ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದೆಂದರೆ…  ನಾಡದ್ರೋಹದ ಕೆಲಸವಲ್ಲವೇ?

ಕಡಿಮೆ ಹಾಜರಾತಿಯ ನೆಪವೊಡ್ಡಿ ರಾಜ್ಯ ಸರಕಾರ 7 ಸಾವಿರ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕೆಪಿಎಸ್‌ ಎಂಬ ಭಾವನಾತ್ಮಕ ಯೋಜನೆಯನ್ನು ಮುಂದಿಟ್ಟು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬುಡಕ್ಕೆ ಕೊಡಲಿಪೆಟ್ಟು ಹಾಕಲು ಹೊರಟಿರುವ ರಾಜ್ಯ ಸರಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

 

ಗುರುರಾಜ ದೇಸಾಯಿ

ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಒಟ್ಟುಗೂಡಿಸಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ಯಾಗಿ ಪರಿವರ್ತಿಸಲು ಅನುಮತಿ ನೀಡಿರುವ ಶಿಕ್ಷಣ ಇಲಾಖೆ ಈ ಶಾಲೆಯ ಸುತ್ತಲ 6 ಕಿ.ಮೀ. ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿದೆ. ಅದರಂತೆ ಶಾಲೆಗಳ ವಿಲೀನಕ್ಕೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ವಹಿಸಿದ್ದಾರೆ. ಇದು, ಒಂದು ಕರ್ನಾಟಕ ಪಬ್ಲಿಕ್‌ ಶಾಲೆಯ(ಕೆಪಿಎಸ್‌) ಉದಾಹರಣೆಯಷ್ಟೆ. ಗ್ರಾ.ಪಂ.ಗೆ ಒಂದರಂತೆ ಇಂಥ 700 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು 2026-27ನೇ ಸಾಲಿನಲ್ಲಿ ಹೊಸದಾಗಿ ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಈ ಒಂದೊಂದು ಕೆಪಿಎಸ್‌ ಶಾಲೆಗಳಿಗೂ ಸುತ್ತಮುತ್ತಲ ಐದಾರು ಕಿ.ಮೀ. ವ್ಯಾಪ್ತಿಯ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳ ವಿಲೀನಕ್ಕೆ ಸದ್ದಿಲ್ಲದೆ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕನಿಷ್ಠ 5 ಸಾವಿರದಿಂದ ಗರಿಷ್ಠ 7 ಸಾವಿರ ಸರ್ಕಾರಿ ಶಾಲೆಗಳು ಈ ಕೆಪಿಎಸ್‌ ಶಾಲೆಗಳಲ್ಲಿ ವಿಲೀನವಾಗುವ ಮೂಲಕ ಬಂದ್‌ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಹೌದು.. ವಿಲೀನದ ಹೆಸರಿನಲ್ಲಿ 7000 ಸರಕಾರಿ ಕನ್ನಡ ಶಾಲೆಗಳು ಬೀಗ ಹಾಕಿಸಿಕೊಳ್ಳುತ್ತಿವೆ.. ವಿದ್ಯಾರ್ಥಿಗಳ ಹಾಜರಾತಿಯ ನೆಪವೊಡ್ಡಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ (KPS) ಹೆಸರಿನಲ್ಲಿ ಆ ಶಾಲೆಗಳನ್ನು ವಿಲೀನ ಮಾಡುತ್ತಿದೆ. ಶಾಲೆಯನ್ನು ಮುಚ್ಚುತ್ತಿಲ್ಲ ಬದಲಾಗಿ ವಿಲೀನ ಮಾಡುತ್ತೇವೆ ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ. ‘ವಿಲೀನ’ ಅಂದರೆ ಮುಚ್ಚುವುದು ಎಂದರ್ಥ ಎಂದು ಶಿಕ್ಷಣ ಸಚಿವ ಮಧು  ಬಂಗಾರಪ್ಪನವರಿಗೆ ಯಾರಾದರೂ ಶಿಕ್ಷಕರೆ ಅರ್ಥ ಮಾಡಿಸಬೇಕಿದೆ.

7349 ಏಕೋಪಾಧ್ಯಾಯ ಶಾಲೆಗಳು

ಕಡಿಮೆ ಹಾಜರಾತಿಯ ಮಕ್ಕಳಿರುವ ಶಾಲೆಗಳನ್ನು ಇನ್ನೊಂದು ಶಾಲೆಗೆ ವಿಲೀನ ಮಾಡಲು ಹೊರಟಿರುವ ಸರ್ಕಾರ ಯಾವತ್ತಾದರೂ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಿದೆಯಾ? ಆ ಶಾಲೆಯಲ್ಲಿ ಹಾಜರಾತಿ ಕಡಿಮೆಯಾದ ಬಗ್ಗೆ ಶಿಕ್ಷಣ ಇಲಾಖೆ ಯಾವತ್ತು ಅಧ್ಯಯನ ಮಾಡಿಲ್ಲ ಎಂಬುದನ್ನು  ಈ ಹಿಂದಿನ ಅನುಭವದ ಮೇಲೆ ತೀರ್ಪು ನೀಡಿಬಹುದು.  ಶಿಕ್ಷಕರೆ ಇಲ್ಲದೆ ಇದ್ದ ಮೇಲೆ ಯಾವ ಪೋಷಕರು ತಮ್ಮ ಮಕ್ಕಳನ್ನು ಆ ಶಾಲೆಯಲ್ಲಿ ಓದಲು ಬಿಡುತ್ತಾರೆ ಹೇಳಿ?

‘40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಬೇಕು. ರಾಜ್ಯದ 46 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ 59 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 7 ಸಾವಿರ ಏಕೋಪಾಧ್ಯಾಯ ಶಾಲೆಗಳಿವೆ. ಶಾಲೆಯ ಮಕ್ಕಳಿಗೆ ಮೊಟ್ಟೆ, ಬಿಸಿ ಊಟಕ್ಕೆ ತರಕಾರಿ ತರಲು, ಇಲಾಖೆ ಕೆಲಸದ ಮೇಲೆ ಶಿಕ್ಷಕರು ಶಾಲೆಯಿಂದ ಆಚೆ ಹೋದರೆ ಮಕ್ಕಳಿಗೆ ಯಾರು ಗತಿ?’ ಎಂದು ಶಿಕ್ಷಣ ಇಲಾಖೆ ಯೋಚಿಸುವುದು ಯಾವಾಗ?

ಪ್ರತಿ ವರ್ಷ 6000 ಶಿಕ್ಷಕರು ನಿವೃತ್ತಿ

60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಪ್ರತೀ ವರ್ಷ 6 ಸಾವಿರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಸರ್ಕಾರಗಳು ಖಾಲಿ ಹುದ್ದೆ ಭರ್ತಿ ಮಾಡುವ ಗೋಜಿಗೇ ಹೋಗುತ್ತಿಲ್ಲ. ಮಕ್ಕಳು ಎಷ್ಟೇ ಇದ್ದರೂ ಕಾನೂನಾತ್ಮಕವಾಗಿ ಆ ಎಲ್ಲಾ ಶಾಲೆಗಳಿಗೂ ಕನಿಷ್ಠ ವಿಷಯಕ್ಕೊಬ್ಬ ಶಿಕ್ಷಕರನ್ನು ನೇಮಿಸಬೇಕು. ಅದಾಗದಿದ್ದರೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರನ್ನಾದರೂ ನೇಮಕ ಮಾಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ.   ಶಿಕ್ಷಕರ ಸಂಘವೂ ಸರಕಾರವನ್ನು ಒತ್ತಾಯಿಸುತ್ತಾ ಬಂದಿದೆ.  ಒಂದು ಶಾಲೆ ಅಂದರೆ,  ತರಗತಿಗೊಂದು ಕೊಠಡಿ, ಬೋಧನಾ ಸಾಮಗ್ರಿ, ಬಿಸಿಯೂಟ ಕೊಠಡಿ, ಸಿಬ್ಬಂದಿ, ಗ್ರಂಥಾಲಯ, ಶೌಚಾಲಯ ಸೇರಿ ಪ್ರತಿಯೊಂದು ಮೂಲಸೌಕರ್ಯವನ್ನು ಕೊಡಲು ಸರ್ಕರ ಮನಸ್ಸು ಮಾಡಬೇಕು.

ಇದನ್ನೂ ಓದಿ : ಕನ್ನಡ ಸರ್ಕಾರಿ ಶಾಲೆ/ ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಎಸ್. ಎಫ್. ಐ ಪ್ರತಿಭಟನೆ 

ಶಾಲೆ ಮುಚ್ಚುವ ಪ್ರಯತ್ನ ಇದೇ ಮೊದಲಲ್ಲ

ಕಡಿಮೆ ಹಾಜರಾತಿಯ ನೆಪವೊಡ್ಡಿ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಿದ್ದು ಇದೇ ಮೊದಲಲ್ಲ. 2010 ರಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಸರಕಾರ 3174 ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು.  ಆಗ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದರು. ಶಾಲೆ ಮುಚ್ಚುವುದರ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ದೊಡ್ಡ ಹೋರಾಟವನ್ನು ಸಂಘಟಿಸಿತ್ತು. ಗಂಗಾವತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  “ ಕನ್ನಡ ಶಾಲೆ ಮುಚ್ಚಲು ಹೊರಟಿರುವ ನಿಮಗೆ” ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೈತಿಕ ಹಕ್ಕು ಇಲ್ಲ ಎಂದು  ಮುಖ್ಯಮಂತ್ರಿಯನ್ನು ವೇದಿಕೆ ಹತ್ತದಂತೆ ಎಸ್‌ಎಫ್‌ಐ ಹೋರಾಟ ನಡೆಸಿತು. ಪರಿಣಾಮ ಎಸ್‌ಎಫ್‌ಐ ಕಾರ್ಯಕರ್ತರ ಮೇಲೆ ಲಾಠಿ ಬೀಸಲಾಯಿತು. 25ಕ್ಕೂ ಹೆಚ್ಚು ಜನ ಗಾಯಗೊಂಡರು.  22 ಜನರ ಮೇಲೆ ಪ್ರಕರಣ ದಾಖಲಾಯಿತು. ಈ ಹೋರಾಟ ಸಾಹಿತ್ಯ ಸಮ್ಮೇಳದ ಮೂರು ದಿನವೂ ಹೊಸ ಚರ್ಚೆ ಹುಟ್ಟುಹಾಕಿತು.  ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಸರಕಾರಿ

ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಜಗದೀಶ್ ಶೆಟ್ಟರವರು ಮುಖ್ಯಮಂತ್ರಿಯಾದರು. ಕಾಗೇರಿ ಶಿಕ್ಷಣ ಮಂತ್ರಿಯಾಗಿ ಮುಂದುವರೆದರು. ಎಲ್ಲೊ ಇದ್ದ ಪ್ರೋ ಗೋವಿಂದಪ್ಪ ಸರಕಾರಕ್ಕೆ ವರದಿ ನೀಡಿ 12,000 ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಬೇಕು ಎಂದು ವರದಿ ನೀಡಿದರು. ಜೂನ್ 2012 ರಂದು ರಾಜ್ಯ ಸರಕಾರ ಆ ವರದಿಯನ್ನು ಅಂಗೀಕರಿಸಿ ಶಿಕ್ಷಣ ಇಲಾಖೆಗೆ 12672 ಶಾಲೆಗಳನ್ನು ಮುಚ್ಚಲು ಆದೇಶಿಸಿತು. ಇದರ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ ನಡೆಸಿತು. ನವೆಂಬರ್ ಒಂದು, 2012 ರಂದು ರಂದು ದಿನಪೂರ್ತಿ ಹೋರಾಟಕ್ಕೆ ಕರೆ ನೀಡಲಾಗಿತ್ತು. ಮಂಗಳೂರಿನಲ್ಲಿ ಸಿ.ಟಿ.ರವಿ, ಬೆಂಗಳೂರಿನಲ್ಲಿ ಜಗದೀಶ್ ಶೆಟ್ಟರ್, ಇತರ ಜಿಲ್ಲೆಗಳಲ್ಲಿ ಶಾಸಕರುಗಳಿಗೆ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸುವ ನೈತಿಕ ಹಕ್ಕಿಲ್ಲವೆಂದು ಹೋರಾಟ ನಡೆಸಲಾಯಿತು. ಜೋರಾಗಿ ಮಳೆ ಬೀಳುತ್ತಿದ್ದರು ಅದನ್ನು ಲೆಕ್ಕಿಸದೆ ಹೋರಾಟ ನಡೆಯಿತು. ಬೆಂಗಳೂರು, ಮಂಗಳೂರು , ರಾಯಚೂರು, ಚಿಕ್ಕಬಳ್ಳಾಪುರದಲ್ಲಿ ಹೋರಾಟ ತೀವೃಗೊಂಡು SFI ಮುಖಂಡರ ಮೇಲೆ ಕೇಸ್ ದಾಖಲಿಸಲಾಗಿತ್ತು.

2015 ರಲ್ಲಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರು ಅವರು 7 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚಲು ಆಲೋಚನೆ ನಡೆಸಿದ್ದರು. ಆಗಲೂ ಪೋಷಕರು ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸಿದ್ದವು. ಆದರೂ ಸದ್ದಿಲ್ಲದೆ ಇಲ್ಲಿಯವರೆಗೆ ನಾಲ್ಕು ಸಾವಿರ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ.

ನುಡಿದಂತೆ ನಡೆಯದ ಸರಕಾರ

ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಸರ್ಕಾರಗಳು ಒಂದಷ್ಟು ಶಾಲೆಗಳನ್ನು ವಿಲೀನದ  ಹೆಸರಲ್ಲಿ ಬಂದ್‌ ಮಾಡುತ್ತಾ ಬಂದಿವೆ. ಇದರ ಪರಿಣಾಮ 2010ರಲ್ಲಿ ರಾಜ್ಯದಲ್ಲಿದ್ದ 50 ಸಾವಿರ ಶಾಲೆಗಳ ಸಂಖ್ಯೆ ಈಗ 46 ಸಾವಿರಕ್ಕೆ ಇಳಿದಿದೆ. ರಾಷ್ಟ್ರೀಯ ಶಿಕ್ಷಣ ನೀತಿ (2020) ನ್ನು ತಿರಸ್ಕರಿಸಿ ಸಂವಿಧಾನದ ಒಕ್ಕೂಟದ ಆಶಯವನ್ನು ಎತ್ತಿ ಹಿಡಿಯಲು ರಾಜ್ಯ ಶಿಕ್ಷಣ ನೀತಿ  (2025) ರೂಪಿಸಿದ್ದ  ಕಾಂಗ್ರೆಸ್ ಸರ್ಕಾರ, ತನ್ನ ರಾಜ್ಯ ಶಿಕ್ಷಣ ನೀತಿಯನ್ನು  ತಾನೇ ಧಿಕ್ಕರಿಸಿ, ತಾನು ಬಲವಾಗಿ ವಿರೋಧಿಸಿದ್ದ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಮುಂದಾಗಿರುವ ಸರಕಾರದ ನಿಲುವನ್ನು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ, ಖಂಡಿಸಿದ್ದಾರೆ.

ರಾಜ್ಯದಲ್ಲಿ  2017 ರಿಂದ 2024-25 ರವರೆಗೆ ಪ್ರಸ್ತುತ 308 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಆದರೆ  ಸರ್ಕಾರ ಹೊಸ 304 KPS ಶಾಲೆ ಕಟ್ಟಡ  ನಿರ್ಮಾಣ  ಮಾಡಿಲ್ಲ. 4 KPS ಶಾಲೆಗಳನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR)  ನಿಧಿಯಲ್ಲಿ  ಕಾರ್ಪೊರೇಟ್ ಉದ್ಯಮಿಗಳು ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ ಹಾಗೂ ಸರ್ಕಾರಿ ಶಾಲೆಯನ್ನು ಉನ್ನತೀಕರಣ ಮಾಡಿದ್ದೇವೆ ಎಂದು ಹೇಳಿ ಅದೇ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮರು ನಾಮಕರಣ ಮಾಡಿದ್ದಾರೆ ಭಾರತ ವಿದ್ಯಾರ್ಥಿ ಫೆಡರೇಷನ್‌ ( ಎಸ್‌ಎಫ್‌ಐ) ಆರೋಪಿಸಿದೆ.

ಹೊಸ KPS ಶಾಲೆಗಳನ್ನು ಪ್ರಾರಂಭ ಮಾಡಲು ಎನ್.ಜಿ.ಓ. ಗಳು ಕಾರ್ಪೋರೆಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಹಾಗೂ ಆಸಕ್ತಿ ದಾನಿಗಳು ಶಾಲೆಗಳನ್ನು ಪ್ರಾರಂಭ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ಹಲವು ಮಾನದಂಡಗಳನ್ನು ಸುತ್ತೋಲೆಯಲ್ಲಿ ತಿಳಿಸಿದೆ.  25-10-2021 ರ ಸುತ್ತೋಲೆ ಪ್ರಕಾರ  CSR ನಿಧಿಯಲ್ಲಿ ಪ್ರಾರಂಭವಾಗುವ ಹೊಸ KPS ಶಾಲೆಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸಂಪೂರ್ಣ ವೆಚ್ಚವನ್ನು  ದಾನಿಗಳು / ಸಂಸ್ಥೆಗಳು ಬರಿಸಬೇಕು  ಹಾಗೂ ಅಗತ್ಯ ಮೂಲಭೂತ ಸೌಕರ್ಯ ಮತ್ತು ಅತಿಥಿ ಶಿಕ್ಷಕರು ಮತ್ತು ಆಯಾಗಳನ್ನು ನೇಮಕ ಮಾಡಿಕೊಂಡು 2 ವರ್ಷಗಳ ಅವಧಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲು ಸಿದ್ದರಿರಬೇಕು ಎಂಬ ನಿಯಮ ಇದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಖಾಸಗಿಯವರಿಗೆ ಲಾಭ ಮಾಡಲು ಸರ್ಕಾರ ಸಜ್ಜಾಗಿದೆ.  ಇದರ ವಿರುದ್ಧ ಎಸ್‌ಎಫ್‌ಐ ವ್ಯಾಪಕ ಹೋರಾಟ ನಡೆಸಲಿದೆ ಎಂದು ರಾಜ್ಯ ಕಾರ್ಯದರ್ಶಿ ವಿಜಯ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 73 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ಶಿಕ್ಷಕರ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಸಮರ್ಥವಾಗಿ ಬೋಧಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಣದ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಪಾಲಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ ಎಂದು ಎಐಡಿಎಸ್‌ಒ ಅಧ್ಯಕ್ಷೆ ಟಿ.ಈ.ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡಪರ ಸಂಘಟನೆಗಳಿಗೆ ಶಾಲೆಗಳು ಕಾಣುತ್ತಿಲ್ಲವೆ?

ಭಾಷಾ ವಿಷಯವಾಗಿ ನಿತ್ಯ ಹೋರಾಟ ನಡೆಸುವ ಕನ್ನಡಪರ ಸಂಘಟನೆಗಳಿಗೆ ಸರಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕಂಡಿಲ್ಲ ಎಂದೆನಿಸುತ್ತದೆ.  ಕನ್ನಡದ ಹೋರಾಟ ಎಂದರೇ… ಬೇರೆ ಭಾಷೆಯ ಬೋರ್ಡ್ ಗೆ ಕಪ್ಪು ಬಣ್ಣ ಬಳೆಯುವುದಾಗಲಿ, ಇತರ ಭಾಷಿಕರು ಕನ್ನಡದ ಮೇಲೆ ನಡೆಸಿದಾಗ ಕರ್ನಾಟಕ ಬಂದ್ ಮಾಡುವುದಾಗಲಿ ಅಷ್ಟಕ್ಕೆ ಸೀಮಿತವಾಗುವುದು ಬೇಡ… ಕನ್ನಡ ಭಾಷೆಯ ಮೂಲಕ್ಕೆ ರಾಜ್ಯ ಸರ್ಕಾರ ಕೊಡಲಿಪೆಟ್ಟು ಹಾಕುತ್ತಿದೆ. ಕನ್ನಡ ಉಳಿಸಿ ಬೆಳಸುವ ಕೇಂದ್ರಗಳಾಗಿರುವ ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ.

ಸರಕಾರದ ಈ ನಡೆಯನ್ನು ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು, ಜನಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಐಕ್ಯ ವೇದಿಕೆಯನ್ನು ರೂಪಿಸಿಕೊಂಡ ನಿರ್ಣಾಯಕ ಹೋರಾಟದ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಉಳಿಸಿಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ. ಸರಕಾರಿ

ಇದನ್ನೂ ನೋಡಿ : ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೆಪಿಎಸ್ ವ್ಯವಸ್ಥೆ ಪರಿಹಾರವೋ? ಶಾಪವೋ? Janashakthi Media

 

Donate Janashakthi Media

Leave a Reply

Your email address will not be published. Required fields are marked *