ಗುಜರಾತ್‌ ಹತ್ಯಾಕಾಂಡ: ಪ್ರಜಾಪ್ರಭುತ್ವದ ಬುಡವನ್ನೇ ಶಿಥಿಲಗೊಳಿಸುವ ಯತ್ನ

ಬಿ. ಶ್ರೀಪಾದ ಭಟ್

ಗುಜರಾತ್ ಗಲಭೆ ಹಿನ್ನೆಲೆಯಲ್ಲಿ ದೊಡ್ಡ ಪಿತೂರಿ ನಡೆದಿದೆ ಎಂದು ಆ ಹತ್ಯೆಯಲ್ಲಿ ಕೊಲೆಯಾದ, ಕಾಂಗ್ರೆಸ್ ಮುಖಂಡ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಫ್ರಿಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ಕೊಟ್ಟಿದೆ, ಇದು ನಿರೀಕ್ಷಿತವಾಗಿತ್ತು. ಏಕೆಂದರೆ ನಮ್ಮ ಕಂಗಳಿಗೆ ಅದರ ಮುಂದಿನ ಕತ್ತಲು ಸ್ಪಷ್ಟವಾಗಿ ಕಂಡಿತ್ತು. ಆ ಕತ್ತಲಿನಲ್ಲಿ ಎಡವುತ್ತಾ ನಡೆಯುವ ಅಭ್ಯಾಸವನ್ನು ಮಾಡಿಕೊಂಡಿತ್ತು. ಆದರೆ, ಈ ತೀರ್ಪಿನ ನಂತರ ಆ ಹಾದಿಯೇ ಬಂದಾಗಿರುವುದು ಕಂಡು ಕಕ್ಕಾಬಿಕ್ಕಿಯಾಗಿದೆ.

ಈ ತೀರ್ಪು ನೀಡುವ ಸಂದರ್ಭಗಳಲ್ಲಿ ಹೇಳಿದ ಮಾತುಗಳು ಕಳವಳಕಾರಿಯಾಗಿವೆ;

ಜೂನ್‌ 26ರ ಮಾಧ್ಯಮಗಳ ವರದಿಯ ಅನುಸಾರ ನ್ಯಾಯಮೂರ್ತಿ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ‘ರಾಜ್ಯ ಅತೃಪ್ತ ಅಧಿಕಾರಿಗಳ ಸುಳ್ಳು ಹೇಳಿಕೆಗಳನ್ನು ಆಧರಿಸಿ ಆರೋಪ ಮಾಡಲಾಗಿದೆ. ಆಗ ಗುಜರಾತಿನ ಡಿಜಿಪಿಯಾಗಿದ್ದ ಆರ್.ಪಿ. ಶ್ರೀಕುಮಾರ್, ಮಾಜಿ ಐಪಿಎಸ್ ಸಂಜೀವ್ ಭಟ್, ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರು ನೀಡಿದ ‘ಅತಿ ರೋಮಾಂಚಕ ಹೇಳಿಕೆಗಳನ್ನು’ ಆಧರಿಸಿ ಮೋದಿ ಮತ್ತು ಇತರರ ಮೇಲೆ ಆರೋಪ ಮಾಡಿದ್ದಾರೆ… ಅಧಿಕಾರಿಗಳ ವೈಫಲ್ಯವನ್ನು ಸರಕಾರದ ಪೂರ್ವ ನಿಯೋಜಿತ ಸಂಚು ಎಂದು ಹೇಳಲು ಸಾದ್ಯವಿಲ್ಲ… ಇವರ ಹೇಳಿಕೆಗಳು ವಿಷಯವನ್ನು ಉದ್ರೇಕಗೊಳಿಸುವ, ರಾಜಕೀಯಗೊಳಿಸುವ ಉದ್ದೇಶವನ್ನು ಹೊಂದಿತ್ತು… ಸುಳ್ಳುಗಳ ಮೂಲಕ ಅವರು ಈ ಪ್ರಯತ್ನ ಮಾಡಿದರು….. ಜಾಫ್ರಿಯಾ ಅವರ ಆರೋಪಗಳು ನ್ಯಾಯಾಂಗದ ವಿವೇಕವನ್ನು ಪ್ರಶ್ನಿಸುವ ಸ್ವರೂಪ ಹೊಂದಿವೆ” ಎಂದು ಅಭಿಪ್ರಾಯ ಪಟ್ಟಿದೆ.

ಗಲಭೆ ನಡೆದಾಗ ಮುಖ್ಯಮಂತ್ರಿಯಾಗಿದ್ದ ಮೋದಿಯವರ ಆಡಳಿತ ಕಠಿಣ ಕ್ರಮತೆಗೆದುಕೊಂಡಿದ್ದರು ಎನ್ನುವುದಾದರೆ 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಿದ್ದಾರು ಹೇಗೆ ಎನ್ನುವ ಮೂಲಭೂತ ಪ್ರಶ್ನೆ ನ್ಯಾಯಾಂಗಕ್ಕೆ ಕಾಡದೇ ಹೋಗಿದ್ದು ಸಹ ಅಚ್ಚರಿಗೊಳಿಸುವುದಿಲ್ಲ. (ಕಂಗಳ ಮುಂದಿನ ಕತ್ತಲು) ಆದರೆ ತೀರ್ಪು ನೀಡುವ ಸಂದರ್ಭದಲ್ಲಿ ಹೇಳಿದ ಈ ಮಾತುಗಳು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಬಹುದು ಎಂಬುದು ನೆನೆದಾಗ ದಿಗ್ಭ್ರಮೆಯಾಗುತ್ತದೆ. ಯಾವ ಕೇಡಿನ ಮುನ್ಸೂಚನೆ ಇದು?

ಸಾತ್ರೆ ‘ ಫ್ಯಾಸಿಸಂನ್ನು ಅದರ ಬಲಿಪಶುಗಳ ಸಂಖ್ಯೆಯ ಆಧಾರದಲ್ಲಿ ಅರ್ಥೈಸುವುದಿಲ್ಲ, ಆದರೆ ಹೇಗೆ ಕೊಲ್ಲಲ್ಪಟ್ಟರು ಎನ್ನುವುದನ್ನು ಆಧರಿಸಿ ವಿಶ್ಲೇಷಿಸಲಾಗುತ್ತದೆ’ ಎಂದು ಹೇಳುತ್ತಾನೆ.

ಗುಜರಾತ್ ಹತ್ಯಾಕಾಂಡದಲ್ಲಿ ಸಾವಿರಾರು ಮುಸ್ಲಿಮರು ಕೊಲೆಯಾದರು ಎನ್ನುವುದು ಪ್ರಭುತ್ವ- ಪುಂಡು ಗುಂಪುಗಳು (fringe elements) ನಡುವಿನ ಆ ಕೈ ಜೋಡಿಸುವಿಕೆಯನ್ನು ಬಹಿರಂಗಗೊಳಿಸಿದರೆ, ಕಣ್ಣ ಮುಂದೆ ನಡೆದ ಈ ಹತ್ಯೆಗಳಿಗೆ ಸಾಂದರ್ಭಿಕ ಸಾಕ್ಷಿಗಳನ್ನು ಪ್ರಸ್ತುತಪಡಿಸಿದರೂ ಸಹ ಅದನ್ನು ನಿರ್ಲಕ್ಷಿಸಿ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ತೀರ್ಪು ನೀಡುವ ಸಂದರ್ಭದಲ್ಲಿನ ಮೇಲಿನ ಹೇಳಿಕೆಗಳು ಮತ್ತು ಅದರ ಪರಿಣಾಮಗಳು (cause and effect) ಗಾಯದ ಮೇಲೆ ಮತ್ತೊಂದು ಗಾಯವನ್ನುಂಟು ಮಾಡಿದಂತಾಗಿದೆ.

ಈ ತೀರ್ಪುಗಳು ಮತ್ತು ಅಭಿಪ್ರಾಯಗಳು ಈಗಾಗಲೇ ಬಿರುಕು ಬಿಟ್ಟ ಪ್ರಜಾಪ್ರಭುತ್ವದ ಬುಡವನ್ನೇ  ಶಿಥಿಲಗೊಳಿಸುತ್ತವೆ ಮತ್ತು ಈ ಪ್ರಕ್ರಿಯೆಯಲ್ಲಿ ಭಾರತ ಅರ್ಧ ಹಾದಿಯನ್ನು ಕ್ರಮಿಸಿದೆ.

(ಗಾಬರಿಯಾಗುತ್ತಿಲ್ಲವೇ? ಹೋಗಲಿ ಬಿಡಿ)

‘ಈ ಪ್ರಕ್ರಿಯೆಯ ದುರುಪಯೋಗದಲ್ಲಿ ಶಾಮೀಲಾಗಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಾಗಿದೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆಯೆಂದು ವರದಿಯಾಗಿದೆ. ಇದು ಅಘಾತಕಾರಿ. ಈ ಮಾತುಗಳು ಪ್ರಭುತ್ವಕ್ಕೆ ಒಂದು ಪೂರ್ವ ನಿದರ್ಶನವಾಗುವುದರಲ್ಲಾಗಲಿ, ಅದನ್ನು ತನ್ನ ವಿರೋಧಿಗಳು ಮತ್ತು ಪ್ರಜಾಪ್ರಭುತ್ವವಾದಿಗಳ ಮೇಲೆ ಆಯುಧದಂತೆ ಪ್ರಯೋಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಈ ಆಯುಧವನ್ನು ಝಳಪಿಸಿರುವ  ಪ್ರಭುತ್ವವು ತೆಸ್ತಾ ಸೆಟ್ಲವಾಡ್ ಮತ್ತು ಶ್ರೀ ಕುಮಾರ್ ಅವರನ್ನು ಕ್ಷಿಪ್ರವಾಗಿ  ಬಂಧಿಸಿದೆ.

ಹಾಗೆಯೇ ಉಳಿದುಕೊಂಡ ಸಣ್ಣ, ಅತಿ ಸಣ್ಣ ಪ್ರಶ್ನೆಗಳು ‘ಈ ಗಲಭೆಗಳಿಗೆ ಮೋದಿ ಹೊಣೆಗಾರರಲ್ಲ ಎನ್ನುವುದಾದರೆ  ಮುಸ್ಲಿಮರ ವಿರುದ್ಧ ಮೋದಿ ನಮ್ಮನ್ನು ರಕ್ಷಿಸುತ್ತಾರೆ ಎಂದು ಯಾಕೆ ಬಹುಸಂಖ್ಯಾತ ಹಿಂದೂಗಳು ನಂಬಿದ್ದಾರೆ? (ನ್ಯಾಯಾಂಗಕ್ಕೆ ಈ ಪ್ರಶ್ನೆ ಅಪ್ರಸ್ತುತ. ಹಾಗಿದ್ದರೆ ಯಾರಿಗೆ ಇದು ಪ್ರಸ್ತುತ?)

ಹತ್ಯಾಕಾಂಡದ ಸಂದರ್ಭದಲ್ಲಿ ಮೋದಿಯವರ ಕೈವಾಡ ಇಲ್ಲ ಎನ್ನುವುದು ನಿಮ್ಮ ಅಭಿಪ್ರಾಯ. ಹಾಗಿದ್ದರೆ ಮುಖ್ಯಮಂತ್ರಿಯಾಗಿ ಅವರು ಏನು ಮಾಡುತ್ತಿದ್ದರು ಎನ್ನುವ ನಮ್ಮ ತಲೆಹರಟೆಯಲ್ಲದ ಪ್ರಶ್ನೆಯನ್ನು ಸಹ ಈ ತೀರ್ಪಿನ ನಂತರ ಕೇಳುವಂತಿಲ್ಲವೇ?

ಈ ಪೋಸ್ಟ್ ಜೊತೆಗೆ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರ ಟ್ವೀಟ್ ನ್ನು ಲಗತ್ತಿಸಿದ್ದೇನೆ. ಕೆಲವೇ ಸಾಲುಗಳಲ್ಲಿ ಅದು ಹೇಳಿದ್ದೇನು? ಅದು ಹೇಳದೆ ಬಿಟ್ಟಿದ್ದೇನು (dotted lines) ಎಲ್ಲವೂ ನಿಮ್ಮ ವಿವೇಚನೆಗೆ ಬಿಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *