ಜಿಎಸ್‌ಟಿ ಹೇರುವ ಮೂಲಕ ಲೂಟಿ ಹೊಡೆಯುತ್ತಿರುವ ಬಿಜೆಪಿ: ಶೈಲಜಾ ಹಿರೇಮಠ

ಗಂಗಾವತಿ: ದೇಶದ ಎಲ್ಲಾ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರ, ದಿನ ಬೆಳಗಾದರೆ ಒಂದಿಲ್ಲ ಒಂದು ವಲಯಗಳ ಮೇಲೆ ತೆರಿಗೆ ಹೇರಿ, ಜಿಎಸ್‌ಟಿ ಎಂಬ ಅಸ್ತ್ರದಿಂದ ಜನಸಾಮಾನ್ಯರ ಬದುಕನ್ನು ಇರಿದು ಇರಿದು ಕೊಲ್ಲುತ್ತಿದೆ. ಜಿಎಸ್‌ಟಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ಮುಂದಾಗಿದೆ ಎಂದು ಕೆಪಿಸಿಸಿ, ಮಾಧ್ಯಮ ವಿಶ್ಲೇಷಕರಾದ ಶೈಲಜಾ ಹಿರೇಮಠ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾದ ಮೇಲೆ, ದೇಶದ ಅತಿದೊಡ್ಡ ಶ್ರೀಮಂತ ಅಂಬಾನಿಗೆ ಖುಣಿಯಾಗಿರಲು, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಗಗನಕ್ಕೆ ಏರಿಸಿದರು. ಇದರೊಂದಿಗೆ, ಸಾರಿಗೆ ವೆಚ್ಚ ದುಪ್ಪಟ್ಟು ಆಗಿ ಈಗಾಗಲೇ ದುಬಾರಿ ಬದುಕಿನ ಬಿಸಿ ಅನುಭವಿಸುತ್ತಿರುವ ಶ್ರೀಸಾಮಾನ್ಯ ಭಾರತೀಯ, ಈಗ ಅಗತ್ಯ ವಸ್ತುಗಳ ಮೇಲಿನ ತೆರಿಗೆಯಿಂದಾಗಿ ಸುಡುವ ಬೆಂಕಿಯಿಂದ ಬಾಣಲೆಯಲ್ಲಿ ಬಿದ್ದ ಹಾಗಿದೆ ಎಂದರು.

ಊಟ ಮಾಡಲು ಬೆಲೆಯೇರಿಕೆ ಸಮಸ್ಯೆ, ಅದನ್ನು ನೀಗಿಸಲು ದುಡಿಯೋಣ ಎಂದರೆ ನಿರುದ್ಯೋಗದ ‌ಸಮಸ್ಯೆ, ಸಾಲದ್ದಕ್ಕೆ ಸತ್ತರೂ ಚಿತಾಗಾರಕ್ಕೆ 18% ತೆರಿಗೆ ಕಟ್ಟಿ ಸಾಯಿರಿ ಎಂದು ಹೇಳುವ ಬಿಜೆಪಿ ಸರ್ಕಾರಕ್ಕೆ ಮಾನ- ಮರ್ಯಾದೆ ಇದೆಯೇ ? ಎಂದು ಶೈಲಜಾ ಹಿರೇಮಠ ಪ್ರಶ್ನೆ ಮಾಡಿದರು.

ಈಗಂತೂ ಅತಿ ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೇರುವುದರ ಮೂಲಕ ತನ್ನ ರಾಕ್ಷಸತನದ ವಿರಾಟ ಸ್ವರೂಪವನ್ನು ಅನಾವರಣಗೊಳಿಸಿದೆ. ಕೆಎಂಎಫ್‌ ಉತ್ಪನ್ನಗಳ ಪರಿಷ್ಕೃತ ಪಟ್ಟಿ ಗಮನಿಸಿದಾಗ, ಇದರಿಂದ ತತಕ್ಷಣ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಿದ ಅಲ್ಪ ಸಮಾಧಾನ ಸಿಗಬಹುದು. ಆದರೆ ಇದರಿಂದ ರೈತನ ಬದುಕು ಮತ್ತಷ್ಟು ಹದಗೆಡುತ್ತದೆ. ಸರ್ಕಾರ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಹಾಲು ಒಕ್ಕೂಟದ ವತಿಯಿಂದ ಬೆಲೆ ಕಡಿಮೆ ಮಾಡಿ, ಗ್ರಾಹಕರಿಗೆ ಸಮಾಧಾನ ಮಾಡಿರುವುದು ಈ ಪರಿಷ್ಕೃತ ಪಟ್ಟಿಯಿಂದ ಎಂತಹವರಿಗೂ ಅರ್ಥವಾಗುತ್ತಿದೆ ಎಂದು ಆರೋಪಿಸಿದರು.

ಹಾಲು ಒಕ್ಕೂಟ ಲಾಭದಲ್ಲಿ ಇದ್ದರೆ, ರೈತನಿಗೆ ಕೊಡುವ ಬೆಲೆ ಏರಿಕೆ ಮಾಡಬಹುದು, ಆದರೆ ಹಾಲು – ಒಕ್ಕೂಟ ನಷ್ಟದಲ್ಲಿ ಇದೆಯೆಂದು ಈಗ ರೈತನಿಗೆ ಕೊಡುವಷ್ಟೆ ಬೆಲೆ ಕೊಟ್ಟು, ಇತ್ತ ಅತಿಅಗತ್ಯ ವಸ್ತುಗಳ ದರಗಳನ್ನು ಏರಿಸಿ, ಶ್ರೀಸಾಮಾನ್ಯರ ಜೊತೆಗೆ ರೈತರು ಇನ್ನಷ್ಟು ಸಂಕಷ್ಟಗಳಿಗೆ ಸಿಲುಕುತ್ತಾರೆ. ಒಕ್ಕೂಟದ ವತಿಯಿಂದ ಈಗ ನೀಡುತ್ತಿರುವ ಬೆಲೆಗಿಂತ ಒಂದು ವೇಳೆ ಕಡಿಮೆ ಮಾಡಿದರೆ ಪರಿಸ್ಥಿತಿ ಗಂಭೀರತೆ ನಾವೆಲ್ಲರೂ ಅರ್ಥಮಾಡಿಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.

ಅಲ್ಲದೆ, ಅಕ್ಕಿ, ಬೆಲ್ಲ, ಮೊಸರು, ಮಜ್ಜಿಗೆ, ಜೇನುತುಪ್ಪ, ಧಾನ್ಯಗಳ ಮೇಲೂ ತೆರಿಗೆ ಹಾಕಿ ಪರೋಕ್ಷವಾಗಿ ರೈತರ ಬೆನ್ನಿಗೆ   ಬರೆ ಇಡುತ್ತಿದೆ ಈ ಬಿಜೆಪಿ ಸರ್ಕಾರ. ಈಗಾಗಲೇ ರೈತರ ಪಂಪಸೆಟ್ ಪೈಪುಗಳ ಮೇಲಿನ ತೆರಿಗೆ ಹೆಚ್ಚು ಮಾಡಿರುವುದು ಅಲ್ಲದೇ, ರೈತರಿಗೆ ಬೇಕಾದ ರಸಗೊಬ್ಬರಗಳ ಮೇಲೆ ಅನೇಕ ನಿಭಂದನೆಗಳನ್ನು ಹೇರಿ, ರಸಗೊಬ್ಬರಗಳು ಸಿಗದ ಹಾಗೆ ಮಾಡಿದ್ದಾರೆ. ರೈತ ತನಗೆ ಬೇಕಾದ ಗೊಬ್ಬರ ಪಡೆಯಲು ರಸಗೊಬ್ಬರ ಅಂಗಡಿ ಮುಂದೆ ಸರದಿ ಸಾಲಲ್ಲಿ ದಿನ ಕಳೆಯುವಂತೆ ಮಾಡಿರುವುದಲ್ಲದೇ ಈ ಹೊಸ ತೆರಿಗೆ ಹೇರಿಕೆಯಿಂದ ಮುಂದಿನ ದಿನಗಳಲ್ಲಿ ರೈತರು ಇನ್ನಷ್ಟು ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸಾಲದಕ್ಕೆ 25 ಕೆಜಿಗಿಂತ ಕಡಿಮೆ ತೂಕದ ಚೀಲಗಳಿಗೆ ಮಾತ್ರ ಈ ಹೊಸ ಜಿಎಸ್‌ಟಿ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಅರ್ಥ ಶಾಸ್ತ್ರದ ಅಲ್ಪಜ್ಞಾನವಾದರೂ ಇದೆಯೇ ಎನ್ನುವುದು ಅರ್ಥಶಾಸ್ತ್ರ ವಿಧ್ಯಾರ್ಥಿ ಅಲ್ಲದ ಎಂತಹವರಿಗೂ ತಿಳಿಯುತ್ತದೆ ಎಂದು ಆರೋಪಿಸಿದರು.

ಮೇಲಾಗಿ ಈಗಾಗಲೇ ಭಾರತ ಆರ್ಥಿಕ ತುರ್ತುಸ್ಥಿತಿಯಲ್ಲಿ ಇದ್ದೇವೆ ಎಂಬ ಅರಿವು ಇಲ್ಲದ ಬಿಜೆಪಿಯ ಕೆಲವು ನೇತಾರರು ಅಕ್ಕಿ, ಮೊಸರು ಇತ್ಯಾದಿಗಳ ಬಗ್ಗೆ ತೆರಿಗೆ ಹೇರಿಕೆ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಶ್ರೀಲಂಕಾ – ಪಾಕಿಸ್ತಾನ- ಮಾಲ್ಡೀವ್ಸ್ ಕಡೆ ಕೈ ತೋರಿಸಿ, ನಾವು ಈ ತೆರಿಗೆಯನ್ನು ಹಾಕದೇ ಹೋದರೆ ಆ ರಾಷ್ಟಗಳ ಪರಿಸ್ಥಿತಿ ನಮ್ಮ ದೇಶಕ್ಕೂ ಬರುತ್ತದೆ ಎಂಬ  ನೀತಿಪಾಠವನ್ನು ವಿರೋಧ ಪಕ್ಷಗಳಿಗೆ ಹೇಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಹಗಲೊಂದು, ರಾತ್ರಿ ಇನ್ನೊಂದು ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತಾರೆ.

ಅಂಬಾನಿ- ಅದಾನಿಯಂತವರು ದಿನದಿಂದ ದಿನಕ್ಕೆ ಆರ್ಥಿಕವಾಗಿ ವಿಶ್ವದಲ್ಲಿ ಅಗ್ರಗಣ್ಯ ಸ್ಥಾನವನ್ನು ಅಲಂಕೃತ ಮಾಡಿಕೊಳ್ಳಲು ಅವರ ನೆರವಿಗಾಗಿ, ಭಾರತದ ಜನಸಾಮಾನ್ಯರ ಬದುಕಿಂದ ಸಂಗ್ರಹ ಮಾಡಿದ ತೆರಿಗೆ ಹಣದಿಂದ ಸರ್ಕಾರ ನಡೆಸುವ ಹೇಳಿಕೆ ನೀಡುತ್ತಿರುವುದು ನಾಚಿಕೆಕೇಡಿನ ಸಂಗತಿ. ಹಾಗಿದ್ದರೆ, ಇಲ್ಲಿಯವರೆಗೆ ಸಂಗ್ರಹಿಸಿದ ತೆರಿಗೆ ಹಣ ಎಲ್ಲಿ ಹೋಯಿತು ? ಕರ್ನಾಟಕಕ್ಕೆ ಕೊಡಬೇಕಾದ ಬಾಕಿ ಹಣ ಯಾಕೆ ನೀಡುತ್ತಿಲ್ಲ? ಎಂಬ ವಿರೋಧ ಪಕ್ಷಗಳ ಪ್ರಶ್ನೆಗೆ ಜಾಣ ಕುರುಡುತನ ತೋರಿಸುತ್ತಾರೆ ಎಂದು ಶೈಲಜಾ ಹಿರೇಮಠ ಅರೋಪಿಸಿದರು.

ಕಷ್ಟಪಟ್ಟು ದುಡಿದು ಖರೀದಿಸುವ  ಪ್ರತಿಯೊಂದು ವಸ್ತುವಿಗೂ  ಶ್ರೀಸಾಮಾನ್ಯ ತೆರಿಗೆ ಕಟ್ಟುತ್ತಿದ್ದಾನೆ. ಅದರ ಮೇಲೆ ಈಗ ಅತಿಅಗತ್ಯ ವಸ್ತುಗಳ ಮೇಲಿನ ನೇರ ತೆರಿಗೆ ಹಾಕಿ ಜನರ ಬದುಕನ್ನು ದಿವಾಳಿಗೊಳಿಸುತ್ತಿದೆ. ಈಗಾಗಲೇ 8 ವರ್ಷಗಳಲ್ಲಿ ಬಡತನ ಮತ್ತು ನಿರುದ್ಯೋಗ , ಗರಿಷ್ಠ ಮಟ್ಟಕ್ಕೆ ಏರುತ್ತಿದೆ. ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗಗಳ ಬದುಕು ಉಸಿರುಕಟ್ಟುತ್ತಿದೆ.

ಆಡಳಿತ ಮಾಡುವ ಸರ್ಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲಾಗಿ, ಅವರನ್ನು ಇನ್ನಷ್ಟು ಸಂಕಷ್ಟಗಳಿಗೆ ತಳ್ಳಿ ತಮ್ಮ ಸರ್ಕಾರದ ಭದ್ರತೆಯ ಕುರಿತು ಮಾತನಾಡುತ್ತಾ ಕಾಲ ತಳ್ಳುತ್ತಿರುವದು  ಮೂರ್ಖತನದ ಪರಮಾವಧಿ ಅಲ್ಲದೇ ಇನ್ನೇನು? ಎಂದು ಪ್ರಶ್ನಿಸಿದರು.

ಬಿಜೆಪಿಯ ಈ ಎಲ್ಲಾ ಧೋರಣೆ ನೋಡುತ್ತಾ ಹೋದರೆ, ಇದು ಸಿರಿವಂತರ ಪರವಾದ ಪಕ್ಷ, ಬಡವರ ಪಕ್ಷವಲ್ಲ ಎನ್ನುವುದು ಸಾಬೀತಾಗುತ್ತದೆ. ಇಷ್ಟೊಂದು ಬಂಡತನದ ಪ್ರದರ್ಶನಕ್ಕೆ ಮೂಲ ಕಾರಣ , ಬಿಜೆಪಿಯ ಅಂಧಭಕ್ತರು. ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಹಿಂದುತ್ವ ಎಂಬ ಅಸ್ತ್ರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಅಂಧಭಕ್ತರು ₹100 ಪೆಟ್ರೋಲ್ ₹1000 ಆದರೂ ಬಿಜೆಪಿಗೆ ಜೈ ಅನ್ನುವರು ಎಂಬ ಗೊಡ್ಡು ನೆಪದಲ್ಲಿದ್ದಾರೆ.

ಹೀಗಾಗಿ ಸರ್ವಾಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಬಿಜೆಪಿಯವರಿಗೆ, ಅಧಿಕಾರಕ್ಕೆ ಬರಲು, ಇಂತಹ ಭಾವನಾತ್ಮಕ ವಿಷಯಗಳ ಬಾಣಗಳನ್ನು ಆಗಾಗ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಬಿಟ್ಟ ಬಾಣಗಳು ನಮನ್ನೆ ಕೊಲ್ಲುತ್ತವೆ ಎಂಬ ಅರಿವು ಜನಸಾಮಾನ್ಯರಿಗೆ ಅರ್ಥವಾಗದೇ ಹೋದರೆ, ಭಾರತವೆಂಬ ಬೃಹತ್ ದೇಶ, ಶ್ರೀಲಂಕಾದ ಪರಿಸ್ಥಿತಿಗೆ ಬರವ ಸಮಯ ಬಹಳ ದೂರವಿಲ್ಲ ಎಂದು ಶೈಲಜಾ ಹಿರೇಮಠ  ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *