- ಅಂತರ್ಜಾತಿ ವಿವಾಹಕ್ಕೆ ವಿರೋಧ?
ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಪ್ರೇಮಿಗಳಿಬ್ದರ ಮೃತದೇಹ ಪತ್ತೆಯಾಗಿದೆ. ಬಾಗೂರು ಬಳಿಯ ಹೇಮಾವತಿ ಕಾಲುವೆ ಸುರಂಗದ ಬಳಿ ನವೆಂಬರ್ 16 ರಂದು ಬೈಕ್ ನಿಲ್ಲಿಸಿ, ಚಪ್ಪಲು ಅಲ್ಲೇ ಬಿಟ್ಟು ಪ್ರೇಮಿಗಳು ನಾಪತ್ತೆಯಾಗಿದ್ದರು.
ನಂತರ ಹೇಮಾವತಿ ಕಾಲುವೆಗೆ ಹಾರಿದ್ದು ಇದೀಗ ಇವರಿಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಹಿರಿಸಾವೆ ಗ್ರಾಮದ ಸುಶ್ಮಿತ(18), ಹಾಗೂ ಮತಿಘಟ್ಟ ಗ್ರಾಮದ ರಮೇಶ್(19) ಎಂದು ಗುರುತಿಸಲಾಗಿದೆ. ಇನ್ನು ಈ ಹಿಂದೆ ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರೇಮಿಗಳಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಐಟಿಐ ಓದುತ್ತಿದ್ದ ರಮೇಶ್ ಹಾಗೂ ಪದವಿ ಓದುತ್ತಿದ್ದ ಸುಸ್ಮಿತಾ ನಡುವೆ ಕಳೆದ ಒಂದು ವರ್ಷದಿಂದ ಪ್ರೀತಿ ಇತ್ತು ಎಂದು ತಿಳಿದುಬಂದಿದೆ. ಆದರೆ ಅಂತರ್ಜಾತಿ ವಿವಾಹವನ್ನು ಮನೆಯವರು ವಿರೋಧಿಸಿದ ಹಿನ್ನೆಲೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಪರಸ್ಪರ ಅಪ್ಪಿಕೊಂಡು ಹಗ್ಗ ಕಟ್ಟಿಕೊಂಡು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಯಾಕೆಂದರೆ ಮೃತದೇಹ ಹಗ್ಗ ಕಟ್ಟಿಕೊಂಡು ಅಪ್ಪಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿದೆ. ತನಿಖೆ ಆರಂಭವಾಗಿದೆ.