ಬೆಂಗಳೂರು: ಸರ್ಕಾರವನ್ನು ನಡೆಸುವವರ ಮುಖವಾಡ ಕಳಚುತ್ತಿದೆ. ಇಂತಹ ಪ್ರಸಂಗ ನಾವು ಎಂದೂ ನೋಡಿರಲಿಲ್ಲ. ನಾವು ಹಲವು ವರ್ಷ ಸರ್ಕಾರದ ಭಾಗವಾಗಿದ್ದೆವು. ಗುತ್ತಿಗೆದಾರರು ಈ ಹಿಂದೆ ದೂರು ನೀಡಿದ ಉದಾಹರಣೆಯಿಲ್ಲ. ಇದೇ ಮೊದಲು ಪ್ರಧಾನಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 40% ಪಾಲು ಕೇಳುತ್ತಿದ್ದಾರೆಂದು ಅವರು ಪತ್ರ ಬರೆದು ವಿವರಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಟಿ.ಬಿ.ಜಯಚಂದ್ರ ಹೇಳಿದರು.
40% ಪಾಲಿನ ವಿಚಾರವಾಗಿ ಗುತ್ತಿಗೆದಾರರು ಪತ್ರ ಬರೆಯುತ್ತಾರೆ ಅಂದರೆ ಹೇಗೆ? ಈ ವಿಚಾರವಾಗಿ ಇವತ್ತು ಜನರ ಮುಂದೆ ರಾಜ್ಯ ಬಿಜೆಪಿ ಸರ್ಕಾರ ಬೆತ್ತಲಾಗಿದೆ. ಇದಕ್ಕೆ ಪ್ರಧಾನಿಯವರೇ ಉತ್ತರವನ್ನು ಕೊಡಬೇಕು ಎಂದರು.
ಇದನ್ನು ಓದಿ: ಪಾಕಿಸ್ತಾನ್ ಜಿಂದಾಬಾದ್ ಪ್ರಕರಣ : ಪತ್ರಕರ್ತ ಹರೀಶ್ ಸೇರಿ ಮೂವರ ಬಂಧನ
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳು ಪಾರ್ಲಿಮೆಂಟ್ ಆಗಲಿ, ವಿಧಾನಸಭೆಯಲ್ಲಾಗಿ ಚರ್ಚೆಯಾಗಿಲ್ಲ. ಸುಗ್ರೀವಾಜ್ಞೆಗಳ ಮೂಲಕ ಕಾಯ್ದೆ ತರುತ್ತಾರೆ. ನಾವು ಮಾಡಿದ್ದೇ ಸರಿ ಅಂತ ಹೇಳ್ತಾರೆ. ರಾಜ್ಯಗಳ ಮೇಲೂ ಬಲವಂತವಾಗಿ ಹೇರುತ್ತಾರೆ. ದೇಶದ ರೈತರೇ ಕೃಷಿ ಕಾಯ್ದೆಗಳ ವಿರುದ್ಧ ತಿರುಗಿಬಿದ್ದರು. ಕೇಂದ್ರಕ್ಕೆ ಜ್ಞಾನೋದಯವಾಗಿ ಹಿಂತೆಗೆದುಕೊಂಡಿಲ್ಲ. ಮುಂಬರಲಿರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಿಂಪಡೆದಿದ್ದಾರೆ. ರೈತರ ಮುಂದೆ ಕೊನೆಗೂ ಪ್ರಧಾನಿ ತಲೆಬಗ್ಗಿಸಿದ್ದಾರೆ. ಹಿಟ್ಲರ್ ಆಡಳಿತ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ರಾಜ್ಯದಲ್ಲೂ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು. ಎಪಿಎಂಸಿ ಕಾಯ್ದೆಯಿಂದಾಗಿ ಇಂದು ಅವುಗಳು ಇವತ್ತು ಮುಚ್ಚುವ ಸ್ಥಿತಿಯಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಎಪಿಎಂಸಿಗಳಿಗೆ ಮೂಲಸೌಕರ್ಯ ಕಲ್ಪಿಸಿದ್ದೆವು. ಆದರೆ ಈಗಿನ ಬಿಜೆಪಿ ಸರ್ಕಾರ ಸೌಕರ್ಯಗಳನ್ನೇ ನಿಲ್ಲಿಸಿಬಿಟ್ಟಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ಮಳೆಯಿಂದ ರಾಜ್ಯದ ಜನ ತತ್ತರಿಸಿಹೋಗುತ್ತಿದ್ದಾರೆ. ಭಾರೀ ಮಳೆಯಿಂದಾಗಿ ಕೋಟ್ಯಂತರ ರೂ. ಬೆಳೆ ಹಾನಿಯಾಗಿದೆ. ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಆದರೆ, ಮುಖ್ಯಮಂತ್ರಿ ಸಾಹೇಬರಿಗೆ ಇದರ ಬಗ್ಗೆ ಕಾಳಜಿಯಿಲ್ಲ. ನಿನ್ನೆಯಷ್ಟೇ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದು ಬಿಟ್ಟರೆ ಬೇರೇನು ಮಾಡಿಲ್ಲ. ವಾರದಲ್ಲಿ ಎರಡೆರಡು ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಬ್ಯುಸಿಯಾಗಿದ್ದಾರೆ.
ಮಳೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ರೈತರು, ಸಂತ್ರಸ್ಥರ ಸಮಸ್ಯೆ ತಿಳಿಯಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ ಎಲ್ಲವನ್ನು ಪರಿಶೀಲಿಸಬೇಕು. ಇದ್ಯಾವುದರ ಕಡೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಹೇಬರಿಗೆ ಸಮಯ ಸಿಗ್ತಿಲ್ಲ ಅನಿಸುತ್ತೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.
ಐಎಎಸ್ ಅಧಿಕಾರಿಗಳು ಇಂದು ಅವರ ಮುಂದೆ ಕೈಕಟ್ಟಿ ನಿಲ್ತಿದ್ದಾರೆ. ಅವರು ವರ್ಗಾವಣೆಗಾಗಿ ಕೈಕಟ್ಟಿ ನಿಲ್ತಿದ್ದಾರೆ. ಈ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಕಾನೂನುಬದ್ಧ ಎಂಬಂತೆ ಮಾಡಲು ಹೊರಟಿದ್ದಾರೆ. ಇದರ ಬಗ್ಗೆ ನಾವು ಹೋರಾಟ ಹಮ್ಮಿಕೊಂಡಿದ್ದೇವೆ.
ನಾಳೆ ತುಮಕೂರಲ್ಲಿ ಜನಾಂದೋಲನ ಜಾಗೃತಿ
ಜನ ಇವತ್ತು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ನಾಳೆ ಕಾಂಗ್ರೆಸ್ ಪಕ್ಷವು ತುಮಕೂರಿನಲ್ಲಿ ಜನಾಂದೋಲನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮಲ್ಲಿ ಮೂರು ನೀರಾವರಿ ನಿಗಮಗಳಿವೆ. ಒಂದೊಂದು ನಿಗಮದಲ್ಲಿ ನಾಲ್ಕೈದು ಸಾವಿರ ಕೋಟಿ ಬಾಕಿಯಿದೆ. ಗುತ್ತಿಗೆದಾರರಿಗೆ ಕೊಡಬೇಕಾದ ಬಾಕಿಯಿದೆ. ಗುತ್ತಿಗೆದಾರರು ಊರು ಬಿಟ್ಟುಹೋಗ್ತಿದ್ದಾರೆ. ನಮ್ಮಲ್ಲೂ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನಡೆದಿದೆ. ಕಂಟ್ರಾಕ್ಟರ್ ಬಂದು ಊರಿಗೆ ಹೋಗ್ತೇವೆ ಅಂತಿದ್ದಾರೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಹ ʻಹಿಂದೆ ನೀರಾವರಿ ಟೆಂಡರ್ ವಿಚಾರವಾಗಿಯೂ ಆರೋಪಗಳು ಕೇಳಿಬಂದವು. ಆ ಆರೋಪಗಳಿಗೆ ಪಾಲಿನ ವಿಚಾರ ತಾಳೆಯಾಗುತ್ತಿದೆ. ಬೆಂಕಿಯಿಲ್ಲದೆ ಹೊಗೆ ಕಾಣಲ್ಲ ಇದಕ್ಕೆ ಪ್ರಧಾನಿಯವರೇ ಉತ್ತರ ಕೊಡಬೇಕುʼ ಎಂದು ಒತ್ತಾಯ ಮಾಡಿದರು.