ಬೆಂಗಳೂರು: ಗೋಕಾಕ್ನ ಲೈಂಗಿಕ ವೃತ್ತಿನಿರತರ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತಮ್ಮ ಸ್ವಂತ ಕಟ್ಟಡವನ್ನು ಹೊಂದಲಿದೆ. ಮಾಜಿ ಸಂಸದ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಸ್ವಂತ ನೆಲೆಯಿಲ್ಲದೆ ಸಭೆ-ಸಮಾರಂಭ ಮಾಡುವ ಅಸಹಾಯಕ ಸ್ಥಿತಿಯಲ್ಲಿದ್ದ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳೆಯರ ಸಂಸ್ಥೆಗೆ ಸೂರು ಒದಗಿಸಿದ್ದಾರೆ.
ಈ ಕಟ್ಟಡವು ಇಂದು ಲೋಕಾರ್ಪಣೆಗೊಳ್ಳಲಿದ್ದು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.
ಸರಕಾರಿ ಯೋಜನೆ ಏಡ್ಸ್ ನಿಯಂತ್ರಣ ಅಭಿಯಾನ ಈ ವೃತ್ತಿಯಲ್ಲಿರುವ ಮಹಿಳೆಯರು ಸಂಘಟಿತರಾಗಲು ದಾರಿ ಮಾಡಿ ಕೊಟ್ಟಿದೆ. ರಾಜ್ಯದಲ್ಲೂ ಈ ವೃತ್ತಿ ಸಾಂದ್ರತೆಯ ಪ್ರದೇಶಗಳಲ್ಲಿ ಅವರದ್ದೇ ಸಮುದಾಯದ ನಡುವೆ ಜಾಗೃತಿಯ ಭಾಗವಾಗಿ ಏಡ್ಸ್ ನಿಯಂತ್ರಣ ಸಂಘಗಳು ರೂಪುಗೊಂಡಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಕೂಡ ಇಂತಹ ಲೈಂಗಿಕ ವೃತ್ತಿ ನಿರತರ ಆರೋಗ್ಯ ಜಾಗೃತಿ ಕೇಂದ್ರಗಳಲ್ಲಿ ಒಂದು. ಸಾವಿರಾರು ಮಹಿಳೆಯರು ತಾವು ಬಯಸದೇ ದೂಡಲ್ಪಟ್ಟ ಕ್ಷೇತ್ರದ ಬಗ್ಗೆ ಅರಿಯಲು, ಆರೋಗ್ಯ ಜಾಗೃತಿ ಹೊಂದಲು ಸಾಧ್ಯವಾಗುವಲ್ಲಿ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಪಾತ್ರ ಅತ್ಯಂತ ಹಿರಿದು.
ಪೊಲೀಸರು, ರೌಡಿಗಳು, ಸಮಾಜಘಾತುಕರು ಹೀಗೆ ನಾನಾ ಪಟ್ಟಭದ್ರರ ಕೆಂಗಣ್ಣು, ಬೆದರಿಕೆಗಳ ನಡುವೆಯೂ ಈ ಮಹಿಳೆಯರು ಆರೋಗ್ಯವೆಂಬ ಕೊಡೆಯಲ್ಲಿ ಸಂಘಟಿತರಾಗಿದ್ದಾರೆ. ತಮ್ಮದೇ ಸಂಸ್ಥೆಯನ್ನು ಎಲ್ಲಾ ಮೂದಲಿಕೆ ಪ್ರತಿರೋಧದ ನಡುವೆ ಕಟ್ಟಿ ಬೆಳೆಸಿದರು.
ಇವರಿಗೆ ಧೈರ್ಯ ತುಂಬಿ ಸಂಘಟನೆಗೆ ಬಲ ತುಂಬಿದವರು ಶ್ರೀಮತಿ ಲಲಿತಾ ಹೊಸಮನಿ. ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ. ನೊಂದಾಯಿತ ಈ ಸಂಸ್ಥೆ ಈಗ ತನ್ನ ಕಾರ್ಯ ಚಟುವಟಿಕೆಗಳಿಂದಲೇ ದೇಶದ ಗಮನಸೆಳೆದಿದೆ. ಸಾವಿರಾರು ನೊಂದು-ಬೆಂದ ಲೈಂಗಿಕ ವೃತ್ತಿ ಮಹಿಳೆಯರ ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಟೊಂಕಕಟ್ಟಿ ಕಾರ್ಯಪ್ರವೃತ್ತವಾಗಿದೆ.
ಈ ಕ್ಷೇತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಲೈಂಗಿಕ ವೃತ್ತಿ ನಿರತ ಮಹಿಳೆಯರ ಮಾನವ ಹಕ್ಕು, ಅವರ ಮಕ್ಕಳ ಪುನರ್ವಸತಿ ಮತ್ತು ಅವರ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಕಾರ್ಯವೆಸಗಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಲೀಲಾ ಸಂಪಿಗೆ ಅವರು ಈ ಮಹಿಳೆಯ ಸಾಂಘಿಕ ಒಗ್ಗೂಡುವಿಕೆಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕದ ಈ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಸಾಧನೆ ಬೆಳವಣಿಗೆಗೂ ಇವರ ಮಾರ್ಗದರ್ಶನವೇ ಸ್ಪೂರ್ತಿಯಾಗಿದೆ.
ಮಾಜಿ ಸಂಸದ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಬೆಳಗಾವಿಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಲೀಲಾ ಸಂಪಿಗೆಯವರ ಸಹಾಯದಿಂದ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಪದಾಧಿಕಾರಿಗಳು ಮನವಿಯನ್ನು ಸಲ್ಲಿಸಿದ್ದರು. ಈ ವೃತ್ತಿನಿರತ ಹೆಣ್ಣುಮಕ್ಕಳ ಬರ್ಬರ ಬದುಕಿನ ಬಗ್ಗೆ ಕಾಳಜಿಯಿದ್ದ ಅವರು ತಮ್ಮ ಶಾಸಕ ನಿಧಿಯ ಅನುದಾನದಿಂದ ನೆರವಿನ ಭರವಸೆ ನೀಡಿ ಅದು ಕೂಡಲೇ ಜಾರಿಯಾಗುವಂತೆ ಮಾಡಿದರು. ಅದರ ಪ್ರತಿಫಲವೇ ಇದೀಗ ತಲೆಯೆತ್ತಿ ನಿಂತಿರುವ ಶಕ್ತಿ ತಡೆಗಟ್ಟುವ ಮಹಿಳೆಯರ ಸಂಘದ ಈ ಸ್ವಂತ ಕಟ್ಟಡ.
ಕಾರ್ಯಕ್ರಮದ ವಿಶೇಷತೆ:
ಇಂದು ಗೋಕಾಕ್ನ ಸತೀಶ್ ನಗರದ, 5ನೇ ಕ್ರಾಸ್ ನಲ್ಲಿ ತಲೆಯೆತ್ತಿ ನಿಂತಿರುವ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಕಟ್ಟಡವನ್ನು ಶಾಸಕ ಸತೀಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.
ವೃತ್ತಿ ನಿರತ ಮಹಿಳೆಯರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ಈ ಕಟ್ಟಡ ಈ ಮಾದರಿಯ ದೇಶದ ಪ್ರಯತ್ನಗಳಲ್ಲಿಯೇ ವಿಶಿಷ್ಟವಾದುದು. ಬೆದರಿಕೆ, ಅಪಮಾನ, ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಮಹಿಳೆಯರು ತಮ್ಮ ಆತ್ಮ ಬಲದಿಂದಲೇ ಜಯಿಸ ಬಲ್ಲರು ಎನ್ನುವುದಕ್ಕೆ ಈ ಕಟ್ಟಡ ಉದ್ಘಾಟನಾ ಸಮಾರಂಭವು ಸಾಕ್ಷಿಯಾಗುತ್ತಿರುವುದು ನೊಂದ ಮಹಿಳೆಯರ ಮನದಲ್ಲಿ ಒಂದಷ್ಟು ಸಂತಸದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.