‘ಹಲ್ಲಾ ಬೋಲ್’ ಓದು : ರಂಗಕರ್ಮಿ ಶ್ರೀಪಾದ ಭಟ್, ಐ.ಕೆ ಬೊಳುವಾರು ಅವರ ಪ್ರತಿಕ್ರಿಯೆ

‘ಹಲ್ಲಾ ಬೋಲ್’ ಪುಸ್ತಕವನ್ನು ಆಗಲೇ ಓದಿದ ರಂಗಕರ್ಮಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಕರ್ನಾಟಕದ ರಂಗಭೂಮಿ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಮತ್ತು ವಹಿಸುತ್ತಿರುವ ಶ್ರೀಪಾದ ಭಟ್  ಮತ್ತು ಐ.ಕೆ.ಬೊಳುವಾರು ಅವರ ಪ್ರತಿಕ್ರಿಯೆಗಳು ಇಲ್ಲಿವೆ.

‘ಬೀದಿನಾಟಕ, ನಾಟಕಗಳ ಕುರಿತ ಹಲವು ಅಪಕಲ್ಪನೆಗಳನ್ನು ಹೋಗಲಾಡಿಸುತ್ತಲೇ ಕಾಲದ ಅಗತ್ಯಕ್ಕೆ ಅದನ್ನು ಮರುರೂಪಿಸುವ ಹಲವು ಸಾಧ್ಯತೆಗಳನ್ನು ಕಾಣಿಸುವ ಪುಸ್ತಕ’

  • ಶ್ರೀಪಾದ ಭಟ್  

ಹಲ್ಲಾ ಬೋಲ್. ವ್ಯಕ್ತಿಯೋರ್ವನ ಸಾವು, ಸಿದ್ಧಾಂತವೊಂದರ ಬೆಳಕು ಎರಡನ್ನೂ ಒಟ್ಟಿಗೇ ಬೆಸೆಯುವ, ಇತಿಹಾಸವನ್ನು ಭವಿಷ್ಯತ್ತಿನ ಅಗತ್ಯಕ್ಕಾಗಿ ವರ್ತಮಾನದ ಪರಿಭಾಷೆಯಲ್ಲಿ ಆಪ್ತವಾಗಿ ಕಟ್ಟಿಕೊಡುವ ಅಪರೂಪದ ಪುಸ್ತಕವೊಂದು ಕನ್ನಡಕ್ಕೆ ಲಭಿಸಿದೆ.

ಲೇಖಕರಾದ ಸುಧನ್ವ ದೇಶಪಾಂಡೆ ಹಶ್ಮಿಯ ನೆನಪಿನ ಜಾಡಿನ ಗುಂಟ ಪಯಣಿಸುತ್ತಲೇ ಕಲಾಮೀಮಾಂಸೆಯ ಹಲವು ಪದರುಗಳನ್ನು ಸರಳರೇಖಾತ್ಮಕವಲ್ಲದ ರೀತಿಯಲ್ಲಿ, ಕಾಲದ ಎಲ್ಲ ಸಂಕೀರ್ಣತೆಗಳೂ ಪ್ರತಿಫಲಿಸುವಂತೆ ತುಂಬ ಬ್ರಿಲಿಯಂಟ್ ಆಗಿ ಮಂಡಿಸಿದ ಕಥನವಿದು. ಬೀದಿನಾಟಕ, ನಾಟಕಗಳ ಕುರಿತ ಹಲವು ಅಪಕಲ್ಪನೆಗಳನ್ನು ಹೋಗಲಾಡಿಸುತ್ತಲೇ ಕಾಲದ ಅಗತ್ಯಕ್ಕೆ ಅದನ್ನು ಮರುರೂಪಿಸುವ ಹಲವು ಸಾಧ್ಯತೆಗಳನ್ನು ಕಾಣಿಸುತ್ತದೆ.  ಪುಸ್ತಕ.

ತುಂಬ ಕ್ಲಿಷ್ಟಕರವಾದ ಇಲ್ಲಿಯ ವಸ್ತು ಮಂಡನಾಕ್ರಮವನ್ನು ಸಾಕಷ್ಟು ಸಮರ್ಥವಾಗಿ ಕನ್ನಡಕ್ಕೆ ತಂದ ಎಂ.ಜಿ.ವೆಂಕಟೇಶರಿಗೆ, ಕ್ರಿಯಾ ಪ್ರಕಾಶನಕ್ಕೆ ನಾನು ಋಣಿ. ಬೀದಿಯಲ್ಲಿಯ ಹಠಾತ್ ತಿರುವುಗಳಷ್ಟೇ ಅನಿರೀಕ್ಷಿತವಾದ ಇಲ್ಲಿಯ ಮಂಡನಾ ಕ್ರಮವನ್ನು ವೆಂಕಟೇಶ್ ಬಹು ಪ್ರಯಾಸದಿಂದಲೇ ಕನ್ನಡಿಸಿದ್ದಾರೆ. ಕನ್ನಡದಲ್ಲೇ ಇಹ ಪರ ಕಾಣಬೇಕಾದ ಅನಿವಾರ್ಯತೆ ಇರುವ ನನ್ನಂತವರಿಗೆ ಇದೊಂದು ಕೊಡುಗೆ. ಬೀದಿ ಎಂಬ ರಂಗವ್ಯಾಕರಣವನ್ನು ಅರಿತುಕೊಳ್ಳಲು ತೀರ ಅಗತ್ಯವಾದ ಇಲ್ಲಿಯ ಪಾಠಗಳನ್ನು ರಂಗಾಭ್ಯಾಸಿಗಳು, ರಂಗಶಾಲೆಗಳೂ ತಮ್ಮರಂಗಾಭ್ಯಾಸಕ್ಕೆ ಅಗತ್ಯ ಆಕರವನ್ನಾಗಿ ಬಳಸಿಕೊಳ್ಳಲಿ ಎಂಬ ಹಾರೈಕೆ.

ನಾಸಿರುದ್ದೀನ್ ಶಾ ಕನ್ನಡದ ಈ ಆವೃತ್ತಿಗೆ ಶುಭ ಹಾರೈಸಲಿದ್ದಾರೆ. ಅವರ ಮಾತುಗಳನ್ನೂ ಕೇಳಿಸಿಕೊಳ್ಳಲು ಅವಕಾಶ ಸಿಗುತ್ತಿದೆ ಈ ಪುಸ್ತಕದ ನೆವದಿಂದ. 

 

ರಂಗಭೂಮಿ ಮತ್ತು ಬೀದಿನಾಟಕಗಳ ಕುರಿತಾದ ಕುತೂಹಲ ಆಸಕ್ತಿ ಇರುವ ಎಲ್ಲರೂ ಓದಬೇಕಾದ ಒಳ್ಳೆಯ ಕೃತಿ

 – ಐ ಕೆ ಬೊಳುವಾರ

ಹಲ್ಲಾ ಬೋಲ್ ಸಫ್ದರ್ ಹಶ್ಮಿ ಅವರ ಕುರಿತಾದ ಪುಸ್ತಕವಿದು.೭೦-೮೦ ರದಶಕದ ಬೀದಿನಾಟಕ ಚಳುವಳಿಯ ಬಗ್ಗೆ ಈ ಕೃತಿ ಮಾತನಾಡುತ್ತದೆ. ಲೇಖಕ ಸುಧನ್ವ ದೇಶಪಾಂಡೆ ‘ಜನಮ್’ ಜೊತೆಗಿನ ದೀರ್ಘಕಾಲದ ರಂಗಾನುಭವದೊಂದಿಗೆ ಸಫ್ದರ್ ಬದುಕಿನ ಬೇರೆ ಬೇರೆ ವಿವರಗಳನ್ನು ಓದುಗರ ಮುಂದೆ ಇರಿಸಿದ್ದಾರೆ.

ಎಂ ಜಿ ವೆಂಕಟೇಶ್ ಅದನ್ನು ಕನ್ನಡದ ಓದುಗರಿಗೆ ಸಿಗುವ ಹಾಗೆ ಅನುವಾದಿಸಿ ಕೊಟ್ಟಿದ್ದಾರೆ .ರಂಗಭೂಮಿ ಮತ್ತು ಬೀದಿನಾಟಕಗಳ ಕುರಿತಾದ ಕುತೂಹಲ ಆಸಕ್ತಿ ಇರುವ ಎಲ್ಲರೂ ಓದಬೇಕಾದ ಒಳ್ಳೆಯ ಕೃತಿ ಇದು.

ಈ ಪುಸ್ತಕದ ನಡುವೆ ಬರುವ ಒಂದು ಘಟನೆಯನ್ನು ಸುಧನ್ವ ದೇಶಪಾಂಡೆ ನೆನಪಿಸಿಕೊಂಡು ಬರೆದ ಬಗೆಯನ್ನು ನಾನು ಇಲ್ಲಿ ಹಂಚಿಕೊಂಡಿದ್ದೇನೆ. ದಯವಿಟ್ಟು ಗಮನಿಸಿ .ಇದೇ ಬಗೆಯ ಹತ್ತು ಹಲವು ಘಟನೆಗಳು ಆರಂಭದಿಂದ ಕೊನೆಯವರೆಗೂ ದಾಖಲಾಗುತ್ತಾ ಹೋಗುತ್ತವೆ .ರಂಗಭೂಮಿಯ ಕಾರ್ಯಕರ್ತರಿಗೆ ಇರಲೇ ಬೇಕಾದ ಬದ್ಧತೆ ಏನು ಎಂಬುದನ್ನು ಸುಧನ್ವ ದೇಶಪಾಂಡೆ ಪರಿಣಾಮಕಾರಿಯಾಗಿ ಹೇಳಿದ್ದಾರೆ.

****************************************************

ಇಂದು ಭಾರತದ ಎಲ್ಲ ಕಡೆಗಳಲ್ಲಿ ಬೀದಿ ನಾಟಕಗಳನ್ನುಆಡಲಾಗುತ್ತಿದೆ. ಆದರೆ ಮೊದಲು ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ನೆನಪಿಸಿಕೊಳ್ಳುವುದು ಕಷ್ಟ .ಅಂತಹ ಒಂದು ಪ್ರಮಾಣ ಇಲ್ಲಿದೆ.

ನಾನು ಬೀದಿ ನಾಟಕವನ್ನುಮೊದಲ ಬಾರಿಗೆ ೧೯೮೦ ರಲ್ಲಿ ನೋಡಿದೆ.ನನಗೆ ಬಾಲ್ಯದಿಂದಲೂ ನಾಟಕಗಳೆಂದರೆ ಆಸಕ್ತಿ.ನಾನು ಅನೇಕ ನಾಟಕಗಳನ್ನು ನೋಡಿದ್ದೆ. ಮತ್ತು ಕೆಲವೊಂದರಲ್ಲಿ ಅಭಿನಯಿಸಿದ್ದೆ.ಆದರೆ ಅವು ಪ್ರೊಸೀನಿಯಂ ನಾಟಕಗಳು.ಆ ನಾಟಕಗಳ ವಸ್ತು ಪೌರಾಣಿಕ , ಚಾರಿತ್ರಿಕ ,ಸಾಮಾಜಿಕ, ಹಾಗೂ ಮಾನಸಿಕ ವಿಷಯಗಳಾಗಿದ್ದವು. ಅವು ಎರಡು-ಮೂರು ಗಂಟೆ ನಡೆಯುತ್ತಿದ್ದವು. ಸಹಜವಾಗಿಯೇ ಈ ನಾಟಕಗಳ ಸಲಕರಣೆಗಳು ಅಂದರೆ ದೊಡ್ಡ ಸ್ಟೇಜ್, ಸೆಟ್, ನಟರಿಗೆ ವೇಷಭೂಷಣಗಳು, ಬೆಳಕು, ಧ್ವನಿ ಮತ್ತು ನಾಟಕ ನೋಡಲು ಮಾನಸಿಕ ಸಿದ್ಧತೆಯುಳ್ಳ ಪ್ರೇಕ್ಷಕರು. ನನಗೆ ನಾಟಕವೆಂದರೆ ಇವು ಇರಬೇಕಿತ್ತು.

ಒಂದು ದಿನ ಔರತ್ ನಾಟಕದ ಬಗ್ಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾಂಗ್ವೇಜಸ್ ನೋಟಿಸ್ ಬೋರ್ಡಿನಲ್ಲಿ ನೋಡಿದೆ. ನನ್ನ ಕುತೂಹಲ ಜಾಗೃತ ವಾಯಿತು ನಾಟಕದ ಶೀರ್ಷಿಕೆ ಸೆಳೆಯುವಂತಹುದು.

ಮತ್ತು ಅದೊಂದು ಬೀದಿ ನಾಟಕದ ಪ್ರದರ್ಶನ ಶಾಲೆಯ ಮುಂದಿನ ಹುಲ್ಲುಗಾವಲಿನಲ್ಲಿ ನಡೆಯುವುದಿತ್ತು. ಆ ದಿನಗಳಲ್ಲಿ ( ಜೆ.ಎನ್.ಯೂ ಆಗ ಹಳೆ ಕ್ಯಾಂಪಸ್ ನಲ್ಲಿ ಮಾತ್ರ ಇತ್ತು.)ಇದೆಲ್ಲ ಕುತೂಹಲ ಕೆರಳಿಸಿ ನಾನು ನಾಟಕ ನೋಡಲು ನಿರ್ಧರಿಸಿದೆ.ಆದರೆ ನನಗೆ ನಾಟಕ ಪ್ರದರ್ಶನದ ವೇಳೆ ಅನುಕೂಲವಾಗಿರಲಿಲ್ಲ.

ಕಾರಣ ಅದು ನನ್ನ ಮಕ್ಕಳು ಶಾಲೆಯಿಂದ ಹಸಿದು ಬಾಯಾರಿ ತರಳೆ ಮಾಡುವ ಸಮಯವಾಗಿತ್ತು.ನಾನು ದೀರ್ಘಕಾಲ ಚಿಂತಿಸಿದೆ.ನಾಟಕ ಆಥವಾ ಮನೆ? ಗೃಹಿಣಿಯ ಗೃಹಕೃತ್ಯ ಅಥವಾ ಒಬ್ಬ ಮಹಿಳೆಯ ‘ಹಂಬಲ?. ನಾನು ಮನೆಯಲ್ಲಿ ಮಕ್ಕಳನ್ನು ನಿರ್ಲಕ್ಷಿಸಿರುವೆನೆಂದು ಹಿರಿಯರು ತಿಳಿದರೆ – ಅಂತಹ ಸಂದರ್ಭದಲ್ಲಿ ಮಕ್ಕಳನ್ನು ಕಿರಿಕಿರಿ ಮಾಡುವವರು ಯಾರೂ ಇರುವುದಿಲ್ಲ. ಇಂದು ನನ್ನನ್ನು ನಾನೇ ನೋಡಿಕೊಂಡಾಗ ಜನರಿಗೆ ನಾನು ಆನುಭವಿಸಿದ ಸಂಕಟವನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಆ ಸಮಯದಲ್ಲಿ ಮಧ್ಯಮ ವರ್ಗದ ಗೃಹಿಣಿಯ ಕಟ್ಟುಪಾಡುಗಳ ಬೇಲಿಯನ್ನು ದಾಟುವುದು ಅವಶ್ಯವಾಗಿತ್ತು. ಅದು ನಿಜವಾದ ಸಮರ! ಕೊನೆಯಲ್ಲಿ ನಾನು ಬಂಡೇಳಲು ನಿರ್ಧರಿಸಿದೆ. ನಾನು ಮಕ್ಕಳಿಗೆ ಮಾಡಿದ ಏರ್ಪಾಡುಗಳು ನೆನಪಿನಲ್ಲಿಲ್ಲ. ಆದರೆ ನಾಟಕದ ನೆನಪು ಮನದಲ್ಲಿ ಹಸಿರಾಗಿದೆ.

ನಿರ್ಧಾರಿತ ಸಮಯಕ್ಕೆ ಮೊದಲೇ ನಾಟಕದ ಸ್ಥಳ ತಲುಪಿದೆ. ನಾನು ಸ್ಟೇಜ್ ಹಾಕಿದರೆ ಮುಂದೆ ಕುಳಿತುಕೊಳ್ಳುವ ಆಸೆಯಿಂದ ನೋಡಿದರೆ ಅಲ್ಲಿ ಆ ರೀತಿಯ ಯಾವ ಚಟುವಟಿಕೆಯೂ ಇರಲಿಲ್ಲ. ನಾನು ನೋಟೀಸನ್ನು ಮತ್ತೊಮ್ಮೆ ನೋಡಿದೆ. ಯಾವ ತಪ್ಪು ಇರಲಿಲ್ಲ. ನಾನು ಕಾಯುತ್ತಿದ್ದೆ, ಐದು-ಏಳು ನಿಮಿಷಗಳ ನಂತರ ವಿದ್ಯಾರ್ಥಿಗಳು ಸೇರಿದರು. ನನಗೆ ನಿರಂಬಳವಾಯ್ತು, ಮಕ್ಕಳನ್ನು ನಿರ್ಲಕ್ಷಿಸಿ ನಾಟಕವೂ ಇಲ್ಲದಿದ್ದರೆ! ಜನರು ಸೇರುತ್ತಿದ್ದ ಹಾಗೆ ಅವರಿಗೆ ತರಬೇತಿ ನೀಡಿದ ಹಾಗೆ ಅವರೇ ವೃತ್ತಾಕಾರವಾಗಿ ರಚಿಸಿಕೊಂಡರು. ಸರಿ – ಪ್ರೇಕ್ಷಕರು ಬಂದಾಯಿತು. ನಟರೆಲ್ಲಿ? ಕೆಲವರು ವೃತ್ತಾಕಾರದಲ್ಲಿ ಸಣ್ಣಸಣ್ಣ ವಸ್ತುಗಳನ್ನು ಇಡತೊಡಗಿದರು. ನನ್ನ ಕುತೂಹಲ ಇನ್ನೂ ಹೆಚ್ಚಿತು. ಏನಾಗುತ್ತಿದೆ ಇಲ್ಲಿ ಇದ್ದಕ್ಕಿದಂತೆ ತೆಳುವಾದ ಹುಡುಗಿ ವೃತ್ತಾಕಾರದ ಮಧ್ಯದಲ್ಲಿ ಬಂದಳು. ಅವಳಿಗೆ ಯಾವ ಮೇಕಪ್ ಆಗಲಿ ವಿಶೇಷ ವಸ್ತಗಳಾಗಲೀ ಇರಲಿಲ್ಲ. ಅವಳು ಗಾಢ ನೀಲಿ ಖಾದಿ ಕುರ್ತಾ ಮತ್ತು ಬಹುಶಃ ಕಪ್ಪನೆಯ ಸಲ್ವಾರ್ ಧರಿಸಿದ್ದಳು, ಸಾಮಾನ್ಯ ಆಕಾರದ ಹುಡುಗಿ ವೃತ್ತದ ಮಧ್ಯ ನಿಂತು ಕೈಗಳನ್ನೆತ್ತಿ ಅವಳ ಕೊರಳಿನಿಂದ ಹೊರಟ ದನಿ ಗಂಟೆಯಂತೆ ಮೊಳಗಿತು `ನಾನು ಮಹಿಳೆ ಈ ಭಾವ, ಆ ಚಲನೆ, ಆ ಪದಗಳು. ನನ್ನ ಹೃದಯ ಸ್ಥಬ್ದವಾಯಿತು. ರೋಮಾಂಚನವಾಯಿತು. ನಾನು ದಿಗ್ ಭ್ರಮೆಗೊಂಡೆ, ಅಷ್ಟೆ, .

ನಾನು ಮೈಮರೆತು ನೋಡಿದೆ. ಕೇಂದ್ರ ಪಾತ್ರ “ಮಹಿಳೆ” ಅವಳಿಗೆ ಹೆಸರಿಲ್ಲ, ನಿರ್ದಿಷ್ಟ ಧರ್ಮವಿಲ್ಲ. ಪ್ರದೇಶವಿಲ್ಲ ಅಥವಾ ನಿರ್ದಿಷ್ಟ ವಯಸ್ಸೂ ಇಲ್ಲ. ನಟಿ ಸಲೀಸಾಗಿ ಬಾಲ್ಯಾವಸ್ಥೆಯಿಂದ ಕಾಲೇಜು ವಿದ್ಯಾರ್ಥಿಯಾಗಿ ನವ ವಿವಾಹಿತಳಾಗಿ, ವಯಸ್ಸಾದ ಫ್ಯಾಕ್ಟರಿ ಕಾರ್ಮಿಕನ ಹೆಂಡತಿಯಾಗಿ |ಚಲಿಸುತ್ತಿದ್ದಳು. ಇದು ಯಾವುದೂ ನನ್ನ ಜೀವನಕ್ಕೆ ಸಂಬಂಧಿಸಿರಲಿಲ್ಲ ಆದರೂ ನನ್ನಲ್ಲಿ ಪ್ರತಿಯೊಂದೂ ಪ್ರತಿಧ್ವನಿಸುತ್ತಿತ್ತು – ಅದು ಆಶ್ಚರ್ಯಕರ. ಅಲ್ಲಿ ಅಭಿನಯಿಸಿದ ಪಾತ್ರಗಳಲ್ಲಿ ನಾನಿರಲಿಲ್ಲ .ಆದರೆ ಅದರ ಪ್ರತಿಯೊಂದು ಪಾತ್ರವೂ ನನ್ನ ಭಾಗವಾಗಿತ್ತು. “ನಾಯಕಿ” ಪಾತ್ರದ ಬಗ್ಗೆ ಇರುವ ನಮ್ಮ ಪೂರ್ವ ಕಲ್ಪನೆಗಳನ್ನು ಈ ಅಭಿನಯ ಅಲುಗಾಡಿಸಿತ್ತು. ಅದು ಸಂತಸ ತಂದಿತ್ತು. ಕೆಲವೊಮ್ಮೆ 3 ಗಂಟೆಗಳ ಕೆಲಪಾತ್ರಗಳನ್ನು ರಂಗಭೂಮಿಯ ವಿಶೇಷಣೆಗಳೊಡನೆ ನೋಡಿ ನಮಗೆ ಒಂದು ರೀತಿ ಅಸಡ್ಡೆ ಮತ್ತು ಆಶ್ವರ್ಯಗಳು ಉಂಟಾದರೆ, ಇಲ್ಲಿ ಕೇವಲ 30-35 ನಿಮಿಷಗಳಲ್ಲಿ ಚಿರನೂತನ ಪ್ರಾಚೀನ, ಕೊನೆಯಿಲ್ಲದ ಹತಾಶೆಗಳು, ಉಸಿರುಗಟ್ಟುವಿಕೆ ಮತ್ತು ಮಹಿಳೆಯ ವೇದನೆಗಳನ್ನು ಸಂಕ್ಷಿಪ್ತವಾಗಿ ತೋರಿಸಲಾಗಿತ್ತು. ಅದು ಸಾರ್ವತ್ರಿಕವಾದರೂ ಕಾಲ ದೇಶ ವಿಷಯದಲ್ಲಿ ನಿರ್ದಿಷ್ಟವಾಗಿತ್ತು.

ನಾನು ನೋಡುತ್ತಿದ್ದ ಹಾಗೆ ನನ್ನ ಆತ್ಮ ಜಾಗೃತವಾಯಿತು. ನನ್ನಲ್ಲಿ ವಿಶಿಷ್ಟವಾದ ಆತ್ಮಾಭಿಮಾನ ತುಂಬಿತು. ನಾನು ಎಷ್ಟು ಕಳೆದು ಹೋಗಿದ್ದೇನೆಂದರೆ ನಾಟಕ ಮುಗಿದಿದ್ದು ತಿಳಿಯಲೇ ಇಲ್ಲ ನಾಟಕದ ಕೊನೆಯಲ್ಲಿ ವಯಸ್ಸಾದ ಮಹಿಳೆ ಹೆಮ್ಮೆಯಿಂದ ಕೈಗೆತ್ತಿಕೊಳ್ಳುವ ಕೆಂಪು ಬಾವುಟ ನನ್ನ ಕಣ್ಣ ಮುಂದೆ ನೃತ್ಯ ಮಾಡುತ್ತಲೇ ಇತ್ತು. ಆ ನಂತರ ನನ್ನ ಮುಂದೆ ಯುವ ನಟ ವಂತಿಗೆಗಾಗಿ ನಿಂತಿದ್ದ. ನನ್ನ ಹತ್ತಿರ ಆ ದಿನ ಎಷ್ಟ ಹಣವಿತ್ತೋ ತಿಳಿಯದು. ಆದರೆ ಇದ್ದ ಹಣವನ್ನೆಲ್ಲಾ ‘ಜನಮ್’ ಖಜಾನೆಗೆ ಸುರಿದಿದ್ದೆ.’

ಆ ಪ್ರೇಕ್ಷಕಳು ಬೇರಾರು ಅಲ್ಲ. ನನ್ನ ತಾಯಿ ಕಾಳಿಂದೀ ದೇಶಪಾಂಡೆ.ಅವರು ಮುಂದೆ ಜನವಾದಿ ಮಹಿಳಾ ಸಮಿತಿ ಕಾರ್ಯಕರ್ತಳಾಗಿ, ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸ್ ವಾದಿ) ಸದಸ್ಯಳಾಗಿ, ಜನವಾದಿ ಮಹಿಳಾ ಸಮಿತಿಯ ಬೀದಿನಾಟಕ ತಂಡ ‘ಬುಲಂದ್ ‘ಗುಂಪಿನ ಸ್ಥಾಪಕರಾಗಿ ಅಲ್ಲಿನ ನಾಟಕಗಳ ಕತೃ ಮತ್ತೆ ರ್ದೇಶಕರಾಗಿದ್ದರು.ಆ ತುಂಟ ಹುಡುಗರಲ್ಲಿ ನಾನೂ ಒಬ್ಬ.ನನ್ನ ಅಕ್ಕತುಂಟ ಹುಡುಗಿ ಆಗಿರದಿದ್ದರೂ ಶಾಂತ ಹುಡುಗಿಯೇನೂ ಆಗಿರಲಿಲ್ಲ.

– ಮೇಡಂ ಕಾಳಿಂದಿ ದೇಶಪಾಂಡೆ ಮೊದಲ ಬೀದಿನಾಟಕ ನೋಡಿದ್ದು ೧೯೮೦ ರಲ್ಲಿ ಆಗಿದ್ದರೆ ನಾನು ಬೇರೆ ಭಾಷೆಯ ಬೀದಿನಾಟಕಗಳನ್ನು ಮೊದಲ ಬಾರಿಗೆ ನೋಡಿದ್ದು ೧೯೮೧ರಲ್ಲಿ. ಅದು ಭೋಪಾಲದಲ್ಲಿ ನಡೆದ ರಾಷ್ಟ್ರೀಯ ನುಕ್ಕಡ್ ರಂಗ ಮೇಳ್ ನಲ್ಲಿ.

ಅಲ್ಲಿ ಸಫ್ದರ್ ಅಭಿನಯಿಸಿದ ಹಿಂದೀ ಭಾಷೆಯ ಔರತ್ ನಾಟಕದೊಂದಿಗೆ ಇತರೇ ಭಾಷೆಯ ಬೀದಿ ನಾಟಕಗಳನ್ನು ನೋಡಲೂ ಸಾಧ್ಯವಾಗಿತ್ತು .ನಾಟಕದ ಕೊನೆಯ ದೃಶ್ಯದಲ್ಲಿ ಮಾಲಯ್ ಶ್ರೀಯವರು ಕೈಗೆತ್ತಿಕೊಳ್ಳುವ ಕೆಂಬಾವುಟ ಆಕಾಶದಲ್ಲಿ ಹಾರಾಡುವ ದೃಶ್ಯ ಕಂಡಾಗ ಪ್ರೊಸೀನಿಯಂ ಗೆ ದಕ್ಕದ ಭಾಗ್ಯ ಬೀದಿ ನಾಟಕಕ್ಕೆ ಇದೆ. ಆಕಾಶದ ಎತ್ತರ ಮತ್ತು ನೆಲದ ವಿಸ್ತಾರ ರಂಗಭೂಮಿಯಾಗಿ ಬಳಕೆಯಾಗುವುದು ಪ್ರೊಸೀನಿಯಂನಲ್ಲಿ ಅಲ್ಲ ಬೀದಿ ನಾಟಕದಲ್ಲಿ ಮಾತ್ರ ಎಂದು ನಾನು ದೃಢವಾಗಿ ನಂಬಿಕೆ ಇರಿಸುವಂತೆ ಮಾಡಿದ್ದಕ್ಕಾಗಿ ಜನಮ್ ತಂಡದ ನಟ-ನಟಿಯರನ್ನು ಅಭಿನಂದಿಸಲೇಬೇಕು.

***********

ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ‘ಹಲ್ಲಾಬೋಲ್’ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ  5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು  ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ.  ಕ್ರಿಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ. 

ಹಲ್ಲಾ ಬೋಲ್ ಕೃತಿಯನ್ನು ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ.  ಕೃತಿಯ ಮೂಲ ಲೇಖಕ ಸುಧನ್ವ ದೇಶಪಾಂಡೆ, ಸಿನಿಮಾ ನಟ ಅಚ್ಯತ್ ಕುಮಾರ್, ಅನುವಾದಕ ಎಂ.ಜಿ.ವೆಂಕಟೇಶ್, ಮುಖ್ಯ ಅತಿಥಿಗಳಾಗಿ ಭಾಗಿವಹಿಸುತ್ತಿದ್ದಾರೆ. ಕಲಾವಿದರಾದ ಗಿರಿಜಾ ಪಿ ಸಿದ್ದಿ, ಪುಸ್ತಕದ ಆಯ್ದ ಭಾಗವನ್ನು ಓದಲಿದ್ದಾರೆ. ಮಲಯಶ್ರೀ ಹಶ್ಮಿ ಶುಭ ಕೋರಲಿದ್ದಾರೆ. ಬೋಳವಾರು ಮಹಮ್ಮದ್ ಕುಂಞ ಸಮಾರೋಪದ ಮಾತುಗಳನ್ನು ಆಡಲಿದ್ದಾರೆ.

ಪುಸ್ತಕ ಬಿಡುಗಡೆ ಮತ್ತು ವೆಬಿನಾರುಗಳನ್ನು ಈ ಸರಣಿ ಕಾರ್ಯಕ್ರಮಕ್ಕೆ ಮಾಧ್ಯಮ ಸಹಯೋಗ ನೀಡುತ್ತಿರುವ ಜನಶಕ್ತಿ ಮೀಡಿಯಾ ಫೇಸ್ ಬುಕ್ ಮತ್ತು ಯೂಟ್ಯೂಬ್ ಲೈವ್ ಮೂಲಕ ಪ್ರಸಾರ ಮಾಡಲಿದೆ.

ಹಲ್ಲಾಬೋಲ್ ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು
ಮೂಲ :ಸುಧನ್ವ ದೇಶಪಾಂಡೆ   ಅನುವಾದ : ಎಂ.ಜಿ.ವೆಂಕಟೇಶ್
ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ  ರೂ.200
ಪ್ರತಿಗಳಿಗಾಗಿ ಸಂಪರ್ಕಿಸಿ 90360 82005, 080-23494488

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *