ಮಂಗಳೂರು: ಅನ್ಯ ಕೋಮಿನ ಇಬ್ಬರ ಮೇಲೆ ಹಲ್ಲೆ ಪ್ರಕರಣ-ಆರು ಆರೋಪಿಗಳ ಬಂಧನ

ಮಂಗಳೂರು: ‌ಕಡಬ ತಾಲೂಕಿನ ದೋಲ್ಬಾಡಿಯ ಒಂಟಿ ಮಹಿಳೆಯ ಮೇಲೆ ಕಂಬಳಿ ಮಾರಾಟದ ನೆಪದಲ್ಲಿ ಮಾನಭಂಗಕ್ಕೆ ಪ್ರಯತ್ನಿಸಿದ್ದಾರೆ ಎಂದು ಆರು ಮಂದಿ ಹಲ್ಲೆ ನಡೆಸಿರುವ ಪ್ರಕರಣ(ನೈತಿಕ ಪೊಲೀಸ್‌ಗಿರಿ ಎಂದು ಕರೆಯುವ)ಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕಾರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದು, ಅವರನ್ನು ಪುನೀತ್, ರಾಜು, ಕಿಶೋರ್, ಭವಿತ್, ರಂಜಿತ್ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ. ಇವರನ್ನು ಬಂಧಿಸಿರುವ ಪೊಲೀಸರು, ಹಲ್ಲೆಗೊಳಗಾದ ರಮೀಜುದ್ದಿನ್ ಮತ್ತು ಮಹಮ್ಮದ್ ರಫೀಕ್ ಎಂಬವರು ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡಿದ್ದಾರೆ. ಇನ್ನೊಂದೆಡೆ, ‌ಕಡಬ ತಾಲೂಕಿನ ದೋಲ್ಬಾಡಿಯ ಸಂತ್ರಸ್ತ ಮಹಿಳೆ ಮನೆಗೆ ಸಚಿವ ಎಸ್. ಅಂಗಾರ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಈ ಬಗ್ಗೆ ಮಾತನಾಡಿರುವ ಸಚಿವರು, ಇದು ಅತ್ಯಂತ ನೋವು ತರುವ ಘಟನೆಯಾಗಿದೆ. ಕಾಂಗ್ರೆಸ್ಸಿಗರು ಈ ಘಟನೆಯ ವಾಸ್ತವ ಮರೆಮಾಚಿ ನೈತಿಕ ಪೊಲೀಸ್ ಗಿರಿ ಎಂದು ಹೇಳುತ್ತಿದ್ದಾರೆ. ಕಂಬಳಿ ಮಾರಾಟ ಮಾಡಲು ಬಂದವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ವಾಸ್ತವಿಕ ಸತ್ಯಾಂಶವನ್ನು ಗೃಹ ಸಚಿವರಿಗೂ ತಿಳಿಸಿದ್ದೇನೆ. ಮಹಿಳೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದೇನೆ ಎಂದರು.

ಕಂಬಳಿ ಮಾರಾಟ ಮಾಡುವ ನೆಪದಲ್ಲಿ ಕಾರಿನಲ್ಲಿ ಬಂದ ರಮೀಜುದ್ದಿನ್ ಮತ್ತು ಮಹಮ್ಮದ್ ರಫೀಕ್ ಎಂಬವರು ಮಹಿಳೆಯು ಕಂಬಳಿಗಳು ನೋಡುವ ವೇಳೆಯಲ್ಲಿ ಚಿನ್ನದ ಸರ ಎಗರಿಸಲು ಯತ್ನ ಮಾಡಿರುವುದಾಗಿ ಮತ್ತು ‌ಮಹಿಳೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನ ನಡೆಸಲಾಗಿದೆ ಎಂಬ ಆರೋಪವಿದೆ.

ಘಟನೆ ನಡೆಯುತ್ತಿದ್ದಂತೆ, ಮಹಿಳೆ ಬೊಬ್ಬೆ ಹೊಡೆದಿದ್ದಾಳೆ. ಈ ಸಂದರ್ಭದಲ್ಲಿ ಭಯದಿಂದ ಇಬ್ಬರು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಕಾರಿನಿಂದ ಹೊರಕ್ಕೆ ಎಳೆದ ಸ್ಥಳೀಯರು ಥಳಿಸಿದ್ದಾರೆ. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ರಮೀಜುದ್ದಿನ್ ಮತ್ತು ಮಹಮ್ಮದ್ ಬೆಳ್ಳಾರೆ ಪೊಲೀಸ್ ಠಾಣೆಗೆ ತೆರಳಿ ನೈತಿಕ ಪೊಲೀಸ್ ಗಿರಿ ಬಗ್ಗೆ ದೂರು ನೀಡಿದ್ದರು. ಕಾರು ತಡೆದ ನಿಲ್ಲಿಸಿ ಹೊರಗೆಳೆದು ದೊಣ್ಣೆ, ಕಬ್ಬಿಣದ ರಾಡ್, ಕಾಲಿನಿಂದ ತುಳಿದು ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಕಾರನ್ನು ಜಖಂಗೊಳಿಸಿ ಲಕ್ಷಾಂತರ ರೂಪಾಯಿ ನಷ್ಟ ಎಸಗಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *