ವಿಜಯ್ ಪ್ರಶಾದ್ ಮತ್ತು ಅತುಲ್ ಚಂದ್ರ*
(ಅನುವಾದ : ವಸಂತರಾಜ ಎನ್.ಕೆ)
ಕೃಪೆ: ಪೀಪಲ್ಸ್ ಡಿಸ್ಪ್ಯಾಚ್, ಸೆಪ್ಟೆಂಬರ್ 11
ಯುವಕರು ನೇತೃತ್ವ ವಹಿಸಿದ ಬೃಹತ್ ಪ್ರತಿಭಟನೆಗಳ ನಡುವೆ ನೇಪಾಳದ ಪ್ರಧಾನ ಮಂತ್ರಿ ಕೆಪಿ ಓಲಿ ರಾಜೀನಾಮೆ ನೀಡಿದ ನಂತರ, ಈ ಬಿಕ್ಕಟ್ಟಿನ ಮೂಲದಲ್ಲಿರುವ ನೇಪಾಳದ ಸಂಕೀರ್ಣತೆಗಳನ್ನುಮತ್ತು ವಾಸ್ತವವನ್ನು ಸರಳೀಕರಿಸಿ ತಪ್ಪಾಗಿ ಪ್ರತಿನಿಧಿಸುವ ವಿವಿಧ ಕಥನಗಳು ಪ್ರಚಲಿತಕ್ಕೆ ಬಂದಿವೆ. ಒಂದು ಕಡೆ ಇದನ್ನು ‘ಜೆನ್-ಝೀ ಕ್ರಾಂತಿ ಎಂದರೆ, ಇನ್ನೊಂದು ಕಡೆ ಇದು ಯು.ಎಸ್ ನ ಪಿತೂರಿ ಎನ್ನಲಾಗುತ್ತಿದೆ. ಈ ಕಥನಗಳ ಆಂಶಿಕ ಸತ್ಯಗಳನ್ನು ಪ್ರಶ್ನಿಸಿ, ಅಲ್ಲಿನ ಸನ್ನಿವೇಶದ ಸಂಕೀರ್ಣ ವಾಸ್ತವದ ಆಧಾರದ ಮೇಲೆ ಹೀಗೇಕಾಯಿತು ಎಂಬುದರ ಬಗ್ಗೆ ಐದು ಪ್ರತಿಪಾದನೆಗಳನ್ನು ಮಾಡುವ ವಿಶ್ಲೇಷಣೆಯಿದು.
“ನಿಮ್ಮ ಮನೆ ಸ್ವಚ್ಛವಾಗಿಲ್ಲದಿದ್ದರೆ, ಇರುವೆಗಳು ಬಾಗಿಲಿನ ಮೂಲಕ ಒಳಗೆ ಬಂದು ಹಾವುಗಳನ್ನು ಆಕರ್ಷಿಸುತ್ತವೆ”
ನೇಪಾಳದಲ್ಲಿನ ಬಿಕ್ಕಟ್ಟು ಸೆಪ್ಟೆಂಬರ್ 9ರಂದು ತಾರಕಕ್ಕೇರಿ ಪ್ರಧಾನ ಮಂತ್ರಿ ಕೆಪಿ ಓಲಿ ಅವರ ನಡು-ಬಲಪಂಥೀಯ ಸರ್ಕಾರವು ಕುಸಿಯುವಂತೆ ಮಾಡಿತು. ಸೆಪ್ಟೆಂಬರ್ 4 ರಂದು ಸಾಮಾಜಿಕ ಮಾಧ್ಯಮಗಳ ಮೇಲೆ ನಿಬಂಧನೆ ಮತ್ತು ನಿಷೇಧ ಹೇರಿದ್ದು ಇದರ ತಕ್ಷಣದ ಕಾರಣವಾಗಿತ್ತು. ಈ ಕ್ರಮದ ವಿರುದ್ಥದ ಪ್ರತಿಭಟನೆಗಳನ್ನು ಪೊಲೀಸ್ ಗುಂಡು ಹಾರಿಸಿ ಎದುರಿಸಿದ್ದು, 19 ಪ್ರತಿಭಟನಕಾರರ ಸಾವಿಗೆ ಕಾರಣವಾಯಿತು. ಇದು ಪ್ರತಿಭಟನೆ ತೀಕ್ಷ್ಣವಾಗಲು ಕಾರಣವಾಗಿ, ರಾಜಕಾರಣಿಗಳ ಮನೆಗಳು ಮತ್ತು ರಾಷ್ಟ್ರೀಯ ಸಂಸತ್ ಭವನದ ಜೊತೆಗೆ ರಾಷ್ಟ್ರಪತಿ ಭವನದ ಮೇಲೆ ದಾಳಿಗಳಿಗೆ ದಾರಿ ಮಾಡಿಕೊಟ್ಟಿತು.
ಪ್ರಸ್ತುತ ಕೋಲಹಲದ ಕುರಿತು ಹಲವಾರು ಕಥನಗಳು ಪ್ರಚಲಿತವಾಗಿವೆ, ಆದರೆ ಅವುಗಳಲ್ಲಿ ಎರಡು ಪ್ರಬಲವಾಗಿವೆ :
1.ಆಡಳಿತದ ಸಾಂಸ್ಥಿಕ ವೈಫಲ್ಯ: ಹಲವು ವರ್ಷಗಳಿಂದ ನೆರವೇರದ ವಾಗ್ದಾನಗಳು, ಭ್ರಷ್ಟಾಚಾರ ಮತ್ತು ಅವಕಾಶವಾದಿ ಒಕ್ಕೂಟಗಳು, ಈ ಅಥವಾ ಆ ಪಕ್ಷಕ್ಕೆ ಮಾತ್ರವಲ್ಲ, ಬದಲಿಗೆ ಇಡೀ ವ್ಯವಸ್ಥೆಯ ಮೇಲೆ ಅಪನಂಬಿಕೆಯ ಬಿಕ್ಕಟ್ಟು ಉಂಟು ಮಾಡಿವೆ. ಪ್ರಸ್ತುತ ದಂಗೆಯನ್ನು ನಿರಂತರ ನಿರ್ಲಕ್ಷ್ಯ ಮಡುಗಟ್ಟಿ ಉಂಟಾದ ಜನತೆಯ ಪ್ರತಿಕ್ರಿಯೆ ಎಂದು ವಿವರಿಸಲಾಗಿದೆ.
2.ಬಣ್ಣದ ಕ್ರಾಂತಿ: ಪ್ರತಿಭಟನೆಗಳು ವಿದೇಶಿ ಶಕ್ತಿಗಳಿಂದದ ಯೋಜಿಸಲ್ಪಟ್ಟಿವೆ, ಹೆಚ್ಚಿನ ಆರೋಪಗಳು, 2015 ರಲ್ಲಿ ಸ್ಥಾಪಿತವಾದ ‘ಹಮಿ ನೇಪಾಳ’ಕ್ಕೆ ಯು.ಎಸ್ ಮತ್ತು ಯು.ಎಸ್ ಸಂಸತ್ತಿನ ನ್ಯಾಶನಲ್ ಎಂಡೌಮೆಂಟ್ ಫಾರ್ ಡೆಮೋಕ್ರಸಿ (NED) ನೀಡುವ ಅನುದಾನವನ್ನು ತೋರಿಸುತ್ತವೆ.
ಈ ಎರಡೂ ಕಥನಗಳು ನೇಪಾಳದಲ್ಲಿ ಈ ಬಿಕ್ಕಟ್ಟಿಗೆ ನಿಜವಾದ ಹೊಣೆಗಾರರು ಹೊಣೆಯಿಂದ ಜಾರಿಕೊಂಡು ಬೇರೆಯವರ ಮೇಲೆ – ಅದು ಹಸ್ತಕ್ಷೇಪ ಮಾಡುವ ಹೊರಗಿವರ ಮೇಲೋ ಅಥವಾ “ರಾಜಕೀಯ ವರ್ಗ”ದ ಅಸ್ಪಷ್ಟ ಕಲ್ಪನೆಯ ಮೇಲೋ ಆಗಿರಬಹುದು – ಹೊಣೆ ಹೊರಿಸುವುದನ್ನು ಸುಲಭವಾಗಿಸುತ್ತವೆ. ಈ ಕಥನಗಳಲ್ಲಿ ನೇಪಾಳದ ಕೆಳಗೆ ಅಡಗಿರುವ ಬೂರ್ಜ್ವಾ ವ್ಯವಸ್ಥೆ ಮತ್ತು ಅದರ ಈ ಸಮಸ್ಯೆಗಳ ಬಗ್ಗೆ ಚರ್ಚೆ ಇಲ್ಲ – ರಾಜಪ್ರಭುತ್ವದೊಂದಿಗೆ ನಿಕಟ ಸಂಬಂಧ ಹೊಂದಿರುವ ಕೆಲವರದ್ದೇ ಏಕಸ್ವಾಮ್ಯದ ಹಿಡಿತದಲ್ಲಿ ಭೂಮಿ, ಹಣಕಾಸು ಮತ್ತು ಸರ್ಕಾರಿ ಕಾಂಟ್ರಾಕ್ಟುಗಳು ಇರುವ ಒಂದು ಶತಮಾನದ ಕೃಪಾಪೋಷಿತ (ಪೆಟ್ರೋನೇಜ್) ಆರ್ಥಿಕತೆ; ವಲಸೆ ಕಾರ್ಮಿಕರ ರಫ್ತು ಮತ್ತು ಸಾಲದಿಂದ ನಡೆಯುವ ಮೂಲಸೌಕರ್ಯದ ಅಭಿವೃದ್ಧಿಯನ್ನು ಅವಲಂಬಿಸಿರುವ ಬೆಳವಣಿಗೆಯ ಮಾದರಿ. ಜನತೆಯ ಅಸಂತೃಪ್ತಿಯ ರಾಚನಿಕ ಮೂಲಗಳನ್ನು “ಭ್ರಷ್ಟಾಚಾರ” ಮತ್ತು “ಬಣ್ಣದ ಕ್ರಾಂತಿ” ಯಂತಹ ಸರಳ ಆದರೆ ಉತ್ತೇಜಕ ಪರಿಕಲ್ಪನೆಗಳಲ್ಲಿ ಸರಳೀಕರಿಸಲಾಗಿದೆ.
ಈ ಎರಡೂ ಕಥನಗಳು ಸಂಪೂರ್ಣವಾಗಿ ತಪ್ಪು ಅಲ್ಲ ಅಥವಾ ಸಂಪೂರ್ಣವಾಗಿ ಸರಿಯೂ ಅಲ್ಲ, ಆದರೆ ಭಾಗಶಃ ಸರಿಯಾಗಿವೆ ಮತ್ತು ಅವುಗಳ ಭಾಗಶಃ ಸ್ವರೂಪವು ತುಂಬಾ ದಾರಿತಪ್ಪಿಸುವಂತದ್ದು. ಈ ಲೇಖನವು ಆ ಭಾಗಶಃ ಸ್ವರೂಪವನ್ನು ಸರಿಪಡಿಸಲು ಸಾಧ್ಯವಿಲ್ಲ, ಆದರೆ ಚರ್ಚೆಗಾಗಿ ಕೆಲವು ಆಲೋಚನೆಗಳನ್ನು ನೀಡಲು ಉದ್ದೇಶಿಸಿದೆ. ಕೆಳಗಿನ ಐದು ಪ್ರತಿಪಾದನೆಗಳನ್ನು ನೇಪಾಳದ ಕುರಿತು ಮಾತ್ರವಲ್ಲದೆ, ಜಾಗತಿಕ ದಕ್ಷಿಣದ ಅನೇಕ ದೇಶಗಳ ದುರ್ದಶೆಯ ಕುರಿತು ನಡೆಯಬೇಕೆಂದು ನಾವು ನಿರೀಕ್ಷಿಸುವ ಚರ್ಚೆಯನ್ನು ರೂಪಿಸಲು ಮಾತ್ರ ಉದ್ದೇಶಿಸಲಾಗಿದೆ.

ಇದನ್ನೂ ಓದಿ : ನೇಪಾಳ – ಆದೊಂದು ಕ್ಷಿಪ್ರ ಕ್ರಾಂತಿಯೇ ?
1.ಸದವಕಾಶದ ಕೆಟ್ಟ ನಿರ್ವಹಣೆ.2015 ರಲ್ಲಿ ನೇಪಾಳದಲ್ಲಿ ಹೊಸ ಸಂವಿಧಾನ ಜಾರಿಗೆ ಬಂದ ನಂತರ, ಎಡಪಂಥೀಯರು ನೇಪಾಳಿಗರ ಸಾಮಾಜಿಕ ಸ್ಥಿತಿಯನ್ನು ಮುನ್ನಡೆಸುತ್ತಾರೆ ಎಂಬ ಅಪಾರ ಭರವಸೆ ಇತ್ತು. ಆದ್ದರಿಂದ, 2017 ರಲ್ಲಿ, ವಿವಿಧ ಕಮ್ಯುನಿಸ್ಟ್ ಪಕ್ಷಗಳು ರಾಷ್ಟ್ರೀಯ ಸಂಸತ್ತಿನಲ್ಲಿ 75% ಸ್ಥಾನಗಳನ್ನು ಗೆದ್ದವು. ಅದರ ಮರುವರ್ಷ, ದೊಡ್ಡ ಕಮ್ಯುನಿಸ್ಟ್ ಪಕ್ಷಗಳು ಒಂದಾಗಿ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು ರಚಿಸಿದವು. ಆದರೆ ಏಕೀಕರಣವು ಅಷ್ಟು ಆಳವಾಗಿರಲಿಲ್ಲ ಏಕೆಂದರೆ ಪಕ್ಷಗಳು ತಮ್ಮದೇ ಆದ ಸಂಘಟನಾ ರಚನೆಗಳು ಮತ್ತು ತಮ್ಮದೇ ಆದ ಕಾರ್ಯಕ್ರಮಗಳನ್ನು ಹೊಂದಿದ್ದವು ಮತ್ತು ನಿಜವಾಗಿಯೂ ಏಕೀಕೃತ ಪಕ್ಷವನ್ನು ರಚಿಸಲು ಸಾಧ್ಯವಾಗಲಿಲ್ಲ, ಆದರೆ ಪ್ರಧಾನವಾಗಿ ಏಕೀಕೃತ ಚುನಾವಣಾ ಗುಂಪನ್ನು ರಚಿಸಿದವು. ಕಮ್ಯುನಿಸ್ಟ್ ರಾಜಕೀಯ ಚಟುವಟಿಕೆಗಳಿಗೆ ಸಾಮಾನ್ಯ ಕಾರ್ಯಕ್ರಮದ ಕೊರತೆ, ಮತ್ತು ಪ್ರಭುತ್ವದ ಸಾಧನದ ಮೂಲಕ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಸಾಮಾನ್ಯ ಕಾರ್ಯಸೂಚಿಯ ಕೊರತೆಯು ಎಡಪಂಥಕ್ಕೆ ಒದಗಿದ ಅವಕಾಶವನ್ನು ಪೋಲು ಮಾಡಲು ಕಾರಣವಾಯಿತು.
ಏಕೀಕೃತ ಪಕ್ಷವು 2021 ರಲ್ಲಿ ವಿಭಜನೆಯಾಯಿತು, ಮತ್ತು ಅದರ ನಂತರ ವಿವಿಧ ಎಡಪಂಥೀಯ ಪಕ್ಷಗಳು ಅಧಿಕಾರದಲ್ಲಿ ಬಂದು ಹೋದವು, ಇದನ್ನು ಜನರು ವ್ಯಕ್ತಿತ್ವವಾದ ಮತ್ತು ಅವಕಾಶವಾದ ಎಂದು ನೋಡಿದರು. ಮಾವೋವಾದಿ ಕೇಂದ್ರದ ಗೃಹ ಮಂತ್ರಿ ನಾರಾಯಣ ಕಾಜಿ ಶ್ರೇಷ್ಠ (2023-2024) ತಮ್ಮ ಸ್ವಂತ ಪಕ್ಷದಲ್ಲಿನ ಭ್ರಷ್ಟಾಚಾರದ ಕ್ರಮಗಳನ್ನು ತನಿಖೆ ಮಾಡಲು ಪ್ರಭುತ್ವದ ಸಾಧನಗಳನ್ನು ಬಳಸಲು ಪ್ರಯತ್ನಿಸಿದಾಗ, ಅವರನ್ನು ಹುದ್ದೆಯಿಂದ ಹೊರಹಾಕಲಾಯಿತು. 2024ರಿಂದ, ನೇಪಾಳದ ಸರ್ಕಾರವು ಎಡಪಂಥೀಯರ ಬಲಪಂಥೀಯ ಭಾಗ (ಕೆ.ಪಿ. ಓಲಿ ನೇತೃತ್ವದಲ್ಲಿ) ಮತ್ತು ಬಲಪಂಥೀಯರ ಒಂದು ಭಾಗ (ನೇಪಾಳಿ ಕಾಂಗ್ರೆಸ್) ಅನ್ನು ಒಳಗೊಂಡಿತ್ತು, ಇದು ಅದನ್ನು ನಡು-ಬಲಪಂಥೀಯ ಸರ್ಕಾರವನ್ನಾಗಿ ಮಾಡಿತು.
1951ರ ಕ್ರಾಂತಿಯೊಂದಿಗೆ ಪ್ರಾರಂಭವಾದ ಪ್ರಜಾಪ್ರಭುತ್ವಕ್ಕಾಗಿನ ದೀರ್ಘ ಹೋರಾಟವು, 1990ರ ಜನ ಆಂದೋಲನದೊಂದಿಗೆ ಆಳವಾಯಿತು, ಮತ್ತು ನಂತರ 2006ರ ಲೋಕತಂತ್ರ ಆಂದೋಲನದೊಂದಿಗೆ ಭದ್ರವಾದಂತೆ ಕಂಡದ್ದು, ಈಗ ಸೋತಂತೆ ಕಾಣುತ್ತಿದೆ. ಆದರೆ ನಿಜವಾಗಿ ಆ ದೀರ್ಘ ಹೋರಾಟವು ಇನ್ನೊಂದು ರೂಪದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ.

2.ಜನತೆಯ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲತೆ.2015ರಲ್ಲಿ, ಹೊಸ ಸಂವಿಧಾನ ಅಳವಡಿಸಿಕೊಳ್ಳುವಾಗ ನೇಪಾಳದಲ್ಲಿನ ಸಮಸ್ಯೆಗಳು ಗಂಭೀರವಾಗಿದ್ದವು. ಗೋರ್ಖಾದಲ್ಲಿ ಸಂಭವಿಸಿದ ಭೀಕರ ಭೂಕಂಪವು ಪ್ರಾಂತ್ಯವನ್ನು ನಾಶಪಡಿಸಿತು, 10,000 ಕ್ಕೂ ಹೆಚ್ಚು ಜನರ ಸಾವಿಗೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಲು ಕಾರಣವಾಯಿತು. ಕನಿಷ್ಠ ನಾಲ್ಕನೇ ಒಂದು ಭಾಗದ ನೇಪಾಳಿಗರು ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದರು. ಜಾತಿ ಮತ್ತು ಬುಡಕಟ್ಟು ತಾರತಮ್ಯವು ಹತಾಶೆಯ ಭಾವನೆಯನ್ನು ಸೃಷ್ಟಿಸಿತು. ನೇಪಾಳ-ಭಾರತ ಗಡಿಯುದ್ದಕ್ಕೂ ಇರುವ ಮಾಧೇಶ್ ಪ್ರದೇಶವು ಪ್ರತಿಕೂಲತೆಯ ಭಾವನೆಯಿಂದ ಮತ್ತು ನಂತರ 2015 ರ ಸಂವಿಧಾನದಿಂದ ಮತ್ತಷ್ಟು ಅಂಚಿಗೆ ತಳ್ಳಲ್ಪಟ್ಟಿರುವ ವಿಶ್ಲೇಷಣೆಯಿಂದ ವಿಶೇಷವಾಗಿ ಆಕ್ರೋಶಗೊಂಡಿತು. ಒಂದು ಶತಮಾನದಿಂದಲೂ ಅಗತ್ಯ ಹಣಕಾಸಿನ ಲಭ್ಯತೆಯಿಲ್ಲದೆ ದುರ್ಬಲ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಶಿಕ್ಷಣ, ಉದಯೋನ್ಮುಖ ಮಧ್ಯಮ ವರ್ಗದ ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ.
ಎಡಪಂಥೀಯ ಸರ್ಕಾರಗಳು ಈ ಕೆಲವು ಸಮಸ್ಯೆಗಳನ್ನು ಪರಿಹರಿಸಲು ವಿವಿಧ ನೀತಿಗಳನ್ನು ಮುಂದಿಟ್ಟವು, ಜನಸಂಖ್ಯೆಯ ದೊಡ್ಡ ವಿಭಾಗಗಳನ್ನು ಬಡತನದಿಂದ (ಮಕ್ಕಳ ಬಡತನ 2015 ರಲ್ಲಿ 36% ರಿಂದ 2025 ರಲ್ಲಿ 15% ಕ್ಕೆ ಇಳಿದಿದೆ) ಮತ್ತು ಮೂಲಸೌಕರ್ಯದ ನಿರ್ಲಕ್ಷ್ಯದಿಂದ (ವಿದ್ಯುತ್ ಈಗ 99% ಜನರಿಗೆ ಲಭ್ಯವಿದೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಸುಧಾರಣೆಯಾಗಿದೆ) ಹೊರತೆಗೆದವು.
ಆದಾಗ್ಯೂ, ನಿರೀಕ್ಷೆಗಳು ಮತ್ತು ವಾಸ್ತವಿಕತೆಯ ನಡುವೆ ಭಾರೀ ಅಂತರವು ಉಳಿದಿದೆ, ಅಸಮಾನತೆಯ ಪ್ರಮಾಣಗಳು ಸಾಕಷ್ಟು ವೇಗವಾಗಿ ಕಡಿಮೆಯಾಗುತ್ತಿಲ್ಲ ಮತ್ತು ವಲಸೆ ಗಾಬರಿ ಹುಟ್ಟಿಸುವ ಮಟ್ಟದಲ್ಲಿದೆ. ಭ್ರಷ್ಟಾಚಾರದ ಮಟ್ಟಗಳು ದೇಶದಲ್ಲಿ ಅತಿಯಾಗಿ ಉಳಿದಿವೆ ಏಕೆಂದರೆ ಭ್ರಷ್ಟಾಚಾರದ ಗ್ರಹಿಕೆಗಳು ಹದಗೆಟ್ಟಿವೆ (2024ರಲ್ಲಿ 180 ದೇಶಗಳಲ್ಲಿ 107ನೇ ಸ್ಥಾನ). ಭ್ರಷ್ಟಾಚಾರ, ಅಸಮಾನತೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ, ಇದು ವ್ಯಾಪಾರ ಮತ್ತು ಹಣಕಾಸಿನ ಅತಿ ಕೆಟ್ಟ ಒಪ್ಪಂದಗಳನ್ನು ಮಾಡಿಕೊಂಡಿತು (IMF ನ ವಿಸ್ತೃತ ಸಾಲ ವ್ಯವಸ್ಥೆಗೆ ಮರಳುವುದು ಅದರ ಆರ್ಥಿಕ ಸಾಧ್ಯತೆಗಳನ್ನು ಕಿರಿದಾಗಿಸಿತು).
3.ಹಿಂದೂ ರಾಜಪ್ರಭುತ್ವದ ಕಲ್ಪನೆಯಲ್ಲಿ ಆಶ್ರಯ ಪಡೆಯುವ ಪ್ರವೃತ್ತಿ.ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುವ ನೇಪಾಳದ ಪುಟ್ಟ ಬೂರ್ಜ್ವಾ ವರ್ಗ, ಮತ್ತು ಸಾಮಾನ್ಯವಾಗೆ ದಮನಿತ ಅಥವಾ “ಹಿಂದುಳಿದ” ಹಿಂದೂ ಜಾತಿಗಳಿಂದ ಬಂದವರು, ಉನ್ನತ ಜಾತಿಗಳ ನಿರಂತರ ಪ್ರಾಬಲ್ಯದಿಂದ ಹತಾಶರಾಗಿದ್ದಾರೆ. ಮತ್ತು ನೇಪಾಳದ ಗಡಿಯಲ್ಲಿರುವ ಭಾರತದ ಉತ್ತರ ಪ್ರದೇಶ ರಾಜ್ಯದ ಬಲಪಂಥೀಯ ಹಿಂದುತ್ವ ಪುಟ್ಟ ಬೂರ್ಜ್ವಾ ರಾಜಕೀಯದಿಂದ ಪ್ರೇರಿತರಾಗಿದ್ದಾರೆ. ಅದಕ್ಕಾಗಿಯೇ ಭಾರತದ ಬಲಪಂಥೀಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಉತ್ತರ ಪ್ರದೇಶ ಸರ್ಕಾರದ ನಾಯಕ ಯೋಗಿ ಆದಿತ್ಯನಾಥ್ ರವರ ಪೋಸ್ಟರ್ ಗಳು ಪ್ರತಿಭಟನೆಗಳಲ್ಲಿ ಹೇರಳವಾಗಿದ್ದವು. ಈ ಜನವಿಭಾಗವು ರಾಜಪ್ರಭುತ್ವಕ್ಕೆ, (ಅದು ಹಿಂದೂ ರಾಜಪ್ರಭುತ್ವ) “ಮರಳುವ” ಮನೋಭಾವ ಹೊಂದಿದೆ. ರಾಜಪ್ರಭುತ್ವವನ್ನು ಸಮರ್ಥಿಸುವ ಪಕ್ಷ (ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಅಥವಾ RPP) ಮತ್ತು ಅದರ ವಿಶಾಲ ರಂಗದ ಮಿತ್ರರು (ಶಿವ ಸೇನಾ ನೇಪಾಳ, ವಿಶ್ವ ಹಿಂದೂ ಮಹಾಸಭೆ ಗಳಿರುವ ಜಂಟಿ ಪೀಪಲ್ಸ್ ಮೂವ್ಮೆಂಟ್ ಕಮಿಟಿ – ಇದನ್ನು ಮಾರ್ಚ್ 2025 ರಲ್ಲಿ ರಾಜಪ್ರಭುತ್ವಕ್ಕೆ ಮರಳುವ ಪ್ರತಿಭಟನೆಗಳ ಭಾಗವಾಗಿ ರಚಿಸಲಾಗಿದೆ,) – ಇಂತಹ ಹಲವಾರು ರಾಜಕೀಯ ಶಕ್ತಿಗಳು ಈ ಪ್ರವೃತ್ತಿಗಳನ್ನು ಬೆಂಬಲಿಸುತ್ತವೆ.
ಭಾರತದ RSSನ ಅಂತರರಾಷ್ಟ್ರೀಯ ಅಂಗಸಂಸ್ಥೆಯಾದ ಹಿಂದೂ ಸ್ವಯಂಸೇವಕ ಸಂಘ (HSS), 1990ರ ದಶಕದಿಂದಲೂ ಶಾಖೆಗಳು (ಗುಂಪುಗಳು) ಮತ್ತು ಕಾರ್ಯಕರ್ತರ ಜಾಲವನ್ನು ಸದ್ದಿಲ್ಲದೆ ನಿರ್ಮಿಸಿದೆ. HSS, ಶಿವ ಸೇನಾ ಮತ್ತು RPP ನಂತಹ ಸಂಸ್ಥೆಗಳ ಜೊತೆಗೆ, ಮತಧರ್ಮನಿರಪೇಕ್ಷ ನೀತಿಗಳ ವಿರುದ್ಧ ಮತ್ತು ಹಿಂದೂ ರಾಜ್ ಗೆ ಮರಳಲು ಪ್ರಚಾರಾಂದೋಲನ ನಡೆಸಿದೆ. ಕೇವಲ ಮತಧರ್ಮನಿರಪೇಕ್ಷತೆಯನ್ನು ಉದ್ದೇಶಿಸುವ ಬದಲು, ಹಿಂದುತ್ವ ಬ್ಲಾಕ್ 2008ರಲ್ಲಿ ರಾಜಪ್ರಭುತ್ವ ರದ್ದುಗೊಂಡ ನಂತರದಿಂದಲೂ ಅಧಿಕಾರವನ್ನು ಹಿಡಿದಿದೆ ಎಂದು ಅವರು ಹೇಳುವ ಕಾಠ್ಮಂಡುವಿನ ಪ್ರತಿಷ್ಟಿತ ಗುಂಪುಗಳ ‘ಮ್ಯುಸಿಕಲ್ ಚೇರ್’ ಮೇಲೆ ಗಮನ ಕೇಂದ್ರೀಕರಿಸಿದೆ. ಅವರು ತಮ್ಮ ‘ನಾಗರಿಕತೆಯ ಮಾತುಗಾರಿಕೆ’ಯನ್ನು ಭ್ರಷ್ಟಾಚಾರ ವಿರೋಧಿ ಮತ್ತು ದಾನಧರ್ಮಗಳ ಸುತ್ತ ರೂಪಿಸುತ್ತಾರೆ, ಹಿಂದೂ ಹಬ್ಬಗಳ ಮೂಲಕ ಮತ್ತು ಆನ್ಲೈನ್ ಪ್ರಭಾವಶಾಲಿ ವ್ಯಕ್ತಿಗಳ ಮೂಲಕ ಮತ್ತು ಹಿಂದೂ ಏಕತೆಯ ಹೆಸರಿನಲ್ಲಿ ಆಯ್ದ ಹಿಂದುಳಿದ ಮತ್ತು ದಮನಿತ ಜಾತಿಗಳತ್ತ ಪಯಣದ ಸೋಗು ಹಾಕುತ್ತಾರೆ. ಯುವಕರಿಗಿಂತ ಭಿನ್ನವಾಗಿ ಶಕ್ತಿಯುತವಾಗಿ ಸಂಘಟಿತವಾಗಿರುವ ಈ ಬ್ಲಾಕ್, ಹಿಂದೂ ರಾಜ್ಯ ಮತ್ತು ರಾಜಪ್ರಭುತ್ವದ ಹೆಸರಿನಲ್ಲಿ ಅಧಿಕಾರವನ್ನು ಪಡೆದುಕೊಳ್ಳುವ ಮತ್ತು ವ್ಯವಸ್ಥೆಯನ್ನು ಪುನಃಸ್ಥಾಪಿಸುವ ಸಾಮರ್ಥ್ಯ ಹೊಂದಿದೆ, ಭ್ರಷ್ಟಾಚಾರ ವಿರೋಧಿ ಹೆಸರಿನಲ್ಲಿ ಸರ್ವಾಧಿಕಾರವನ್ನು ಮರಳಿ ತರುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ : ನೇಪಾಳದಲ್ಲಿ ಪ್ರಕ್ಷುಬ್ಧತೆ: ಒಂದು ಪ್ರಜಾಸತ್ತಾತ್ಮಕ ನವೀಕರಣವೇ ಯುವಜನರ ಪ್ರತಿಭಟನೆಯ ಫಲಿತಾಂಶವಾಗಬೇಕು – ಸಿಪಿಐ(ಎಂ)
4.ವಲಸೆ ‘ಎಸ್ಕೇಪ್ ವಾಲ್ವ್’ ನಿಂದ ದಣಿದವರು:ಮೊಂಟ್ಸೆರಾಟ್ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ನಂತಹ ಸಣ್ಣ ದೇಶಗಳನ್ನು ನಾವು ನಿರ್ಲಕ್ಷಿಸಿದರೆ, ನೇಪಾಳವು ಕೆಲಸಕ್ಕಾಗಿ ವಲಸೆ ಹೋಗುವ ಅತಿ ಹೆಚ್ಚು ತಲಾ ದರ ಹೊಂದಿರುವ ದೇಶವಾಗಿದೆ. 3.1 ಕೋಟಿ ಜನಸಂಖ್ಯೆಯೊಂದಿಗೆ, ಪ್ರಸ್ತುತ 534,500 ನೇಪಾಳಿಗರು (ದಾಖಲಿತರು) ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ – ಅಂದರೆ ಪ್ರತಿ 1,000 ನೇಪಾಳಿಗರಿಗೆ 17.2 ಜನರು. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿವೆ. 2000 ರಲ್ಲಿ, ವಿದೇಶಿ ಉದ್ಯೋಗ ಪರ್ಮಿಟ್ ಪಡೆದ ನೇಪಾಳಿಗರ ದಾಖಲಿತ ಸಂಖ್ಯೆ 55,000 ಆಗಿತ್ತು, ಈಗ ಅದು 14 ಪಟ್ಟು ಹೆಚ್ಚಾಗಿ 2022-23 ರ ಹೊತ್ತಿಗೆ ಇದು 7.7 ಲಕ್ಷ ಮುಟ್ಟಿ ಹೊಸ ದಾಖಲೆ ಮಾಡಿದೆ.
ದೊಡ್ಡ ಪ್ರಮಾಣದ ಯುವಕರು ತಮಗೆ ಉದ್ಯೋಗದ ಅವಕಾಶಗಳು ನೇಪಾಳದೊಳಗೆ ಸಿಗುತ್ತಿಲ್ಲವೆಂದು ಕೋಪಗೊಂಡಿದ್ದಾರೆ ಮತ್ತು ಭಾರೀ ಅಪಾಯಕಾರಿ ಕೆಲಸಗಳು ಸೇರಿದಂತೆ ಉದ್ಯೋಗ ಅರಸಿ ವಲಸೆ ಹೋಗದೆ ಬೇರೆ ದಾರಿಯಿಲ್ಲವೆಂಬ ಸ್ಥಿತಿಯಿದೆ. ಫೆಬ್ರವರಿ 2025 ರಲ್ಲಿ ಯೊಂಗಾಮ್ (ದಕ್ಷಿಣ ಕೊರಿಯಾ) ನಲ್ಲಿ ಒಂದು ಭಯಾನಕ ಘಟನೆ ನಡೆಯಿತು, 28 ವರ್ಷದ ವಲಸೆ ಕಾರ್ಮಿಕ ತುಲ್ಸಿ ಪುನ್ ಮಗರ್, ತಾನು ಕೆಲಸ ಮಾಡುತ್ತಿದ್ದ ಹಂದಿ ಫಾರ್ಮ್ ನ ಮಾಲಿಕ ಕೂಲಿ ದರವನ್ನು ಕಡಿಮೆ ಮಾಡುತ್ತ ಹೋಗುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಊಹಿಸಲಾಗಿದೆ. ತುಲ್ಸಿ ಪೋಖರಾದ ಗುರ್ಖಾ ಸಮುದಾಯಕ್ಕೆ ಸೇರಿದವ. ಅವನ ಆತ್ಮಹತ್ಯೆಯ ನಂತರ, ಕಳೆದ ಐದು ವರ್ಷಗಳಲ್ಲಿ 85 ನೇಪಾಳಿಗರು ದಕ್ಷಿಣ ಕೊರಿಯಾದಲ್ಲಿ ಸತ್ತಿದ್ದಾರೆ, ಅವರಲ್ಲಿ ಅರ್ಧದಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಗಳು ಬಂದಿವೆ. ಇಂತಹ ಸುದ್ದಿಗಳು ಸರ್ಕಾರದ ಮೇಲಿನ ಹತಾಶೆ ಮತ್ತು ಕೋಪವನ್ನು ಹೆಚ್ಚಿಸಿದವು. ಸರ್ಕಾರವು ವಿದೇಶಿ ನೇರ ಹೂಡಿಕೆದಾರರ ಬಗ್ಗೆ ತನ್ನ ಸ್ವಂತ ವಲಸೆ ಕಾರ್ಮಿಕರಿಗಿಂತ ಹೆಚ್ಚು ಆದ್ಯತೆ ನೀಡುತ್ತದೆ ಎಂಬ ಭಾವನೆಯನ್ನು ಅನೇಕರು ಆನ್-ಲೈನ್ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಲಸೆ ಕಾರ್ಮಿಕರು ನೇಪಾಳಕ್ಕೆ ಕಳಿಸುವ ಹಣದ ಹೂಡಿಕೆಯು ವಿದೇಶಿ ಬಂಡವಾಳಕ್ಕಿಂತ ಎಷ್ಟೋ ಹೆಚ್ಚಾಗಿದೆ.
5.ಅಮೇರಿಕಾ ಮತ್ತು ಭಾರತದ ಬಾಹ್ಯ ಪ್ರಭಾವಗಳು
ಕೆ.ಪಿ ಓಲಿ ಅವರ ನಡು-ಬಲಪಂಥೀಯ ಸರ್ಕಾರವು ಯು.ಎಸ್ ಜತೆಗೆ ನಿಕಟ ಸಂಬಂಧ ಹೊಂದಿತ್ತು. ನೇಪಾಳವು ಫೆಬ್ರವರಿ 2017ರಲ್ಲಿ ಅಮೇರಿಕಾದ ಮಿಲೇನಿಯಮ್ ಚಾಲೆಂಜ್ ಕಾರ್ಪೊರೇಷನ್ (ಎಮ್.ಟಿ.ಸಿ) ಗೆ ಸೇರಿತು, ಆಗಿನ ಎಡಪಂಥೀಯ ಸರ್ಕಾರದ ತೀರ್ಮಾನವು ಎಡಪಂಥದ ದೊಡ್ಡ ಭಾಗಗಳಿಂದ ಭಾರೀ ವಿರೋಧವನ್ನು ಎದುರಿಸಿತು. ಕೆಳಮಟ್ಟದ ಒತ್ತಡದ ಕಾರಣದಿಂದಾಗಿ, ನೇಪಾಳ ಸರ್ಕಾರವು ಎಮ್.ಟಿ.ಸಿ ಯಿಂದ ದೂರ ಉಳಿಯಿತು, ಆದರೆ ಓಲಿ ಅವರ ನಡು-ಬಲಪಂಥೀಯ ಸರ್ಕಾರವು ಆಗಸ್ಟ್ 2025ರಲ್ಲಿ ಅಮೇರಿಕಾದ ನೆರವು ಮರುಪ್ರಾರಂಭಿಸುವುದು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಮುಂದುವರೆಸುವುದು ಇತ್ಯಾದಿ ಕುರಿತು ಚರ್ಚಿಸಲು ಜಾನ್ ವಿಂಗಲ್ (ಎಮ್.ಟಿ.ಸಿ ಯ ಉಪ-ಉಪಾಧ್ಯಕ್ಷ) ಅವರನ್ನು ಕಾಠ್ಮಂಡುವಿಗೆ ಸ್ವಾಗತಿಸಿತು.
ಇದೇ ಸಮಯದಲ್ಲಿ, ನರೇಂದ್ರ ಮೋದಿಯ ಭಾರತದ ಅತಿ ಬಲಪಂಥೀಯ ಸರ್ಕಾರವು ನೇಪಾಳದಲ್ಲಿ ಇದುವರೆಗೆ ಅಂಚಿನಲ್ಲಿದ್ದ ಹಿಂದೂ ರಾಷ್ಟ್ರೀಯತಾವಾದಿ ಅತಿ ಬಲಪಂಥೀಯ ಪಕ್ಷದ ಪಾತ್ರವನ್ನು ಪ್ರೋತ್ಸಾಹಿಸಲು ಯತ್ನಿಸಿತು. 2025ರ ಪ್ರತಿಭಟನೆಗಳಲ್ಲಿ ಯಾವುದೇ ಬಾಹ್ಯ ಚಟುವಟಿಕೆ ಇದ್ದರೆ, ಯು.ಎಸ್ ಗಿಂತ ಹೆಚ್ಚಾಗಿ ಭಾರತದ ಹಸ್ತಕ್ಷೇಪ ಇರುವ ಸಾಧ್ಯತೆಯಿದೆ. ಆದರೆ, ಇಲ್ಲಿಯೂ ಸಹ, ನೇಪಾಳದ ಅತಿ ಬಲಪಂಥವು ಓಲಿ ಸರ್ಕಾರದ ಪತನ ಮತ್ತು ಭ್ರಷ್ಟಾಚಾರದ ವಿರುದ್ಥದ ಆಕ್ರೋಶದ ಬರಿಯ ಲಾಭ ಪಡೆಯುತ್ತಿರುವ ಸಾಧ್ಯತೆಯೇ ಹೆಚ್ಚು.
ಈಗಿನ ದಂಗೆಯಲ್ಲಿ ಆರ್.ಪಿ.ಪಿಯ ಯಾವುದೇ ಕಾರ್ಯಾಲಯ ಅಥವಾ ನಾಯಕರ ಮನೆ ದಾಳಿಗೆ ಗುರಿಯಾಗಲಿಲ್ಲ. ಆದರೆ ಇದೇ ವರ್ಷ ಮಾರ್ಚ್‌ನ ಪ್ರತಿಭಟನೆಗಳಲ್ಲಿ ಆರ್.ಪಿ.ಪಿ (ರಾಜಪ್ರಭುತ್ವ ಪರ ಪಕ್ಷ) ಕಾರ್ಯಕರ್ತರು ಒಂದು ಕಮ್ಯುನಿಸ್ಟ್ ಕಾರ್ಯಾಲಯದ ಮೇಲೆ ದಾಳಿ ಮಾಡಿದ್ದರು. ಇದು ಸೆಪ್ಟೆಂಬರ್‌ನಲ್ಲಿ ಏನಾಯಿತು ಎಂಬುದರ ಪೂರ್ವಭಾವಿ ಸೂಚನೆಯಾಗಿತ್ತು ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ.
ಸೇನೆ ಮತ್ತು ಭವಿಷ್ಯ
ಸೇನೆಯು ನೇಪಾಳದಲ್ಲಿ ತಕ್ಕ ಮಟ್ಟಿನ ಶಾಂತಿಯನ್ನು ಪುನಃಸ್ಥಾಪಿಸಿದಂತೆ ಕಾಣುತ್ತದೆ. ಆದರೆ ಇದು ಅವ್ಯವಸ್ಥೆ ಮತ್ತು ಅಪಾಯದ ಶಾಂತಿಯಾಗಿದೆ. ಮುಂದೆ ಏನಾಗುತ್ತದೆ ಎಂಬುದು ನೋಡಬೇಕಾಗಿದೆ. ದಂಗೆ ತಣ್ಣಗಾಗಲು ಸಮಯ ಬೇಕಾಗುತ್ತದೆ. ಕಾಠ್ಮಂಡು ನಗರದ ಮೇಯರ್ ಬಲೇಂದ್ರ ಶಾ ನಂತಹ ಆನ್-ಲೈನ್ ಸೆಲೆಬ್ರಿಟಿಗಳಲ್ಲಿ ಒಬ್ಬರನ್ನು ಅಧಿಕಾರವನ್ನು ತೆಗೆದುಕೊಳ್ಳಲು ಸೇನೆಯು ಆಹ್ವಾನಿಸುವುದೇ? ರಾಜಕೀಯ ಪಕ್ಷಗಳಿಂದ ಸ್ವತಂತ್ರವಾಗಿ ವೃತ್ತಿಜೀವನವನ್ನು ಮಾಡಿದ ಅತ್ಯಂತ ಗೌರವಾನ್ವಿತ ಮಾಜಿ ನೇಪಾಳದ ಪ್ರಧಾನ ನ್ಯಾಯಾಧೀಶ (2016-17) ಸುಶೀಲಾ ಕಾರ್ಕಿ ಅವರನ್ನು ಪ್ರತಿಭಟನಕಾರರು ಸೂಚಿಸಿದ್ದಾರೆ. ಇವು ತಾತ್ಕಾಲಿಕ ಆಯ್ಕೆಗಳಾಗಿವೆ. ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲು ಅವರಿಗೆ ಅಧಿಕಾರ ಇರುವುದಿಲ್ಲ. ಅವರು ರಾಜಕೀಯದಿಂದ ದೂರವಿದ್ದೇವೆ ಎಂದು ನಟಿಸುತ್ತಾರೆ. ಆದರೆ ಅದು ಪ್ರಜಾಪ್ರಭುತ್ವದ ಬಗ್ಗೆ ಜನಗಳನ್ನು ನಿರಾಶೆಗೊಳಿಸುತ್ತದೆ ಮತ್ತು ದೇಶವನ್ನು ದೀರ್ಘಕಾಲೀನ ಬಿಕ್ಕಟ್ಟಿಗೆ ತಳ್ಳುತ್ತದೆ. ಹೊಸ ಪ್ರಧಾನ ಮಂತ್ರಿಯು ನೇಪಾಳದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ.
* ವಿಜಯ್ ಪ್ರಶಾದ್ ಅವರು ಟ್ರೈಕಾಂಟಿನೆಂಟಲ್: ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್‌ನ ನಿರ್ದೇಶಕರಾಗಿದ್ದಾರೆ, ಅತುಲ್ ಚಂದ್ರ ಅವರು ಅದರ ಏಶಿಯಾ ಕಾರ್ಯಕ್ರಮದ ಸಹ-ಸಂಯೋಜಕರಾಗಿದ್ದಾರೆ
ಇದನ್ನೂ ನೋಡಿ : ಬಿಹಾರದಲ್ಲಿ ಸರ್ (SIR) ಸೃಷ್ಟಿಸಿದ ಸುಳ್ಳು ಕಥೆಗಳು – ವಿಶ್ಲೇಷಣೆ : ಗುರುರಾಜ ದೇಸಾಯಿ Janashakthi Media
