ಅವೈಜ್ಞಾನಿಕ ಆದೇಶ ಹಿಂಪಡೆದು ಎಲ್ಲರಿಗೂ ಕೆಲಸ ಒದಗಿಸಲು ಅತಿಥಿ ಉಪನ್ಯಾಸಕರ ಒತ್ತಾಯ

ಬೆಂಗಳೂರು : ರಾಜ್ಯ ಸರಕಾರ ಜಾರಿ ಮಾಡಿರುವ ಅವೈಜ್ಞಾನಿಕ ಆದೇಶದಿಂದಾಗಿ 10 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸಕಳೆದುಕೊಳ್ಳುವಂತಾಗಿದೆ ಹಾಗಾಗಿ ಆ ಆದೇಶವನ್ನು ಹಿಂಪಡೆದು ಎಲ್ಲರಿಗೂ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಅಸೋಸಿಯೇಷನ್  ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ನಗರದ ಫ್ರೀಡಂ ಪಾರ್ಕ್‌ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರತಿಭಟನೆ ಉದ್ದೇಶಿಸಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮಿ ಮಾತನಾಡಿ, ಹಲವು ದಿನಗಳಿಂದ ರಾಜ್ಯಾದ್ಯಂತ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸಿದ್ದ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರಕಾರ ಇನ್ನೂ ಈಡೇರಿಸಿಲ್ಲ.  ಹಾಗಾಗಿ ಇಂದಿನಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮುಂದುವರೆಸಲು ಅತಿಥಿ ಉಪನ್ಯಾಸಕರು ಮುಂದಾಗಿದ್ದಾರೆ.  ಸೇವಾ ಭದ್ರತೆ, ಕೆಲಸ ಖಾಯಂಗೊಳಿಸುವಂತೆ ಪ್ರತಿಭಟನೆ ನಡೆಸಲಾಗಿತ್ತು. ಸಂಕ್ರಾಂತಿಯಂದು ಸಹಿ ನೀಡುವುದಾಗಿ ಹೇಳಿ ಪ್ರತಿಭಟನೆಯನ್ನು ನಿಲ್ಲಿಸಿದ ಸರಕಾರ ಸಿಹಿ ನೀಡುವ ಬದಲಿಗೆ ಅತಿಥಿ ಉಪನ್ಯಾಸಕರ ಪಾಲಿಗೆ ಮರಣ ಶಾಸನವಾಗುವ ಆದೇಶವನ್ನು ಹೊರಡಿಸಿತು. ಸರಕಾರದ ಈ ಎಡವಟ್ಟಿನಿಂದಾಗಿ 9881 ಜನ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವಂತಾಗಿದೆ.  ಇತ್ತ 15 -20 ವರ್ಷಗಳ ಕಾಲ ಸರಕಾರಿ ಪದವಿ ಕಾಲೇಜುಗಳ ಅಭಿವೃದ್ಧಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ದುಡಿದ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡದೆ ವಂಚನೆ ಮಾಡುತ್ತಿದೆ. ಇತರ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರು ಶಾಸನಬದ್ಧ ಸೌಲಭ್ಯಗಳಿದ್ದು ಕರ್ನಾಟಕದಲ್ಲಿ ಮಾತ್ರ ಇವರ ಪರಿಸ್ಥಿತಿ ಶೋಚನೀಯವಾಗಿದೆ ಎಂದರು.

ಇದನ್ನೂ ಓದಿ : ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರೆಸಿ ಸೇವಾ ಭದ್ರತೆ ನೀಡಿ – ಎಸ್. ವರಲಕ್ಷ್ಮಿ ಆಗ್ರಹ

ಅತಿಥಿ ಉಪನ್ಯಾಸಕರ ಸಂಘದ ಮುಖಂಡ ಜಿ.ಕೆ ನಾಗಣ್ಣ ಮಾತನಾಡಿ, ರಾಜ್ಯ ಸರ್ಕಾರದಿಂದ ರಚನೆಗೊಂಡ ಸಮಿತಿ ಅತಿಥಿ ಉಪನ್ಯಾಸಕರನ್ನು ಐದು ಭಾಗಗಳನ್ನಾಗಿ ವಿಂಗಡಿಸಿ ಗೌರವ ಧನವನ್ನು ಹೆಚ್ಚಿಸಿದೆ. ಇದು ಅತಿಥಿ ಉಪನ್ಯಾಸಕರ ನಡುವೆ ಇರುವ ಒಗ್ಗಟ್ಟನ್ನು ಒಡೆಯುವ ಯತ್ನವಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದರು. ಸರ್ಕಾರ ಹೆಚ್ಚಿಸಿರುವ ಗೌರವಧನ ಕಣ್ಣೊರೆಸುವ ತಂತ್ರ. ಬೋಧನಾ ಅವಧಿಯನ್ನು ಹೆಚ್ಚಿಸಿ ಇರುವ ಕೆಲಸವನ್ನು ಕಸಿದುಕೊಳ್ಳುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಇಂತಹ ಅವೈಜ್ಞಾನಿಕ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮತ್ತೋರ್ವ ಮುಖಂಡ ಫಯಾಜ್‌ ಮಾತನಾಡಿ, ಅತಿಥಿ ಉಪನ್ಯಾಸಕರ ಬೋಧನ ಅವಧಿಯನ್ನು ಹೆಚ್ಚಳ ಮಾಡಿರುವುದರಿಂದ ಅರ್ಧಕ್ಕೂ ಹೆಚ್ಚು ಮಂದಿ ಉಪನ್ಯಾಸಕರು ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಿಲ್ಲಬೇಕು. ಸರ್ಕಾರ ಒಂದು ಅವಧಿಗೆ ಕೇವಲ 100 ರೂಪಾಯಿ ಮಾತ್ರ ಹೆಚ್ಚು ಮಾಡಿದೆ. ಸರ್ಕಾರದ ಈ ಅನ್ಯಾಯದ ಕ್ರಮವನ್ನು ಖಂಡಿಸುತ್ತೇವೆ.
ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು  ನಡೆಸುವುದಾಗಿ ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ, ರಾಜ್ಯ ಉಪಾಧ್ಯಕ್ಷ ಡಾ.ಕೆ ಪ್ರಕಾಶ್‌,  ಸಮುದಾಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವೇಂದ್ರಗೌಡ, ಅತಿಥಿ ಉಪನ್ಯಾಸಕರ ಸಂಘಟನೆ ಮಧು, ಶೃತಿ, ಶಿಲ್ಪಾ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಇದ್ದರು.

ಪ್ರತಿಭಟನೆ ಸ್ಥಳಕ್ಕೆ ಪರಿಷತ್‌ ಸದಸ್ಯರ ಭೇಟಿ : ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯರಾದ ಬೋಜೆಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ ಆಗಮಿಸಿ ಅತಿಥಿ ಉಪನ್ಯಾಸಕರ ಮನವಿಯನ್ನು ಆಲಿಸಿದರು. ಅಧಿವೇಶನದಲ್ಲಿ ಇವರಿಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವುದಾಗಿ ಹಾಗೂ ಸರಕಾರ ಹೊರಡಿಸಿರುವ ಆದೇಶವನ್ನು ಮಾರ್ಪಡಿಸುವ ಕುರಿತು ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತಿಗಳ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *