ಅಹಮದಾಬಾದ್: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಪಕ್ಷದ ಶಾಸಕ ಆಘಾತ ನೀಡಿದ್ದು, ಜನರ ಸೇವೆಗೆ ಎಎಪಿ ಸರಿಯಾದ ವೇದಿಕೆಯಲ್ಲ ಎಂದು ಆರೋಪಿಸಿ ಅದರ ಶಾಸಕ ಭೂಪೇಂದ್ರ ಭಯಾನಿ ಅವರು ತಮ್ಮ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ಶೀಘ್ರದಲ್ಲೇ ಆಡಳಿತಾರೂಢ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದ್ದಾರೆ.
“ನಾನು ಬಿಜೆಪಿ ಕಾರ್ಯಕರ್ತನಾಗಿದ್ದೆ ಮತ್ತು ಜೀವನ ಪರ್ಯಂತ ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ; ನಾನು 22 ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದಿಂದ ಎಂದಿಗೂ ಅಮಾನತುಗೊಂಡಿಲ್ಲ. ನನ್ನ ಕ್ಷೇತ್ರದ ಜನತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದಿದ್ದೇನೆ. ಅದಕ್ಕಾಗಿ ಎಎಪಿ ತ್ಯಜಿಸಿದ್ದೇನೆ” ಶಾಸಕ ಭೂಪೇಂದ್ರ ಭಯಾನಿ ಹೇಳಿದ್ದಾರೆ.
ಇದನ್ನೂ ಓದಿ: 3 ಕ್ರಿಮಿನಲ್ ಕಾನೂನು ಮಸೂದೆ ವಾಪಾಸು ಪಡೆದ ಕೇಂದ್ರ ಸರ್ಕಾರ!
ಜುನಾಗಢ ಜಿಲ್ಲೆಯ ವಿಸಾವದರ್ ಕ್ಷೇತ್ರವನ್ನು ಪ್ರತಿನಿಧಿಸುವ ಭಯಾನಿ ಅವರು ಬೆಳಿಗ್ಗೆ ಗಾಂಧಿನಗರದಲ್ಲಿ ಗುಜರಾತ್ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಇಷ್ಟೆ ಅಲ್ಲದೆ, ನಮ್ಮ ಹೆಮ್ಮೆ ಮತ್ತು ವಿಶ್ವದಾದ್ಯಂತ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಲು ನಾನು ಇಷ್ಟಪಡುವುದಿಲ್ಲ. ನಾನು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತೇನೆ ಏಕೆಂದರೆ ನಾನು ಮೂಲತಃ ಆ ಪಕ್ಷದವನಾಗಿದ್ದೇನೆ. ಶಾಸಕನಾಗುವ ಮೊದಲು ಸುಮಾರು 22 ವರ್ಷಗಳ ಕಾಲ ಅದಕ್ಕಾಗಿ ಕೆಲಸ ಮಾಡಿದ್ದೇನೆ. ಕೇಂದ್ರ ನಾಯಕತ್ವ ಬಯಸಿದರೆ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಎಎಪಿ ನಾಯಕರು ಹೇಳಿಕೊಂಡಂತೆ, ರಾಜೀನಾಮೆ ನೀಡುವಂತೆ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ರಾಜ್ಯ ಚುನಾವಣೆಗೆ ಮುಂಚಿತವಾಗಿ ಎಎಪಿಗೆ ಸೇರುವ ಮೊದಲು ಅವರು ಜುನಾಗಢ್‌ನ ಭೇಸನ್ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದರು. ಭಯಾನಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ ಆದರೆ ನಿರ್ಧಾರದ ಹಿಂದೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಭಯಾನಿ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂದು ಗುಜರಾತ್ ವಿಧಾನಸಭೆ ಕಾರ್ಯದರ್ಶಿ ಡಿಎಂ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪ್ರಯಾಣಕ್ಕೆ 30 ವಿಮಾನ ಟಿಕೆಟ್ ಉಚಿತ ಕೊಡಿ ; ಬಸನಗೌಡ ಪಾಟೀಲ್
ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಚುನಾಯಿತರಾದ ಆಮ್ ಆದ್ಮಿ ಪಕ್ಷದ (ಎಎಪಿ) ಐದು ಶಾಸಕರಲ್ಲಿ ಭಯಾನಿ ಒಬ್ಬರಾಗಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 182 ಸದಸ್ಯ ಬಲದ ವಿಧಾನಸಭೆಯಲ್ಲಿ 156 ಸ್ಥಾನಗಳನ್ನು ಪಡೆಯುವ ಮೂಲಕ ಭಾರಿ ಬಹುಮತದೊಂದಿಗೆ ಗೆದ್ದಿತ್ತು. ಅದೇ ವೇಳೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಎಎಪಿ ಗೆದ್ದಿತ್ತು.
ಭಯಾನಿ ಅವರ ರಾಜೀನಾಮೆಯ ನಂತರ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಇಸುದನ್ ಗಧ್ವಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, “ಬಿಜೆಪಿ ಎಎಪಿ ಶಾಸಕರನ್ನು ಒಡೆಯಲು ಪ್ರಯತ್ನಿಸುತ್ತಿದೆ, ಬಿಜೆಪಿಯು ಎಎಪಿಗೆ ಭಯಬಿದ್ದಿದೆ. ಪ್ರತಿ ವಾರ ಒಬ್ಬ ಶಾಸಕರಿಗೆ ಬಿಜೆಪಿಯಿಂದ ಆಫರ್ ನೀಡಲಾಗುತ್ತಿದೆ ಅಥವಾ ಬೆದರಿಕೆ ಹಾಕಲಾಗುತ್ತದೆ. ಆಮ್ ಆದ್ಮಿ ಪಕ್ಷದ ನಾಲ್ವರು ಶಾಸಕರು ಬಲವಾಗಿ ಒಗ್ಗೂಡಿದ್ದಾರೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಬಿಜೆಪಿ ನಾಯಕರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ; ಅವರು ಎಎಪಿಯನ್ನು ಅಸ್ಥಿರಗೊಳಿಸಲು ಮಾತ್ರ ಬಯಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಪ್ರವೇಶಿಸಿ ಅಶ್ರುವಾಯು ಎಸೆದ ಅಪರಿಚಿತರು; ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಪಡೆದಿದ್ದ ಆರೋಪಿಗಳು
ಲೋಕಸಭೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ವಿಶಾವಾದದ ಜನತೆ ಬಯಸುತ್ತಿದ್ದಾರೆ ಎಂದು ಇಸುದನ್ ಗಧ್ವಿ ರಾಜ್ಯ ಕಚೇರಿಯಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ. “ಬಿಜೆಪಿ 156 ಶಾಸಕರನ್ನು ಹೊಂದಿದ್ದರೂ, ನಕಲಿ ಸಿರಪ್, ಸುಳ್ಳು ಸುಂಕಗಳು ಮತ್ತು ನಕಲಿ ಸರ್ಕಾರಿ ಕಚೇರಿಗಳು ಗುಜರಾತ್‌ನಾದ್ಯಂತ ನಡೆಯುತ್ತಿವೆ. ನಾನು ವಿಶಾವದರ್ ಜನರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಜೊತೆಗೆ ಮುಂದೆ ಹೀಗಾಗುವುದಿಲ್ಲ ಎಂದು ಅವರಿಗೆ ಭರವಸೆ ನೀಡುತ್ತೇನೆ” ಅವರು ಹೇಳಿದ್ದಾರೆ.
ಗುಜರಾತಿನ ಸೌರಾಷ್ಟ್ರ ಪ್ರಾಂತ್ಯದ ವಿಸಾವದರ್ ಸ್ಥಾನವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರ ಸಾಂಪ್ರದಾಯಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಕೇಶುಭಾಯಿ ನಂತರ, ಹರ್ಷದ್ ರಿಬಾಡಿಯಾ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಕಳೆದ ಚುನಾವಣೆಗೆ ಮುನ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು, ಆದರೆ ಆಪ್ ಅಭ್ಯರ್ಥಿ ಭೂಪತ್ ಭಯಾನಿ ಅವರನ್ನು ಸುಮಾರು 7,000 ಮತಗಳಿಂದ ಸೋಲಿಸಿದ್ದರು. ಭಯಾನಿ ಬಿಜೆಪಿಯ ಮಾಜಿ ಸದಸ್ಯರಾಗಿದ್ದು, ಎರಡು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ಅವರು ಹಿಂದೆ ಸರಪಂಚರಾಗಿ ಕೆಲಸ ಮಾಡುತ್ತಿದ್ದರು.
ವಿಡಿಯೊ ನೋಡಿ: ಸರ್ಕಾರಕ್ಕೆ ನಾವು ಕೊಡುವ ತೆರಿಗೆ ಹಣ ನಮ್ಮ ಅಭಿವೃದ್ಧಿಗೆ ಬಳಕೆಯಾಗಬೇಕು – ಮೀನಾಕ್ಷಿ ಸುಂದರಂ Janashakthi Media