ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಬರ್ಭರ ಹತ್ಯೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪೆದ್ದನಹಳ್ಳಿ ದಲಿತ ಕಾಲೋನಿ ನಿವಾಸಿ ಗಿರೀಶ್ ಹಾಗೂ ಕಲ್ಲೂರು ಕ್ರಾಸ್ನ ಮತ್ತೊಬ್ಬ ಯುವಕನನ್ನು ಏಪ್ರಿಲ್ 21ರ ತಡರಾತ್ರಿ ಹತ್ಯೆ ಮಾಡಲಾಗಿದೆ. ಕೂಡಲೇ ಅಪರಾಧಿಗಳನ್ನು ಬಂಧಿಸಿ ಸೂಕ್ತ ಕಾನೂನಿನ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಯುವಕರು ತಪ್ಪು ಮಾಡಿದ್ದಾರೆಂಬ ಕಾರಣ ನೀಡಿ, ಕೊಲೆಗಳ ಸಮರ್ಥನೆಗೆ ಮುಂದಾಗುವುದನ್ನು ಒಪ್ಪಲಾಗದು. ಅಲ್ಲದೆ, ಹತ್ಯೆ ಪ್ರಕರಣದಲ್ಲಿ ಮೇಲ್ಜಾತಿಯ ಹಲವು ಮಂದಿ ಭಾಗಿಯಾಗಿರುವ ಆರೋಪ ಕೇಳಿಬರುತ್ತಿದ್ದು, ಈ ಹತ್ಯೆ ಪ್ರಕರಣವನ್ನು ದೊಂಬಿ ಪ್ರಕರಣವನ್ನಾಗಿ ಮಾಡಿ ಇಡೀ ಪ್ರಕರಣವನ್ನು ಮುಚ್ಚಿಹಾಕುವಂತೆ ಪೊಲೀಸರ ಮೇಲೆ ಒತ್ತಡಗಳು ಬರುತ್ತಿವೆ.
ಭೀಕರ ಕೊಲೆಯ ಪರಿಸ್ಥಿತಿಯನ್ನು ಗಮನಿಸಿದರೆ ಅದರ ಹಿಂದೆ ವ್ಯವಸ್ಥಿತ ಸಂಚು ಮತ್ತು ತಂಡ ಇರುವುದು ಕಂಡುಬರುತ್ತದೆ. ಸಂಚನ್ನು ಬೇಧಿಸಿ ರಾಜ್ಯದ ಜನತೆಗೆ ನಿಜವೇನೆಂದು ತಿಳಿಸಲು ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು ಮತ್ತು ಕೊಲೆಯಾದ ಕುಟುಂಬಗಳಿಗೆ ತಕ್ಷಣವೇ ಅಗತ್ಯ ಪರಿಹಾರ ಘೋಷಿಸುವಂತೆ ಸಿಪಿಐ(ಎಂ) ಪಕ್ಷವು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.