- ಕಾನೂನನ್ನು ಹಿಂದಕ್ಕೆ ಪಡೆಯುವ ರೈತ ಸಂಘಟನೆಗಳ ಒತ್ತಾಯದಲ್ಲಿ ಬದಲಾವಣೆ ಇಲ್ಲ: ರಾಕೇಶ್ ಟಿಕೈಟ್
ನವದೆಹಲಿ: ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕರೆಯಲಾಗಿದ್ದ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ಸಭೆ ಅಂತ್ಯವಾಗಿದೆ. ಈ ಸಭೆಯಲ್ಲೂ ನಿರ್ಣಾಯಕ ತೀರ್ಮಾನಕ್ಕೆ ಬರುವಲ್ಲಿ ಉಭಯ ಬಣ ವಿಫಲವಾಗಿದೆ. ಆದರೆ ಡಿ.05(ಶನಿವಾರ)ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ.
ಎರಡೂ ಬಣಗಳು ಇಂದಿನ ಸಭೆಯನ್ನು ಆಶಾದಾಯಕ ಎಂದು ಬಣ್ಣಿಸಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಣ್ಣ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿವೆ. ಆದರೆ ಕೃಷಿ ಕಾನೂನುಗಳ ರದ್ದತಿಗೆ ಬಿಗಿ ಪಟ್ಟು ಹಿಡಿದಿರುವ ರೈತ ಸಂಘಟನೆಗಳು, ಇದಕ್ಕಾಗಿ ವಿಶೇಷ ಸಂಸತ್ ಅಧಿವೇಶನ ಕರೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ. ಆದರೆ ವಿಶೇಷ ಸಂಸತ್ ಅಧಿವೇಶನಕ್ಕೆ ಒಪ್ಪದ ಕೇಂದ್ರ ಸರ್ಕಾರ ಶನಿವಾರದ ಸಭೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಇಂದಿನ ಮಾತುಕತೆ ಆಶಾದಾಯಕ ಎಂದ ರೈತ ನಾಯಕರು!
ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ನಡೆದ ಇಂದಿನ(ಡಿ.03-ಗುರುವಾರ) ಸಭೆಯನ್ನು, ರೈತ ನಾಯಕರು ಆಶಾದಾಯಕ ಎಂದು ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಮಣಿದಿರುವಂತೆ ತೋರುತ್ತಿದೆ. ಆದರೂ ಡಿ.5ರ ಸಭೆಯಲ್ಲಿ ಅಂತಿಮ ನಿರ್ಣಯ ಹೊರಬೀಳುವ ವಿಶ್ವಾಸವಿದೆ ಎಂದು ಆಜಾದ್ ಕಿಸಾನ್ ಸಂಘರ್ಷ ಸಮಿತಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಟಂಡಾ ಹೇಳಿದ್ದಾರೆ.
ಇಂತದ್ದೇ ಅಭಿಪ್ರಾಯ ಹೊರಹಾಕಿರುವ ಭಾರತೀಯ ಕೃಷಿ ಕಿಸಾನ್ ಒಕ್ಕೂಟದ ವಕ್ತಾರ ರಾಕೇಶ್ ಟಿಕೈಟ್, MSP ಕುರಿತ ಸರ್ಕಾರದ ನಿಲುವು ಬದಲಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸರ್ಕಾರ MSP ಕಾನೂನುಗಳಿಗೆ ತಿದ್ದುಪಡಿ ಮಾಡಲು ಸಿದ್ಧವಿದೆ ಎಂದು ತೋರುತ್ತಿದ್ದು, ಅದಾಗ್ಯೂ ಸಂಪೂರ್ಣವಾಗಿ ಕಾನೂನನ್ನು ಹಿಂದಕ್ಕೆ ಪಡೆಯುವ ರೈತ ಸಂಘಟನೆಗಳ ಒತ್ತಾಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಟಿಕೈಟ್ ಸ್ಪಷ್ಟಪಡಿಸಿದರು.
ಸರ್ಕಾರ ಹೇಳಿದ್ದೇನು?
ಇನ್ನು ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಇಂದಿನ(ಡಿ.03-ಗುರುವಾರ) ಸಭೆಯನ್ನು ಫಲಪ್ರದ ಎಂದು ಬಣ್ಣಿಸಿದರು. MSP ಕುರಿತಾದ ರೈತರ ಆತಂಕಗಳನ್ನು ದೂರ ಮಾಡಲಾಗಿದ್ದು, MSP ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.
ಅದಾಗ್ಯೂ ಡಿ.05(ಶನಿವಾರ)ರ ಸಭೆಯಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದ್ದು, ರೈತರು ಈ ಕೂಡಲೇ ತಮ್ಮ ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿರುವುದಾಗಿ ತೋಮರ್ ಸ್ಪಷ್ಟಪಡಿಸಿದರು.
ಕೃಷಿ ಮಾರುಕಟ್ಟೆಗಳನ್ನು ಮತ್ತಷ್ಟು ಸದೃಢಗೊಳಿಸುವುದೇ ಸರ್ಕಾರದ ಆದ್ಯತೆಯಾಗಿದ್ದು, ರೈತರು ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದಿರುವ ತೋಮರ್, ಪ್ರತಿಭಟನೆಯನ್ನು ಕೈಬಿಟ್ಟು ದೆಹಲಿ ಜನತೆಯ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.