ಗಿಗ್ ಕೆಲಸಗಾರರಿಗೆ ಬೇಕಿದೆ ಕಾನೂನು ಹಕ್ಕುಗಳು ಮತ್ತು ರಕ್ಷಣೆ – ಅಲಂಕಾರಿಕ ನಾಮಧೇಯಗಳಲ್ಲ

(ಮೂಲ ಲೇಖನ: ನ್ಯೂಸ್‍ಕ್ಲಿಕ್ , ಆಗಸ್ಟ್ 8,)

ಕನ್ನಡಕ್ಕೆ: ಜಿ .ಎಸ್‍.ಮಣಿ

ಇಂದಿನ ಹೊಸ ರೀತಿಯ ಉದ್ದಿಮೆಗಳಾದ ಸ್ವೀಗ್ಗಿ, ಜೋಮಾಟೊ, ಉಬರ್ ಇತ್ಯಾದಿಗಳಲ್ಲಿ ಕೆಲಸ ಮಾಡುವ ಜನರಿಗೆ ಪಾಲುದಾರರು,ಏಜೆಂಟರು ಕಪ್ತಾನರು ಮುಂತಾದ ಅಲಂಕಾರಿಕ ನಾಮಧೇಯಗಳನ್ನು ಕೊಟ್ಟು ಅವರನ್ನು ಕಾರ್ಮಿಕರಿಗೆ ದೊರೆಯುವ ಕಾನೂನಿನ ರಕ್ಷಣೆಯಿಂದ ವಂಚಿತಗೊಳಿಸಲಾಗುತ್ತಿದೆ. ಆದರೆ ಅವರ ಬದುಕು ಮತ್ತು ಬದುಕಿನ ಸಮಸ್ಯೆಗಳೂ ಸಾಮಾನ್ಯ ಕೆಲಸಗಾರರಂತೆಯೇ ಇವೆ. ಆದ್ದರಿಂದ ಅವರನ್ನೂ ಕೆಲಸಗಾರರು  ಎಂದು ಗುರುತಿಸಬೇಕಾಗಿದೆ, ಮತ್ತು ಈಗಾಗಲೇ  ಸರ್ವೋಚ್ಚ ನ್ಯಾಯಾಲಯದ ಹಲವು ತೀರ್ಪುಗಳು ಇದಕ್ಕೆ ಅನುವು ಮಾಡಿ ಕೊಟ್ಟಿವೆ ಎನ್ನುತ್ತಾರೆ ಬೆಂಗಳೂರಿನ ಸೈಂಟ್‍ ಜೊಸೆಫ್ಸ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುದೀಪ್‍ ಸುಧಾಕರನ್ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿ ತನ್ವಿ ಮಾಲ್ಪಾನಿ,ಈ ಲೇಖನದಲ್ಲಿ.

ಕಾನೂನಿನ ಚೌಕಟ್ಟಿನಡಿಯಲ್ಲಿ, ಒಬ್ಬ ವ್ಯಕ್ತಿಯು ಕೆಲವು ಹಕ್ಕುಗಳಿಗೆ ಅರ್ಹನಾಗಿದ್ದಾನೆಯೇ ಅಥವಾ ಕೆಲವು ಕರ್ತವ್ಯಗಳನ್ನು ನಿರ್ವಹಿಸಲು ಹೊಣೆಗಾರನಾಗಿದ್ದಾನೆಯೇ ಎಂಬುದನ್ನು ಆ ವ್ಯಕ್ತಿಯು ಸಂಬಂಧಪಟ್ಟ ಕಾನೂನು ವ್ಯಾಖ್ಯಾನದ ಗಡಿಯೊಳಗೆ ಬರುತ್ತಾನೆಯೇ ಎಂಬುದರಿಂದ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಯಾವುದೇ ಶಾಸನದಲ್ಲಿ ನಾಗರಿಕನಿಗೆ ಖಾತರಿಪಡಿಸಿದ ಹಕ್ಕನ್ನು ಕಲ್ಪಿಸಿಕೊಳ್ಳಿ. ಒಬ್ಬ ವ್ಯಕ್ತಿಯು ಅಂತಹ ಹಕ್ಕನ್ನು ಕೇಳಿಕೊಂಡು ಬಂದರೆ, ಅವನು ನಾಗರಿಕ ಎಂಬ ವ್ಯಾಖ್ಯಾನದೊಳಗೆ ಬರುತ್ತಾನೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿಗುತ್ತದೆ. ಆ ವ್ಯಕ್ತಿಯು ನಾಗರಿಕನ ವ್ಯಾಖ್ಯಾನದೊಳಗೆ ಬಂದರೆ ಮಾತ್ರ, ನಂತರದ ಪ್ರಶ್ನೆಗಳು ಪ್ರಸ್ತುತವಾಗುತ್ತವೆ.

ಭಾರತೀಯ ಕಾರ್ಮಿಕ ಕಾನೂನುಗಳ ಗಮನಾರ್ಹ ವೈಶಿಷ್ಟ್ಯವೆಂದರೆ ಇದರಲ್ಲಿ ಒಳಗೊಂಡವರ ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ರಕ್ಷಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ವ್ಯಾಖ್ಯಾನಗಳ ಪ್ರಮುಖ ಪಾತ್ರ. ಹೆಚ್ಚಿನ ಸಂದರ್ಭಗಳಲ್ಲಿ, ಹಕ್ಕುಗಳು ಮತ್ತು ಹೊಣೆಗಾರಿಕೆಗಳ ಅಂತಿಮ ನಿರ್ಣಯದಲ್ಲಿ ಕಾನೂನು ವ್ಯಾಖ್ಯಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

1947ರ ಕೈಗಾರಿಕಾ ವಿವಾದ (ID) ಕಾಯಿದೆಯಲ್ಲಿ ಇರುವಂತೆ ಕೆಲಸಗಾರ ಅಥವಾ ಉದ್ಯೋಗಿಯವ್ಯಾಖ್ಯಾನವು  ಪ್ರಮುಖ ವ್ಯಾಖ್ಯಾನಗಳಲ್ಲಿ ಒಂದಾಗಿದೆ. ಕೈಗಾರಿಕಾ ವಿವಾದ (ID)ಕಾಯಿದೆಯ ಸೆಕ್ಷನ್ 2(S) ಅಡಿಯಲ್ಲಿ ಈ ವ್ಯಾಖ್ಯಾನವು “ಕೆಲಸಗಾರ” ಎಂದೇ ಆಗಿದೆ. ಹೊಸ ಕಾರ್ಮಿಕ ಸಂಹಿತೆಗಳು ಸೇರಿದಂತೆ ಕಾರ್ಮಿಕ ಶಾಸನಗಳಲ್ಲಿ “ಉದ್ಯೋಗಿ” ಮತ್ತು “ಕಾರ್ಮಿಕ” ದಂತಹ ಇತರ ವ್ಯಾಖ್ಯಾನಗಳು ಈ ವ್ಯಾಖ್ಯಾನಕ್ಕೆ ಹೋಲುತ್ತವೆ. ಇದು ಈ ಕ್ಷೇತ್ರದಲ್ಲಿನ ಅತ್ಯಂತ ಹಳೆಯ ವ್ಯಾಖ್ಯಾನಗಳಲ್ಲಿ ಒಂದಾಗಿದೆ ಮತ್ತು ಸುಪ್ರೀಂ ಕೋರ್ಟ್ ನ್ಯಾಯಶಾಸ್ತ್ರವು ಪರಿಗಣಿಸಿರುವ ವ್ಯಾಖ್ಯಾನವು ದಶಕಗಳಲ್ಲಿ ರೂಪಗೊಂದು ಬಂದಿರುವ ವ್ಯಾಖ್ಯಾನವಾಗಿ ಅಸ್ತಿತ್ವದಲ್ಲಿದೆ. ಆದ್ದರಿಂದ, ಭಾರತದ ಕಾನೂನು ಚರ್ಚೆಗಳಲ್ಲಿ ಈ ವ್ಯಾಖ್ಯಾನವು ಕೆಲಸಗಾರ ಅಥವಾ ಉದ್ಯೋಗಿಯ ಕಾನೂನು ಪರಿಕಲ್ಪನೆಯ ಸುತ್ತ ಈ ಹಕ್ಕು ಬಾಧ್ಯತೆಗಳನ್ನು ಸೆರೆಹಿಡಿಯುತ್ತದೆ.

‘ಕೆಲಸಗಾರ’ನ ವ್ಯಾಖ್ಯಾನದ ವಿಕಾಸ

ಹೈಗಾರಿಕಾ ವಿವಾದಗಳ (ID) ಕಾನೂನು  ಅಡಿಯಲ್ಲಿ ವ್ಯಾಖ್ಯಾನಿಸಲಾದ ಉದ್ಯೋಗಿ-ಉದ್ಯೋಗದಾತ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಕೆಲವು ಕ್ರಾಂತಿಕಾರಿ ಕಾನೂನು ವ್ಯಾಖ್ಯಾನಗಳನ್ನು ಮಾಡಿದೆ. ಸಾಂಪ್ರದಾಯಿಕವಾಗಿ, ಈ ಸಂಬಂಧವನ್ನು ನಿಯಂತ್ರಣ ಮತ್ತು ಮೇಲ್ವಿಚಾರಣೆ ಎಂಬ ಕಾನೂನು ಪರೀಕ್ಷೆಯಿಂದ ನಿರ್ಧರಿಸಲಾಗುತ್ತದೆ. ಇದರರ್ಥ ಉದ್ಯೋಗದಾತನು ಉದ್ಯೋಗಿಯನ್ನು ನೇರವಾಗಿ ನಿಯಂತ್ರಿಸುತ್ತಾನೆ ಮತ್ತು ಮೇಲ್ವಿಚಾರಣೆ ಮಾಡುತ್ತಾನೆಯೇ ಎಂಬ ಪ್ರಶ್ನೆಯಿಂದ (ಮಾಲಿಕ-ಸೇವಕ ಸಂಬಂಧದಂತೆಯೇ)-ಅಂತಹ ಸಂಬಂಧದ ಅಸ್ತಿತ್ವವನ್ನು ಗುರುತಿಸುವ ಪರೀಕ್ಷೆಯಾಗಿದೆ.

ಸುಪ್ರೀಂ ಕೋರ್ಟ್‌ ಸಾಂಪ್ರದಾಯಿಕ ದೃಷ್ಟಿಕೋನದಿಂದ ಭಿನ್ನವಾಗಿ ಮಧ್ಯಪ್ರವೇಶ ಮಾಡಿದ ಉದಾಹರಣೆಯೆಂದರೆ, 1975ರ ಹುಸೇನಬಾಯಿ ಅಲತ್ ವಿರುದ್ಧ ಫ್ಯಾಕ್ಟರಿ ತೊಝಿಲಾಲಿ ಯೂನಿಯನ್ ಪ್ರಕರಣ.. ಈ ತೀರ್ಪಿನಲ್ಲಿ, ನ್ಯಾಯಮೂರ್ತಿ ಕೃಷ್ಣಯ್ಯರ್ ಅವರು ಕೆಲಸಗಾರನ ವ್ಯಾಖ್ಯಾನದಲ್ಲಿ ಕಾರ್ಮಿಕ ವರ್ಗದ ವಿವಿಧ ವಿಭಾಗಗಳನ್ನು ಒಳಗೊಳ್ಳಲು ಉದಾರ ದೃಷ್ಟಿಕೋನವನ್ನು ತೆಗೆದುಕೊಂಡರು. ಈ ಪ್ರಕರಣವು ಮಧ್ಯಂತರ ಗುತ್ತಿಗೆದಾರರ ಕೆಲಸ ಮಾಡುವ ಕಾರ್ಮಿಕರ ಉದ್ಯೋಗ ಸ್ಥಿತಿಗೆ ಸಂಬಂಧಿಸಿದೆ.

ಇದಲ್ಲದೆ, ಮಧ್ಯಂತರ ಗುತ್ತಿಗೆದಾರರೊಂದಿಗೆ ಕೆಲಸಗಾರನ ಸಂಬಂಧವು ತಕ್ಷಣದ್ದು ಮತ್ತು ನೇರವಾಗಿದ್ದರೂ, ನಿಜವಾದ ಉದ್ಯೋಗದಾತರನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಬಲವನ್ನು ಹೊಂದಿರುವುದಿಲ್ಲ. ಒಪ್ಪಂದದ ವ್ಯವಸ್ಥೆಗಳಿಂದಾಗಿ ಕಾರ್ಮಿಕರು ಈ ಗುತ್ತಿಗೆದಾರರೊಂದಿಗೆ ದಿನನಿತ್ಯದ ಆಧಾರದ ಮೇಲೆ ಸಂವಹನ ನಡೆಸುತ್ತಿದ್ದರೂ ಸಹ, ಕಾರ್ಮಿಕರ ಉದ್ಯೋಗದ ಪರಿಸ್ಥಿತಿಗಳಿಗೆ ಅವರನ್ನು ಜವಾಬ್ದಾರಿಯುತ ಪಕ್ಷವಾಗಿ ಸ್ಥಾಪಿಸಲು ಈ ಅಂಶವು ಸಾಕಾಗುವುದಿಲ್ಲ.

ನಿಜವಾದ ಉದ್ಯೋಗದಾತರನ್ನು ಖಚಿತಪಡಿಸಿಕೊಳ್ಳಲು, ಔಪಚಾರಿಕ ಒಪ್ಪಂದದ ವ್ಯವಸ್ಥೆಗಳ ಮುಸುಕನ್ನು ತೆಗೆದುಹಾಕುವ ಮತ್ತು ಉದ್ಯೋಗ ರಚನೆಯ ವಿಶಾಲ ಚಿತ್ರಣವನ್ನು ವಿಶ್ಲೇಷಿಸುವ ಅಗತ್ಯವಿದೆ ಎಂದು ನ್ಯಾಯಾಲಯವು ಸೂಚಿಸಿತು. ಮೇಲ್ನೋಟಕ್ಕೆಕಾಣುವುದನ್ನು ಮೀರಿ ಕಾರ್ಮಿಕರ ಉದ್ಯೋಗವನ್ನು ನಿಯಂತ್ರಿಸುವ ನಿಜವಾದ ಚಲನೆಯ ಸ್ವರೂಪವನ್ನು ಪರಿಶೀಲಿಸುವುದು ಅತ್ಯಗತ್ಯ. ಮಧ್ಯಂತರ ಗುತ್ತಿಗೆದಾರನ ಆಚೆಯ ಅಂತಿಮ ವ್ಯವಹಾರ ಘಟಕವು ಕಾರ್ಮಿಕರ ಜೀವನಾಧಾರ, ಕೌಶಲ್ಯ ಅಭಿವೃದ್ಧಿ ಮತ್ತು ಕೆಲಸದ ಅವಕಾಶಗಳ ಮೇಲೆ ಗಮನಾರ್ಹ ನಿಯಂತ್ರಣ ಮತ್ತು ಪ್ರಭಾವವನ್ನು ಹೊಂದಿದ್ದರೆ, ಅದೇ ನಿಜವಾದ ಉದ್ಯೋಗದಾತ, ಮಧ್ಯಂತರ ಗುತ್ತಿಗೆದಾರನಲ್ಲ, ಎಂಬುದು ಸ್ಪಷ್ಟವಾಗುತ್ತದೆ.

ಗಿಗ್‌ ಅಥವಾ ಪ್ಲಾಟ್‌ಫಾರ್ಮ್ ಕೆಲಸಗಾರರ ಸ್ಥಿತಿ

ಔಪಚಾರಿಕ ಒಪ್ಪಂದಗಳಿಲ್ಲದೆ ಬೇಡಿಕೆಯಿದ್ದರೆ ಕೆಲಸ ಎಂಬುದೇ ಮುಖ್ಯ ಲಕ್ಷಣವಾಗಿರುವ  ಗಿಗ್ ಆರ್ಥಿಕತೆಯು, ಉಬರ್, ಸ್ವಿಗ್ಗಿ, ಜೋಮಾಟೊ ಮತ್ತು ಇತರ ಅನೇಕ ವೇದಿಕೆ-ಆಧಾರಿತ ಕಂಪನಿಗಳ ಯಶಸ್ಸಿನೊಂದಿಗೆ ವೇಗವನ್ನು ಪಡೆದುಕೊಂಡಿದೆ. ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ 200 ಕೋಟಿಗಿಂತಲೂ  ಹೆಚ್ಚು ಜನರು ಜಾಗತಿಕ ಗಿಗ್ ಕಾರ್ಮಿಕ ಪಡೆಯ ಭಾಗವಾಗಿದ್ದಾರೆ. ಇದರಲ್ಲಿ  ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಗಿಗ್‍ ಕಾರ್ಮಿಕರ ಪ್ರಮಾಣವೇ ಹೆಚ್ಚು. ಭಾರತದ ಗಿಗ್ ಆರ್ಥಿಕತೆಯು 9 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ದೇಶದ ಒಟ್ಟುತ್ಪಾದನೆಗೆ ಸುಮಾರು 1.25%ದಷ್ಟು ಕೊಡುಗೆ ನೀಡುತ್ತದೆ

ಭಾರತದಲ್ಲಿನ ದೊಡ್ಡ ಗಿಗ್ ಉದ್ಯೋಗಿಗಳು ತಮ್ಮ ಕೆಲಸದ ಸ್ಥಳಕ್ಕೆ ಸಂಬಂಧಿಸಿದಂತೆ  ಕಡಿಮೆ ಆದಾಯ, ದೀರ್ಘಾವಧಿಯ ಕೆಲಸದ ಸಮಯ, ಸಾಮಾಜಿಕ ಭದ್ರತೆಯ ಕೊರತೆ ಇತ್ಯಾದಿ ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಕಾರ್ಮಿಕ ಪಡೆಯಲ್ಲಿ ಅವರ ಅಸ್ತಿತ್ವದ ಕೇಂದ್ರ ಪ್ರಶ್ನೆಯು ಅವರು ನೌಕರರೇ  ಅಥವಾ ಕೆಲಸಗಾರರೇ ಎಂಬ ಪ್ರಶ್ನೆಯ ಸುತ್ತ ಸುತ್ತುತ್ತದೆ.

ಇದನ್ನೂ ಓದಿ:ಬದಲಾಗುತ್ತಾ ಬೆಳೆದ ಮೃಣಾಲ್ ಸೇನ್

ಸಾಮಾಜಿಕ ಭದ್ರತೆ 2020 ರ ಪ್ರಸ್ತಾವಿತ ಕಾರ್ಮಿಕ ಸಂಹಿತೆಯಲ್ಲಿ ಈ ನಿಟ್ಟಿನಲ್ಲಿ ಒಂದು ಪ್ರಮುಖ ಪ್ರಯತ್ನವನ್ನು ಮಾಡಲಾಗಿದೆ.ಇದು ‘ಗಿಗ್ ವರ್ಕರ್’ ಅನ್ನು “ಉದ್ಯೋಗದಾತ-ಉದ್ಯೋಗಿ ಸಂಬಂದದ ಹೊರಗೆ ಕೆಲಸವನ್ನು ನಿರ್ವಹಿಸುವ ಅಥವಾ ಕೆಲಸದ ವ್ಯವಸ್ಥೆಯಲ್ಲಿ ಭಾಗವಹಿಸುವ ಮತ್ತು ಅಂತಹ ಚಟುವಟಿಕೆಗಳಿಂದ ಆದಾಯ ಗಳಿಸುವ ವ್ಯಕ್ತಿ” ಎಂದು ವ್ಯಾಖ್ಯಾನಿಸುತ್ತದೆ.

‘ಪ್ಲಾಟ್‌ಫಾರ್ಮ್’ ಅಥವಾ ‘ವೇದಿಕೆ’ಕೆಲಸ ಎಂಬುದನ್ನು “ಸಂಸ್ಥೆಗಳು ಅಥವಾ ವ್ಯಕ್ತಿಗಳು ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಅಥವಾ ನಿರ್ದಿಷ್ಟ ಸೇವೆಗಳನ್ನು ಒದಗಿಸಲು  ಅಥವಾ ಇತರ ಚಟುವಟಿಕೆಗಳಿಗೆ ಇತರ ಸಂಸ್ಥೆಗಳು ಅಥವಾ ವ್ಯಕ್ತಿಗಳನ್ನು ಪಡೆಯಲು ಆನ್‌ಲೈನ್ ವೇದಿಕೆಯನ್ನು ಬಳಸುವ ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿನ ಕೆಲಸದ ವ್ಯವಸ್ಥೆ” ಎಂದು ವ್ಯಾಖ್ಯಾನಿಸಲಾಗಿದೆ.

ಈ ಸಂಹಿತೆ, ವೇದಿಕೆಯ ಕೆಲಸಗಾರರನ್ನು ಒಳಗೊಂಡಂತೆ ಗಿಗ್ ಕೆಲಸಗಾರರ ಅಸ್ತಿತ್ವವನ್ನು ಅಂಗೀಕರಿಸುತ್ತದೆ. ಇದು ಉದ್ಯೋಗಿಗಳು ಮತ್ತು ಗಿಗ್ ಕೆಲಸಗಾರರ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಸ್ಥಾಪಿಸುತ್ತದೆ. ಉದ್ಯೋಗಿಗಳಿಗೆ, ಈ ಸಂಹಿತೆ ಗ್ರಾಚ್ಯುಟಿ, ಪರಿಹಾರ, ವಿಮೆ, ಭವಿಷ್ಯ ನಿಧಿ ಮತ್ತು ಹೆರಿಗೆ ಪ್ರಯೋಜನಗಳಂತಹ ವಿವಿಧ ಪ್ರಯೋಜನಗಳನ್ನು ಕಡ್ಡಾಯಗೊಳಿಸುತ್ತದೆ. ಆದರೆ, ಗಿಗ್ ಕೆಲಸಗಾರರ ವಿಷಯದಲ್ಲಿ, ಈ ಸಂಹಿತೆ ಸೂಕ್ತ ಸಾಮಾಜಿಕ ಭದ್ರತಾ ಸ್ಕೀಮುಗಳನ್ನು ರೂಪಿಸುವ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿಯೋಜಿಸುತ್ತದೆ. ಈ ಸ್ಕೀಮುಗಳ ಉದ್ದೇಶ ಜೀವನ ಮತ್ತು ವಿಕಲತೆಯಲ್ಲಿ ರಕ್ಷಣೆ, ಅಪಘಾತ ವಿಮೆ, ಆರೋಗ್ಯ ಮತ್ತು ಹೆರಿಗೆ ಪ್ರಯೋಜನಗಳು ಮತ್ತು ವೃದ್ಧಾಪ್ಯದಲ್ಲಿ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುವುದು.

ಈ ಸಂದರ್ಭದಲ್ಲಿ, ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಶಾಸ್ತ್ರದ ಸುದೀರ್ಘ ಇತಿಹಾಸವು ಅತ್ಯಂತ ಮಹತ್ವದ್ದಾಗಿದೆ. 1950 ರಿಂದ 21 ನೇ ಶತಮಾನದವರೆಗಿನ ಈ ವಿಕಾಸವನ್ನು ನಾವು ಪರಿಶೀಲನೆ ಮಾಡಿದರೆ, ನ್ಯಾಯಶಾಸ್ತ್ರದ ಪಥವು ಆದೇಶ-ವಿಧೇಯತೆಯ ಸಾಂಪ್ರದಾಯಿಕ ಕಲ್ಪನೆಯಿಂದ ಉದ್ಯೋಗಿ-ಉದ್ಯೋಗದಾತ ಸಂಬಂಧವನ್ನು ನಿರ್ಣಯಿಸಲು ಆರ್ಥಿಕ ನಿಯಂತ್ರಣದ ನಿರ್ಣಯದ ಪ್ರಶ್ನೆಯತ್ತ ತಿರುಗುತ್ತದೆ.

ಪಾಲುದಾರಿಕೆ, ಏಜೆನ್ಸಿ, ಕ್ಯಾಪ್ಟನ್ ಇತ್ಯಾದಿಗಳಂತಹ ವೇದಿಕೆಗಳು ಅಥವಾ ಪ್ಲಾಟ್‌ಫಾರ್ಮ್‌ಗಳು ನೀಡುವ ಅಲಂಕಾರಿಕ ನಾಮಧೇಯಗಳ ಮುಸುಕನ್ನು ನಾವು ಒಮ್ಮೆ ಸರಿಸಿದಾಗ, ಉದ್ಯೋಗದಾತರ ಮೇಲೆ ಪ್ಲಾಟ್‌ಫಾರ್ಮ್‌ಗಳಲ್ಲಿನ ಕಾರ್ಮಿಕರ ತಮ್ಮ ಆರ್ಥಿಕ ಅವಲಂಬನೆಯು ಪ್ರಕಟಗೊಳ್ಳುತ್ತದೆ. ಅಂತಹ ವಾಸ್ತವದಲ್ಲಿ, ಅಸ್ತಿತ್ವದಲ್ಲಿರುವ ನ್ಯಾಯಶಾಸ್ತ್ರದಲ್ಲಿ, ಕಾರ್ಮಿಕ ಕಾನೂನಿನ ಚೌಕಟ್ಟಿನಲ್ಲಿ ಗಿಗ್ ಕಾರ್ಮಿಕರಿಗೆ ಕಾರ್ಮಿಕರ ಸ್ಥಾನಮಾನವನ್ನು ನೀಡುವುದು ಅಸಮರ್ಥನೀಯವೇನೂ ಆಗುವುದಿಲ್ಲ. ಸರ್ಕಾರ ಮತ್ತು ಇತರರು ನಡೆಸಿರುವ ನಡೆದ ವಿವಿಧ ಅಧ್ಯಯನಗಳು ಈಗಾಗಲೇ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರ ಅಸಹನೀಯ ಕೆಲಸದ ಪರಿಸ್ಥಿತಿಗಳನ್ನು ಎತ್ತಿ ತೋರಿವೆ.‘ಕೆಲಸಗಾರ’ ಎಂಬುದನ್ನು ಹೇಗೆ ವ್ಯಾಖ್ಯಾನಿಸಬೇಕು ಎಂಬುದರ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪುಗಳು ಭಾರತದ ಕಾರ್ಮಿಕ ಕಾನೂನುಗಳಲ್ಲಿ ಗಿಗ್ ಕಾರ್ಮಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಕಾನೂನು ನೀತಿಗಳನ್ನು ರಚಿಸಲು ಪ್ರಮುಖ ಬೆಳಕು ಆಗಬಹುದು.

Donate Janashakthi Media

Leave a Reply

Your email address will not be published. Required fields are marked *