- ಪರೀಕ್ಷೆ ಬೇಡ, ಸೇವಾ ಹಿರಿತನ ಆಧರಿಸಿ ಬಡ್ತಿ ನೀಡಿ
- 15 ನೇ ಹಣಕಾಸು ಯೋಜನೆಯಡಿ ಆಡಳಿತ ವೆಚ್ಚದಲ್ಲಿ ಶೇ10, ಹಾಗೂ ಸ್ಥಳೀಯ ತೆರಿಗೆ ಸಂಗ್ರಹದಲ್ಲಿ ಶೇ40 ಹಣವನ್ನು ಸಿಬ್ಬಂದಿ ವೇತನಕ್ಕೆ ಉಪಯೋಗಿಸಿ
- ಕರವಸೂಲಿಗಾರ , ಗುಮಾಸ್ತ , ಡಾಟಾ ಎಂಟ್ರಿ ಆಪರೇಟರ್ಗಳನ್ನು ಸಿ ಗ್ರೂಪ್ ಹಾಗೂ ವಾಟರ್ ಮ್ಯಾನ್ , ಜವಾನ , ಸ್ವಚ್ಛತಗಾರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ
ಬೆಂಗಳೂರು : ಗ್ರಾಮ ಪಂಚಾಯತಿ ನೌಕರರಿಗೆ 15 ತಿಂಗಳುಗಳಿಂದ ಸರ್ಕಾರ ವೇತನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘಟನೆ (ಸಿಐಟಿಯು) ನೇತೃತ್ವದಲ್ಲಿ ಸಾವಿರಾರು ನೌಕರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಗ್ರಾಮ ಪಂಚಾಯಿತಿ ನೌಕರರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
10 ರಿಂದ 15 ತಿಂಗಳುಗಳಿಂದ ವೇತನ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. 2021 ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದ ನಿಧಿಯಿಂದ ಇಎಫ್ಎಂಎಸ್ ಮೂಲಕ ವೇತನ ನೀಡಲು ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ ಇಲ್ಲಿಯವರೆಗೆ ವೇತನ ಬಿಡುಗಡೆ ಸರಿಯಾಗಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರವು ಗ್ರಾಮ ಪಂಚಾಯತಿ ನೌಕರರ ಯೋಗಕ್ಷೇಮ ವಿಚಾರಿಸುವುದು ಅವರ ಜವಾಬ್ದಾರಿ ಕೊರೊನಾ ಸಂದರ್ಭದಲ್ಲಿ ಅವರ ಸೇವೆ ಅನನ್ಯವಾಗಿದೆ ಆದರೆ ಅಂತಹ ನೌಕರರನ್ನು ಮರೆತಿದ್ದಾರೆ ಸರಕಾರ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ಹುದ್ದೆಯಿಂದ ಗ್ರೇಡ್ -2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು ಹಾಗೂ 15 ನೇ ಹಣಕಾಸು ಯೋಜನೆಯಡಿ ಬಾಕಿವಿರುವ ವೇತನವನ್ನು ಈ ಕೂಡಲೇ ನೀಡುಬೇಕೆಂದು ಒತ್ತಾಯಿಸುವುದು ನಮ್ಮ ಧರಣಿಯ ಉದ್ದೇಶವಾಗಿದೆ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಸರಕಾರದ ಆದೇಶದಂತೆ 15 ನೇ ಹಣಕಾಸು ಯೋಜನೆಯಡಿ ಆಡಳಿತ ವೆಚ್ಚದಲ್ಲಿ ಶೇ10, ಹಾಗೂ ಸ್ಥಳೀಯ ತೆರಿಗೆ ಸಂಗ್ರಹದಲ್ಲಿ ಶೇ40 ಹಣವನ್ನು ಸಿಬ್ಬಂದಿ ವೇತನಕ್ಕೆ ಉಪಯೋಗಿಸಬೇಕು 2019 ಜುಲೈ 23 ರ ಸರ್ಕಾರಿ ಆದೇಶ ಪ್ರಕಾರ ಬಾಕಿ ಉಳಿದ ಎಲ್ಲಾ ನೌಕರರಿಗೂ ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡಬೇಕು . ಕರವಸೂಲಿಗಾರ , ಗುಮಾಸ್ತ , ಡಾಟಾ ಎಂಟ್ರಿ ಆಪರೇಟರ್ಗಳನ್ನು ಸಿ ಗ್ರೂಪ್ ಹಾಗೂ ವಾಟರ್ ಮ್ಯಾನ್ , ಜವಾನ , ಸ್ವಚ್ಛತಗಾರರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಗ್ರಾಮ ಪಂಚಾಯಿತಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರದ ಆದೇಶದಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು
ತಿಂಗಳಿಗೆ ಸರಿಯಾಗಿ ವೇತನ ಬಿಡುಗಡೆ ಮಾಡಬೇಕು, ವೇತನಕ್ಕಾಗಿ 700 ಕೋಟಿ ಹಣ ಬಿಡುಗಡೆ ಮಾಡಬೇಕು, 10 ವರ್ಷ ಮೇಲ್ಪಟ್ಟವರಿಗೆ ಪ್ರಮೋಷನ್ಗಾಗಿ ಅರ್ಹತಾ ಪರೀಕ್ಷೆ ರದ್ದುಗೊಳಿಸಬೇಕು, ಪಿಂಚಣಿ ಫೈಲ್ ರೆಡಿ ಇದೆ, ಪಿಂಚಣಿ ನೀಡುವ ಆದೇಶ ಆಗಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂದಾಜು ಐದು ಸಾವಿರ ಪ್ರತಿಭಟನಾಕಾರರು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಗ್ರಾ.ಪಂ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ರಾಜ್ಯ ಖಜಾಂಚಿ ಆರ್.ಎಸ್ ಬಸವರಾಜ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್, ಪ್ರಾಂತ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ , ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಸೇರಿದಂತೆ ಅನೇಕರಿದ್ದರು.