ಜೆರುಸಲೇಂ: ಗಾಝಾ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ಲೆಹೆಮ್‌ನಲ್ಲಿ ಈ ವರ್ಷ ಯಾವುದೆ ಕ್ರಿಸ್‌ಮಸ್ ಸಂಭ್ರಮ ನಡೆದಿಲ್ಲ ಎಂದು ವರದಿಯಾಗಿದೆ. ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ನಡುವೆ ಸಂಘರ್ಷ ಪ್ರಾರಂಭವಾದ ನಂತರ ಸುಮಾರು 20 ಸಾವಿರಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಹತ್ಯೆ ಮಾಡಿದ್ದು, ಸೋಮವಾರ ಕೂಡಾ ದಾಳಿ ಮುಂದುವರೆಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಕ್ರಿಸ್‌ಮಸ್‌ನಲ್ಲಿ “ಸಂತೋಷವಿಲ್ಲ” ಎಂದು ಪ್ಯಾಲೆಸ್ತೀನಿಯರು ಹೇಳಿದ್ದಾರೆ. ಗಾಝಾದ ಜನರ ಮೇಲೆ ಇಸ್ರೇಲ್ ಮುಂದುವರಿದಿರುವ ದಾಳಿಗಳಿಂದಾಗಿ ಬೆಥ್ಲೆಹೆಮ್‌ನಲ್ಲಿ ಸಂಭ್ರಮಾಚರಣೆಗಳು ರದ್ದುಗೊಂಡಿದೆ.
‘‘ಇಸ್ರೇಲ್ ದಾಳಿ ಸ್ವಲ್ಪ ಸಮಯ ನಾವು ಎದುರಿಸಿರುವ ದೊಡ್ಡ ಹೊಡೆತವಾಗಿದ್ದರೂ ನಾವು ಫೆಲೆಸ್ತೀನಿಯರು ಎಂದಿನಂತೆ ಈಗಲೂ ಚೇತರಿಸಿಕೊಳ್ಳುತ್ತೇವೆ. ನಾವು ಸಹಜ ಸ್ಥಿತಿಗೆ ಮರಳುತ್ತೇವೆ. ಆದರೆ ಇದರಲ್ಲಿ ಶಾಮೀಲಾದವರಿಗಾಗಿ ನಾವು ಮರುಗುತ್ತೇವೆ. ನೀವು ಇದರಿಂದ ಚೇತರಿಸಿಕೊಳ್ಳಲು ಎಂದಾದರೂ ಸಾಧ್ಯವಿದೆಯೇ?” ಎಂದು ಕ್ರಿಸ್‌ಮಸ್‌ನ ಮುನ್ನಾದಿನ ಬೆಥ್ಲೆಹೆಮ್‌ನ ಇವಾಂಜೆಲಿಕಲ್ ಲುಥೆರಾನ್ ಚರ್ಚ್ ನ ಪ್ಯಾಸ್ಟರ್ ಮುಂಥರ್ ಐಸಾಕ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್ಟ ವಿರುದ್ಧ ಸುಮೊಟೊ ದಾಖಲಿಸಿ | ಜಾಗೃತ ನಾಗರಿಕರು ಕರ್ನಾಟಕ ಒತ್ತಾಯ
“ನರಮೇಧದ ನಂತರ ನಿಮ್ಮ ದಾನಧರ್ಮಗಳು ಮತ್ತು ಆಘಾತದ ಮಾತುಗಳು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ನಿಮ್ಮ ವಿಷಾದದ ಮಾತುಗಳನ್ನು ಮಾತ್ರವಲ್ಲ, ನರಮೇಧದ ಬಳಿಕ ನಿಮ್ಮ ಕ್ಷಮಾಯಾಚನೆಯನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಏನಾಗಿದೆಯೋ ಅದು ಆಗಿ ಹೋಗಿದೆ. ನಿಮ್ಮನ್ನು ಕನ್ನಡಿಯಲ್ಲಿ ನೋಡಿಕೊಂಡು ‘ಗಾಝಾದಲ್ಲಿ ನರಮೇಧ ನಡೆಯುತ್ತಿದ್ದಾಗ ನಾನೆಲ್ಲಿದ್ದೆ’ ಎಂದು ನೀವು ಪ್ರಶ್ನಿಸಿಕೊಳ್ಳಬೇಕು” ಎಂದು ಅವರು ಹೇಳಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪ್ರತಿ ವರ್ಷ ಕ್ರಿಸ್‌ಮಸ್ ವೇಳೆಗೆ ಪ್ರವಾಸಿಗಳಿಂದ ತುಂಬಿರುತ್ತಿದ್ದ ಬೆಥ್ಲೆಹೆಮ್ ನಗರದ ಮ್ಯಾಂಗರ್ ಸ್ಕ್ವೇರ್ ಈ ವರ್ಷ ನಿರ್ಜನವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. “ನಗರದಲ್ಲಿ ಹಬ್ಬದ ದೀಪಗಳನ್ನು ಬೆಳಗಿಸಲಾಗಿಲ್ಲ, ನಗರವು ಸಂತೋಷದಿಂದ, ಮಕ್ಕಳಿಂದ, ಸಾಂತಾನಿಂದ ವಂಚಿತವಾಗಿದೆ. ಈ ವರ್ಷ ಯಾವುದೇ ಸಂಭ್ರಮಾಚರಣೆಯಿಲ್ಲ” ಎಂದು ಬೆಥ್ಲೆಹೆಮ್ ನಿವಾಸಿ ಮೆಡೆಲೀನ್ ಹೇಳಿದ್ದಾರೆ ಎಂದು ವರದಿ ಹೇಳಿದೆ.
ಈ ನಡುವೆ ಪೋಪ್ ಫ್ರಾನ್ಸಿಸ್ ಅವರು ಶಾಂತಿಗಾಗಿ ಕರೆ ನೀಡುವ ಮೂಲಕ ಭಾನುವಾರ ಜಾಗತಿಕ ಕ್ರಿಸ್‌ಮಸ್ ಆಚರಣೆಗಳನ್ನು ಪ್ರಾರಂಭಿಸಿದರು. ಈ ವೇಳೆ ಮಾತನಾಡಿ, “ನಮ್ಮ ಹೃದಯ ಗಾಜಾಕ್ಕಾಗಿ ಮಿಡಿಯುತ್ತದೆ. ಗಾಜಾದಲ್ಲಿರುವ ಎಲ್ಲಾ ಜನರಿಗೆ ಅದರಲ್ಲೂ ಮುಖ್ಯವಾಗಿ ಗಾಜಾದಲ್ಲಿ ನರಳುತ್ತಿರುವ ನಮ್ಮ ಕ್ರಿಶ್ಚಿಯನ್ ಸಮುದಾಯಕ್ಕೆ” ಎಂದು ಕ್ಯಾಥೋಲಿಕ್ ಸಮುದಾಯದ ಅತ್ಯುನ್ನತ ನಾಯಕರೂ ಆಗಿರುವ ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಕಲ್ಲಡ್ಕ ಪ್ರಭಾಕರ್ ಭಟ್‌ನದ್ದು ಕೊಳಕು ಮನಸ್ಸು, ಭಯೋತ್ಪಾದಕ ಮನಸ್ಥಿತಿ – ಹೋರಾಟಗಾರರ ಆಕ್ರೋಶ Janashakthi Media