ಗುಜರಾತ್​ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ

ಗಾಂಧಿನಗರ : ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ನಿನ್ನೆಯಷ್ಟೇ ಮಹತ್ವದ ಬೆಳವಣಿಗೆಯೊಂದರಲ್ಲಿ ಈ ಹಿಂದಿನ ಮುಖ್ಯಮಂತ್ರಿ ವಿಜಯ್ ರುಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಶಾಸಕಾಂಗ ಸಭೆ ಕರೆದ ಬಿಜೆಪಿ ನಾಯಕರು ಭೂಪೇಂದ್ರ ಪಟೇಲ್ ಅವರನ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.

ಪಟೇಲ್ ಘಾಟ್ ಲೋಡಿಯಾ ಕ್ಷೇತ್ರದ ಶಾಸಕರಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಕಾಂತ್​ ಪಟೇಲ್​ ವಿರುದ್ಧ ಬರೋಬ್ಬರಿ 1,17,000 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಇಂಜನಿಯರಿಂಗ್​ ಓದಿದ್ದ ಭೂಪೇಂದ್ರ ಪಟೇಲ್​ ಅವರು ಈ ಹಿಂದೆ ಅಹ್ಮದಾಬಾದ್​ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (AUDA)ರಾಗಿ, ಅಮದ್​ವಾಡ ಮುನ್ಸಿಪಲ್ ಕಾರ್ಪೋರೇಶನ್​ ಸ್ಥಾಯಿ ಸಮಿತಿ (AMC) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪಟೇಲ್ ಸರ್ಕಾರ ರಚನೆ ಸಂಬಂಧ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪಕ್ಷದ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಸಿಎಂ ಬದ​ಲಾ​ದ 3ನೇ ರಾಜ್ಯ : ಈ ಮೊದಲು ಉತ್ತರಾಖಂಡ ಮತ್ತು ಕರ್ನಾಟಕದಲ್ಲೂ ಸಿಎಂ ಬದಲಾವಣೆ ಆಗಿತ್ತು. ಉತ್ತ​ರಾ​ಖಂಡ​ದಲ್ಲಿ ತೀರ್ಥ​ಸಿಂಗ್‌ ರಾವತ್‌ ಹಾಗೂ ಕರ್ನಾ​ಟ​ಕ​ದಲ್ಲಿ ಬಿ.ಎಸ್‌. ಯಡಿ​ಯೂ​ರಪ್ಪ ಅವ​ರನ್ನು ಬದ​ಲಿಸಿ ಯುವ ಪೀಳಿ​ಗೆಯ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ಬಸ​ವ​ರಾಜ ಬೊಮ್ಮಾಯಿ ಅವ​ರಿಗೆ ಮಣೆ ಹಾಕ​ಲಾ​ಗಿತ್ತು.

2020ರ ಡಿಸೆಂಬರ್ ತಿಂಗಳಿನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ಇದರ ಮೊದಲ ಹೆಜ್ಜೆ ಎನ್ನುವಂತೆ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ನೀಡಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

Donate Janashakthi Media

Leave a Reply

Your email address will not be published. Required fields are marked *