ಹಾವೇರಿ: ಹಿಂದಿನ ಸರಕಾರ ಆರಂಭಿಸಿದ ಹಾವೇರಿ ವಿಶ್ವ ವಿದ್ಯಾಲಯ ಸೇರಿದಂತೆ 9 ವಿ. ವಿಗಳನ್ನು ರಾಜ್ಯ ಸರಕಾರವು ಮುಚ್ಚಲು ಮುಂದಾಗಿರುವುದು ಸರಿಯಾದ ನಡೆಯಲ್ಲ ಎಂದು ವಿಶ್ರಾಂತ ಉಪಕುಲಪತಿಗಳಾದ ಎ. ಮುರಿಗೆಪ್ಪ ಅಭಿಪ್ರಾಯ ಪಟ್ಟರು.
ಹಾವೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಶಾಲೆ ಕಾಲೇಜುಗಳು ಜಾಸ್ತಿ ಆದಂತೆಲ್ಲ ಅವುಗಳಿಗೆ ಪೂರಕವಾಗಿ ವಿಶ್ವ ವಿದ್ಯಾಲಯಗಳು ಕೂಡ ಬೇರೆ ಬೇರೆಯಾಗಬೇಕಾಗುತ್ತದೆ. ಒಂದು ಕಾಲದಲ್ಲಿ ಮೈಸೂರು ವಿ.ವಿ ಮತ್ತು ಕರ್ನಾಟಕ ವಿ.ವಿ ಎರಡೆ ಇದ್ದವು, ಆನಂತರ ಬೇರೆ ಬೇರೆ ಕೇಂದ್ರಗಳಾಗಿ ನಂತರ ವಿಶ್ವ ವಿದ್ಯಾಲಯಗಳಾದವು. ಹಾಗಾಗಿ ಇಂದು ಇಷ್ಟು ವಿ.ವಿ ಗಳು ಅಸ್ತಿತ್ವಕ್ಕೆ ಬಂದಿವೆ. ಅವುಗಳಿಗೆ ವಿವಿಧ ಸೌಕರ್ಯಗಳನ್ನು ಸರಕಾರ ಒದಗಿಸುತ್ತಾ ಬಂದಿದೆ ಎಂದರು.
ಹಿಂದಿನ ಸರಕಾರ ಜಿಲ್ಲೆಗೊಂದು ವಿ.ವಿ ಗಳು ಎಂದು ಅಯ್ದ ಕೆಲವು ಜಿಲ್ಲೆಗಳಲ್ಲಿ ವಿ.ವಿ ಗಳನ್ನು ಆರಂಭಿಸಿತು. ಈ ವಿ.ವಿ ಆರಂಭಿಸುವಾಗ ಈಗಿರುವ ಸೌಕರ್ಯಗಳೇನಿವೆಯೊ ಅಷ್ಟನ್ನು ಮಾತ್ರ ಬಳಸಿಕೊಳ್ಳಬೇಕು ಹೆಚ್ಚಿನದನ್ನು ಕೇಳಬಾರದು ಎಂಬುವ ನಿರ್ಣಯ ಇತ್ತು ಅಂತ ಕಾಣುತ್ತೆ ಆದರೆ ಆ ರೀತಿ ಕಂಡಿಶನ್ ಹಾಕಿರುವುದು ತಪ್ಪು.
ಇದನ್ನೂ ಓದಿ: ರಾಜ್ಯ ಸರಕಾರ 9 ಹೊಸ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಲು ಒತ್ತಾಯ: ಎಸ್.ಎಫ್.ಐ
ಸೌಕರ್ಯಗಳನ್ನು ಕೊಡದೇ ವಿ.ವಿ ನಡೆಸಲು ಹೇಗೆ ಸಾಧ್ಯ? ಅಲ್ಲಿಗೆ ಬೇಕಾದ ಅಧಿಕಾರಿ ವರ್ಗ, ಕಛೇರಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗುತ್ತೆ. ಇವನ್ನು ಯಾವುದೊ ಒಂದು ಕಾಲಕ್ಕೆ ಮಾತ್ರ ಕೊಟ್ಟು ಕೈ ತೊಳಕೊಳ್ಳತಕ್ಕದ್ದಲ್ಲ, ಕಾಲ ಕಾಲಕ್ಕೆ ಸೌಲಭ್ಯ ಒದಗಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಸೌಲಭ್ಯ ಕೊಡದೆ ವಿ.ವಿ ನಡೆಸಿಕೊಂಡು ಹೋಗಿ ಅನ್ನೋದು ಮೊದಲನೇ ತಪ್ಪು.
ಈ ಮೂಲಭೂತ ಸೌಲಭ್ಯ ಒದಗಿಸುವ ಬದಲಾಗಿ ವಿ.ವಿ ಬಂದ್ ಮಾಡಲು ಹೊರಟಿರುವ ಸರಕಾರದ ಧೋರಣೆ ಸರಿಯಲ್ಲ. ಮುಚ್ಚುವ ಬದಲಾಗಿ ಈ ವಿಶ್ವವಿದ್ಯಾಲಯಗಳಿಗೆ ಏನೆಲ್ಲ ಸೌಲಭ್ಯ ಬೇಕು ಎಂಬುದನ್ನು ಚರ್ಚಿಸಿಕೊಂಡು ಒದಗಿಸಿಕೊಡಬೇಕು ಎಂದು ಹೇಳಿದರು.
ವಿಶ್ವ ವಿದ್ಯಾಲಯಗಳು ಆಯಾ ಪ್ರದೇಶದ ಅನುಕೂಲಕ್ಕೆ ಮತ್ತು ಪ್ರಯೋಜಕ ಆಗತಕ್ಕಂತ ರೀತಿಯಲ್ಲಿ ಇರಬೇಕಾಗುತ್ತೆ. ಈಗ ಹಾವೇರಿ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ 42 ಕಾಲೇಜುಗಳಿವೆ. ವಿ.ವಿ ಮುಚ್ಚಿದ್ರೆ ಈ ಕಾಲೇಜು ಎಲ್ಲಿಗೆ ಕಳಿಸ್ತಿರಿ? ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ಕಳಿಸ್ತಿರಿ ಅಂತಾದರೆ ಕರ್ನಾಟಕ ವಿ.ವಿ ಪರಿಸ್ಥಿತಿ ಶೋಚನೀಯ ಆಗಿದೆ ಅನಿಸುತ್ತೆ. ಮುಂದಿನ ವರ್ಷದ ಸಮಯಕ್ಕೆ ಪಿಎಚ್ಡಿ ಕೊಡೊದು ಕಷ್ಟ ಅನಿಸುತ್ತದೆ.
ಇಂತಹ ಸ್ಥಿತಿಯಲ್ಲಿ ಈ ಕಾಲೇಜುಗಳನ್ನು ಅಲ್ಲಿ ಹಾಕ್ತಿರಿ ಅಂದ್ರೆ ಇನ್ನಷ್ಟು ಹೊರೆ ಹಾಕಿದಂತಾಗುತ್ತದೆಯೆ ಹೊರತು ಇವರಿಗೆ ಅನುಕೂಲ ಮಾಡಿಕೊಟ್ಟ ಹಾಗೆ ಆಗುವುದದಿಲ್ಲ. ದೂರದಲ್ಲಿರುವ ಕಾಲೇಜುಗಳನ್ನು ಎಷ್ಟರ ಮಟ್ಟಿಗೆ ಗಮನಿಸ್ತಾರೆ ಎಂಬುದನ್ನು ಕೂಡ ನೋಡಬೇಕಾಗುತ್ತದೆ.
ಹಾಗಾಗಿ ರಾಜ್ಯ ಸರಕಾರ ಈ ತೀರ್ಮಾನವನ್ನು ಮತ್ತೊಮ್ಮೆ ಪರಿಶೀಲಿಸಿ ಈ ವಿಶ್ವ ವಿದ್ಯಾಲಯಗಳಿಗೆ ಏನೇನು ಸೌಕರ್ಯಗಳು ಬೇಕು ಎಂಬುದನ್ನು ಪರಿಗಣಿಸಿ ಆ ಅನುಕೂಲಗಳನ್ನು ಒದಗಿಸಿ ಅನುಕೂಲಕರ ಸ್ಥಿತಿಯನ್ನು ನಿರ್ಮಾಣ ಮಾಡಬೇಕು. ಹಾಜರಾತಿ ನೆಪವೊಡ್ಡಿ ಈಗಾಗಲೇ ಎಷ್ಟೋ ಶಾಲೆಗಳನ್ನು ಮುಚ್ತಿವಿ ಅಂತ ಹೇಳ್ತಿದಾರಲ್ಲ; ಆ ಯಾಕೆ ಹಾಜರಾತಿ ಕಡಿಮೆಯಾಯ್ತು ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕನ್ನಡ ಶಾಲೆಗಳನ್ನು, ಗ್ರಾಮೀಣ ಶಾಲೆಗಳನ್ನು ಮುಚ್ಚೋದು ಸರಿಯಲ್ಲ ಎಂದರು.
ಹಾಗೇನೆ ಈ ಗ್ರಾಮೀಣ ಪ್ರದೇಶವನ್ನು ಒಳಗೊಂಡಿರುವಂತಹ ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚುವುದು ಸರಿಯಲ್ಲ. ಹಾವೇರಿ ಅಷ್ಟೆ ಅಲ್ಲದೇ ಕೊಪ್ಪಳ, ಹಾಸನ ಸೇರಿದಂತೆ ಯಾವುದೇ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರಕಾರ ಈ ತೀರ್ಮಾನವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ವಿನಂತಿಸುತ್ತೇನೆ ಎಂದರು.
ಇದನ್ನೂ ನೋಡಿ: ಗ್ರೇಟರ್ ಬೆಂಗಳೂರಿನಿಂದ ಯಾರಿಗೆ ಲಾಭ? ಜನ ಸಾಮನ್ಯರಿಗೆ ಅನುಕೂಲವೇ? Janashakthi Media