ಗಾಝಾ ನರಮೇಧ 29 ನೇ ದಿನಕ್ಕೆ | ಪ್ಯಾಲೆಸ್ತೀನ್ ಸಾವಿನ ಸಂಖ್ಯೆ 9,770 ಏರಿಕೆ

ಗಾಝಾ: ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್ ನಡೆಸುತ್ತಿರುವ ಗಾಝಾ ಹತ್ಯಾಕಾಂಡ ಸೋಮವಾರಕ್ಕೆ 29 ನೇ ದಿನಕ್ಕೆ ಕಾಲಿಡುತ್ತಿದೆ. ನರಮೇಧ ಪ್ರಾರಂಭವಾದ ನಂತರ ಈ ವರೆಗೆ ಗಾಜಾ ಪಟ್ಟಿಯಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 9,770 ಕ್ಕೆ ಏರಿದೆ. ಇದರಲ್ಲಿ 4,008 ಮಕ್ಕಳು ಮತ್ತು 2,550 ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರದೇಶದಲ್ಲಿರುವ ಪ್ಯಾಲೇಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಕನಿಷ್ಠ 243 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ ಎಂದು ಸಚಿವಾಲಯ ಹೇಳಿದೆ. 243 ಸಾವುಗಳಲ್ಲಿ, 65 ಜನರು ಅಲ್ ಬುರೇಜ್ ಮತ್ತು ಅಲ್ ಮಘಾಜಿಯದ ಮೂರು ನಿರಾಶ್ರಿತರ ಶಿಬಿರಗಳಲ್ಲಿನ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ವೈಮಾನಿಕ ದಾಳಿಯ ವೇಳೆ ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಮುಸ್ಲಿಮರನ್ನು ಗುರಿಯಾಗಿಸಿ ಟೈಮ್ಸ್ ನೌ ನವಭಾರತ್ ಕಾರ್ಯಕ್ರಮ; ವಿಡಿಯೊ ಡಿಲಿಟ್ ಮಾಡುವಂತೆ NBDSA ಆದೇಶ

ಅಕ್ಟೋಬರ್ 7 ರಂದು ಸಂಘರ್ಷ ಪ್ರಾರಂಭವಾದಂದಿನಿಂದ ಪ್ಯಾಲೆಸ್ತೀನ್ ಪ್ರತಿರೋಧ ಪಡೆಯಾದ ಹಮಾಸ್ ನಿಯಂತ್ರಿತ ಪ್ರದೇಶದಲ್ಲಿ ಒಟ್ಟು 24,173 ಜನರು ಗಾಯಗೊಂಡಿದ್ದಾರೆ. ಅದಾಗ್ಯೂ 1,270 ಮಕ್ಕಳು ಸೇರಿದಂತೆ 2,260 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಅಂದಿನಿಂದ ಗಾಜಾದಲ್ಲಿ ಸುಮಾರು 15 ಲಕ್ಷ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ OCHA ಹೇಳಿದೆ. ಒಟ್ಟು ಸುಮಾರು 7,17,000 ಜನರು 149 ವಿಶ್ವಸಂಸ್ಥೆ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. 1,22,000 ಜನರು ಆಸ್ಪತ್ರೆಗಳು, ಚರ್ಚ್‌ಗಳು ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಹಾಗೂ 89 ಶಾಲೆಗಳಲ್ಲಿ 1,10,000 ಜನರು ಆಶ್ರಯ ಪಡೆದಿದ್ದಾರೆ ಎಂದು ವರದಿಯಾಗಿದೆ.

ಗಾಝಾದ ದಕ್ಷಿಣದಲ್ಲಿರುವ ವಿಶ್ವಸಂಸ್ಥೆಯ 92 ಪರಿಹಾರ ಶಿಬಿರಗಳಲ್ಲಿ 5,30,000 ಕ್ಕಿಂತ ಹೆಚ್ಚು ಜನರಿದ್ದು, ಹೊಸದಾಗಿ ಆಗಮಿಸುವ ಜನರಿಗೆ ಆಶ್ರಯ ನೀಡಲು ಸಾಧ್ಯವಾಗದಷ್ಟು ಜನದಟ್ಟಣೆಯಿದ್ದು, ಇದು ತೀವ್ರ ಕಳವಳಕಾರಿಯಾಗಿದೆ ಎಂದು OCHA ಒತ್ತಿಹೇಳಿದೆ. “ತಮ್ಮ ಸುರಕ್ಷತೆಗಾಗಿ ಅನೇಕ ಸ್ಥಳಾಂತರಗೊಂಡ ವ್ಯಕ್ತಿಗಳು ವಿಶ್ವಸಂಸ್ಥೆಯ ಪರಿಹಾರ ಶಿಬಿರದ ಆವರಣದ ಬಳಿಯ ಬೀದಿಗಳಲ್ಲಿ ಮಲಗುತ್ತಿದ್ದಾರೆ” ಎಂದು ಅದು ಹೇಳಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬದಲಾಗಲ್ಲ| ಸತೀಶ ಜಾರಕಿಹೊಳಿ

ಇಸ್ರೇಲ್ ಗಾಝಾಕ್ಕೆ ವಿದ್ಯುತ್ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಿದ ನಂತರ, ಅಕ್ಟೋಬರ್ 11 ರಿಂದ ಗಾಜಾ ಸಂಪೂರ್ಣ ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿದೆ ಎಂದು ವಿಶ್ವಸಂಸ್ಥೆಯ ಕಚೇರಿ ಹೇಳಿದೆ. ಗಾಜಾದಲ್ಲಿದ್ದ ಏಕೈಕ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ, ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆ ಮತ್ತು ಉತ್ತರ ಗಾಜಾದ ಇಂಡೋನೇಷಿಯನ್ ಆಸ್ಪತ್ರೆಗಳಲ್ಲಿನ ಮುಖ್ಯ ವಿದ್ಯುತ್ ಜನರೇಟರ್‌ಗಳು ಇಂಧನ ಕೊರತೆಯಿಂದಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ವರದಿಯಾಗಿದೆ.

ಎರಡೂ ಆಸ್ಪತ್ರೆಗಳಲ್ಲಿರುವ ಸೆಕೆಂಡರಿ ಸಣ್ಣ ಜನರೇಟರ್‌ಗಳು ಅತ್ಯಂತ ನಿರ್ಣಾಯಕ ಸೇವೆಗಳಿಗಾಗಿ ದಿನಕ್ಕೆ ಕೆಲವೇ ಗಂಟೆಗಳ ವಿದ್ಯುತ್ ಅನ್ನು ಒದಗಿಸುತ್ತಿದೆ ಎಂದು ವರದಿ ಹೇಳಿದೆ. ಇಸ್ರೇಲ್ ಹತ್ಯಾಕಾಂಡ ಪ್ರಾರಂಭವಾದಾಗಿನಿಂದ, 35 ಆಸ್ಪತ್ರೆಗಳಲ್ಲಿ 14 ಆಸ್ಪತ್ರೆಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ. ಗಾಜಾದಾದ್ಯಂತ ಇರುವ ಎಲ್ಲಾ 51 ಪ್ರಾಥಮಿಕ ಆರೈಕೆ ಸೌಲಭ್ಯಗಳು ಹಾನಿಗೀಡಾಗಿದೆ ಅಥವಾ ಇಂಧನದ ಕೊರತೆಯಿಂದಾಗಿ ಮುಚ್ಚಲ್ಪಟ್ಟಿವೆ.

ಈ ಮಧ್ಯೆ, ಇಸ್ರೇಲ್‌ನ ಸುಮಾರು 1,400 ನಾಗರಿಕರು ಮತ್ತು ವಿದೇಶಿ ಪ್ರಜೆಗಳು ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲಿ ಅಧಿಕಾರಿಗಳ ಪ್ರಕಾರ, ಹೆಚ್ಚಿನ ಸಾವುನೋವುಗಳು ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ದಾಳಿ ಪ್ರಾರಂಭಿಸಿದಾದ ನಡೆದಿತ್ತು. ನವೆಂಬರ್ 3 ರಂದು ಇಸ್ರೇಲ್ 828 ನಾಗರಿಕರು ಸೇರಿದಂತೆ 1,159 ಜನರ ಹೆಸರನ್ನು ಬಿಡುಗಡೆ ಮಾಡಿದೆ. ಇದರಲ್ಲಿ 31 ಮಕ್ಕಳು ಸೇರಿದ್ದಾರೆ.

ಇದನ್ನೂ ಓದಿ: Leopard Attack | ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಇಸ್ರೇಲಿಗಳು ಮತ್ತು ವಿದೇಶಿ ಪ್ರಜೆಗಳು ಸೇರಿದಂತೆ 242 ಜನರು ಗಾಜಾದಲ್ಲಿ ಬಂಧಿತರಾಗಿದ್ದಾರೆ. ಅದರಲ್ಲಿ ಸುಮಾರು 30 ಮಕ್ಕಳು ಕೂಡಾ ಇದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಇಲ್ಲಿಯವರೆಗೆ ನಾಲ್ಕು ನಾಗರಿಕ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದು, ಒಬ್ಬ ಮಹಿಳಾ ಸೈನಿಕನನ್ನು ಇಸ್ರೇಲಿ ಪಡೆ ರಕ್ಷಿಸಿವೆ. ಒತ್ತೆಯಾಳುಗಳಲ್ಲಿ 57 ಮಂದಿ ಇಸ್ರೇಲಿ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಹೇಳಿಕೊಂಡಿದೆ.

ಭಾನುವಾರ ನಡೆದ ದಾಳಿಯ ವೇಳೆ ಗಾಝಾದಲ್ಲಿ ಒಬ್ಬ ಇಸ್ರೇಲಿ ಸೈನಿಕ ಮೃತಪಟ್ಟಿದ್ದಾರೆ. ಭೂ ಆಕ್ರಮಣ ಪ್ರಾರಂಭ ಮಾಡಿದ ನಂತರ ಮೃತಪಟ್ಟ ಇಸ್ರೇಲ್ ಸೈನಿಕರ ಸಂಖ್ಯೆ 29 ಕ್ಕೆ ಏರಿದೆ. ಮತ್ತೊಂದೆಡೆ ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆಯಲ್ಲಿ 43 ಮಕ್ಕಳು ಸೇರಿದಂತೆ 141 ಪ್ಯಾಲೆಸ್ತೀನಿಯರನ್ನು ಇಸ್ರೇಲಿ ಪಡೆಗಳು ಹತ್ಯೆ ಮಾಡಿವೆ. ಅಲ್ಲದೆ, ಇಸ್ರೇಲಿ ಅಕ್ರಮಣಕಾರಿ ನಾಗರಿಕರು ಒಂದು ಮಗು ಸೇರಿದಂತೆ ಎಂಟು ಪ್ಯಾಲೆಸ್ತೀನಿಯನ್ನರನ್ನು ಹತ್ಯೆ ಮಾಡಿದ್ದಾರೆ. ಸಂಘರ್ಷದಲ್ಲಿ ಇಬ್ಬರು ಇಸ್ರೇಲಿಗಳನ್ನು ಪ್ಯಾಲೆಸ್ತೀನಿಯನ್ನರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

 

ಈ ವಿಡಿಯೋ ನೋಡಿ : ಗಾಜಾಪಟ್ಟಿಯನ್ನು ಇಸ್ರೇಲ್ ಗೆಲ್ಲುತ್ತಾ? ಪ್ಯಾಲಿಸ್ಟೈನ್ ತಿರುಗಿ ಬಿದ್ದರೆ ಏನಾಗಬಹುದು? Janashakthi

Donate Janashakthi Media

Leave a Reply

Your email address will not be published. Required fields are marked *