ವಿವೇಕ್ ಅಗ್ನಿಹೋತ್ರಿ ಅವರ `ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಸಿನಿಮಾದಲ್ಲಿ ಅರ್ಧ ಸತ್ಯವನ್ನಷ್ಟೇ ಹೇಳಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಇದರೊಂದಿಗೆ, ಕಾಶ್ಮೀರ್ ಫೈಲ್ಸ್ ಅಷ್ಟೇ ಅಲ್ಲ, ದಲಿತ್ ಫೈಲ್ಸ್, ಗುಜರಾತ್ ಫೈಲ್ಸ್, ನೆಲ್ಲಿ ಫೈಲ್ಸ್ ಹೀಗೆ ಹಲವು ಕಥೆಗಳ ಕುರಿತು ಸಿನಿಮಾ ಮಾಡಬೇಕು ಎಂಬ ಚರ್ಚೆಗಳ ಮುನ್ನೆಲೆಗೆ ಬರುತ್ತಿವೆ. ಇದರ ನಡುವೆ ಬಾಲಿವುಡ್ ನಿರ್ದೇಶಕ ವಿನೋದ್ ಕಾಪ್ರಿ ಶೀಘ್ರದಲ್ಲೇ ಗುಜರಾತ್ ಫೈಲ್ಸ್ ಎಂಬ ಹೊಸ ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿಯವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಗುಜರಾತ್ ಫೈಲ್ಸ್’ ಸಂಬಂಧ ಎರಡು ಟ್ವೀಟ್ ಮಾಡಿದ್ದಾರೆ.
ವಿನೋದ್ ಕಾಪ್ರಿ ತಮ್ಮ ಮೊದಲ ಟ್ವೀಟ್ ಅನ್ನು ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿದ್ದು, ‘ಗುಜರಾತ್ ಫೈಲ್ಸ್ ಹೆಸರಿನಲ್ಲಿ, ಕಲೆ ಹಾಗೂ ಸತ್ಯಗಳ ಆಧಾರದ ಮೇಲೆ ಚಲನಚಿತ್ರ ಮಾಡಲು ನಾನು ಸಿದ್ಧನಿದ್ದೇನೆ. ಅದರಲ್ಲಿ ನಿಮ್ಮ ಪಾತ್ರವನ್ನು ಸಹ ವಿವರವಾಗಿ ತೋರಿಸಲಾಗುತ್ತಿದೆ’ ಎಂದಿದ್ದಾರೆ. ಮುಂದುವರಿದು, ‘ನರೇಂದ್ರ ಮೋದಿ ಜಿ ಚಿತ್ರದ ಬಿಡುಗಡೆಯನ್ನು ನಿಲ್ಲಿಸುವುದಿಲ್ಲ ಎಂದು ನೀವು ಇಂದು ದೇಶದ ಮುಂದೆ ನನಗೆ ಭರವಸೆ ನೀಡುತ್ತೀರಾ?’ ಎಂದು ಕೇಳಿದ್ದಾರೆ.
ಎರಡನೇ ಟ್ವೀಟ್ನಲ್ಲಿ “ನನ್ನ ಈ ಟ್ವೀಟ್ ನಂತರ, ನಾನು ಕೆಲವು ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಗುಜರಾತ್ ಫೈಲ್ಸ್ ನಿರ್ಮಿಸಲು ಸಿದ್ಧರಾಗಿದ್ದಾರೆ. ಈಗ ಪ್ರಧಾನಿ ಹೇಳುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭರವಸೆಯನ್ನು ಈ ಚಿತ್ರಕ್ಕೂ ನೀಡಬೇಕು ಎಂಬ ಭರವಸೆ ಮಾತ್ರ ಅವರಿಗೆ ಬೇಕಾಗಿದೆ” ಎಂದಿದ್ದಾರೆ. ವಿನೋದ್ ಕಾಪ್ರಿ ಅವರ ಈ ಎರಡೂ ಟ್ವೀಟ್ಗಳು ಹೆಚ್ಚು ವೈರಲ್ ಆಗುತ್ತಿವೆ.