ಚಳ್ಳಕೆರೆ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತಾಪಿ ವರ್ಗ ಮಾರುಕಟ್ಟೆಗೆ ಬರದಂತೆ ಮಾಡುತ್ತಿದ್ದಾರೆ ಇದರಿಂದ ರೈತರನ್ನೇ ನಂಬಿಕೊಂಡ ಹಮಾಲಿ ಕಾರ್ಮಿಕರು, ದಲ್ಲಾಳಿಗಳು ಹಾಗೂ ಅಧಿಕಾರಿ ಹಾಗೂ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯ ಬಂದಿದೆ ಇದರ ವಿರುದ್ದ ಒಂದು ಸಂಘಟಿತ ಚಳವಳಿ ನಡೆಸಬೇಕು ಎಂದು ಚಿಂತಕ ಡಾ ರಂಜಾನ್ ದರ್ಗಾ ಹೇಳಿದರು.
ಚಳ್ಳಕರೆ ನಗರದಲ್ಲಿ ನಡೆದ ಹಮಾಲಿ ಕಾರ್ಮಿಕರ 5 ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಸ್ಚಚ್ಚಂದವಾಗಿ ಆಕಾಶಕ್ಕೆ ಹಾರಿಬಿಡುವ ಮೂಲಕ ಉದ್ಘಾಟಿಸಲಾಯಿತು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷೀಸುಂದರಂ ಮಾತನಾಡಿ, ತೀವ್ರವಾಗಿ ಬೆಲೆಗಳ ಏರುತ್ತಿವೆ ಆದರೆ ಶ್ರಮಿಕ ವರ್ಗದ ಕೂಲಿಗಳು ಇಳಿಯುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಈ ನೀತಿಗಳನ್ನು ಸೋಲಿಸದಿದ್ದಲ್ಲಿ ಕಾರ್ಮಿಕ ವರ್ಗದ ಮೇಲೆ ಮತ್ತಷ್ಟು ದಾಳಿಗಳನ್ನು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಮಾರುಕಟ್ಟೆ ಮಾರಾಟ ಮಂಡಳಿ ಮುಖ್ಯ ವ್ಯವಸ್ಥಾಪಕ ಶ್ರೀ ಚಂದ್ರಕಾಂತ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಂಡಳಿಯು ಶ್ರಮಿಕರ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಹಲವು ಯೋಜನೆಗಳ ಮಾಹಿತಿ ನೀಡಿದರು.
ಬಹಿರಂಗ ಸಭೆಗೂ ಮುನ್ನ ಬೃಹತ್ ರ‌್ಯಾಲಿ ನಡೆಯಿತು. ಮೆರವಣಿಗೆಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಬಾವುಟವನ್ನು ಹಮಾಲಿ ಸಂಘದ ಮುಖಂಡರಿಗೆ ವರ್ಗಾಹಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ರವೀಶ ಕುಮಾರ್,ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್,ಮೊದಲಾದವರು ಇದ್ದರು. ಅಧ್ಯಕ್ಷತೆಯನ್ನು ಫೆಡರೇಶನ್ ರಾಜ್ಯ ಅಧ್ಯಕ್ಷರಾದ ಕೆ.ಮಹಾಂತೇಶ ವಹಿಸಿದ್ದರು.
ಪಿಂಚಣಿ,ವಸತಿ,ಆರೋಗ್ಯ ಹಾಗೂ ಸಾಮಾಜಿಕ ಭದ್ರತೆಗಾಗಿ, ಕಾರ್ಮಿಕ ಕಾನೂನುಗಳ ರದ್ದತಿ ವಿರೋಧಿಸಿ ಹಾಗೂ ಸೌಹಾರ್ದ ಕರ್ನಾಟಕ ನಿರ್ಮಾಣದ ಉಳಿವಿಗಾಗಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿ ಫೆಡರೇಶನ್ (ರಿ) 5 ನೇರಾಜ್ಯ ಸಮ್ಮೇಳನ ಎರಡು ದಿನಗಳ ಕಾಲ ನಡೆಯಲಿದೆ.