ಕಾಶ್ಮೀರ : ಬಾಲಕಿಯೊಬ್ಬಳು ರಿಪೋರ್ಟರ್ ಆಗುವ ಮೂಲಕ ತಮ್ಮ ಊರಿನ ರಸ್ತೆಯ ದುಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ. ವಕೀಲ ಮತ್ತು ಪತ್ರಕರ್ತ ಸಜ್ಜೀದ್ ಯುಸೂಫ್ ಶಾ ಈ ವಿಡಿಯೊವನ್ನು ಟ್ವೀಟ್ ಮಾಡಿ ಪುಟಾಣಿ ವರದಿಗಾರ್ತಿಯನ್ನು ಪ್ರೋತ್ಸಾಹಿಸಿದ್ದಾರೆ.
ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ತನ್ನೂರಿನ ರಸ್ತೆಯ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ, ಹಾಳಾದ ರಸ್ತೆಯನ್ನು ತೋರಿಸಿ ಮಾತನಾಡಿ ಇಷ್ಟು ಕೆಟ್ಟ ರಸ್ತೆ ಇರುವುದರಿಂದ ಸಂಬಂಧಿಕರು ಮನೆಗೆ ಬರುತ್ತಿಲ್ಲ, ನಮಗೂ ನಡೆದಾಡಲು ಕಷ್ಟವಾಗುತ್ತಿದೆ. ನೋಡಿ ಎಷ್ಟು ಕಸ ಮತ್ತು ಕೆಸರು ತುಂಬಿಕೊಂಡಿದೆ ಎಂದು ತೋರಿಸುತ್ತಾಳೆ. 2 ನಿಮಿಷದವರೆಗೆ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕೆಸರು ತುಂಬಿದ ರಸ್ತೆಯಲ್ಲಿ ಓಡಾಡಿ ರಸ್ತೆ ಹದಗೆಟ್ಟ ಬಗ್ಗೆ ಅಲ್ಲಿಯ ಜನರು ಸಂಚರಿಸಲು ಕಷ್ಟಪಡುತ್ತಿರುವ ಬಗ್ಗೆ ವಿವರಿಸಿದ್ದಾಳೆ. ಅಲ್ಲದೇ ಅಲ್ಲಿ ಹಾಕಿರುವ ಕಸಗಳನ್ನು ನೋಡಿ ಕೋಪಗೊಂಡು ಜನರೂ ಕೂಡ ಎಷ್ಟು ಕೊಳಕು ಮನಸ್ಥಿತಿಯವರಾಗಿದ್ದಾರೆ ಎಂದು ಕೂಗಿದ್ದಾಳೆ.
ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಹಿಮ ಮಳೆಗೆ ರಸ್ತೆಗಳು ಹದಗೆಟ್ಟಿವೆ. ರಸ್ತೆ ಮಧ್ಯೆ ಗುಂಡಿಗಳಾಗಿ ನೀರು ನಿಂತು ಜನ ಓಡಾಡಲೂ ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಬಾಲಕಿಯೊಬ್ಬಳು ರಿಪೋರ್ಟರ್ ಆಗುವ ಮೂಲಕ ತಮ್ಮ ಊರಿನ ರಸ್ತೆಯ ದುಸ್ಥಿತಿಯನ್ನು ತೆರೆದಿಟ್ಟಿದ್ದಾಳೆ.
ಗುಲಾಬಿ ಬಣ್ಣದ ಜಾಕೆಟ್ ಧರಿಸಿರುವ ಲಗುಬಗೆಯಿಂದ ಓಡಾಡುತ್ತಾ, ಕೆಸರು ಬಿದ್ದು ಗದ್ದೆಯಂತಾಗಿರುವ ರಸ್ತೆಗಳ ಪರಿಸ್ಥಿತಿ ಕುರಿತು ವಿವರಿಸಿರುವ ಪುಟಾಣಿ ರಿಪೋರ್ಟ್‌ರ್ ವಿಡಿಯೋದ ಕೊನೆಯಲ್ಲಿ ತನ್ನ ವಿಡಿಯೋವನ್ನು ಲೈಕ್, ಶೇರ್ ಮಾಡಿ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುವಂತೆ ಕೇಳಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆಗೊಂಡ ವಿಡಿಯೋ ಲಕ್ಷಾಂತರ ಬಾರಿ ರೀ ಶೇರ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳು ಕೂಡ ತಮ್ಮ ಕ್ರಿಯೇವಿಟಿಯನ್ನು ಬಳಸಿಕೊಂಡು ಸಮಾಜಿಕ ಕೆಲಸಗಳಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಹೋಮ್ ವರ್ಕ್ ಹೆಚ್ಚಾಗಿ ಕೊಡುತ್ತಾರೆ ಎಂದು ಪುಟಾಣಿ ಬಾಲಕಿಯೊಬ್ಬಳು ಪ್ರಧಾನಿ ಮೋದಿಯವರಿಗೆ ವಡಿಯೊ ಸಂದೇಶ ಕಳುಹಿಸಿದ್ದಳು. ನನಗೆ ರೆಸ್ಪೆಕ್ಟ್ ಕೊಡಿ ಎಂದು ಪುಟಾಣಿ ಬಾಲಕನೋರ್ವ ಟೀಚರ್ ಗೆ ಹೇಳುತ್ತಿದ್ದ ವಿಡಿಯೋ ಕೂಡಾ ವೈರಲ್ ಆಗಿತ್ತ. ಈಗ ಈ ಪುಟ್ಟ ಬಾಲಕಿ ಮಾಡಿದ ವರದಿಗೆ ಜನ ಶಹಬ್ಬಾಶ್ ಹೇಳುತ್ತಿದ್ದಾರೆ.