ಬಾಪು ಅಮ್ಮೆಂಬಳ
ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಗೆ ಜೂನ್ 18 ರಿಂದ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಕೆ ಕೂಡ ಪ್ರಾರಂಭವಾಗಿದೆ. ಚುನಾವಣೆ ವೇಳೆ ಗೃಹ ಬಳಕೆಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅದರ ಷರತ್ತುಗಳೇನು ಎಂದು ಹೇಳಿಕೊಂಡಿತ್ತು. ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗಿ ಆರು ದಿನಗಳಾದರೂ ಗೃಹಜ್ಯೋತಿಯ ಸರ್ವರ್ ಸಮಸ್ಯೆ ಇನ್ನೂ ಸರಿಯಾಗಿಲ್ಲ ಎಂಬ ದೂರುಗಳು ರಾಜ್ಯದಾದ್ಯಂತ ಕೇಳಿಬರುತ್ತಿದೆ.
ಎಲ್ಲರೂ ತಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಈ ಯೋಜನೆಗೆ ಅರ್ಜಿ ಹಾಕಬಹುದಾದರೂ, ಈ ಬಗ್ಗೆ ಎಲ್ಲರಿಗೂ ತಿಳಿದಿರಲೇಬೇಕೆಂದೇನಿಲ್ಲ. ಯೋಜನೆಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದ ನಂತರ ಸೇವಾ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಕೇಂದ್ರಗಳಲ್ಲಿ ಟೋಕನ್ ಪಡೆದು ನಾಲ್ಕು ದಿನಗಳ ನಂತರ ಬಂದು ಅರ್ಜಿ ಸಲ್ಲಿಸಬೇಕಾದ ಪರಿಸ್ಥಿಯಿದೆ. ನಾಲ್ಕು ದಿನಗಳ ನಂತರ ಬಂದರೂ ಅಂದೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಾನಾ ಕಾರಣಗಳನ್ನು ಹೇಳಿ ಅಲ್ಲಿನ ಸಿಬ್ಬಂದಿಗಳು ಜನರನ್ನು ವಾಪಾಸು ಅಳೆದಾಡಿಸುತ್ತಿದ್ದಾರೆ.
ಈ ನಡುವೆ ಒಕ್ಕೂಟ ಸರ್ಕಾರ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದರೆ ಮಾಹಿತಿಯನ್ನು ಅಪ್‌ಡೇಟ್ ಮಾಡುವಂತೆ ಸೂಚಿಸಿತ್ತು. ರಾಜ್ಯ ಸರ್ಕಾರದ ಯೋಜನೆಗಳಿಗೆ ಆಧಾರ್ ಕಾರ್ಡ್ ಕೇಳುತ್ತಿರುವುದರಿಂದ, ಜನರು ಆಧಾರ್ ತಿದ್ದುಪಡಿ ಮತ್ತು ಮಾಹಿತಿ ನವೀಕರಣಕ್ಕಾಗಿ ಕೂಡಾ ಸೇವಾ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಹೀಗಾಗಿ ಸೇವಾಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಬೆಂಗಳೂರಿನ ‘ಬೆಂಗಳೂರು ಒನ್’ ಸೇವಾ ಕೇಂದ್ರಗಳಲ್ಲಿ ಆಧಾರ್ ಸರಿಪಡಿಸಲು ದಿನವೊಂದಕ್ಕೆ 50 ಟೋಕನ್ ಅನ್ನು ಮಾತ್ರ ನೀಡುತ್ತಿರುವುದಾಗಿ ಅಲ್ಲಿನ ಸಿಬ್ಬಂದಿ ಜನಶಕ್ತಿ ಮೀಡಿಯಾಗೆ ಹೇಳಿದರು. ಅದಾಗಿಯೂ, ಎಂಟು ಗಂಟೆಗೆ ನೀಡಲಾಗುವ ಈ ಟೋಕನ್ ಪಡೆಯಲು ಜನರು ಮುಂಜಾನೆ ಆರುಗಂಟೆಗೆ ಬಂದು ಕೇಂದ್ರದ ಮುಂದೆ ನಿಂತಿದ್ದಾಗಿ ಹೇಳಿಕೊಂಡರು.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಅಡಿ ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ? ಇಲ್ಲಿದೆ ಸ್ಪಷ್ಟ ಚಿತ್ರಣ
ಗೃಹಜ್ಯೋತಿ ಯೋಜನೆಯ ಬಗ್ಗೆ ಹೇಳಬಹುದಾದರೆ, ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಯಾವುದೆ ಸಮಸ್ಯೆಗಳಿಲ್ಲದ ಸರ್ವರ್ ಅನ್ನು ಅಳವಡಿಸಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಸರ್ಕಾರದ ಈ ವೈಫಲ್ಯದ ಬಗ್ಗೆ ಜನರು ಸೇವಾ ಕೇಂದ್ರಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಿನವೊಂದಕ್ಕೆ 50 ಟೋಕನ್‌ಗಳನ್ನು ನೀಡಲಾಗುತ್ತದೆ. ಆದರೆ ಸರ್ವರ್ ಸಮಸ್ಯೆಯಿಂದ ಈ 50 ಟೋಕನ್‌ಗಳನ್ನು ಕೂಡಾ ಪೂರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿಗಳು ತಮ್ಮ ಅಸಹಾಯಕತೆ ಹೇಳಿಕೊಳ್ಳುತ್ತಾರೆ.
“ಒಂದು ಸರ್ಕಾರವಾಗಿ ಯೋಜನೆಯೊಂದ ಡೊಮೈನ್‌ಗೆ ಯಾವುದೆ ಸಮಸ್ಯೆಗಲಿಲ್ಲದ ಸರ್ವರ್ ಅಳವಡಿಸುವುದು ದೊಡ್ಡ ವಿಚಾರವೇನಲ್ಲ. ಅದೂ ಅಲ್ಲದೆ ಸರ್ಕಾರ ಬಂದು ಒಂದು ತಿಂಗಳು ಕಳೆದಿದೆ. ಈ ವೇಳೆಯಲ್ಲಿ ಸರ್ಕಾರವು ಯೋಜನೆಗೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಬಹುದಾಗಿತ್ತು. ಆದರೆ ಸರ್ಕಾರ ತನ್ನ ಆಮೆ ನಡಿಗೆಯನ್ನು ಈ ಸ್ಪರ್ಧಾತ್ಮಕ ಯುಗದಲ್ಲೂ ಮುಂದುವರೆಸಿದೆ. ಜನರ ಕೆಲಸವೆಂದರೆ ದೇವರ ಕೆಲಸ ಎಂದು ಗೋಡೆ ಮೇಲೆ ಬರೆದರೆ ಮಾತ್ರ ಸಾಕಾಗುವುದಿಲ್ಲ” ಎಂದು ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡುತ್ತಿರುವ ಉಡುಪಿ ಮೂಲದ ಅಲ್ಫಾನ್ ಅಹ್ಮದ್ ಜನಶಕ್ತಿಗೆ ಹೇಳಿದರು.
ಗೃಹಜ್ಯೋತಿ ಯೋಜನೆಗೆ ಅರ್ಜಿ ನೀಡಲು ಬಂದಿದ್ದ ಮಹಿಳೆಯೊಬ್ಬರು ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡುತ್ತಾ, “ನಮ್ಮ ಎಲ್ಲಾ ದಾಖಲಾತಿಗಳು, ಮಾಹಿತಿಗಳು ಸರ್ಕಾರದ ಜೊತೆಗೆ ಇವೆ. ಸರ್ಕಾರ ಮನಸ್ಸು ಮಾಡಿದರೆ ಆ ಮಾಹಿತಿಯನ್ನೆ ಇಟ್ಟು ಯೋಜನೆಯನ್ನು ನೀಡಬಹುದಿತ್ತು. ಆದರೆ ಸರ್ಕಾರಕ್ಕೆ ಈ ಇಚ್ಛಾಶಕ್ತಿ ಇಲ್ಲ. ನಮ್ಮದೇ ಪಾಲನ್ನು ಪಡೆಯಲು ಜೀವನವಿಡೀ ಸರ್ಕಾರಿ ಕಚೇರಿ ಅಲೆದಾಡುವುದೆ ಆಯಿತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗೆಲಸ ಮಾಡುವ ಮಹಿಳೆಯೊಬ್ಬರು ಮೂರು ದಿನಗಳಿಂದ ತಾನು ಸೇವಾ ಕೇಂದ್ರ ಅಲೆದಾಡುತ್ತಿದ್ದೇನೆ ಎಂದು ಜನಶಕ್ತಿ ಜೊತೆಗೆ ತಮ್ಮ ಅಸಹಾಯಕತೆ ತೋಡಿಕೊಂಡರು. “ಬೆಳಿಗ್ಗೆ ಎಂಟು ಗಂಟೆಗೆ ಬಂದು ಟೋಕನ್ ಪಡೆಯುತ್ತೇವೆ. ನಮ್ಮ ಸರದಿ ಬಂದಾಗ ದಾಖಲಾತಿ ಪಡೆದ ಸಿಬ್ಬಂದಿಗಳು ಸ್ವಲ್ಪ ಸಮಯದ ನಂತರ ಸರ್ವರ್ ಡೌನ್ ಆಗಿದೆ ಎಂದು ಹೇಳುತ್ತಾ ಕಾಯಿಸುತ್ತಾರೆ. ಕೊನೆಗೆ ಕಾದು-ಕಾದೂ ಅಲ್ಲಿಂದ ವಾಪಾಸು ಹೋಗುತ್ತಿದ್ದೇನೆ. ನಮ್ಮಂತಹ ಬಡವರ ಒಂದು ದಿನದ ಕೆಲಸ ಹೋದರೆ ಬದುಕು ಕಷ್ಟಕರವಾಗುತ್ತದೆ” ಎಂದು ಹೇಳಿಕೊಂಡರು.
ಇದನ್ನೂ ಓದಿ: ಬಾಡಿಗೆದಾರರಿಗೂ ವಿದ್ಯುತ್ ಉಚಿತ- ಬಾಡಿಗೆದಾರರಿಗೆ ಇಲ್ಲಿದೆ ಮಹತ್ವ ಮಾಹಿತಿ.
ಕೆಲವು ಸೇವಾ ಕೇಂದ್ರದಲ್ಲಿ ಸಿಬ್ಬಂದಿಗಳು ಸೌಮ್ಯವಾಗಿ ವರ್ತಿಸಿದರೆ, ಕೆಲವು ಕೇಂದ್ರಗಳಲ್ಲಿ ಸಿಬ್ಬಂದಿಗಳು ಒರಟಾಗಿ ವರ್ತಿಸುತ್ತಿರುವುದು ಜನಶಕ್ತಿ ಮೀಡಿಯಾ ಗಮನಿಸಿದೆ. “ಉಚಿತ ಯೋಜನೆಗಳ ಲಾಭ ಪಡೆಯುವವರನ್ನು ಕೆಲವು ಅವಮಾನಿಸುವಂತೆ ನಡೆದುಕೊಳ್ಳುತ್ತಿದ್ದಾರೆ. ನಾವೆ ಕಟ್ಟಿದ ತೆರಿಗೆಯಿಂದ ಈ ಯೋಜನೆಗಳನ್ನು ಸರ್ಕಾರ ನೀಡುತ್ತಿದೆ. ಹಾಗಾಗಿ ಅವುಗಳನ್ನು ನಾವು ಪಡೆಯುತ್ತಿದ್ದೇವೆ. ಇದರಲ್ಲಿ ಯಾವುದೆ ಕೀಳರಿಮೆ ಇಲ್ಲ, ಆದರೆ ಸಿಬ್ಬಂದಿಗಳು ತುಸು ಸೌಜನ್ಯದಿಂದ ವರ್ತಿಸುವಂತೆ ಸರ್ಕಾರ ತಾಕೀತು ಮಾಡಬೇಕಿದೆ” ಎಂದು ಸೇವೆ ಪಡೆಯಲು ಬಂದ ವ್ಯಕ್ತಿಯೊಬ್ಬರು ಜನಶಕ್ತಿ ಮೀಡಿಯಾಗೆ ಹೇಳಿದರು.
“ತಮಿಳುನಾಡಿನಲ್ಲೂ ಅಲ್ಲಿನ ಸರ್ಕಾರ ಉಚಿತ ವಿದ್ಯುತ್ ಘೋಷಿಸಿದೆ. ಆದರೆ ಆ ಕಾರ್ಯಕ್ರಮ ಕರ್ನಾಟಕದಷ್ಟು ಜಟಿಲವಾಗಿಲ್ಲ. ಪ್ರತಿಯೊಂದು ಮೀಟರ್‌ಗೂ 100 ಯೂನಿಟ್ ಉಚಿತ ಸಿಗುತ್ತಿದೆ. ಎಲ್ಲಾ ದಾಖಲಾತಿ ಅವರ ಬಳಿಯೆ ಇರುವುದರಿಂದ ಅವುಗಳ ಆಧಾರದಲ್ಲೆ, ಅಲ್ಲಿನ ಜನರು ಉಚಿತ ಯೋಜನೆಯ ಲಾಭ ಪಡೆಯುತ್ತಿದ್ದಾರೆ” ಎಂದು ಸಧ್ಯ ಬೆಂಗಳೂರು ನಿವಾಸಿಯಾಗಿರುವ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಜನಶಕ್ತಿ ಮೀಡಿಯಾಗೆ ಹೇಳಿದರು.
ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆ ಆಶಾದಾಯಕವಾಗಿದೆ. ಆದರೆ ಅವುಗಳ ಘೋಷಣೆ ವೇಳೆ ತೋರಿದ ಉತ್ಸಾಹವನ್ನು ಸರ್ಕಾರ ಜಾರಿ ಮಾಡುವಾಗ ಕೂಡಾ ತೋರಬೇಕಿದೆ. ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸದಂತೆ, ಆದಷ್ಟು ಸರಳವಾಗಿ ಜನರು ಯೋಜನೆಗಳು ಜನರಿಗೆ ಸಿಗುವಂತೆ ನಿಯಮಗಳನ್ನು ತರಬೇಕಿದೆ. ಅದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಜನರೊಂದಿಂಗೆ ಸೌಮ್ಯವಾಗಿ ವರ್ತಿಸುವಂತೆ ಕೂಡಾ ಸರ್ಕಾರ ಆದೇಶಿಸಬೇಕಿದೆ.