ಬೆಂಗಳೂರು : ಕನ್ನಡ ಭಾಷೆ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಗೂಗಲ್ ಕ್ಷಮೆ ಕೇಳಿದೆ. ಗುರುವಾರ ಬೆಳಗ್ಗೆಯಿಂದ ಗೂಗಲ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಕನ್ನಡ ಭಾಷೆಯನ್ನು ಕೆಟ್ಟ ಭಾಷೆ ಎಂದು ಬಿಂಬಿಸಲಾಗಿತ್ತು. ( Ugliest language in India) ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಕನ್ನಡಿಗರು ಆಕ್ರೋಶ ಹೊರಹಾಕಿದ್ದರು.
ನಮ್ಮಿಂದ ತಪ್ಪು ಅರ್ಥ ಬಂದಿದ್ದರೆ ಕ್ಷಮೆ ಕೇಳುತ್ತಿದ್ದೇವೆ ಎಂದು ಗೂಗಲ್ ಟ್ವೀಟ್ ಮಾಡಿದೆ. ಆಂಗ್ಲ ಮತ್ತು ಕನ್ನಡದಲ್ಲಿ ಎರಡು ಹೇಳಿಕೆ ನೀಡಿದೆ. ಮಾಜಿ ಸಿಎಂ ಕುಮಾರಸ್ವಾಮಿ ಆದಿಯಾಗಿ ನಟ-ನಟಿಯರು ಆಕ್ರೋಶ ಹೊರಹಾಕಿದ್ದರು. ಒಟ್ಟಿನಲ್ಲಿ ಜನಾಕ್ರೋಶದ ಪರಿಣಾಮ ಗೂಗಲ್ ಸದ್ಯಕ್ಕೆ ಒಂದು ಪಾಠ ಕಲಿತಿದೆ.
We apologize for the misunderstanding and hurting any sentiments. pic.twitter.com/nltsVezdLQ
— Google India (@GoogleIndia) June 3, 2021
ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ: ಕನ್ನಡಕ್ಕೆ ಅವಮಾನ ಎಂದು ತಿಳಿಯುತ್ತಿದ್ದಂತೆಯೇ ಒಮ್ಮೆಲೇ ಲಕ್ಷಾಂತರ ಜನರು ಭೇಟಿ ನೀಡಿದ ಹಿನ್ನೆಲೆಯಲ್ಲಿ ‘429 Too Many Requests’ ಎಂಬ ಸಂದೇಶ ಮಾತ್ರ ಬರತೊಡಗಿತು. ಅಷ್ಟೇ ಸಂಖ್ಯೆಯಲ್ಲಿ ಗೂಗಲ್ ಉತ್ತರದ ಕುರಿತು ‘ಫೀಡ್ಬ್ಯಾಕ್’ ನೀಡಲಾರಂಭಿಸಲಾಯಿತು. ಅನೇಕರು ವೆಬ್ಸೈಟ್ ಕುರಿತು ಕಾನೂನಾತ್ಮಕ ವಿರೋಧವನ್ನೂ ದಾಖಲಿಸಿದರು. ಇದೆಲ್ಲದರ ನಂತರ ಸಂಜೆ ವೇಳೆಗೆ ಲೇಖನವನ್ನು ತೆಗೆದುಹಾಕಲಾಗಿದೆ ಎಂಬ ಸಂದೇಶ ಬರತೊಡಗಿದೆ.
ಗೂಗಲ್ ಕ್ರಮಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಟಿ.ಎಸ್.ನಾಗಾಭರಣ, ಎಸ್.ಜಿ ಸಿದ್ರಾಮಯ್ಯ ಹಾಗೂ ಕನ್ನಡಪರ & ಜನಪರ ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸಿ ಗೂಗಲ್ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದವು.
ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಅರವಿಂದ ಲಿಂಬಾವಳಿ, 2500 ವರ್ಷಗಳ ಹಿಂದೆಯೇ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ. ಜೊತೆಗೆ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು, ಕನ್ನಡ ಭಾಷೆ ಕನ್ನಡಿಗರ ಹೆಮ್ಮೆ” ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದರು.
“ಆದರೆ ಭಾರತದಲ್ಲಿ ಕೆಟ್ಟ(ugliest) ಭಾಷೆ ಎಂದರೆ ನಮ್ಮ ನುಡಿಯಾದ ಕನ್ನಡ ಎಂದು ಉತ್ತರ ಬರುತ್ತಿದೆ ಹೀಗಾಗಿ ಗೂಗಲ್ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ” ಎಂದು ಹೇಳಿದ್ದರು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ, ಭಾಷೆ ವಿಚಾರದಲ್ಲಿ ಗೂಗಲ್ ಇಂಡಿಯಾ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? ‘Ugliest language in India’ ಎಂಬ ಹುಡುಕಾಟಕ್ಕೆ ಕನ್ನಡ ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು ಗೂಗಲ್‌ಗೆ ಅಸಾಧ್ಯವೇ?” ಎಂದು ಪ್ರಶ್ನೆ ಮಾಡಿದ್ದರು.
ಇದನ್ನೆಲ್ಲ ಅರಿತ ಗೂಗಲ್ ಕೊನೆಗೂ ಕನ್ನಡಿಗರ ಕ್ಷಮೆಯನ್ನು ಕೇಳಿದೆ. ಗೂಗಲ್ ಸರ್ಚ್ನಲ್ಲಿ ಬರುವಂಥದ್ದು ಯಾವಾಗಲೂ ಪರಿಪೂರ್ಣವಲ್ಲ. ಕೆಲವೊಮ್ಮೆ ಬರಹಗಳನ್ನು ಯಾವ ರೀತಿ ಬರೆಯಲಾಗಿರುತ್ತದೆ ಎಂದರೆ ಕೆಲವೊಂದು ಪ್ರಶ್ನೆಗಳಿಗೆ ವಿಚಿತ್ರವಾದ ಉತ್ತರಗಳು ಬಂದು ಬಿಟ್ಟಿರುತ್ತವೆ ಎಂದ ಸಮಜಾಯಿಷಿ ನೀಡಿರುವ ಸಂಸ್ಥೆ, ಇದು ಗೂಗಲ್ ಅಭಿಪ್ರಾಯವಲ್ಲ ಎಂದು ಹೇಳಿದೆ. ಅದಾಗ್ಯೂ ಇನ್ನೊಬ್ಬರ ಭಾವನೆಗಳಿಗೆ ನೋವಾಗಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದು ಗೂಗಲ್ ತಿಳಿಸಿದೆ.