ಪ್ರೊ. ಪ್ರಭಾತ್ ಪಟ್ನಾಯಕ್
ಅಧ್ಯಕ್ಷ ಟ್ರಂಪ್ ಯುಎಸ್‌ನ ಸೆನೆಟ್ ಮತ್ತು ಪ್ರತಿನಿಧಿ ಸದನದಿಂದ ಸುಂಕದ ಬೆದರಿಕೆ ಹಾಕಲು ಪೂರ್ಣ ಅಧಿಕಾರ ಪಡೆದಿದ್ದಾರೆ. ಆದರೆ ಇದನ್ನು ಅವರು ಭಾರತದಂತಹ ದೇಶಗಳ ಮೇಲೆ ಪ್ರಯೋಗಿಸಿದರೆ, ಅದರಿಂದಾಗಿ ರಷ್ಯಾದ ಕಚ್ಚಾ ತೈಲವನ್ನು ಭಾರತ ಖರೀದಿಸದೇ ಇದ್ದರೆ, ಅದು ಕಚ್ಚಾ ತೈಲದ ಬೆಲೆಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತವೂ ಖಂಡಿತವಾಗಿಯೂ ಏರಿಸುತ್ತದೆ. ಹಾಗಾಗಿ, 1973ರಲ್ಲಿ ಉಂಟಾದ ಮೊದಲ ತೈಲ ಬಿಕ್ಕಟ್ಟಿನಿಂದಾಗಿ ಸಂಭವಿಸಿದ ರೀತಿಯಲ್ಲಿ, ರಷ್ಯಾದ ತೈಲದ ಮೇಲಿನ ನಿರ್ಬಂಧಗಳ ಅನಿವಾರ್ಯ ಪರಿಣಾಮವಾಗಿ ಅಮೆರಿಕಾವೂ ಸೇರಿದಂತೆ ಜಗತ್ತಿನಲ್ಲೆಲ್ಲ ‘ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತ’ ಉಂಟಾಗುತ್ತದೆ. ಇಂತಹ ಅಪಾಯವನ್ನು ಡೊನಾಲ್ಡ್ ಟ್ರಂಪ್ ಮೈಮೇಲೆ ಎಳೆದುಕೊಳ್ಳುತ್ತಾರೆಯೇ, ಅದೂ ಅಲ್ಲಿ ಚುನಾವಣೆಗಳು ಬಹಳ ಹತ್ತಿರದಲ್ಲಿರುವಾಗ? ವಾಸ್ತವವಾಗಿ, ಅವರಿಗೆ ಪೂರ್ಣ ಆಧಿಕಾರ ನೀಡುವ ಶಾಸನವು ಅಮೆರಿಕದ ಆದೇಶಗಳನ್ನು ಒಪ್ಪಿಕೊಳ್ಳುವಂತೆ ಉಳಿದ ದೇಶಗಳ ಮೇಲೆ ಒತ್ತಡ ಹೇರಲು ಒಂದು ಸಾಧನವಾಗಿದೆ. ಆದ್ದರಿಂದ ಭಾರತ ಸರ್ಕಾರ ಯುಎಸ್ ಸರಕಾರದ ಎದುರು ತನ್ನ ಪುಕ್ಕಲುತನದ ಪ್ರದರ್ಶನವನ್ನು ಬಿಟ್ಟು ದೃಢವಾಗಿ ನಿಲ್ಲುತ್ತದೆಯೇ?; ಯುಎಸ್‌ನ ಗೊಡ್ಡು ಬೆದರಿಕೆಯ ಪೊಳ್ಳುತನವನ್ನು ಬಯಲುಮಾಡುತ್ತದೆಯೇ? ಟ್ರಂಪ್
ಅನು:ಕೆ.ಎಂ.ನಾಗರಾಜ್
ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ಹೇರಿದ ಏಕಪಕ್ಷೀಯ ನಿರ್ಬಂಧಗಳನ್ನು ಉಲ್ಲಂಘಿಸಿ ರಷ್ಯಾದೊಂದಿಗೆ ವ್ಯಾಪಾರ-ವಹಿವಾಟು ನಡೆಸುವ ದೇಶಗಳಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ಶೇ. 100ರಷ್ಟು ಸುಂಕವನ್ನು ವಿಧಿಸುವ ಕ್ರಮಕ್ಕೆ ಅನುಮೋದನೆಯನ್ನು ಡೊನಾಲ್ಡ್ ಟ್ರಂಪ್ ಈಗ ಅಮೆರಿಕದ ಎರಡೂ ಸದನಗಳ ಶಾಸಕಾಂಗದಿಂದ ಪಡೆದಿದ್ದಾರೆ. ರಷ್ಯಾದ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಕೊಳ್ಳುವ ಭಾರತ ಮತ್ತು ಚೀನಾ ದೇಶಗಳು ಟ್ರಂಪ್ ಅವರ ಈ ಸುಂಕಗಳಿಗೆ ಪ್ರಮುಖ ಗುರಿಯಾಗುವ ಸಾಧ್ಯತೆಯಿದೆ.
ಸುಂಕಗಳಿಗೆ ಗುರಿಯಾಗಿರುವ ಈ ಎರಡು ಪ್ರಮುಖ ದೇಶಗಳ ಪೈಕಿ, ಚೀನಾ ಒಂದು ಹೆಚ್ಚು ಅನುಕೂಲಕರವಾದ ಸ್ಥಿತಿಯಲ್ಲಿದೆ: ಪ್ರೌಢ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ರಕ್ಷಣಾ ವ್ಯವಸ್ಥೆಗಳವರೆಗಿನ ಬಹಳಷ್ಟು ಚಟುವಟಿಕೆಗಳಿಗೆ ಅತ್ಯಗತ್ಯವಾಗಿರುವ ‘ಅಪರೂಪದ ಖನಿಜಗಳ’ ಜಾಗತಿಕ ಪೂರೈಕೆಯ ಬಹುಭಾಗದ ಮೇಲೆ ಚೀನಾ ನಿಯಂತ್ರಣ ಹೊಂದಿರುವುದರಿಂದ ಅಮೆರಿಕದ ವಿರುದ್ಧ ಚಲಾಯಿಸಬಹುದಾದ ಒಂದು ಪ್ರಚಂಡ ಚೌಕಾಶಿ ಶಕ್ತಿಯನ್ನು ಅದು ಹೊಂದಿದೆ. ಹೀಗಾಗಿ, ಅಪರೂಪದ ಖನಿಜಗಳ ಪೂರೈಕೆಗೆ ಅಡಚಣೆಯಾಗುವಷ್ಟು ಮಟ್ಟಿಗೆ ಚೀನಾವನ್ನು ಕೆರಳಿಸದಂತೆ ನೋಡಿಕೊಳ್ಳುವ ಅಮೆರಿಕವು ಚೀನಾದೊಂದಿಗಿನ ವ್ಯವಹಾರಗಳಲ್ಲಿ ಸದಾ ಎಚ್ಚರಿಕೆಯಿಂದಲೇ ವರ್ತಿಸುತ್ತದೆ. ಆದರೆ, ಅಮೆರಿಕದ ವಿರುದ್ಧ ಇಂತಹ ಯಾವುದೇ ಪ್ರಭಾವ ಅಥವಾ ಚೌಕಾಶಿಯ ಶಕ್ತಿಯನ್ನು ಭಾರತ ಹೊಂದಿಲ್ಲ.
ಟೊಳ್ಳು ಉಪದೇಶ ಮತ್ತು ಇಬ್ಬಂದಿತನ
ಟ್ರಂಪ್ ಪ್ರಸ್ತಾಪಿಸಿರುವ ಈ ಸುಂಕಗಳು, ಮುಕ್ತ ವ್ಯಾಪಾರದ ಬಗ್ಗೆ ಉಪದೇಶ ನೀಡುವ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಬೂರ್ಜ್ವಾ ಅರ್ಥಶಾಸ್ತ್ರಜ್ಞರ ಈ ಉಪದೇಶಗಳ ಸಂಪೂರ್ಣ ನಿಷ್ಪ್ರಯೋಜಕತೆಯನ್ನು ಎತ್ತಿ ತೋರಿಸುತ್ತವೆ. ಸಾಮ್ರಾಜ್ಯಶಾಹಿ ಧೋರಣೆಗೆ ಮಣಿಯದ ಯಾವುದೇ ದೇಶದ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಹೇರಲಾಗುವುದರಿಂದ ಮತ್ತು ಪಾಶ್ಚಿಮಾತ್ಯ ದೇಶಗಳು ಗುರಿಪಡಿಸಿದ ಒಂದು ನಿರ್ಬಂಧಿತ ದೇಶದೊಂದಿಗೆ (ಅದರ ಮೇಲಿನ ನಿರ್ಬಂಧಗಳ ಹೊರತಾಗಿಯೂ) ವ್ಯಾಪಾರವನ್ನು ಮುಂದುವರಿಸುವ ಯಾವುದೇ ದೇಶವು ಅಮೆರಿಕ ಪ್ರಸ್ತಾಪಿಸುತ್ತಿರುವ ಮಟ್ಟದ ದಂಡನಾತ್ಮಕ ಸುಂಕಗಳಿಗೆ ಗುರಿಯಾಗುವುದರಿಂದ, ಉಳಿದ ದೇಶಗಳು ತಮ್ಮ ವ್ಯಾಪಾರವನ್ನು ಯಾರೊಂದಿಗೆ ಮಾಡಬೇಕು ಎಂಬುದನ್ನು ಆಯ್ಕೆಮಾಡಿಕೊಳ್ಳುವಾಗ ಇಂತಹ ಬಲವಂತದ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆದ್ದರಿಂದ, ʼಮುಕ್ತ ವ್ಯಾಪಾರʼವು ಸೂಕ್ತವೆಂದು ನಂಬುವುದು ಸೈದ್ಧಾಂತಿಕವಾಗಿ ತಪ್ಪಾಗಿದೆ ಎಂಬುದು ಮಾತ್ರವೇ ಅಲ್ಲ, ನಿಜ-ರಾಜಕೀಯದ ಜಗತ್ತಿನಲ್ಲಿ ಅದು ಸಂಪೂರ್ಣವಾಗಿ ಅಸಂಬದ್ಧವೂ ಹೌದು.
ಅಮೆರಿಕದ ಕ್ರಮಗಳು ರೋಷ ಹುಟ್ಟಿಸುತ್ತಿದ್ದರೆ, ಅದು ಏಕಪಕ್ಷೀಯ ನಿರ್ಬಂಧಗಳನ್ನು ಹೇರುವುದರಿಂದ ಮಾತ್ರವೇ ಅಥವಾ ಅಂತಹ ನಿರ್ಬಂಧಗಳ ಕಾರಣದಿಂದ ದಂಡನಾತ್ಮಕ ಸುಂಕಗಳನ್ನು ವಿಧಿಸುವುದರಿಂದ ಮಾತ್ರವೇ ಅಲ್ಲ, ಅಂತಹ ನಿರ್ಬಂಧಗಳು ಮತ್ತು ಸುಂಕಗಳನ್ನು ಕಾರ್ಯಗತಗೊಳಿಸುವಾಗ ಅನುಸರಿಸುವ ಇಬ್ಬಂದಿ ನೀತಿಯೂ ರೋಷ ಹುಟ್ಟಿಸುತ್ತದೆ.
ಅಮೆರಿಕದ ಕ್ರಮಗಳು ರೋಷ ಹುಟ್ಟಿಸುತ್ತಿದ್ದರೆ, ಅದು ಏಕಪಕ್ಷೀಯ ನಿರ್ಬಂಧಗಳನ್ನು ಹೇರುವುದರಿಂದ ಮಾತ್ರವೇ ಅಥವಾ ಅಂತಹ ನಿರ್ಬಂಧಗಳ ಕಾರಣದಿಂದ ದಂಡನಾತ್ಮಕ ಸುಂಕಗಳನ್ನು ವಿಧಿಸುವುದರಿಂದ ಮಾತ್ರವೇ ಅಲ್ಲ, ಅಂತಹ ನಿರ್ಬಂಧಗಳು ಮತ್ತು ಸುಂಕಗಳನ್ನು ಕಾರ್ಯಗತಗೊಳಿಸುವಾಗ ಅನುಸರಿಸುವ ಇಬ್ಬಂದಿ ನೀತಿಯೂ ರೋಷ ಹುಟ್ಟಿಸುತ್ತದೆ. ತೈಲವನ್ನು ರಷ್ಯಾದಿಂದ ಮತ್ತು ಇರಾನ್‌ನಿಂದ ಖರೀದಿಸಿದ್ದಕ್ಕಾಗಿ ಭಾರತದಂತಹ ದೇಶಗಳನ್ನು ಅಮೆರಿಕ ದಂಡಿಸುತ್ತಿರುವಾಗಲೂ, ಸ್ವತಃ ಅಮೆರಿಕವೇ ರಷ್ಯಾದಿಂದ ನೈಸರ್ಗಿಕ ಯುರೇನಿಯಂ ಮತ್ತು ತುಸು-ಸಮೃದ್ಧಗೊಳಿಸಿದ ಯುರೇನಿಯಂ ಖರೀದಿಯನ್ನು ಮುಂದುವರಿಸಿದೆ. ಹಾಗೆ ನೋಡಿದರೆ, ರಷ್ಯಾದಿಂದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದಂತಹ ದೇಶಗಳ ಮೇಲೆ ದಂಡನಾತ್ಮಕ ಸುಂಕಗಳನ್ನು ವಿಧಿಸುವುದಕ್ಕಾಗಿ ಪ್ರಸ್ತಾಪಿಸಿರುವ ‘ಲಿಂಡ್ಸೆ ಒ. ಗ್ರಹಾಂ ಕಾಯಿದೆ’ಯಲ್ಲೇ, ರಷ್ಯಾದಿಂದ ಯುರೇನಿಯಂ ಖರೀದಿಸಲು ಅಮೆರಿಕಕ್ಕೆ ವಿನಾಯಿತಿ ನೀಡುವ ಅವಕಾಶವೂ ಇದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮೆರಿಕಕ್ಕೆ ಇತರ ದೇಶಗಳ ಹಿತಾಸಕ್ತಿಗಳು ಗೌಣವಾಗುತ್ತವೆ, ತನ್ನ ಹಿತಾಸಕ್ತಿಗಳಲ್ಲ!
ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ: ಕೇವಲ ಕೆಲವೇ ಕೆಲವು ತಿಂಗಳ ಹಿಂದೆ, ‘ಹೊರ್ಮುಜ್’ ಜಲಸಂಧಿಯನ್ನು ಇರಾನ್ ತಾತ್ಕಾಲಿಕವಾಗಿ ಬಂದ್ ಮಾಡಿದಾಗ, ಜಾಗತಿಕ ತೈಲ ಬೆಲೆಗಳನ್ನು ನಿಯಂತ್ರಣದಲ್ಲಿಡುವ ಸಲುವಾಗಿ ರಷ್ಯಾದ ತೈಲವನ್ನು ಭಾರತ ಖರೀದಿಸುವಂತೆ ಅಮೆರಿಕವೇ ಪ್ರೋತ್ಸಾಹಿಸಿರುವಾಗ, ಭಾರತದಂತಹ ದೇಶಗಳ ವಿರುದ್ಧ ಇಂತಹ ಕಠಿಣ ನಿಲುವನ್ನು ಈಗ ಅದು ಏಕೆ ತಳೆಯುತ್ತಿದೆ? ಟ್ರಂಪ್
ಇದನ್ನೂ ಓದಿ : ಜಿಲ್ಲಾ ಪಂಚಾಯಿತಿ ಚುನಾವಣೆ: 1,129 ಕ್ಷೇತ್ರಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ
ದುಬಾರಿ ತೈಲ ಖರೀದಿ- ಹಣದುಬ್ಬರ
ರಷ್ಯಾದ ಕಚ್ಚಾ ತೈಲವನ್ನು ಭಾರತ ಖರೀದಿಸದೇ ಇದ್ದರೆ, (ರಷ್ಯಾದ ಮೇಲಿನ ನಿರ್ಬಂಧಗಳಿಂದ ಉಂಟಾಗಬಹುದಾದ ಜಾಗತಿಕ ಕೊರತೆಯು) ಕಚ್ಚಾ ತೈಲದ ಬೆಲೆಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತವೂ ಖಂಡಿತವಾಗಿಯೂ ಏರಿಸುತ್ತದೆ. ತೈಲವನ್ನು ಕೊಳ್ಳುವಾಗ ಭಾರತವು ತೆರುವ ಬೆಲೆಗಳನ್ನು ಲೆಕ್ಕ ಹಾಕುವಾಗ ಹಲವಾರು ಅಂಶಗಳನ್ನು ನಾವು ಪರಿಗಣಿಸಬೇಕಾಗುತ್ತದೆ. ಮೊದಲನೆಯದಾಗಿ, ಭಾರತಕ್ಕೆ ರಷ್ಯಾ ಭೌಗೋಳಿಕವಾಗಿ ಹತ್ತಿರ ಇರುವುದರಿಂದಾಗಿ ತೈಲದ ಸಾರಿಗೆ ವೆಚ್ಚವು ಕಡಿಮೆಯಿರುತ್ತದೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಪ್ರಕಾರ, ಭಾರತವು ರಷ್ಯಾದ ತೈಲದ ಬದಲಿಗೆ ಅಮೆರಿಕದ ತೈಲವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಭಾರತಕ್ಕೆ ಅಮೆರಿಕ ಭೌಗೋಳಿಕವಾಗಿ ಬಹಳ ದೂರದಲ್ಲಿರುವುದರಿಂದ ತೈಲ ಸಾಗಣೆಗೆ ತಗಲುವ ಸಾರಿಗೆ ವೆಚ್ಚವೂ ಜಾಸ್ತಿ ಇರುತ್ತದೆ. ಎರಡನೆಯದಾಗಿ, ರಷ್ಯಾದ ಕಚ್ಚಾ ತೈಲವನ್ನು ಹೊರತೆಗೆಯುವ, ಸಂಸ್ಕರಿಸುವ ಮೂಲ ಹಾಗೂ ನಿರಂತರ ಉತ್ಪಾದನಾ ವೆಚ್ಚಗಳೊಂದಿಗೆ ಅಮೆರಿಕದ ಕಚ್ಚಾ ತೈಲವನ್ನು ಹೊರತೆಗೆಯುವ, ಸಂಸ್ಕರಿಸುವ ಮೂಲ ಹಾಗೂ ನಿರಂತರ ಉತ್ಪಾದನಾ ವೆಚ್ಚಗಳನ್ನು ಹೋಲಿಸಿದರೆ, ರಷ್ಯಾದ ವೆಚ್ಚಗಳು ಕಡಿಮೆ ಇವೆ ಎಂಬ ಅಂಶವೂ ಮುಖ್ಯವಾಗುತ್ತದೆ. ಕೊನೆಯದಾಗಿ, ನಿರ್ಬಂಧಗಳ ಕಾರಣದಿಂದಾಗಿ ರಷ್ಯಾವು ಭಾರತದಂತಹ ದೇಶಗಳಿಗೆ ಮಾರಾಟ ಮಾಡುತ್ತಿರುವ ಕಚ್ಚಾ ತೈಲದ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಈ ಎಲ್ಲ ಕಾರಣಗಳ ಒಟ್ಟು ಪರಿಣಾಮವಾಗಿ ರಷ್ಯಾದ ತೈಲ ಆಮದುಗಳು ಭಾರತಕ್ಕೆ ಅಪಾರ ಲಾಭದಾಯಕವಾಗಿವೆ. ರಷ್ಯಾದಿಂದ ತೈಲ ಕೊಳ್ಳುವುದನ್ನು ಭಾರತ ನಿಲ್ಲಿಸಿದರೆ, ಈ ಅಪಾರ ಲಾಭ ತಪ್ಪಿಹೋಗುತ್ತದೆ. ಮಾತ್ರವಲ್ಲ, ದುಬಾರಿ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಉಂಟಾಗುವ ವೆಚ್ಚ-ತಳ್ಳು ಕಾರಣಗಳಿಂದಾಗಿ ಭಾರತದಲ್ಲಿ ಹಣದುಬ್ಬರ ದರ ಗಣನೀಯವಾಗಿ ಏರಿಕೆಯಾಗುತ್ತದೆ. ಹಣದುಬ್ಬರದ ಈ ಏರಿಕೆಯು ವಿಶೇಷವಾಗಿ ಬಡ ಕುಟುಂಬಗಳ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಹಾಗೆ ನೋಡಿದರೆ, ಒಂದು ದೇಶದ ಬಡವರ ಹಿತಕ್ಕೆ ಧಕ್ಕೆ ತರುವ ಹಣದುಬ್ಬರವನ್ನು ಹೆಚ್ಚಿಸುವ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತೊಂದು ದೇಶವು ಒತ್ತಾಯಿಸುವ ಕಾನೂನುಬದ್ಧ ಅಥವಾ ನೈತಿಕ ಹಕ್ಕು ಜಗತ್ತಿನ ಯಾವುದೇ ದೇಶಕ್ಕೂ ಇಲ್ಲ. ಭಾರತದ ಬಡವರು ಸಂಕಷ್ಟಕ್ಕೀಡಾದರೆ ಅದರ ಬಗ್ಗೆ ಅಮೆರಿಕಕ್ಕೆ ಕಾಳಜಿ ಇಲ್ಲದಿರಬಹುದು, ಆದರೆ ಅಂತಹ ಸಂಕಷ್ಟವನ್ನು ತಡೆಗಟ್ಟುವ ಜವಾಬ್ದಾರಿ ಭಾರತದ ಸರ್ಕಾರದ ಮೇಲೆ ಇದ್ದೇ ಇದೆ. ಟ್ರಂಪ್
ಒಂದು ದೇಶದ ಬಡವರ ಹಿತಕ್ಕೆ ಧಕ್ಕೆ ತರುವ ಹಣದುಬ್ಬರವನ್ನು ಹೆಚ್ಚಿಸುವ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತೊಂದು ದೇಶವು ಒತ್ತಾಯಿಸುವ ಕಾನೂನುಬದ್ಧ ಅಥವಾ ನೈತಿಕ ಹಕ್ಕು ಜಗತ್ತಿನ ಯಾವುದೇ ದೇಶಕ್ಕೂ ಇಲ್ಲ. ಭಾರತದ ಬಡವರು ಸಂಕಷ್ಟಕ್ಕೀಡಾದರೆ ಅದರ ಬಗ್ಗೆ ಅಮೆರಿಕಕ್ಕೆ ಕಾಳಜಿ ಇಲ್ಲದಿರಬಹುದು, ಆದರೆ ಅಂತಹ ಸಂಕಷ್ಟವನ್ನು ತಡೆಗಟ್ಟುವ ಜವಾಬ್ದಾರಿ ಭಾರತದ ಸರ್ಕಾರದ ಮೇಲೆ ಇದ್ದೇ ಇದೆ.
ಈ ಸನ್ನಿವೇಶದಲ್ಲಿ ಅಮೆರಿಕದ ಅರ್ಥವ್ಯವಸ್ಥೆಯೂ ಸೇರಿದಂತೆ, ಇಡೀ ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅಮೆರಿಕವು ನಿರ್ಲಕ್ಷ್ಯ ತಳೆಯುವುದು ಸಾಧ್ಯವಿಲ್ಲ. ಹಾರ್ಮುಜ್ ಜಲಸಂಧಿಯನ್ನು ಮತ್ತೊಮ್ಮೆ ಮುಚ್ಚಿರುವುದರಿಂದ ಮತ್ತು ಪಶ್ಚಿಮ ಏಷ್ಯಾದ ತೈಲ ಸಾಗಣೆಯ ಪರ್ಯಾಯ ಮಾರ್ಗದ ಪ್ರಮುಖ ತಾಣವಾಗಿರುವ ಬಾಬ್-ಎಲ್-ಮಂಡೇಬ್ ಪ್ರದೇಶವು ಹೌತಿ ಬಂಡುಕೋರರ ನಿಯಂತ್ರಣಕ್ಕೆ ಒಳಪಟ್ಟಿರುವ ಕಾರಣದಿಂದ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ತೈಲದ ಕೊರತೆಯು ಒಂದು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿರುವ ತೈಲ ಪಂಪಿಂಗ್ ಸ್ಟೇಷನ್‌ಗೆ ಹಾನಿಯುಂಟುಮಾಡಿದ ಡ್ರೋನ್ ದಾಳಿಗಳ ನಂತರ ಸೌದಿ ಅರೇಬಿಯಾ ತನ್ನ ಪೂರ್ವ-ಪಶ್ಚಿಮ ಪೈಪ್‌ಲೈನ್‌ಅನ್ನು ಸ್ಥಗಿತಗೊಳಿಸಿರುವುದರಿಂದ ಈ ಸಮಸ್ಯೆಯು ಮತ್ತಷ್ಟು ಉಲ್ಬಣಗೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾದ ಕೊರತೆಯು ಬ್ರೆಂಟ್ ಕಚ್ಚಾ ತೈಲದ ಬೆಲೆಯನ್ನು ಸೆಪ್ಟೆಂಬರ್ 10 ರಂದು 105 ಡಾಲರ್‌ಗಳಿಗಿಂತ ಮೇಲೆ ಹೋಗುವಂತೆ ಮಾಡಿತ್ತು, ಮತ್ತು ಅಂದಿನಿಂದಲೂ ತೈಲದ ಬೆಲೆ ಅದರ ಆಸುಪಾಸಿನಲ್ಲೇ ಮುಂದುವರಿದಿದೆ. ಭಾರತ ಮತ್ತು ಚೀನಾದಂತಹ ದೇಶಗಳನ್ನು ರಷ್ಯಾದ ಕಚ್ಚಾ ತೈಲವನ್ನು ಕೊಳ್ಳದಂತೆ ತಡೆದರೆ, ಕಚ್ಚಾ ತೈಲದ ಜಾಗತಿಕ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ರಷ್ಯಾದ ತೈಲವನ್ನು ಕೊಳ್ಳಲು ಸಾಧ್ಯವಿರುವ ಪರಿಸ್ಥಿತಿಯಲ್ಲೇ ತೈಲ ಬೆಲೆಗಳು ಒಂದು ತೀವ್ರ ಏರಿಕೆಯನ್ನು ಕಂಡಿವೆ. ಇನ್ನು ರಷ್ಯಾದ ತೈಲವನ್ನು ಕೊಳ್ಳದಂತೆ ತಡೆದರೆ, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ.
ಹಣದುಬ್ಬರದಿಂದ ಕೂಡಿ ಆರ್ಥಿಕ ಹಿಂಜರಿತ
ಈ ಪರಿಸ್ಥಿತಿಯು ಮೊದಲ ತೈಲ ಬಿಕ್ಕಟ್ಟಿನಿಂದ 1973ರಲ್ಲಿ ಉಂಟಾದ ರೀತಿಯ ಜಾಗತಿಕ ‘ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತ’ ಉಂಟುಮಾಡುವ ಒಂದು ಖಚಿತ ಹಾದಿಯಾಗಿದೆ. ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗುವ ಸಮಗ್ರ ಕೊರತೆಯನ್ನು ಅಮೆರಿಕದ ಅಧಿಕ ಪೂರೈಕೆಯ ಮೂಲಕ ಭಾಗಶಃ ಅಥವಾ ಪೂರ್ಣವಾಗಿ ಸರಿದೂಗಿಸುವುದು ಸಾಧ್ಯವಿದೆ ಎಂಬುದು ನಿಜ. ಆದರೆ, ಈಗಾಗಲೇ ಚರ್ಚಿಸಿದ ಹಾಗೆ ಈ ಕ್ರಮವು ಜಾಗತಿಕ ತೈಲ ಬೆಲೆ ಏರಿಕೆಯನ್ನು ತಡೆಯಲಾರದು. ನಿರ್ಬಂಧಗಳ ಕಾರಣದಿಂದಾಗಿ ರಷ್ಯಾ ಪೂರೈಸಲು ಸಾಧ್ಯವಾಗದಿರುವ ಕಾರಣದಿಂದ ಅದು ಪೂರೈಸುತ್ತಿದ್ದಷ್ಟು ಪ್ರಮಾಣದ ತೈಲವನ್ನು ಒಂದು ವೇಳೆ ಅಮೆರಿಕವೇ ಪೂರೈಸಿದರೂ ಸಹ, ಅದರ ತೈಲದ ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ತೈಲವು ಕೊಳ್ಳುವವರಿಗೆ ದುಬಾರಿಯಾಗಿಯೇ ಪರಿಣಮಿಸುತ್ತದೆ. ಮಾತ್ರವಲ್ಲ, ತೈಲದ ಬೆಲೆ ಎಷ್ಟರ ಮಟ್ಟಿಗೆ ಏರಿಕೆ ಆಗುತ್ತದೆಯೋ ಅಷ್ಟರ ಮಟ್ಟಿಗೆ ಜಗತ್ತಿನಲ್ಲಿ ತೈಲೇತರ ಸರಕುಗಳಿಗೆ ಬೇಡಿಕೆ ಇಳಿಕೆಯಾಗುತ್ತದೆ.
1973ರಲ್ಲಿ ಉಂಟಾದ ಮೊದಲ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ಸಂಭವಿಸಿದ ರೀತಿಯಲ್ಲಿ, ರಷ್ಯಾದ ತೈಲದ ಮೇಲಿನ ನಿರ್ಬಂಧಗಳ ಅನಿವಾರ್ಯ ಪರಿಣಾಮವಾಗಿ ‘ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತ’ ಉಂಟಾಗುತ್ತದೆ.
ಈ ಪರಿಸ್ಥಿತಿಯಲ್ಲಿ ತೈಲೇತರ ಸರಕುಗಳಿಗೆ ಖಾಸಗಿ ವಲಯದಲ್ಲಿ ಉಂಟಾಗುವ ಬೇಡಿಕೆಯ ಈ ಕುಸಿತವನ್ನು ಸರಿದೂಗಿಸುವ ಸಲುವಾಗಿ ಸರ್ಕಾರವು ವಿತ್ತೀಯ ಕೊರತೆಯ ಮೂಲಕ ತನ್ನ ಖರ್ಚು ವೆಚ್ಚಗಳನ್ನು ಹೆಚ್ಚಿಸಿದರೆ, ಆಗ ಆರ್ಥಿಕ ಹಿಂಜರಿತ ಉಂಟಾಗಲು ಯಾವುದೇ ಕಾರಣವಿರುವುದಿಲ್ಲ. ಆದರೆ, ಇಂತಹ ಕ್ರಮವನ್ನು ಯಾವ ಸರಕಾರವಾದರೂ ಕೈಗೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಏಕೆಂದರೆ ಹಣದುಬ್ಬರ ಏರಿಕೆಯಾದಾಗ ಅದನ್ನು ಪರಿಹರಿಸಲು ಸಾಮಾನ್ಯವಾಗಿ ಸರಕಾರಗಳಿಗೆ ನೀಡುವ ಸಲಹೆಯೆಂದರೆ, ‘ಮಿತವ್ಯಯ’ದ ಕ್ರಮಗಳನ್ನು ಅನುಸರಿಸುವುದು. ಹಾಗಾಗಿ, 1973ರಲ್ಲಿ ಉಂಟಾದ ಮೊದಲ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ಸಂಭವಿಸಿದ ರೀತಿಯಲ್ಲಿ, ರಷ್ಯಾದ ತೈಲದ ಮೇಲಿನ ನಿರ್ಬಂಧಗಳ ಅನಿವಾರ್ಯ ಪರಿಣಾಮವಾಗಿ ‘ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತ’ (inflationary recession) ಉಂಟಾಗುತ್ತದೆ.
ಆದರೆ, ಅಮೆರಿಕದ ಮೇಲೂ ಪರಿಣಾಮ ಬೀರುವಂತಹ ಜಾಗತಿಕ ಹಣದುಬ್ಬರದಿಂದ ಕೂಡಿದ ಆರ್ಥಿಕ ಹಿಂಜರಿತದ ಅಪಾಯವನ್ನು ಡೊನಾಲ್ಡ್ ಟ್ರಂಪ್ ಖಂಡಿತವಾಗಿಯೂ ಮೈಮೇಲೆ ಎಳೆದುಕೊಳ್ಳುವುದಿಲ್ಲ. ಅಷ್ಟಕ್ಕೂ ಅಮೆರಿಕದ ಚುನಾವಣೆಗಳು ಬಹಳ ಹತ್ತಿರದಲ್ಲಿರುವಾಗ ಅಂತಹ ಕೆಲಸವನ್ನು ಅವರು ಖಂಡಿತವಾಗಿಯೂ ಮಾಡುವುದಿಲ್ಲ. ಹೀಗಾಗಿ ನಾವು ಮತ್ತೆ ಅದೇ ಪ್ರಶ್ನೆಗೆ ಬರುತ್ತೇವೆ: ನಿರ್ದಿಷ್ಟವಾಗಿ ಇಂದಿನ ದಿನಮಾನಗಳಲ್ಲಿ ಲಿಂಡ್ಸೆ ಒ. ಗ್ರಹಾಂ ಮಸೂದೆಯ ಉದ್ದೇಶವೇನು?
ಪುಕ್ಕಲುತನದ ಪ್ರವೃತ್ತಿಯನ್ನು ಬಿಡಬೇಕು
ಈ ಪ್ರಶ್ನೆಗೆ ಸಂಭವನೀಯವಾದ ಒಂದು ಉತ್ತರವೆಂದರೆ, ಇದು ಅಮೆರಿಕದ ಸಂಸತ್ತಿನ ಉಭಯ ಸದನಗಳ ಬೆಂಬಲದೊಂದಿಗೆ ಪೂರ್ಣ ಅಧಿಕಾರವನ್ನು (carte blanche) ಟ್ರಂಪ್ ಅವರಿಗೆ ನೀಡುವ ಒಂದು ಶಾಸನವಾಗಿದೆ. ಈ ಶಾಸನದ ಮೂಲಕ ಅವರು ಇತರ ದೇಶಗಳನ್ನು ಅಮೆರಿಕದ ಆದೇಶಗಳಿಗೆ ಬದ್ಧರಾಗುವಂತೆ ಒತ್ತಡ ಹೇರಬಹುದು – ಕೇವಲ ರಷ್ಯಾದ ತೈಲವನ್ನು ಖರೀದಿಸುವ ವಿಷಯದಲ್ಲಿ ಮಾತ್ರವಲ್ಲದೆ, ಇತರ ಎಲ್ಲ ವಿಷಯಗಳಲ್ಲೂ ಸಹ. “ನಾವು ಹೇಳಿದಂತೆ ನೀವು ಕೇಳಿ, ಇಲ್ಲದಿದ್ದರೆ ನಿಮ್ಮ ಸರಕುಗಳ ಮೇಲೆ ಶೇ. 100 ರಷ್ಟು ಸುಂಕವನ್ನು ನಾವು ವಿಧಿಸುತ್ತೇವೆ” ಎಂಬ ಬೆದರಿಕೆಯನ್ನು ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಒಡ್ಡಲಾಗುತ್ತದೆ.
ಈ ಬೆದರಿಕೆಯ ವಿಷಯದಲ್ಲಿ ಭಾರತದ ನಿಲುವಿನ ಬಗ್ಗೆ ಹೇಳುವುದಾದರೆ, ಅಮೆರಿಕದ ನ್ಯಾಯಾಲಯವೊಂದು ಸುಂಕಗಳ ಸಂಬಂಧವಾಗಿ ಟ್ರಂಪ್ ಅವರ ಅಧಿಕಾರ ವ್ಯಾಪ್ತಿಯ ವಿರುದ್ಧ ತೀರ್ಪು ನೀಡುವ ಮೊದಲು ಒಂದು “ಅಸಮಾನ” ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು ಮತ್ತು ಮರು-ಸಮಾಲೋಚನೆ ನಡೆಸಲಾದ ಈ ಒಪ್ಪಂದವು ಇನ್ನೂ ಅಂತಿಮಗೊಂಡಿಲ್ಲ. ಈ ಪರಿಸ್ಥಿತಿಯಲ್ಲಿ, ಹಳೆಯ “ಅಸಮಾನ” ಒಪ್ಪಂದದ ಹೊಸ ಆವೃತ್ತಿಗೆ ಸಹಿ ಹಾಕುವಂತೆ ಭಾರತವನ್ನು ಒತ್ತಾಯಿಸಲು ಲಿಂಡ್ಸೆ ಒ. ಗ್ರಹಾಂ ಅವರ ಶಾಸನವನ್ನು ಬಳಸಲಾಗುತ್ತದೆ. ಇದೇ ರೀತಿಯ ವಿಷಯಗಳಲ್ಲಿ ಅಥವಾ ಬೇರೆ ಕೆಲವು ವಿಷಯಗಳಲ್ಲಿ ಅಮೆರಿಕವು ಒತ್ತಡ ಹೇರ ಬಯಸುವ ಇತರ ದೇಶಗಳ ವಿರುದ್ಧವೂ ಇದೇ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಲಿಂಡ್ಸೆ ಒ. ಗ್ರಹಾಂ ಶಾಸನವು ಅಮೆರಿಕದ ಆದೇಶಗಳನ್ನು ಒಪ್ಪಿಕೊಳ್ಳುವಂತೆ ಉಳಿದ ದೇಶಗಳ ಮೇಲೆ ಒತ್ತಡ ಹೇರಲು ಟ್ರಂಪ್ ಗೆ ಅಧಿಕಾರ ನೀಡುವ ಒಂದು ಸಾಧನವಾಗಿದೆ.
ಆದ್ದರಿಂದ, ಈ ರೀತಿಯ ದಬ್ಬಾಳಿಕೆಯ ವಿರುದ್ಧ ಭಾರತ ಸರ್ಕಾರವು ದೃಢವಾಗಿ ನಿಲ್ಲುವುದು ಅಗತ್ಯವಾಗುತ್ತದೆ. ಅಮೆರಿಕದೊಂದಿಗೆ ಸಂಬಂಧಿಸಿದ ಸಮಸ್ಯೆಗಳ ವಿಷಯಗಳಲ್ಲಿ ಎನ್‌ಡಿಎ ಸರ್ಕಾರವು ಸಾಮಾನ್ಯವಾಗಿ ಹೊಂದಿರುವ ಪುಕ್ಕಲುತನದ ಪ್ರವೃತ್ತಿಯನ್ನು ಅದು ಪ್ರದರ್ಶಿಸಬಾರದು. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸಲಾಗುವುದು ಎಂಬ ಬೆದರಿಕೆಗೆ ಮಣಿಯದಿದ್ದರೆ ಏನಾದೀತು ಎಂಬ ಆತಂಕದಿಂದ ದೇಶದ ಹಿತಾಸಕ್ತಿಗಳನ್ನು ಬಲಿಗೊಡಬಾರದು. ಭಾರತ ದೃಢವಾಗಿ ನಿಲ್ಲಬೇಕು ಮತ್ತು ಅಮೆರಿಕದ ಗೊಡ್ಡು ಬೆದರಿಕೆಯ ಪೊಳ್ಳುತನವನ್ನು ಬಯಲುಮಾಡಬೇಕು. ಟ್ರಂಪ್
(ಶೀರ್ಷಿಕೆ ಚಿತ್ರ ಎಐ ಆಧಾರಿತ)
ಇದನ್ನೂ ನೋಡಿ : LIVE : ಗ್ಯಾನೇಶ್ ಕುಮಾರ್ ವಜಾ, SIR ರದ್ದತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಾಗೂ ರಾಜ್ಯಮಟ್ಟದ SIR ಜನತಾ ನ್ಯಾಯಾಲಯ
