ನಕಲಿ ಸುದ್ದಿ ಪ್ರಸಾರ; 8 ಯೂಟ್ಯೂಬ್‌ ಚಾನೆಲ್‌ ನಿಷೇಧಿಸಿದ ಕೇಂದ್ರ ಸರ್ಕಾರ!

ನವದೆಹಲಿ: ಒಟ್ಟು 114 ಕೋಟಿ ವೀಕ್ಷಣೆ ಪ್ರಸಾರ ಕಂಡಿರುವ ಎಂಟು ಯೂಟ್ಯೂಬ್‌ ಚಾನೆಲ್‌ ಗಳನ್ನು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಕಾರಣಕ್ಕೆ ಕೇಂದ್ರ ಸರ್ಕಾರವು ನಿಷೇಧಗೊಳಿಸಿದೆ. ನಿಷೇಧಗೊಂಡ ಎಂಟು ಯೂಟ್ಯೂಬ್‌ ಚಾನೆಲ್‌ಗಳ ಪೈಕಿ, ಭಾರತದ ಏಳು ಚಾನಲ್‌ ಹಾಗೂ ಪಾಕಿಸ್ತಾನದ ಒಂದು ಚಾನೆಲ್‌ ಸೇರಿಕೊಂಡಿದೆ.

ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗಿದೆ ಎಂದು ಆರೋಪ ಮಾಡಿ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ಭಾರತೀಯ ಚಾನಲ್‌ಗಳಾದ ಲೋಕತಂತ್ರ ಟಿವಿ, ಯು ಆಂಡ್‌ ವಿ ಟಿವಿ, ಎಎಂ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, ಸೀ ಟಾಪ್‌ 5 ಟಿಎಚ್, ಸರ್ಕಾರಿ ಅಪ್‌ ಡೇಟ್‌, ಸಬ್‌ ಕುಚ್ ದೇಕೋ ಹಾಗೂ ನ್ಯೂಸ್ ಕಿ ದುನಿಯಾ ಪಾಕಿಸ್ತಾನ ಮೂಲದ ಚಾನೆಲ್ ನಿಷೇಧಕ್ಕೆ ಒಳಗಾದವು. ಇವುಗಳು ಸರಿಸುಮಾರು 85 ಲಕ್ಷ ಬಳಕೆದಾರರು ಚಾನೆಲ್‌ಗಳಿಗೆ ಚಂದಾದಾರರಾಗಿದ್ದಾರೆ. ಇದಲ್ಲದೇ ಒಂದು ಫೇಸ್ ಬುಕ್ ಖಾತೆ ಮತ್ತು ಎರಡು ಫೇಸ್ ಬುಕ್ ಪೋಸ್ಟ್ ಗಳನ್ನು ನಿಷೇಧಿಸಲಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಮಾಹಿತಿ ತಂತ್ರಜ್ಞಾನ ನಿಯಮಗಳು-2021ರ ಅಡಿಯಲ್ಲಿ ಇವುಗಳನ್ನು ನಿರ್ಬಂಧಿಸಲಾಗಿದ್ದು, ನಿರ್ಬಂಧಿತ ಚಾನಲ್‌ ಗಳಿಂದ ನಕಲಿ, ಭಾರತ ವಿರೋಧಿ ವಿಷಯವನ್ನು ಹಂಚಿಕೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ಸೂಕ್ಷ್ಮವಾಗಿದೆ ಎಂದು ಗಮನಿಸಲಾಗಿದೆ.

ನಿರ್ಬಂಧಕ್ಕೆ ಒಳಗಾಗಿರುವ ಚಾನಲ್‌ಗಳು ಭಾರತ ಸರ್ಕಾರದಿಂದ ಧಾರ್ಮಿಕ ಕಟ್ಟಡಗಳನ್ನು ಕೆಡವುವುದು, ಧಾರ್ಮಿಕ ಹಬ್ಬಗಳ ಆಚರಣೆ ನಿಷೇಧ, ಭಾರತದಲ್ಲಿ ಧಾರ್ಮಿಕ ಯುದ್ಧದ ಘೋಷಣೆ ಮುಂತಾದ ಸುಳ್ಳು ಹೇಳಿಕೆಗಳನ್ನು ನೀಡಿವೆ. ಎಂದು ಹೇಳಿಕೆ ನೀಡಿರುವ ಸರ್ಕಾರವು, ‘ಇಂತಹ ವಿಚಾರಗಳನ್ನು ಪ್ರಸಾರ ಮಾಡುವುದರಿಂದ ಕೋಮು ಸೌಹಾರ್ದತೆ ಕದಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಅಂಶಗಳಾಗಿವೆ ಎಂದು ಹೇಳಿದೆ.

ಹೊಸ ಐಟಿ ನಿಯಮಗಳು ಜಾರಿಯಾದ ಬಳಿಕ ಡಿಜಿಟಲ್‌ ಮಾಧ್ಯಮಗಳ ಮೇಲೂ ಸರ್ಕಾರ ಹದ್ದಿನ ಕಣ್ಣಿಡುತ್ತಿದೆ. ಹೊಸ ನಿಯಮದ ಅಡಿಯಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತಿರುವುದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ 2021-22ರ ಅವಧಿಯಲ್ಲಿ 94 ಯೂಟ್ಯೂಬ್ ಚಾನೆಲ್‌ಗಳು, 19 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು 747 ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್‌ಗಳನ್ನು (URLs) ನಕಲಿ ಸುದ್ದಿಗಳನ್ನು ಹರಡುವುದಕ್ಕಾಗಿ ನಿರ್ಬಂಧಿಸಿತ್ತು. 2021ರ ನವೆಂಬರ್‌ ತಿಂಗಳಲ್ಲಿ 17.5 ಲಕ್ಷ ವಾಟ್ಸಾಪ್‌ ಖಾತೆಗಳನ್ನು ನಿಷೇಧಗೊಳಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *