ಕೂ ಹೆಚ್ಚಿನ ಎಪಿಎಂಸಿ ಕಾರ್ಮಿಕರು ಭಾಗವಹಿಸಿದ್ದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರವು ಹಮಾಲಿ ಕಾರ್ಮಿಕರನ್ನು ಕಡೆಗಣಿಸಿದೆ. ಅಲ್ಲದೆ ಕಾರ್ಮಿಕ ಕಾನೂನುಗಳ ತಿದ್ದುಪಡಿಯಿಂದಾಗಿ ಉದ್ಯೋಗ ಭದ್ರತೆ, ಮೂಲಭೂತ ಸಮಸ್ಯೆಗಳು ಧಕ್ಕೆಯಾಗಲಿದ್ದು ಇದರಿಂದ ಸಾವಿರಾರು ಹಮಾಲಿ ಕಾರ್ಮಿಕರ ಬದುಕು ಅತಂತ್ರವಾಗಲಿದೆ.
ಈ ಹಿನ್ನೆಲೆಯಲ್ಲಿ ಮುಂಬರುವ ರಾಜ್ಯ ಬಜೆಟ್ ನಲ್ಲಿ ರಾಜ್ಯ ಸರ್ಕಾರವು ಹಮಾಲಿ ಕಾರ್ಮಿಕರಿಗೆ ವಿಶೇಷ ಯೋಜನೆಗಳು ರೂಪಿಸಬೇಕು ಹಾಗೂ ಸಾಮಾಜಿಕ ಭದ್ರತೆಗಾಗಿ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡಬೇಕು, ಎಪಿಎಂಸಿ ʻʻಕಾಯಕ ನಿಧಿʼʼ ಅಡಿ ನಿವೃತ್ತಿ ವೇತನ ನೀಡಬೇಕೆಂದು, ಎಲ್ಲಾ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ವಸತಿ ಸೇರಿದಂತೆ ಭವಿಷ್ಯನಿಧಿ ಯೋಜನೆ, ಪಿಂಚಣಿ, ಬೋನಸ್ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಎಪಿಎಂಸಿ ನಿರ್ದೇಶಕರಾದ ಕರೀಗೌಡರವರು ಭಾಗವಹಿಸಿ ಮನವಿಪತ್ರವನ್ನು ಸ್ವೀಕರಿಸಿ ಪ್ರಗತಿಯ ಹಂತದಲ್ಲಿರುವ ಕೆಲಸಗಳ ಬಗ್ಗೆ ಹಾಗೂ ಇನ್ನು ಕೆಲವು ಬೇಡಿಕೆಗಳ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದರು.
ಹಮಾಲಿ ಕಾರ್ಮಿಕರ ಬೇಡಿಕೆಗಳ ಪರಿಹಾರಕ್ಕಾಗಿ ನಡೆಯುತ್ತಿರುವ ಪ್ರತಿಭಟನಾ ಧರಣಿಯೂ ನಾಳೆಯು ಮುಂದುವರೆಸಲು ಕಾರ್ಮಿಕರು ನಿರ್ಧರಿಸಿದರು.
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಹಮಾಲಿ ಕಾರ್ಮಿಕರ ಫೆಡರೇಷನ್ ನ ರಾಜ್ಯ ಅಧ್ಯಕ್ಷರಾದ ಕೆ.ಮಹಾಂತೇಶ್, ರಾಜ್ಯ ಕಾರ್ಯದರ್ಶಿ ಮಹೇಶ್ ಪತ್ತಾರ್, ಮುಖಂಡರಾದ ಸುಬ್ರಮಣ್ಯ, ನಿರುಪಾದಿ, ಹಾಗೂ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಮುಖಂಡರಾದ ಕೆ.ಪ್ರಕಾಶ್, ಕೆ.ಎನ್.ಉಮೇಶ್, ಮತ್ತಿತರ ಮುಖಂಡರು ಮಾತನಾಡಿದರು.