ಹಕ್ಕುಗಳ ರಕ್ಷಣೆಗಾಗಿ ಹೋರಾಟಕ್ಕೆ ಸಜ್ಜಾಗಲು ಹಂಚು ಕಾರ್ಮಿಕರು ನಿರ್ಧಾರ

ಕುಂದಾಪುರ: ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ 21ನೇ ವಾರ್ಷಿಕ ಮಹಾಸಭೆಯು ಭಾನುವಾರ ನಡೆದಿದ್ದು, ಸರಕಾರದ ಕಾರ್ಮಿಕ ವಿರೋಧಿ ಧೋರಣೆಯಿಂದಾಗಿ ಹಂಚು ಉದ್ಯಮ ಮುಚ್ಚುವ ಭೀತಿಯಲ್ಲಿದೆ ಎಂಬ ಒಕ್ಕರೊಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರದಂದು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಸಂಘದ ಅಧ್ಯಕ್ಷ ವಿ.ನರಸಿಂಹ ಮಾತನಾಡಿ ಕಳೆದ ಐದು ದಶಕಗಳಿಂದಲೂ ಕರಾವಳಿ ಜಿಲ್ಲೆಯಾದ್ಯಂತ ಹಂಚು ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸರಕಾರದ ವಿರುದ್ಧ ಸಮರಶೀಲ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ. ಆದರೆ, ಈಗ ಸರ್ಕಾರದ ಹೊಸ ನೀತಿಗಳಿಂದಾಗಿ ಹಂಚು ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ತಿಳಿಸಿದರು.

ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಣಿ ವೆಂಕಟೇಶ ನಾಯಕ್ ವಾರ್ಷಿಕ ಮಹಾಸಭೆಗೆ ಶುಭ ಕೋರಿ ಮಾತನಾಡಿ, ಗ್ರಾಮಾಂತರ ಪ್ರದೇಶದ ಹಳ್ಳಿಯ ಬಡವರಾದ ಬಡ ರೈತ, ಕೃಷಿಕೂಲಿಕಾರರ ಸಂಘಟನೆಗೆ, ಹಂಚು ಕಾರ್ಮಿಕರು ಸಕ್ರಿಯ ಬೆಂಬಲ ಕೊಡಬೇಕಾಗಿ ವಿನಂತಿಸಿಕೊಂಡರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ವಾರ್ಷುಕ ಚಟುವಟಿಕೆಯ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಕಾಶ್ ಕೋಣಿ ಲೆಕ್ಕ ಪತ್ರಮಂಡಿಸಿದರು. ವರದಿಯ ಮೇಲೆ ಪ್ರತಿನಿಧಿಗಳು ಚರ್ಚಿಸಿದ ಬಳಿಕ ಸರ್ವಾನುಮತದಿಂದ ಅಂಗೀಕರಿಸಿದರು. ಮಹೇಶ್ ಶ್ರದ್ಧಾಂಜಲಿ ಠರಾವು ಮಂಡಿಸಿದರು.

ಕೇಂದ್ರ, ರಾಜ್ಯದ ಬಿಜೆಪಿ ಸರಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳ ವಾಪಾಸ್ಸಾತಿಗೆ ಆಗ್ರಹಿಸಿ ಜರಗುವ ಆಖಿಲ ಭಾರತ ಮುಷ್ಕರ ಯಶಸ್ವಿಗೊಳಿಸುವುದು, ಹಂಚು ಉದ್ಯಮ ಮತ್ತು ಕಾರ್ಮಿಕರ ಉದ್ಯೋಗ ರಕ್ಷಿಸಲು ಆಗ್ರಹಿಸಿ, ಇ.ಎಸ್.ಐ. ಸೌಲಭ್ಯ ಸಮರ್ಪಕವಾಗಿ ಜಾರಿಗೆ ತರಲು ಒತ್ತಾಯಿಸಿ, ಜೀವನಾವಶ್ಯಕ ವಸ್ತುಗಳ ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆ ತಡೆಗಟ್ಟಬೇಕು ಇತ್ಯಾದಿ ನಿರ್ಣಯಗಳನ್ನು ಅಂಗೀಕರಿಸಿದರು.

ಈ ಬೇಡಿಕೆಗಳನ್ನು ಜಾರಿಗೊಳಿಸಲು ಆಗ್ರಹಿಸಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲು ಮಹಾಸಭೆಯು ನಿರ್ಧರಿಸಿದೆ.

ನೂತನ ಕಾರ್ಯಕಾರಿ ಸಮಿತಿ ಆಯ್ಕೆ

ವಿ.ನರಸಿಂಹ(ಅಧ್ಯಕ್ಷ), ಕೆ.ಶಂಕರ್, ಜಿ.ಡಿ.ಪಂಜು, ವಾಸು ಪೂಜಾರಿ, ಸುರೇಂದ್ರ (ಉಪಾಧ್ಯಕ್ಷರು), ಎಚ್.ನರಸಿಂಹ (ಪ್ರಧಾನ ಕಾರ್ಯದರ್ಶಿ), ಪ್ರಕಾಶ ಕೋಣಿ (ಕೋಶಾಧಿಕಾರಿ), ಲಕ್ಷ್ಮಣ.ಡಿ., ಚಂದ್ರ ಪೂಜಾರಿ (ಜೊತೆ ಕಾರ್ಯದರ್ಶಿ) ಇವರನ್ನೊಳಗೊಂಡ  70 ಮಂದಿಯ  ಕಾರ್ಯಕಾರಿ ಸಮಿತಿ ರಚನೆ ಮಾಡಿದರು.

ವರದಿ: ಕೋಣಿ ವೆಂಕಟೇಶ ನಾಯಕ್

Donate Janashakthi Media

Leave a Reply

Your email address will not be published. Required fields are marked *