ಸವರ್ಣೀಯರ ಪಕ್ಕದಲ್ಲಿನ ಮನೆ ಖರೀದಿಸಿದ್ದಕ್ಕೆ ದಲಿತನ ಮೇಲೆ ಸಚಿವರ ಬೆಂಬಲಿಗರಿಂದ ಹಲ್ಲೆ

ಕುಕನೂರು :  ಕೊಪ್ಪಳ ಜಿಲ್ಲೆಯಲ್ಲಿ ದಿನನಿತ್ಯ ದಲಿತರ ಮೇಲೆ ಹಲ್ಲೆ, ಶೋಷಣೆಗಳು ನಡೆಯುತ್ತಿವೆ. ಪ್ರಭಾವಿ ರಾಜಕಾರಣಿಗಳ ದೌರ್ಜನ್ಯದಿಂದ ದಲಿತ ಸಮುದಾಯ ಭಯಭೀತರಾಗಿ ಜೀವನ ನಿರ್ವಹಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಹೌದು ಕೊಪ್ಪಳ ಜಿಲ್ಲೆಯ ಕುಕನೂರಿನ ಮಸಬಹಂಚಿನಾಳ ಗ್ರಾಮದಲ್ಲಿ ಮನೆ ಖರೀದಿಸಲು ಮುಂದಾಗಿದ್ದ ದಲಿತ ಯುವಕನ ಮೇಲೆ ಸಚಿವರ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಸಬಹಂಚಿನಾಳ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಅವರ ಸ್ವಗ್ರಾಮ. ಅಡೂರು ಗ್ರಾಮದ ಈರಪ್ಪ ಎಂಬ ದಲಿತ ಯುವಕನ ಮೇಲೆ ಸಚಿವರ ಸೋದರ ಸಂಬಂಧಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.  ಆದರೆ  ಸಚಿವರ ಸೋದರ ಸಂಬಂಧಿಗಳ ವಿರುದ್ಧ  ಪ್ರಕರಣ ದಾಖಲಿಸಲು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಹಿಂದೇಟಾಕುತ್ತಿದ್ದಾರೆ.

ಘಟನೆಯ ವಿವರ : ಆಡೂರು ಗ್ರಾಮದ ಈರಪ್ಪ ಮಂಡಲಗೇರಿ ಎನ್ನುವ ವ್ಯಕ್ತಿ ಮಸಬಹಂಚಿನಾಳ ಗ್ರಾಮದಲ್ಲಿ ಮನೆಯೊಂದನ್ನು ಖರೀದಿ ಮಾಡುತ್ತಾರೆ. ಆದರೆ ಖರೀದಿ ಮಾಡಿದ ಮನೆಯಲ್ಲಿ ವಾಸಿಸಲು ಈರಪ್ಪ ಮಂಡಲಗೇರಿ ಅವರಿಗೆ ಅದೇ ಗ್ರಾಮದ ಹಾಲಪ್ಪ ಆಚಾರ್ ಸಂಬಂಧಿಕರಾದ ಪ್ರಭು ಆಚಾರ್ ಮತ್ತು ಇನ್ನಿತರರು ಅಡ್ಡಿಪಡಿಸಿದ್ದಾರೆ.  ಈರಪ್ಪ ದಲಿತ ಎನ್ನುವ ಒಂದೇ ಕಾರಣಕ್ಕಾಗಿ ಅಡ್ಡಿಪಡಿಸಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ಸಚಿವರ ಸಂಬಂಧಿಗಳ ಮಾತನ್ನು ಮೀರಿ ಈರಪ್ಪ ಮಂಡಲಗೇರಿ ಅವರು ತಾವು ಖರೀದಿ ಮಾಡಿದ ಮನೆಯನ್ನು ನೋಡಲು ಹೋಗುವ ಸಂದರ್ಭದಲ್ಲಿ ಪ್ರಭು ಆಚಾರ್ ಮತ್ತು ಸಂಗಡಿಗರು ಈರಪ್ಪ ಮಂಡಲಗೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ “ನಡು ಊರಿನಲ್ಲಿ ಮನೆ ಖರೀದಿ ಮಾಡುವಷ್ಟು ಧೈರ್ಯ ಬಂತೆ ನಿನಗೆ”  ಎಂದು ಕೇಳ ಜಾತಿಯವರಿಗೆ ಇಷ್ಟೊಂದು ಸೊಕ್ಕಾ ಎಂದು ಜಾತಿ ನಿಂದನೆ ಮಾಡಿ, ಅವಾಚ್ಯ  ಶಬ್ಬದಗಳಿಂದ ಅವಮಾನಿಸಿದ್ದಾರೆ ಎಂದು ಹಲ್ಲೆಗೊಳಗಾದ ಈರಪ್ಪ ಮಂಡಲಗಿರಿ ಆರೋಪಿಸಿದ್ದಾರೆ.

ಇಷ್ಟೊಂದು ಭೀಕರವಾದ ಹಲ್ಲೆ ಪ್ರಕರಣ ನೆಡದರು ಕೂಡ ಇದುವರೆಗೂ ಪೊಲೀಸರು ಪ್ರಕರಣ ದಾಖಲಿಸಿಲ್ಲ, ಸಚಿವರ ಹಿಂಬಾಲಕರಾದ ಕೆಲ ದಲಿತ ನಾಯಕರು ರಾಜೀಗೆ ಪ್ರಯತ್ನ ನಡೆಸಿದ್ದಾರೆ ಎಂಬ ಮಾತಗಳು ಕೇಳಿ ಬಂದಿವೆ.  ಸಚಿವ ಹಾಲಪ್ಪ ಆಚಾರ್‌ ಸೌಮ್ಯ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ಅವರ ಸಂಬಂಧಿಕರೆ ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದಾದರೆ ಸಚಿವರ ಅಧಿಕಾರವನ್ನು ಅವರ ಸಂಬಂಧಿಕರು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಚಿವರು ಕೂಡ ಮೌನ ವಹಿಸಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಪೊಲೀಸ್‌ ಇಲಾಖೆ ಸ್ವಯಂದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸಬೇಕು, ಹಲ್ಲೆಗೊಳಗಾದ ವ್ಯಕ್ತಿಗಳಿಗೆ ಪರಿಹಾರ ವಿತರಿಸಬೇಕು, ಇಂತಹ ದೌರ್ಜನ್ಯಗಳು ನಡೆಯದಂತೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ಯಲಬುರ್ಗಾ ತಾಲ್ಲೂಕ ಸಂಚಾಲಕ ಸಿದ್ಧಪ್ಪ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *