ಕಾರವಾರ: ನಿನ್ನೆ ಸಂಜೆಯಿಂದ ಎಲ್ಲೆಡೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದೆ. ಇದರ ನಡುವೆ ಉತ್ತರಕನ್ನಡ ಜಿಲ್ಲೆಯ ಕಾರ್ಮಿಕ ನಾಯಕಿ ಯಮುನಾ ಗಾಂವ್ಕರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸುವ ಮೂಲಕ ಮಾದರಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತ ಯಮುನಾ ಗಾಂವ್ಕರ್ ಅವರ ಸಾಧನೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿತ್ತು, ಆದರೆ ಅಕ್ಟೋಬರ್ 31 ರಂದು, ತಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲವೆಂದು ಜಿಲ್ಲಾಡಳಿತಕ್ಕೆ ಅವರು ಪತ್ರವನ್ನು ಬರೆದು ತಿಳಿಸಿದ್ದಾರೆ. ಪ್ರಶಸ್ತಿಗಳಿಗಾಗಿ ಜನರು ಬಾಯಿಬಿಟ್ಟುಕೊಂಡು ಕುಳಿತಿರುವ ಹೊತ್ತಿನಲ್ಲಿ ಯಮುನಾ ಅವರು ಈ ನಡೆ ಅಚ್ಚರಿ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರವನ್ನು ತಮ್ಮ ಪೇಸ್ಬುಕ್ ನಲ್ಲಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.
“ಜಿಲ್ಲಾ ಪ್ರಶಸ್ತಿಗೆ” ಆಯ್ಕೆಯಾದ ಕುರಿತು ಉಲ್ಲೇಖ: 1} ದಿನಾಂಕ:13.10.2023 ರಂದು ನಡೆದ ಪೂರ್ವ ಭಾವಿ ಸಭೆಯ ನಡಾವಳಿಗಳು 2) ದಿನಾಂಕ 29.10.2023 ರಂದು ನಡೆದ ಸಭೆ ಯ ನಿರ್ಣಯದಂತೆ ತಾವು ಪತ್ರ ಕಳುಹಿಸಿದ್ದೀರಿ. ನಿನ್ನೆ ಸಂಜೆ ನನಗೆ ತಲುಪಿದೆ. ಮಾನ್ಯ ಜಿಲ್ಲಾಡಳಿತದ ಪರವಾಗಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ, ದುಡಿಯುವ ಜನತೆಯ ಚಳುವಳಿಯಲ್ಲಿ ಇರುವ ನನ್ನ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಆಯ್ಕೆ ಸಮಿತಿಗೆ ಮತ್ತು ಜಿಲ್ಲಾಡಳಿತಕ್ಕೆ ವಂದನೆಗಳು.
ತಮ್ಮ ಪತ್ರ ಬಂದಾಗ ನಾನು ಬೆಂಗಳೂರಿನಲ್ಲಿ ಅಕ್ಷರ ದಾಸೋಹ ಬಿಸಿಅಡುಗೆ ಯವರ ಅನಿರ್ದಿಷ್ಟ ಅವಧಿ ಅಹೋರಾತ್ರಿ ಹೋರಾಟದ ಮೊದಲ ದಿನ ಉದ್ಘಾಟನೆಯಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದೆ. ಹಾಗಾಗಿ ಕೂಡಲೇ ನನ್ನ ತೀರ್ಮಾನ ತಿಳಿಸಲಾಗಲಿಲ್ಲ.
ಇದನ್ನೂ ಓದಿ:ಕರ್ನಾಟಕ-50ರ ಸಂಭ್ರಮ | ಕನ್ನಡ ರಾಜ್ಯೋತ್ಸವದಲ್ಲಿ ಈ 5 ಹಾಡುಗಳು ಕಡ್ಡಾಯ!
“ನಾನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಕಾರ್ಯದರ್ಶಿಯಾಗಿ, ಸಿಐಟಿಯು ರಾಜ್ಯ ಕಾರ್ಯದರ್ಶಿಯಾಗಿ, ಅಖಿಲ ಭಾರತ ಜನರಲ್ ಕೌನ್ಸಿಲ್ ಸದಸ್ಯೆಯಾಗಿ ಹಾಗೂ ಜಿಲ್ಲೆಯ ಅಂಗನವಾಡಿ, ಅಕ್ಷರದಾಸೋಹ, ಪಂಚಾಯತ್ ಹಾಗೂ ಪೌರ, ಇನ್ನಿತರೇ ಸಂಘಟಿತ ಅಸಂಘಟಿತ ಕಾರ್ಮಿಕರ ಮತ್ತು ರೈತ ಕೂಲಿಕಾರರ, ಆದಿವಾಸಿಗಳ ಸಂಘಟನೆಯಲ್ಲಿ ಕಮ್ಯುನಿಸ್ಟ್ ಮೌಲ್ಯಗಳೊಂದಿಗೆ ಬದ್ಧತೆಯಿಂದ ತೊಡಗಿಸಿಕೊಂಡಿದ್ದೇನೆ. ಅಲ್ಲದೇ ಮಾನ್ಯ ಡಿಸಿಯವರ ಅಧ್ಯಕ್ಷತೆಯ ನಿಯಮ 17 ರ ಸಮಿತಿಯಲ್ಲಿ (SC-ST ಜನರ ಮೇಲಿನ ದೌರ್ಜನ್ಯ ವಿರೋಧಿ ಸಮಿತಿ) ಸದಸ್ಯೆಯಾಗಿದ್ದೇನೆ. ಸರ್ಕಾರದ ಎದುರು ಅನೇಕ ಸಮಸ್ಯೆಗಳ ವಿರುದ್ಧ ಪರಿಹಾರಕ್ಕೆ ಪ್ರತಿನಿತ್ಯ ಹೋರಾಟದ ಮಾರ್ಗದಲ್ಲಿದ್ದೇನೆ. ಹೀಗೆ ಸಂಘಟನಾ ಚೌಕಟ್ಟಿನಲ್ಲಿ ಇರುವುದರಿಂದಲೂ, ವೈಯುಕ್ತಿಕ ವಾಗಿಯೂ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಿಲ್ಲವೆಂದು ಗೌರವಯುತವಾಗಿ ತಿಳಿಸುತ್ತಿದ್ದೇನೆ.” ಎಂದು ಪತ್ರದಲ್ಲಿ ಬರೆದಿದ್ದಾರೆ.
ಪ್ರಶಸ್ತಿಗಾಗಿ ನಾನು ಎಲ್ಲಿಯೂ ಅರ್ಜಿ ಹಾಕಿಲ್ಲ ಎಂದೂ ಕೂಡ ಸ್ಪಷ್ಟಪಡಿಸುತ್ತಿದ್ದೇನೆ. ದಯವಿಟ್ಟು ಸಮಾಜದಲ್ಲಿ ಇನ್ನಷ್ಟೂ ಉತ್ತಮ ಸಾಧನೆ ಮಾಡಿದ ಇನ್ನೋರ್ವರನ್ನು ಅವರ ಒಪ್ಪಿಗೆಯೊಂದಿಗೆ ಪ್ರಶಸ್ತಿಗೆ ಆಯ್ಕೆ ಮಾಡಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತಿದ್ದೇನೆ. ದುಡಿಯುವ ಜನತೆಯ ಬೇಡಿಕೆಗಳಿಗೆ ನಡೆಯುವ ಚಳುವಳಿಗೆ ತಮ್ಮೆಲ್ಲರ ಸಹಾಯ ಸಹಕಾರ ಕೋರುತ್ತೇನೆ. ಪ್ರಶಸ್ತಿ ಗೆ ನನ್ನ ಹೆಸರು ಪರಿಗಣಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು ಎಂದು ಯಮುನಾ ಗಾಂವ್ಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಡಿಯೋ ನೋಡಿ:68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ 2023 – ನೇರಪ್ರಸಾರ | 68th Karnataka Rajyotsava Celebrations 2023 –