ಬೆಂಗಳೂರು : ರಾಜ್ಯದಲ್ಲಿ 2.55 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಹುದ್ದೆಗಳು ಸೇರಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸರ್ಕಾರದ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ 2.55 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮಾಹಿತಿಯ ಪ್ರಕಾರ, 2.55 ಲಕ್ಷ ಖಾಲಿ ಹುದ್ದೆಗಳಲ್ಲಿ, 75,000 ಕ್ಕಿಂತ ಹೆಚ್ಚು ಶಿಕ್ಷಣ ಇಲಾಖೆಯಲ್ಲಿ (ಉನ್ನತ ಮತ್ತು ಶಾಲಾ ಶಿಕ್ಷಣ) ಖಾಲಿಯಿದೆ. ಅಂದರೆ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿಗಳ ಕೊರತೆಯಿದೆ ಎಂಬುದು ಈ ಡೇಟಾ ಮೂಲಕ ಸ್ಪಷ್ಟವಾಗುತ್ತದೆ. ಡೇಟಾ ಪ್ರಕಾರ ಆರೋಗ್ಯ ಇಲಾಖೆಯಲ್ಲಿ 35,196 ಹುದ್ದೆಗಳು ಭರ್ತಿಯಾಗದೆ ಉಳಿದಿದೆ. ಇನ್ನು ಗೃಹ ಇಲಾಖೆಯಲ್ಲಿ 22,069 ಹುದ್ದೆಗಳು ಖಾಲಿಯಿದೆ.
ಒಟ್ಟಾರೆಯಾಗಿ ನೋಡಿದಾಗ ಹೆಚ್ಚಾಗಿ ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ಗಳ ಹುದ್ದೆ ಖಾಲಿಯಿದೆ. ಇದಲ್ಲದೇ ಕಂದಾಯ, ಆರ್‌ಡಿಪಿಆರ್, ಪಶುಸಂಗೋಪನೆ, ಹಣಕಾಸು ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ತಲಾ ಸುಮಾರು 10 ಸಾವಿರ ಹುದ್ದೆಗಳು ಖಾಲಿ ಇವೆ ಎಂಬುದನ್ನು ಈ ಡೇಟಾಗಳು ಬಹಿರಂಗಗೊಳಿಸಿವೆ.
ಇದನ್ನೂ ಓದಿ : ‘ಮಿಷನ್ ಮೋಡ್’ನಲ್ಲಿ 18 ತಿಂಗಳಲ್ಲಿ 10 ಲಕ್ಷ ಜನರಿಗೆ ಉದ್ಯೋಗ – ಪ್ರಧಾನಿ ಮೋದಿ ಸೂಚನೆ, ಅದರೆ ಖಾಲಿ ಇರುವುದು ಕೋಟಿ ಕೋಟಿ ಹುದ್ದೆ
ಮುಂದಿನ ಕೆಲವು ವರ್ಷಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಘೋಷಿಸಿತ್ತು. 2.55 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸವಾಲಿನ ಸಂಗತಿಯಾಗಿದೆ. ಈ ವರ್ಷ ಬಹಳಷ್ಟು ಜನರು ನಿವೃತ್ತಿಯಾಗಲಿದ್ದು, ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಖಾಲಿ ಹುದ್ದೆಗಳ ಪರಿಣಾಮವಾಗಿ ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳು ದುರ್ಭಲಗೊಳ್ಳುತ್ತಿವೆ. ಗುತ್ತಿಗೆ, ಹೊರಗುತ್ತಿಗೆ ಇಲ್ಲವೆ ಅತಿಥಿಗಳ ಹೆಸರಿನಲ್ಲಿ ತಾತ್ಕಾಲಿಕ ಕೆಲಸವನ್ನು ಮಾಡಿಸಿಕೊಳ್ಳಲಾಗುತ್ತಿದೆ. ಸರ್ಕಾರ ಇದನ್ನು ನಿಲ್ಲಿಸಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಬೇಕು, ಯುವಜನತೆ ಉದ್ಯೋಗಕ್ಕಾಗಿ ಅಲೆದಾಡುತ್ತಿದೆ, ಹಾತೊರೆಯುತ್ತಿದೆ. ಕೂಡಲೇ ನೇಮಕಾತಿ ಪ್ರಕ್ರಿಯೆಗೆ ಮುಂದಾಗಬೇಕು ಈ ಇಲಾಖೆಗಳನ್ನು ಬಲಪಡಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಈ ವಿಡಿಯೋ ನೋಡಿ : ನಿರುದ್ಯೋಗ । ವಿಶೇಷ ಉಪನ್ಯಾಸ । ಕೃತಿ ಲೋಕಾರ್ಪಣೆ