ಲಕ್ನೋ: ”ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು, ಇದರಿಂದ ಅತ್ಯಾಚಾರಗಳು ಸಂಭವಿಸುತ್ತವೆ” ಎಂಬ ವಿವಾದಾತ್ಮಕ ಹೇಳಿಕೆಯನ್ನು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ನೀಡಿದ್ದಾರೆ.
ಅಲಿಗಢ ಜಿಲ್ಲೆಯಲ್ಲಿ ಮಹಿಳೆಗೆ ಸಂಬಂಧಿಸಿದ ಒಂದು ದೂರಿನ ವಿಚಾರಣೆ ಸಂದರ್ಭದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
“ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು. ಹುಡುಗಿಯರು ಹುಡುಗರೊಂದಿಗೆ ಗಂಟೆಗಟ್ಟಲೆ ಫೋನ್‌ಗಳಲ್ಲಿ ಮಾತನಾಡುತ್ತಾರೆ. ಬಳಿಕ ಹುಡುಗರೊಂದಿಗೆ ಓಡಿಹೋಗುತ್ತಾರೆ. ಅವರ ಫೋನ್‌ಗಳನ್ನು ಸಹ ಪರಿಶೀಲಿಸಲಾಗುವುದಿಲ್ಲ, ಇದರಿಂದ ಕುಟುಂಬ ಸದಸ್ಯರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ” ಎಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಹೇಳಿದ್ದಾರೆ.
ಇದನ್ನು ಓದಿ: ಕತ್ತಲ ಸುರಂಗದೊಳಗೊಂದು ಬೆಳಕಿನ ಕೋಲು : ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಾಲಯದ ಲಿಂಗಸಂವೇದನೆಯ ಕುರಿತ ಸುಪ್ರೀಂ ತೀರ್ಪು
”ಮಹಿಳೆಯರ ಮೇಲಿನ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಸಮಾಜವೇ ಗಂಭೀರವಾಗಿರಬೇಕು. ಪೋಷಕರು, ವಿಶೇಷವಾಗಿ ತಾಯಂದಿರು ದೊಡ್ಡ ಜವಾಬ್ದಾರಿಯನ್ನು ಹೊಂದಿರಬೇಕು. ತಮ್ಮ ಹೆಣ್ಣುಮಕ್ಕಳ ಮೇಲೆ ನಿಗಾವಹಿಸಬೇಕು. ಹೆಣ್ಣುಮಕ್ಕಳ ಬಗ್ಗೆ ಅಸಡ್ಡೆ ಹೊಂದಿದ್ದರೆ, ಮುಂದಿನ ಪರಿಣಾಮಕ್ಕೆ ತಾಯಂದಿರೇ ಜವಾಬ್ದಾರರು ಆಗಿರುತ್ತಾರೆ” ಎಂದು ಸಹ ತಿಳಿಸಿದ್ದಾರೆ.
ಈ ಹೇಳಿಕೆಗೆ ಬಗ್ಗೆ ವಿರೋಧ ವ್ಯಕ್ತಪಡಿಸಿದ ಆಯೋಗದ ಉಪಾಧ್ಯಕ್ಷೆ ಅಂಜು ಚೌಧರಿ, ”ಹೆಣ್ಣು ಮಕ್ಕಳಿಗೆ ಮೊಬೈಲ್ ಫೋನ್ ನೀಡದಿರುವುದೇ ಲೈಂಗಿಕ ದೌರ್ಜನ್ಯವನ್ನು ಕೊನೆಗೊಳಿಸಲು ಇರುವ ಉಪಾಯವಲ್ಲ, ಇದು ಪರಿಹಾರವೂ ಅಲ್ಲ” ಎಂದು ಹೇಳಿದರು.
ಈ ಹಿಂದೆಯೂ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಬಾದೌನ್ ಮತ್ತು ಉತ್ತರಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಸೇರಿದಂತೆ ಕೆಲವರು ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿದ್ದರು.