ಹಾಸನ ಜಿಲ್ಲೆಯ ಶ್ರವಣಬೆಳಗೂಳದ ಪಕ್ಕದ ದಮ್ಮನಿಂಗಲ ಗ್ರಾಮದ ಡಿ ಗೋವಿಂದದಾಸರು ಶಿಕ್ಷಕರಾಗಿದ್ದರು ಸಹ ಅವರ ಮನಸ್ಸು ತುಡಿಯುತ್ತಿದ್ದು ಕಾವ್ಯದ ಕಡೆಗೆ. ಅದಕ್ಕಾಗಿ ಅವರು ತಮ್ಮ ವೃತ್ತಿಯನ್ನು ತೊರೆದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಜಾತೀಯತೆ, ಅಸ್ಪೃಶ್ಯತೆ, ವ್ಯಕ್ತಿ ಚಿತ್ರಣ, ವೈಚಾರಿಕತೆ, ಪರಿಸರ, ಸ್ವಾತಂತ್ರ್ಯ ಹೋರಾಟ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದವರು. ಆ ಕಾಲದ ಸಮಕಾಲೀನ ಸಾಹಿತಿಗಳಿಂದ ಪ್ರಭಾವಿತರಾಗಿದ್ದ ಗೋವಿಂದದಾಸರು ತಮ್ಮನ್ನು ಕೇವಲ ಕಾವ್ಯಕಷ್ಟೇ ಸೀಮಿತಗೊಳಿಸಿಕೊಳ್ಳದೇ ಹೋರಾಟಗಾರರಾಗಿ, ಸಮಾಜ ಸುಧಾರಕರಾಗಿ ಶೋಷಿತ ವರ್ಗದವರ, ನೊಂದವರ ಧ್ವನಿಯಾಗಿದ್ದವರು.
1932 ರಲ್ಲಿ ತಮ್ಮಮೊದಲ ಕವನ ಸಂಕಲನ “ಹರಿಜನಾಭ್ಯುದಯ” ಕೃತಿಯನ್ನು ಪ್ರಕಟಿಸಿ ನಾಡಿನ ಜನಪ್ರಿಯ ಸಾಹಿತಿ ಹಾಸನ ರಾಜರಾವ್ ಅವರಿಂದ, ಬಿ.ಎಂ.ಶ್ರೀಕಂಠಯ್ಯ ಅವರಿಂದ ಪ್ರಶಂಸೆಯನ್ನು ಪಡೆದವರು. ರಾಷ್ಟ್ರಕವಿ ಕುವೆಂಪು ಅವರ ಅಧ್ಯಕ್ಷತೆಯ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕೂಡಾ ಸೇವೆ ಸಲ್ಲಿಸಿದವರು. ಕನ್ನಡ ನಾಡು ನುಡಿ, ಭಾಷೆಗಾಗಿ ದುಡಿದ ಗೋವಿಂದದಾಸರನ್ನು ನೆನೆಯೋಣ.