ಶ್ರೀನಗರ: ಜಮ್ಮುವಿನಲ್ಲಿರುವ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಸ್ಥಳೀಯ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ವಿರೋಧಿಸಿ ಹನುಮಾನ್ ಚಾಲೀಸಾವನ್ನು ಪಠಿಸಿರುವ ಘಟನೆಯೊಂದು ನಡೆದಿದೆ.
ಸ್ಥಳೀಯ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದನ್ನು ವಿರೋಧಿಸಿ ಶುಕ್ರವಾರ ಸರ್ಕಾರಿ ಗಾಂಧಿ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಕೊಠಡಿಗಳಲ್ಲಿ ಓದುತ್ತಿದ್ದಾಗ ಸ್ಥಳೀಯ ಮಸೀದಿಯಲ್ಲಿ ಧ್ವನಿವರ್ಧಕವನ್ನು ಬಳಸಲಾಗುತ್ತಿತ್ತು. ಓದುವಾಗ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಧ್ವನಿವರ್ಧಕ ಬಳಕೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವ ನಿರ್ಧಾರ ಪ್ರಕಟಿಸಿದ ಕೆಲ ದಿನಗಳ ನಂತರ ಈ ಘಟನೆ ನಡೆದಿದೆ.
ತರಗತಿಯಲ್ಲಿ ಕಲಿಕೆಗೆ ಮಸೀದಿಯ ಧ್ವನಿವರ್ಧಕದ ಸದ್ದು ಮಾಡುತ್ತಿದೆ ಎಂದು ಆರೋಪಿಸಿದ ಕೆಲ ವಿದ್ಯಾರ್ಥಿಗಳು ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಲ್ಲಿಸಲು ಅಧಿಕಾರಿಗಳು ವಿಫಲವಾಗಿದ್ದಾರೆಂದು, ‘ಹನುಮಾನ್ ಚಾಲೀಸಾ’ ಪಠಣಕ್ಕೆ ಮುಂದಾಗಿದ್ದರು ಆದರೆ, ನಂತರ ಪೊಲೀಸರು ಹನುಮಾನ್ ಚಾಲೀಸಾ ಪಠಿಸದಂತೆ ವಿದ್ಯಾರ್ಥಿಗಳನ್ನು ತಡೆದು ಕೆಲವರನ್ನು ವಶಕ್ಕೆ ಪಡೆದರು. ನಂತರ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮುನ್ಸಿಪಲ್ ಕಾರ್ಪೊರೇಷನ್ (ಜೆಎಂಸಿ) ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುವ ಧ್ವನಿವರ್ಧಕಗಳನ್ನು ತೆಗೆದುಹಾಕಲು ನಿರ್ಣಯ ಕೈಗೊಂಡಿತ್ತು. ಬಿಜೆಪಿ ಮುನ್ಸಿಪಲ್ ಕಾರ್ಪೋರೇಷನ್ ಸದಸ್ಯ ನರೋತಮ್ ಶರ್ಮಾ ಈ ನಿರ್ಣಯವನ್ನು ಮಂಡಿಸಿದ್ದರು.
ಜಮ್ಮು ಮಹಾನಗರ ಪಾಲಿಕೆಯ ಮೇಯರ್ ಚಂದರ್ ಮೋಹನ್ ಗುಪ್ತಾ ಈ ನಿರ್ಣಯದ ಬಗ್ಗೆ ಮಾಹಿತಿ ನೀಡಿ, ʻನಿರ್ಣಯವನ್ನು ಬಹುಮತದೊಂದಿಗೆ ಅಂಗೀಕರಿಸಲಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದ್ದಾರೆ.