ಸಿಹಿ ನೀಡುವುದಾಗಿ ಹೇಳಿ ʼವಿಷ ಕೊಟ್ಟ ಸರಕಾರʼ : ಅತಿಥಿ ಉಪನ್ಯಾಸಕರ ಆಕ್ರೋಶ

ಬೆಂಗಳೂರು : ಅತಿಥಿ ಉಪನ್ಯಾಕರಿಗೆ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ಕೊಟ್ಟಿದ್ದೇವೆ ಎಂದು ಹೇಳಿರುವ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆ ಶುದ್ಧ ಸುಳ್ಳು, ಇದು ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದು ಅತಿಥಿ ಉಪನ್ಯಾಸಕರು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಮೂಲ ಬೇಡಿಕೆಯನ್ನೇ ಬಿಟ್ಟು ಸಂಬಳವನ್ನ ಮಾತ್ರ ಹೆಚ್ಚಿಗೆ ಮಾಡಿರೋದು ಬೇಸರದ ಸಂಗತಿ. ಆದರೆ ಅತಿಥಿ ಉಪನ್ಯಾಸಕರಿಗೆ ಬೇಕಿರೋದು ಸಂಬಳ ಅಲ್ಲ. ಸೇವಾ ಭದ್ರತೆ ಬೇಕು. ಖಾಯಂ ಹಾಗೂ ಹೆಚ್ಚುವರಿ ಉಪನ್ಯಾಸಕರು ಬಂದಾಗ ನಮ್ಮ ವೃತ್ತಿಯನ್ನೇ ತೊರೆಯಬೇಕಿದೆ, ಈ ಕ್ರಮ ಸರಿ ಇಲ್ಲ. ಈ ಹಿಂದಿನಿಂದಲೂ ಸೇವಾ ಅಭದ್ರತೆ ಕಾಡ್ತಿತ್ತು. ಸೇವಾ ಭದ್ರತೆಗಾಗಿ ನಾವು ಹೋರಾಟ ಕೈಗೊಂಡಿದ್ದೇವೆ. ನಮ್ಮ ಮೂಲ ಬೇಡಿಕೆಯನ್ನೇ ಈಡೇರಿಸದೇ ಸರ್ಕಾರ ಕೈ ಚೆಲ್ಲಿದ್ದಾರೆ. ಇದು ನಿರಾಶಾದಾಯಕವಾದ ಕ್ರಮ ಎಂದು ಕೊಪ್ಪಳದ ಅತಿಥಿ ಉಪನ್ಯಾಸಕ ಬಿ.ಸಂಕನಗೌಡ ಆಕ್ರೋಶ ಹೊರ ಹಾಕಿದ್ದಾರೆ.

 

 

ರಾಜ್ಯದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 12,868 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ, 5,163 ಮಂದಿ 36 ವರ್ಷ ವಯೋಮಾನ ದಾಟಿದವರು. ಅದರಲ್ಲಿ, 2,648 ಮಂದಿ 36ರಿಂದ 40ರ ಮಧ್ಯದ ವಯಸ್ಸಿನವರು. 1,303 ಮಂದಿ 41ರಿಂದ 45ರ ಮಧ್ಯದವರು. 781 ಮಂದಿ 46ರಿಂದ 50ರ ನಡುವಿನವರು. ಇನ್ನು 51 ವರ್ಷ ವಯಸ್ಸು ದಾಟಿದವರು 431 ಮಂದಿ ಇದ್ದಾರೆ ಇವರಿಗೆಲ್ಲ ಸರಕರಾ ಸಿಹಿ ಕೊಡುತ್ತೇನೆ ಎಂದು ಹೇಳಿ ವಿಷ ನೀಡಿದೆ ಎಂದು ಅತಿಥಿ ಉಪನ್ಯಾಸಕ ಜಾನಿ ನಾಗರಾಜ ಆಕ್ರೋಶ ಹೊರಹಾಕಿದ್ದಾರೆ.

‘ಯುಜಿಸಿ ನಿಯಮಾವಳಿ ಪ್ರಕಾರ, ಅರ್ಹ ವಿದ್ಯಾರ್ಹತೆ ಹೊಂದಿದವರಿಗೆ ಪ್ರತಿ ತಿಂಗಳು ₹ 50 ಸಾವಿರ ವೇತನ ನೀಡಬೇಕು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಸಿದ್ಧವಿಲ್ಲ. ಕಾಯಂ ಉಪನ್ಯಾಸಕರಿಗೆ ತಿಂಗಳಿಗೆ ₹ 1.50 ಲಕ್ಷ ವೇತನವಿದೆ. ಅತಿಥಿ ಶಿಕ್ಷಕರಿಗೆ ಕೇವಲ ₹ 11 ಸಾವಿರದಿಂದ ₹ 13 ಸಾವಿರ ವೇತನ, ಅದೂ ವರ್ಷದಲ್ಲಿ ಎಂಟು ತಿಂಗಳು ಮಾತ್ರ ನೀಡಿ, ಬೇಕಾದಾಗ ಬಳಸಿ, ಬೇಡವಾದಾಗ ಕೈ ಬಿಟ್ಟರೆ ಸರ್ಕಾರಕ್ಕೆ ಲಾಭವಿದೆ. 8 ಗಂಟೆ ಅವಧಿಯಿಂದ 16 ಗಂಟೆ ಅವಧಿ ಹೆಚ್ಚಿಸಿರುವ ಸರಕಾರ ಈಗ 26 ರಿಂದ 32 ಸಾವಿರ ವೇತನ ನೀಡಲು ನಿರ್ದೇರಿಸಿದ್ದೇವೆ ಎಂದು ಹೇಳುತ್ತಿದೆ. ನೋಡಿದವರಿಗೆ ಇದು ವೇತನ ಡಬ್ಬಲ್‌ ಆಗಿದೆ ಎಂದೆನಿಸುತ್ತದೆ. ಆದರೆ ಪಾಠದ ಅವಧಿಯನ್ನು ಇಲ್ಲಿ ಹೆಚ್ಚಳ ಮಾಡಲಾಗಿದೆ. ಪಾಠದ ಅವಧಿ ಹೆಚ್ಚಿಸಿರುವ ಕಾರಣ ಅರ್ದಕ್ಕರ್ದ ಅಂದರೆ ಸುಮಾರು 7000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಮನೆಗೆ ಹೋಗಲಿದ್ದಾರೆ. ಹಾಗಾಗಿ ಸರಕಾರದ ಈ ನಿರ್ಧಾರ ಅತಿಥಿ ಉಪನ್ಯಾಸಕರಿಗೆ ಮರಣ ಶಾಸನವಾಗುವ ಸಾದ್ಯತೆ ಹೆಚ್ಚಿದೆ.

ನಾವು ಕೇಳಿದ್ದೇನು? ಸರಕಾರ ಕೊಟ್ಟಿದ್ದೇನು ಎಂಬ ಪ್ರಶ್ನೆ ಅತಿಥಿ ಉಪನ್ಯಾಸಕರದ್ದಾಗಿದೆ ಹಾಗಾಗಿ, ಸರಕಾರ ಇನ್ನಾದರೂ ಕುತಂತ್ರ ಬುದ್ಧಿಯನ್ನು ಕೈ ಬಿಟ್ಟು ತ್ರಿಪುರಾದಲ್ಲಿ ಎಡರಂಗ ಸರಕಾರ ಅತಿಥಿ ಉಪನ್ಯಾಸಕರನ್ನು ನಿಯಮನುಸಾರ ನೇಮಕ ಮಾಡಿದಂತೆ ರಾಜ್ಯದಲ್ಲೂ ನೇಮಕ ಮಾಡಬೇಕಿದೆ. ಸೇವಾ ಭದ್ರತೆಗಾಗಿ ನಿಯಮಾವಳಿ ರೂಪಿಸಿ ಅತಂತ್ರದಲ್ಲಿರುವ ಅತಿಥಿ ಉಪನ್ಯಾಸಕರ ಬದಕನ್ನುಬಹಸನಾಗಿಸಲು ಸರಕಾರ ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *