ನವದೆಹಲಿ: ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಬೀದಿಗಿಳಿದ ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ಟಿಎಂಸಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ಚುನಾವಣಾ ಆಯೋಗ ಸಂಭ್ರಮಾಚರಣೆ ಮಾಡುವ ಹಾಗಿಲ್ಲ ಎಂದು ಹೇಳಿದ್ದರೂ ಪಕ್ಷದ ಕಾರ್ಯಕರ್ತರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
ಇದನ್ನು ಓದಿ: ತಮಿಳುನಾಡಿನಲ್ಲಿ ದ್ರಾವಿಡ ಓಟ: ಸಿಎಂ ಆಗಿ ಸ್ಟಾಲಿನ್ ಅಧಿಕಾರ ಸ್ವೀಕರಿಸಲು ಮುಹೂರ್ತ ನಿಗಧಿ
ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜೋರಾಗಿರುವ ಸಂದರ್ಭದಲ್ಲಿ ಇಂದು ಚುನಾವಣಾ ಫಲಿತಾಂಶ ಹೊರಬಂದಿರುವ ರಾಜ್ಯಗಳಲ್ಲಿ ಗೆದ್ದ ಅಭ್ಯರ್ಥಿಗಳ ಪರ ಕಾರ್ಯಕರ್ತರ ಸಂಭ್ರಮಾಚರಣೆ ಮಾತ್ರ ಮುಂದುವರೆದಿದೆ.
ಬೆಂಬಲಿತ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡವರನ್ನು ತರಾಟೆಗೆ ತೆಗೆದುಕೊಂಡ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಇದನ್ನು ಓದಿ: ಮಸ್ಕಿಯಲ್ಲಿ ನಡೆಯದ ಆಪರೇಷನ್ ಕಮಲ : ಸೋಲೊಪ್ಪಿಕೊಂಡ ಪ್ರತಾಪಗೌಡ
ತುರ್ತಾಗಿ ಗೆಲುವಿನ ಸಂಭ್ರಮಾಚರಣೆಯನ್ನು ನಿಲ್ಲಿಸಿ, ಕೊರೋನಾ ಸೋಂಕು ಇರುವುದರಿಂದ ಯಾರನ್ನೂ ರಸ್ತೆಗಿಳಿಯದಂತೆ ಕ್ರಮವಹಿಸಿ ಇಲ್ಲದಿದ್ದರೆ ರಾಜ್ಯ ಆರೋಗ್ಯಾಧಿಕಾರಿಗಳು ಮತ್ತು ಇತರ ಅಧಿಕಾರಿಗಳನ್ನು ಹೊಣೆಯಾಗಿಸಿ ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಸಂಭ್ರಮಾಚರಣೆಯನ್ನು ತಡೆಯದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮತ್ತು ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟವಾದ ಎಚ್ಚರಿಕೆ ನೀಡಿದೆ.