ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೆ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಬಿಗಿಪಟ್ಟು ಹಿಡಿದಿದ್ದು, ಒತ್ತಡ ಮತ್ತಷ್ಟು ಹೆಚ್ಚಿಸಲು ಫೆಬ್ರವರಿ .7 ರಂದು ಧರಣಿ ಹೂಡಲು ನಿರ್ಧರಿಸಿದೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎನ್‌ಪಿಎಸ್‌ನ್ನು 2025-26ನೇ ಸಾಲಿನ ಬಜೆಟ್‌ನಲ್ಲಿ ರದ್ದುಗೊಳಿಸುವ ಭರವಸೆ ಈಡೇರಿಸದೆ ಇದ್ದಲ್ಲಿ ‘ಒಪಿಎಸ್ ಹಕ್ಕೊತ್ತಾಯ’ದ ಧರಣಿ ನಡೆಸಲು ಸಂಘದ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ ಈ ಮಾಹಿತಿ ನೀಡಿದ್ದು, ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆ ಈಡೇರಿಸದಿದ್ದರೆ ನಿಶ್ಚಿತ ಪಿಂಚಣಿಗೆ ಒತ್ತಾಯಿಸಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಏಕ ಸಂಸ್ಕೃತಿ ಹೇರುತ್ತಿರುವವರಿಗೆ ಸೌಹಾರ್ದ ನೆಲದ ಪಾಠ ಕಲಿಸಬೇಕಿದೆ- ಶಿವಾಚಾರ್ಯರು
ಯುಪಿಎಸ್‌ಗೆ ವಿರೋಧ
ಎನ್‌ಪಿಎಸ್ ಬದಲು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದನ್ನು ಎನ್‌ಪಿಎಸ್ ನೌಕರರ ರಾಷ್ಟ್ರ-ರಾಜ್ಯ ಸಂಘ ವಿರೋಧಿಸಿ, ಈ ಪ್ರಸ್ತಾವನೆಯನ್ನು ಸಾರಾಸಗಟು ತಿರಸ್ಕರಿಸಿವೆ.
ಕೆಲವು ರಾಜ್ಯಗಳಲ್ಲಿ ಒಪಿಎಸ್ ಜಾರಿಗೊಳಿಸಿದ್ದು, ಆ ರಾಜ್ಯಗಳಿಗೆ ಭೇಟಿ ನೀಡಿ ವರದಿ ಪಡೆದು ಪರಿಶೀಲಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಕ್ರಮವನ್ನೂ ವಿರೋಧಿಸುತ್ತಿದ್ದು, ಒಪಿಎಸ್ ಜಾರಿ ಭರವಸೆ ಈಡೇರಿಸಬೇಕೆಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ಒಪಿಎಸ್ ಹಕ್ಕೊತ್ತಾಯಕ್ಕೆ ಎನ್‌ಪಿಎಸ್ ನೌಕರರ ಸಂಘವು ಈಗಾಗಲೇ ಒಂದು ತಿಂಗಳು ಒಪಿಎಸ್ ಸಂಕಲ್ಪ ಯಾತ್ರೆ, ಸ್ವಾತಂತ್ರ್ಯ ಉದ್ಯಾನವನದಲ್ಲಿ 14 ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಿದ್ದು ಜನವರಿಯಿಂದ ಮೂರು ತಿಂಗಳ ಕಾಲ ವೋಟರ್ ಒಪಿಎಸ್ ಅಭಿಯಾನ ಪೂರ್ಣಗೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರು 2023ರ ಜೂನ್ 13ರಂದು ಸಂಘದ ಪದಾಧಿಕಾರಿಗಳ ಸಭೆ ಕರೆದು ಎನ್‌ಪಿಎಸ್ ರದ್ದುಪಡಿಸಲು ಕ್ರಮವಹಿಸುವ ಭರವಸೆ ನೀಡಿದ್ದರು. 6-1-2024ರಂದು ಎರಡನೇ ಬಾರಿ ಕರೆದ ಸಭೆಯಲ್ಲಿ ಎನ್‌ಪಿಎಸ್ ರದ್ದು ವಿಷಯದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದ್ದರು ಎಂದು ಶಾಂತಾರಾಮ ವಿವರಿಸಿದ್ದಾರೆ.
ಇದನ್ನೂ ನೋಡಿ: ಬಹುತ್ವ ಸಂಸ್ಕೃತಿ ಭಾರತೋತ್ಸವ – 2025 | ಸೌಹಾರ್ದ ಜಾಥಾ – ಬಹಿರಂಗ ಸಭೆ