ಬೆಂಗಳೂರು:ಮುಷ್ಕರ ನಿರತ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಿಬ್ಬಂದಿಗೆ ಸರ್ಕಾರ ಎಚ್ಚರಿಕೆ ನೀಡಿದ್ದು ಮುಂದಿನ 48 ಗಂಟೆಗಳ ಒಳಗೆ ಕೆಲಸಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಎನ್‍ಎಚ್‍ಎಂ ನಿರ್ದೇಶಕರು ನೋಟಿಸ್ ಕಳುಹಿಸಿದ್ದು, 48 ಗಂಟೆಯ ಒಳಗಡೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಹಾಜರಾಗದೇ ಇದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.
ಆರೋಗ್ಯ ಇಲಾಖೆ ತುರ್ತುಸೇವೆ ನೀಡುವ ಇಲಾಖೆಯಾಗಿದ್ದು ಮುಷ್ಕರದಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನಲೆ ಎನ್ಹೆಚ್‍ಎಂ ಸಿಬ್ಬಂದಿಗೆ ನೋಟಿಸ್ ಜಾರಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗದೇ ವೇತನ ಹೆಚ್ಚಳ ಮತ್ತು ಹುದ್ದೆ ಖಾಯಂಗೊಳಿಸುವಂತೆ ಆಗ್ರಹಿಸಿ ಎನ್ಹೆಚ್‍ಎಂ ಸಿಬ್ಬಂದಿ ಫ್ರೀಡಂ ಪಾಕ್ರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ನೋಟಿಸ್ ನಲ್ಲಿ ಏನಿದೆ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮವು 2005 ರಿಂದ ಜಾರಿಯಲ್ಲಿದ್ದು ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯಕ್ರವಾಗಿದೆ. ಇದು ಮಿಷನ್ ಮೋಡ್ ಪ್ರಾಜೆಕ್ಟ್ ಆಗಿರುವುದರಿಂದ ನಿಗದಿಪಡಿಸಿದ ಉದ್ದೇಶ ಹಾಗೂ ಗುರಿಗಳು ಸಫಲವಾದ ನಂತರ ಕಾರ್ಯಕ್ರಮ ಮುಕ್ತಾಯಗೊಳ್ಳುವುದರ ಬಗ್ಗೆ ಕೇಂದ್ರ ಸರ್ಕಾರವು ತಿರ್ಮಾನಿಸುತ್ತದೆ.
ಈ ಯೋಜನೆಯಲ್ಲಿ ಸುಮಾರು 53 ಕಾರ್ಯಕ್ರಮಗಳು ರಾಜ್ಯದಲ್ಲಿ ವಿವಿಧ ಹಂತದಲ್ಲಿ ಜಾರಿಯಲ್ಲಿರುತ್ತವೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಒಳಗುತ್ತಿಗೆ ಆಧಾರದ ಮೇಲೆ 26,943 ಮತ್ತು 3,631 ಹೊರಗುತ್ತಿಗೆ ಒಟ್ಟು 30,574 ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರ ಪ್ರಮುಖ ಬೇಡಿಕೆಯಂದ ಸಂಬಳವನ್ನು ಏರಿಸಲಾಗಿದ್ದು, ಮಾರ್ಚ್ 4 ರಂದು ಶೇ.15 ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಳಿದ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಆಶ್ವಾಸನೆ ನೀಡಿದ್ದಾರೆ.