ನವದೆಹಲಿ: ನನ್ನನ್ನು ಬಿಜೆಪಿ ಸರ್ಕಾರ ಕೊಲ್ಲಲು ಪ್ರಯತ್ನಿಸುತ್ತಿದೆ. ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ, ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಮಸಿ ಬಳೆದಿರುವ ಪ್ರಕರಣ ಯೋಜಿತ ಪಿತೂರಿಯಾಗಿದೆ ಎಂದಿದ್ದಾರೆ.
ಮೀರತ್ ಜಿಲ್ಲೆಯ ಜಂಗೇತಿ ಗ್ರಾಮದ ಧರ್ಮೇಶ್ವರಿ ಫಾರ್ಮ್‌ನಲ್ಲಿ ನಡೆದ ಬಿಕೆಯು ಪರಿಶೀಲನಾ ಸಭೆಗೆ ಭಾಗವಹಿಸಿದ್ದ ರಾಕೇಶ್ ಟಿಕಾಯತ್ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಒಗ್ಗಟ್ಟನ್ನು ಮುರಿಯಲು ಸಾಕಷ್ಟು ಶ್ರಮಿಸುತ್ತಿದೆ. ಆದರೆ ಬಿಕೆಯು ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ ಎಂದ ಅವರು, ಇದರ ಜೊತೆಗೆ ನಮ್ಮ ಕುಟುಂಬ ಮತ್ತು ಸಂಘಟನೆ ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ಇದು ಎಂದಿಗೂ ಸಾಧ್ಯವಾಗುವುದಿಲ್ಲ ಎಂದರು.
ಇದನ್ನು ಓದಿ: ರೈತ ನಾಯಕ ರಾಕೇಶ ಟಿಕಾಯತ್ ಮೇಲೆ ಕಪ್ಪು ಮಸಿ ಬಳೆದು ಹಲ್ಲೆ
ದೇಶದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಅವರನ್ನು ಸಂಚುಕೋರರು ಹತ್ಯೆ ಮಾಡಿದಂತೆಯೇ, ದೇಶ ಮತ್ತು ಅದರ ರೈತರ ಪರವಾಗಿ ಮಾತನಾಡುವ ಯಾರೇ ಆಗಲಿ ಸಂಚುಕೋರರಿಂದ ಗುರಿಯಾಗುತ್ತಾರೆ ಎನ್ನುವ ಮೂಲಕ ಮಸಿ ಬಳೆದ ಘಟನೆಯನ್ನು ಮಹಾತ್ಮ ಗಾಂಧಿ ಅವರ ಹತ್ಯೆಯ ನಡುವೆ ಹೋಲಿಕೆ ಮಾಡಿದರು.
ಒಬ್ಬ ಟಿಕಾಯತ್‌ಗೆ ಏನಾದರೂ ತೊಂದರೆಯಾದರೆ, ಲಕ್ಷಾಂತರ ಟಿಕಾಯತ್‌ಗಳು ದೇಶದಲ್ಲಿ ರೈತ ಧ್ವಜವನ್ನು ಹಾರಿಸಲು ಸಿದ್ಧರಾಗಿದ್ದಾರೆ. ನಾನು ಯಾವಾಗಲೂ ರೈತರ ಧ್ವನಿಯನ್ನು ಬಲವಾಗಿ ಎತ್ತುತ್ತೇನೆ ಹಾಗೂ ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.
ಸರ್ಕಾರ ನನ್ನನ್ನು ಕೊಲ್ಲಲು ಬಯಸುತ್ತಿರುವುದಕ್ಕೆ ಕರ್ನಾಟಕ ಮತ್ತು ದೆಹಲಿಯಲ್ಲಿ ನಡೆದ ದಾಳಿಗಳು ಸಾಕಷ್ಟು ಸಾಕ್ಷಿಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ ಅವರಿಗೆ ಗೌರವ ಸಲ್ಲಿಸಲು ದೆಹಲಿಯಲ್ಲಿನ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದರು.
ಮೇ 30ರಂದು ಗಾಂಧಿ ಭವನದಲ್ಲಿ ರೈತ ನಾಯಕರ ಪ್ರಮುಖ ಸಭೆ ಕರೆಯಲಾಗಿತ್ತು. ಈ ವೇಳೆ ರಾಕೇಶ್ ಸಿಂಗ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.
ಚುನಾವಣೆ ಭರವಸೆ ಈಡೇರಿಸದ ಬಿಜೆಪಿ ಸರ್ಕಾರ
ವಿಧಾನಸಭೆಯ ಚುನಾವಣೆಗೂ ಮುನ್ನ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ನೀರಾವರಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಕೊಳವೆ ಬಾವಿಗಳಿಗೆ ಮೀಟರ್ ಅಳವಡಿಸಿ ರೈತರಿಗೆ ಕಿರುಕುಳ ನೀಡುತ್ತಿದೆ, ಇದನ್ನು ಸಹಿಸುವುದಿಲ್ಲ. ಒಕ್ಕೂಟದ ವ್ಯಾಪ್ತಿಗೆ ಗರಿಷ್ಠ ಸಂಖ್ಯೆಯ ಜನರನ್ನು ಸೇರಿಸುವಂತೆ ರೈತರಲ್ಲಿ ಮನವಿ ಮಾಡಿದ ರಾಕೇಶ್ ಟಿಕಾಯತ್ ಸರ್ಕಾರದ ವಿರುದ್ಧ ಪ್ರಬಲ ಮತ್ತು ಒಗ್ಗಟ್ಟಿನ ಹೋರಾಟ ಮಾತ್ರ ಗೆಲುವು ಸಾಧಿಸಲು ಸಾಧ್ಯ ಎಂದು ಹೇಳಿದರು.