ಗಾಂಧಿನಗರ: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಶಾಸಕನ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದ ಪತ್ರಕರ್ತೆಯೊಬ್ಬರ ವಿರುದ್ಧ ಗುಜರಾತ್ ಪೊಲೀಸರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ರಾಜ್ಯದ ಮಾಹುವಾ ಕ್ಷೇತ್ರದಿಂದ ನಾಲ್ಕು ಅವಧಿಯ ಶಾಸಕರಾಗಿರುವ ಬಿಜೆಪಿ ಶಾಸಕ ಮೋಹನ್ ದೋಧಿಯಾ ಅವರು ತನ್ನ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಮಾಡಲಾಗಿದೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಮಾಹುವಾ ತಾಲೂಕಿನ ಕರ್ಚಲಿಯಾ ಗ್ರಾಮದ ಸರಪಂಚ್ ಕೆಯೂರ್ ಪಟೇಲ್ ಅವರು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ದಿನನಿತ್ಯದ ಆವೃತ್ತಿಯನ್ನು ಅಪ್‌ಲೋಡ್ ಮಾಡುವ ಸ್ಥಳೀಯ ಪತ್ರಿಕೆ ಮತ್ತು ಸುದ್ದಿ ವಾಹಿನಿ ಪ್ರಾರ್ಥನಾ ಸಂದೇಶದ ಪತ್ರಕರ್ತೆ ಜಶೋದಾಬೆನ್ ದೇಸಾಯಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ : ‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ’ ಸುಪ್ರೀಂ ಕೋರ್ಟ್ ಆಕ್ರೋಶ
ಮಹುವಾ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಎಂ. ಪಟೇಲ್ ಮಾತನಾಡಿ, ಕೆಯೂರ್ ಪಟೇಲ್ ಹೇಳಿಕೆಯ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ. ಪತ್ರಕರ್ತೆ ಜಶೋದಾಬೆನ್ ದೇಸಾಯಿ ಅವರು ಬಿಜೆಪಿ ಶಾಸಕರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿರುವ ವಿಷಯದ ಸ್ಕ್ರೀನ್‌ಶಾಟ್‌ಗಳನ್ನು ನಾವು ಸಂಗ್ರಹಿಸಿದ್ದೇವೆ. ನಾವು ಅವರನ್ನು ಹುಡುಕುತ್ತಿದ್ದು, ಪತ್ರಿಕೆಯ ಸಂಪಾದಕರಿಗೂ ಕರೆ ಮಾಡಿದ್ದೇವೆ ಎಂದು ಹೇಳಿದ್ದಾರೆ..
ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ದೋಧಿಯಾ ಅವರು, “ನನಗೆ ಜಶೋದಾ ದೇಸಾಯಿ ಪರಿಚಯವಿಲ್ಲ. ಅವರ ಭೇಟಿಯಾಲಿ ಅಥವಾ ಅವರೊಂದಿಗೆ ಮಾತಾಗಲಿ ಆಗಿಲ್ಲ. ಅವರು ನನ್ನನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ ಎಂದು ನನಗೆ ತಿಳಿದಿಲ್ಲ. ವಾಸ್ತವದಲ್ಲಿ ನಾನು 9ನೇ ತರಗತಿಯ ವರೆಗೆ ಓದಿದ್ದೇನೆ. ಆದರೆ ಅವರು ನಾನು 7ನೇ ತರಗತಿಯ ವರೆಗೆ ಓದಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಪಾದಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: 1000 ಕೋಟಿ ರೂ, ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ!
“ಅವರು ಉದ್ದೇಶಪೂರ್ವಕವಾಗಿ ನನ್ನ ಪ್ರತಿಷ್ಠೆಗೆ ಹಾನಿ ಮಾಡುತ್ತಿದ್ದಾರೆ. ಅದೊಂದಿಗೆ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಅವಳ ಹಿಂದೆ ಇನ್ನೂ ಕೆಲವರು ಇದ್ದಾರೆ ಎಂದು ನಾನು ಅನುಮಾನಿಸುತ್ತೇನೆ” ಎಂದು ಶಾಸಕ ಹೇಳಿದ್ದಾರೆ.
ಪತ್ರಕರ್ತೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ಖೋಟಾ), 500 (ಮಾನನಷ್ಟ), 501 (ಮಾನಹಾನಿಕರವೆಂದು ತಿಳಿದಿರುವ ವಿಷಯವನ್ನು ಹಾಕುವುದು ಅಥವಾ ಸೃಷ್ಟಿ ಮಾಡುವುದು) ಮತ್ತು 502 (ಮಾನಹಾನಿಕರ ವಿಷಯವನ್ನು ಹೊಂದಿರುವ ಮುದ್ರಿತ ಅಥವಾ ರಚಿಸಿರುವ ವಸ್ತುವಿನ ಮಾರಾಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಡಿಯೊ ನೋಡಿ: ದಲಿತರು ನೆಮ್ಮದಿಯಿಂದ ಬದುಕಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು – ಕೆ.ರಾಧಾಕೃಷ್ಣ