ಉದ್ದೇಶಪೂರ್ವಕ ಸೇಡಿನ ಕ್ರಮವೆಂದು ಆರೋಪಿಸಿದ ಹೋರಾಟಗಾರರು
2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ್ದಾರೆ ಎಂಬ ಆರೋಪದಡಿ ದಾಖಲಾದ ಪ್ರಕರಣದಲ್ಲಿ “ತಕ್ಷಣವೇ ಶರಣಾಗುವಂತೆ” ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಶನಿವಾರ ಆದೇಶ ನೀಡಿದೆ. ಜೊತೆಗೆ ಜಾಮೀನು ಅರ್ಜಿಯನ್ನು ಕೂಡಾ ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನು ಅವರನ್ನು ಇಲ್ಲಿಯವರೆಗೆ ಬಂಧನದಿಂದ ರಕ್ಷಿಸಿತ್ತು. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ನೀಡುವವರೆಗೆ ಆದೇಶಕ್ಕೆ ತಡೆ ನೀಡುವಂತೆ ತೀಸ್ತಾ ಅವರ ವಕೀಲರ ಮನವಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.
ಏನಿದು ಪ್ರಕರಣ?
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಾಧಾರ ಸೃಷ್ಟಿ, ಕ್ರಿಮಿನಲ್ ಪಿತೂರಿ ಮಾಡಿದ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಪೊಲೀಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದ ತೀಸ್ತಾ 2022ರ ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಸಬರಮತಿ ಜೈಲಿನಿಂದ ಬಿಡುಗಡೆಯಾಗಿದ್ದರು.
ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್
ಗುಜರಾತ್ ಎಟಿಎಸ್ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ತೀಸ್ತಾ ಸೆಟಲ್ವಾಡ್ ಅವರು ಸುಳ್ಳು ಹೇಳಿಕೆ ನೀಡುವ ಸಾಕ್ಷಿಗಳನ್ನು ಸೃಷ್ಟಿಸಿ ಗಲಭೆಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ಮುಂದೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ತೀಸ್ತಾ ಮತ್ತು ಶ್ರೀಕುಮಾರ್ ಅವರು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸುವ ಮೂಲಕ ಅಮಾಯಕರ ವಿರುದ್ಧ ದುರುದ್ದೇಶಪೂರಿತ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಎಫ್‌ಐಆರ್ ಅರೋಪಿಸಿದೆ.
ಗುಜರಾತ್ ಹೈಕೋರ್ಟ್ ಆದೇಶಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, “ತೀಸ್ತಾ ಅವರ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿ ತಕ್ಷಣವೇ ಶರಣಾಗುವಂತೆ ಆದೇಶಿಸಿ ಶನಿವಾರ ತೀರ್ಪು ನೀಡಿದೆ. ಇದು ತಕ್ಷಣದಲ್ಲಿ ಸುಪ್ರೀಮ್ ಕೋರ್ಟಿಗೆ ಹೋಗಲು ಹಾಗೂ ಆದೇಶಕ್ಕೆ ತಡೆ ತರಲು ಅವಕಾಶವಿಲ್ಲದಂತೆ ಮಾಡಿದೆ”
“ಇದಕ್ಕಾಗಿಯೆ ವಾರದ ನಡುವೆ ನಡೆದ ವಿಚಾರಣೆಯ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿ ನೀಡಲಾಗಿದೆ. ಇದೊಂದು ಉದ್ದೇಶಪೂರ್ವಕ ಸೇಡಿನ ಕ್ರಮದಂತೆ ಕಾಣುತ್ತಿದೆ” ಎಂದು ಅಸಮಾಧಾನ ವ್ಯಕ್ತವಾಗಿದೆ.