ಬೆಂಗಳೂರು:ಮೊದಲ ಬಾರಿಗೆ ಸಚಿವರಾಗಿರುವವರನ್ನು ಹೊರತುಪಡಿಸಿ ಹಳಬರೆಲ್ಲರೂ ಎರಡೂವರೆ ವರ್ಷಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು. ಉಳಿದವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿ -ಸಚಿವ ಕೆ.ಹೆಚ್.ಮುನಿಯಪ್ಪ
ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಹಳೆಬರು ಎರಡೂವರೆ ವರ್ಷಕ್ಕೆ ಇಳಿದು ಹೊಸಬರಿಗೆ ಅವಕಾಶ ಕಲ್ಪಿಸಬೇಕು. ಆ ಮೂಲಕ ನಾವು ದೇಶದಲ್ಲಿ ಹೊಸ ಪರಂಪರೆಯನ್ನು ಆರಂಭಿಸಿದಂತಾಗುತ್ತದೆ. ಇದು ನನ್ನ ವೈಯಕ್ತಿಕ ಸಲಹೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ನಿಗಮ,ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು.ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೂ ಪ್ರಮುಖ ಹುದ್ದೆ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಮಾತನಾಡಿ,ಪಕ್ಷ ಮತ್ತು ಸರ್ಕಾರದಲ್ಲಿ ಭಿನ್ನಭಿಪ್ರಾಯ ಇದ್ದರೆ ಅದನ್ನು ಬಹಿರಂಗವಾಗಿ ಚರ್ಚಿಸಬಾರದು. ಅದಕ್ಕೆ ಅವಕಾಶವನ್ನೂ ನೀಡಬಾರದು ಎಂದು ಹೇಳಿದರು.