ಗಾಯ ಕಥಾ ಸರಣಿ | ಸಂಚಿಕೆ 25 | ಬದಲಾವಣೆಗಾಗಿ ಹೊರಟ ಯುವಕರು

ಗುರುರಾಜ ದೇಸಾಯಿ
(ಇಲ್ಲಿಯವರೆಗೆ… ಜೈಲಿನಿಂದ ಬಿಡುಗಡೆಯಾಗಿ ಬಂದ ಆ ನಾಲ್ವರು ಹತ್ತಿದ್ದು ಕೆಂಚನ ಎತ್ತಿನ ಬಂಡಿಯನ್ನ, ಗಾಬರಿಗೊಂಡರು ಸುಧಾರಿಸಿಕೊಂಡು ಊರಿನ ವಿಚಾರ ತಿಳಿದರು. ಮುಂದೆ…. ) ಗಾಯ

ಝಲ್‌…. ಝಲ್‌… ಝಲ್‌… ಝಲ್‌… ಎಂದು ಸದ್ದು ಮಾಡುತ್ತಾ…

ಎತ್ತಿನ ಬಂಡಿ ತಪಗಲೂರನ್ನು ಪ್ರವೇಶಿಸಿತು…

ಊರ ಪ್ರವೇಶ ದ್ವಾರದಲ್ಲಿ ದೊಡ್ಡದಾದ ನಾಲ್ವರ ಹುತಾತ್ಮರ ಸ್ತಂಭಗಳು ಧಣಿ, ಗೌಡ, ದಳಪತಿ, ಶಾನಭೋಗನ ಕಣ್ಣಿಗೆ ಬಿದ್ದವು…

ಮಲ್ಯಾ…, ದೇವ್ಯಾ…, ಪರ್ಸ್ಯಾ ಮತ್ತ ರಾಜಣ್ಣಾರ ಮೂರ್ತಿಗಳಲ್ವಾ ಇದು??? ಎಂದು ಕೇಳಿದ ಧಣಿ…

ಹೌದು ಧಣಿ ಎಂದ ಕೆಂಚ…

ಬಂಡಿ ದುರ್ಗಮ್ಮನ ಗುಡಿಯ ಹತ್ತಿರ ಬರುತ್ತಿದ್ದಂತೆ… ನಾಲ್ವರಿಗೂ 12 ವರ್ಷದ ಹಿಂದಿನ ಘಟನೆ ನೆನಪಾಯಿತು…

ಸಂಚು ಮಾಡಿ ಚೂರಿ ಪರ್ಸ್ಯಾನನ್ನು ಕೊಂದಿದ್ದು, ಪೊಲೀಸರಿಗೆ ಹೇಳಿ ಲಾಠಿ ಚಾರ್ಜ್‌ ಮಾಡಿ ಹೊಡಿಸಿದ್ದು, ಎಲ್ಲವೂ… ಕಣ್ಮುಂದೆ ಬಂದು ಹೋದವು….

ಬಂಡಿ ಕೊಳ್ಳ ಹರಿದು… ನಾಲ್ವರನ್ನು ಕೆಳಗಿಳಿಸಿಂದ ಕೆಂಚ…

ಇವರು ಕೆಳಗಿಳಿಯುವುದನ್ನು ಗಮನಿಸಿದ ವ್ಯಕ್ತಿಯೊಬ್ಬ… ಯಾರ ಕೆಂಚ ಇವರು!!! ಗಡ್ಡ ಕೆರ್ಕಳ್ಳದೆ ಎಷ್ಟು ವರ್ಷ ಆತೋ… ಏನೋ… ಎಂದು ಗೊಣಗಿದ…

ಅಜ್ಜಾ… ಇವರು ನಮ್ಮೂರ ಧಣಿ, ದಳಪತಿ, ಗೌಡ, ಶಾನಭೋಗರು, ಜೈಲಿಂದ ಬಿಡುಗಡೆ ಆಗಿ ಊರ ಕಡೆ ಬರ್ತಿದ್ರು… ನಾನು ಬಂಡಿಮ್ಯಾಲೆ ಕರಕೊಂಡು ಬಂದೆ… ಅಂದ ಕೆಂಚ…

ನಾಲ್ವರು ಬಂದ ಸುದ್ದಿ … ಊರ ತುಂಬೆಲ್ಲಾ ಹರಡಿತು…  ನಾಲ್ವರು ಅಗಸಿಕಟ್ಟಿಯ ಬಳಿ ನಿಂತಿರು…

ಒಬ್ಬೊಬ್ಬರಾಗೆ ಜನ ಜಮಾವಣೆಗೊಂಡರು… ದೊಡ್ಡ ಧಣಿಗೂ ಸುದ್ದಿ ಗೊತ್ತಾಯ್ತು, ಶ್ರೀಧರನ ಜೊತೆ ದೊಡ್ಡ ಧಣಿ ಅಗಸಿಕಟ್ಟೆಯ ಹತ್ತಿರ ಬಂದರು…

ನಾಲ್ವರ ಸುತ್ತಲೂ… ಜನರು ಸೇರಿದ್ದರು… ದೊಡ್ಡ ಧಣಿ ಬಂದ್ರು ಎಂದು ಸುತ್ತುವರೆದಿದ್ದ ಜನ… ದೊಡ್ಡಧಣಿಗೆ ಜಾಗ ಮಾಡಿಕೊಟ್ಟರು…

ಅಣ್ಣನಿಗೆ ಸಿಗುತ್ತಿರುವ ಗೌರವ, ಜನರ ಪ್ರೀತಿ ನನಗೆ ಯಾವತ್ತು ಸಿಗಲಿಲ್ಲ… ಎಂದು ಧಣಿ ಮರುಗಿದ. ಹೆದರಿಕೆಗೆ ಸಿಗುವ ಪ್ರೀತಿಗೂ, ನಿಜವಾದ ಪ್ರೀತಿಗೂ ವ್ಯತ್ಯಾಸವಿದೆ  ಎಂಬುದು ಅರಿವಾಗಿತ್ತು. ಮಾಡಿದ ತಪ್ಪು, ಆ ತಪ್ಪಿನಿಂದ ನಡೆದ ದೌರ್ಜನ್ಯ ನಾಲ್ವರ ಸಾವು … ಹೀಗೆ ಒಂದೊಂದಾಗಿ ಕಾಡತೊಡಗಿದವು. ಕಣ್ಣಲ್ಲಿದ್ದ ನೀರು ಕೆನ್ನೆಯನ್ನು ದಾಟಿ ಕುತ್ತಿಗೆಯವರೆಗೆ ಹರಿದಿತ್ತು..

ನಾಲ್ವರಿದ್ದ ಜಾಗಕ್ಕೆ ಬಂದ ದೊಡ್ಡ ಧಣಿ ಇವರನ್ನು ದಿಟ್ಟಿಸಿ ನೋಡಿದ…

ದೊಡ್ಡ ಧಣಿಯ ನೋಟವನ್ನು ಎದುರಿಸಲಾಗದೆ ನಾಲ್ವರು ತಲೆ ತಗ್ಗಿಸಿದರು….

ಸ್ವಲ್ಪ ಹೊತ್ತು ಮೌನ ಆವರಿಸಿತ್ತು… ಗಾಯ

ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 23| ಬದಲಾವಣೆಯತ್ತ ಸಾಗಿದ ತಪಗಲೂರು…

ದೊಡ್ಡ ಧಣಿ ಹಿಂಗ ಎಷ್ಟು ಅಂತ ನಿಲ್ಲೋದು, ಬೆನ್ನಿಗೆ ಬಿದ್ದ ತಮ್ಮ… ಮಾಡಿದ ತಪ್ಪು ಅರಿವಾಗೈತಿ ಅಂತ ಕಾಣತೈತಿ… ಈ ಮೌನ ಒಳ್ಳೆದಲ್ಲ…  ಕತ್ತಲ ಕೋಣ್ಯಾಗಿಂದ ಬೆಳಕಿಗೆ ಬಂದಾರ… ಏನಾದ್ರು ಮಾತಾಡ್ರಿ ಎಂದ ಹಿರಿಯ…

ಏನ್‌!!! ಮಾತಾಡೋದೈತಿ ನಿಂಗಪ್ಪಜ್ಜ… ದರ್ಪದಿಂದ ಮೆರೆದ್ರು…, ಬಡವರ ರಕ್ತ ಹೀರಿದ್ರು… ರಕ್ತ ಬರೊಹಂಗ ಆ ಎಳೆ ಮಕ್ಕಳನ್ನ ಹೊಡೆದು ಎಳೆದಾಡಿ ಖುಷಿ ಪಟ್ಟರು…. ಅವರು ಮಾಡಿದ ತಪ್ಪು ಅವರಿಗೆ ಅರ್ಥ ಆಗಬೇಕು… ಇವರೊಳಗಿದ್ದ ಕ್ರೌರ್ಯ ಸಾಯಬೇಕು…. ಹೊಸ ಬದುಕು ಬಾಳ್ತೀನಿ ಅನ್ನೋ ಆಸೆ ಅವರಿಗಿದ್ರ… ಮೊದಲು ಅವರು ಮಾತಾಡ್ಲಿ… ಎಂದರು ದೊಡ್ಡ ಧಣಿ…

ನಾಲ್ವರು ಏನೂ ಮಾತನಾಡದೆ ಮೌನವಾಗಿದ್ದದ್ದನ್ನು ಕಂಡ ದೊಡ್ಡ ಧಣಿ…  ಆತೂ ಮಾತಾಡೋಕ ಮುಖ ಇಲ್ಲ ಅಂತ ಗೊತ್ತಾಯ್ತು… ಅವರು ಬದ್ಲಾಗ್ತೀವಿ ಅಂದ್ರ ಸಂಬಳಿಗೋಲ ಹಿಡ್ಕೊಂಡು ವಚನ ತೊಗೊಳ್ಳಲಿ… ಎಂದು ಹೇಳಿ ದೊಡ್ಡ ಧಣಿ ಮನೆಯ ಕಡೆ ಹೊರಟ……

ಎಲ್ಲರೂ ಒಬ್ಬೊಬ್ಬರಾಗಿ ಅಗಸಿಕಟ್ಟಿಯಿಂದ ಹೊರಡಲು ಶುರು ಮಾಡಿದರು…

ಇಬ್ಬರು ಹುಡುಗರು ಸಂಬಳಿಗೋಲು ಹಿಡಿದುಕೊಂಡು ನಿಂತಿದ್ದರು… ಧಣಿ, ದಳಪತಿ, ಗೌಡ, ಶಾನುಭೋಗ ಅಲ್ಲಿಗೆ ಬಂದರು…

ಧಣಿ ಜೋರಾಗಿ ಕೂಗಿದ “ ಸಂಬಳಿಗೋಲ ಮ್ಯಾಲೆ ವಚನ ತೊಗೊಂಡು ಹೇಳ್ತೀವಿ… ನಾವು ಇನ್ಮುಂದ ದೌರ್ಜನ್ಯ ಮಾಡಲ್ಲ…, ಜಾತಿ ತಾರತಮ್ಯ ಮಾಡಲ್ಲ ಎಂದು ಕೂಗಿ ಹೇಳಿದ, ಉಳಿದ ಮೂವರು ದನಿಗೂಡಿಸಿದರು.

ಹೊರಟಿದ್ದ ಜನ ಇತ್ತ ತಿರುಗಿ ಬಂದರು. …..

ಧಣಿ, ದಳಪತಿ, ಗೌಡ, ಶಾನಭೋಗ ಜೋರಾಗಿ ಅಳತೊಡಗಿದರು…

ಅವರಿಗೆ ಸಮಾಧಾನ ಅಗೋವರಿಗೂ ಅತ್ತು ಬಿಡ್ಲಿ ಎಂದು ಜನ ಸುಮ್ಮನೆ ನೋಡುತ್ತಾ ನಿಂತಿದ್ದರು.

ಸಂಬಳಿಗೋಲು ಹಿಡಿದುಕೊಂಡಿದ್ದ ಶ್ರೀಧರ, ಧಣಿಯ ಕಣ್ಣಿರು ಒರೆಸಿ, ಕಾಕಾ ನಾನು ಶ್ರೀಧರ, ಇವ ನನ್ನ ಗೆಳಯ ನಾಗ್ಯಾ… ಎಂದಾಗ ಧಣಿ ಇಬ್ಬರನ್ನು ಬಿಗಿದಪ್ಪಿಕೊಂಡ…

ಊರ ಜನರೆಲ್ಲ ನಾಲ್ವರನ್ನು ಸಮಾಧಾನ ಮಾಡಿದರು…

ಶ್ರೀಧರ ಮತ್ತು ನಾಗ್ಯಾ ನಾಲ್ವರನ್ನು ಕೈ ಹಿಡಿದುಕೊಂಡು ಅಗಸಿಕಟ್ಟೆಯ ಒಳಗಿಂದ ಮನೆಯತ್ತ ಕರೆದುಕೊಂಡು ಹೊರಟರು …

ಊರ ಜನರೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು…

ಸ್ವಲ್ಪ ಸಮಯದ ನಂತರ…

ಶ್ರೀಧರ ಮತ್ತು ನಾಗ್ಯಾ ಅಗಸಿಕಟ್ಟೆಯ ಹತ್ತಿರ ಮಾತನಾಡುತ್ತಾ…

ಕೆಂಚ ಮತ್ತು ಬಸ್ಯಾ ಅಗಸಿಕಟ್ಟಿಯ ಹತ್ತಿರ ಕುಳಿತಿದ್ದನ್ನು ಗಮನಿಸಿ ಅಲ್ಲಿಗೆ ಬಂದರು… ಕೆಂಚಪ್ಪಣ್ಣ…. ಬಸ್ಸಪ್ಪಣ್ಣ… ಯಾಕ ಇಲ್ಲಿ ಕುಂತೀರಿ… ಎಂದ ಶ್ರೀಧರ…

ಏನಿಲ್ಲ ಶ್ರೀಧರಪ್ಪ… ಈ ಒಗ್ಗಟ್ಟು, ಈ ಸಂತೋಷ ಹಿಂಗ ಇರತೈತಾ ಅಂತ ಯೋಚ್ನಿ ಆಗೈತಿ ಎಂದ ಬಸ್ಯಾ…

ನಮ್ಮೂರು ಬದಲಾದಂಗ ಎಲ್ಲಾ ಊರು ಬದಲಾಕ್ಕವಾ… 13 ವರ್ಷದಾಗ ನಮ್ಮೂರಾಗ ಏನೋನೋ ಆಗೋತು ಎಂದು ಕೆಂಚ ಪೇಚಾಡಿದ….

ಇದನ್ನೂ ಓದಿಗಾಯ ಕಥಾ ಸರಣಿ | ಸಂಚಿಕೆ 24| ಜೈಲಿನಿಂದ ಬಿಡುಗಡೆಯಾದ ಧಣಿ…

ಕೆಂಚಪ್ಪಣ್ಣ… ಬಸ್ಸಪ್ಪಣ್ಣ….  ಈಗ ಓದಿದ ಮಂದಿ ಹೆಚ್ಚಾಗೈತಿ, ಜಾತಿ, ದೌರ್ಜನ್ಯ ಎಲ್ಲಾ ನಿಧಾನ್ಕ ಕಮ್ಮಿ ಅಕ್ಕೈತಿ… ಎಂದ ಶ್ರೀಧರ…

ಖರೇ ಶ್ರೀಧರಪ್ಪಾ, ಕಮ್ಮಿ ಅಕ್ಕೈತಿ ಆದ್ರ ಪೂರ್ತಿ ನಿಲ್ಲೊದು ಕಷ್ಟ. ಕಾಲ ಬದಲಾದಂಗ ದೌರ್ಜನ್ಯ, ತಾರತಮ್ಯನೂ ಬ್ಯಾರೆ ತರ ಬರತೈತಿ….ಎಂದ ನಾಗ್ಯಾ…

ನೀವಿಬ್ರು ತಿಳ್ದೋರು ಅದಿರಿ…, ನಿಮ್ಮಂಗ ಜನರ ಬಗ್ಗೆ ಕಾಳಜಿ ಮಾಡೋರ ಇದ್ರ ಎಲ್ಲವೂ ಸರಿ ಹೋಗ್ತಾವ… ಅಂಬೇಡ್ಕರ್‌ ಸಾಹೇಬ್ರು ಆಗ ಮಾಡಿದ್ದ ಹೋರಾಟ ನಮ್ಮನ್ನ ಈಗ ಕಾಪಾಡಕತ್ತೈತಿ… ನಾವು ಅದನ್ನ ಮುಂದ ತೊಗೊಂಡು ಹೋಗಬೇಕು… ಎಂದ ಕೆಂಚ…

ಹೌದು ಕೆಂಚಪ್ಪಣ್ಣ… ಜಾತಿ ತಾರತಮ್ಯ ಹೋಗಾಕ ನಾವಿಬ್ರು ಚಳುವಳಿ ನಡಸ್ತೀವಿ, ಕಾರ್ಲ್‌ಮಾರ್ಕ್ಸ್‌ ಮತ್ತು ಅಂಬೇಡ್ಕರ್‌ ನಮಗೆ ಬೆಳಕು ಅಂತ ಹಿಂದ ರಾಜಣ್ಣಾರು ಹೇಳಿದ್ರು ಅಂತ ಊರಾಗ ಮಂದಿ ಮಾತಾಡಿದ್ನ ಕೇಳಿದ್ವಿ… ಅವರ ಆದರ್ಶಗಳನ್ನ ಹೊತ್ಕೊಂಡು ತಿರಗಾಡ್ತೀವಿ… ಬದಲಾವಣೆ ತರಾಕ ಪ್ರಯತ್ನ ಮಾಡ್ತೀವಿ ಎಂದ ಶ್ರೀಧರ…

ಹೌದು ನಾನು ಶ್ರೀಧರ ಇಬ್ರೂ ಸೇರಿ ಶೋಷಣೆ ವಿರುದ್ದ ಹೋರಾಡ್ತೀವಿ ಎಂದ ನಾಗ್ಯಾ…

ಕೆಂಚ… ಬಸ್ಯಾ… ಶ್ರೀಧರ ನಾಗ್ಯಾನನ್ನು ತಬ್ಬಿಕೊಂಡು… ನಿಮ್ಮಂತವರು ಊರ ತುಂಬಾ ಹುಟ್ಟಲಿ, ಬೆಳೆಯಲಿ, ಬೆಳಗಲಿ ಎಂದು ಹಾರೈಸಿದರು…

ಶ್ರೀಧರಪ್ಪ ಮತ್ತ ನಾಗ್ಯಾ…. ಓದೋದ್ನ ಬಿಡಬ್ಯಾಡ್ರಪ, ಸಾಲಿ ಓದ್ಕೋಂತನ ಈ ಕೆಲಸ ಮಾಡ್ರಿ ಎಂದು ಕೆಂಚ ಮತ್ತು ಬಸ್ಯಾ ಇಬ್ಬರ ಗಲ್ಲವನ್ನು ಮುಟ್ಟಿ, ತಲೆ ಸವರಿದರು…

ಹು ಕೆಂಚಪ್ಪಣ್ಣ, ಬಸ್ಸಪ್ಪಣ್ಣ ಕಾಲೇಜು ಓದ್ತಾ… ಓದ್ತಾ… ನಾವು ಚಳುವಳಿ ಮಾಡ್ತೀವಿ. ಚಳುವಳಿನೂ ನಮಗ ಸಾಲಿ ಇದ್ದಂಗ ನೀವೇನು ಚಿಂತಿ ಮಾಡಬ್ಯಾಡ್ರಿ. ನಾಗ್ಯಾ ಸೈಕಲ್‌ ತೊಗೊ ಹೋಗೋಣ ಎಂದ ಶ್ರೀಧರ…

ಕೆಂಪು, ನೀಲಿ ಬಣ್ಣದ ಬಾವುಟ ಕಟ್ಟಿದ್ದ ಸೈಕಲ್‌ ಮೇಲೆ ನಾಗ್ಯಾ ಹತ್ತಿ ಕುಳಿತ… ಶ್ರೀಧರ ಹಿಂದಿನ ಸೀಟಿನಲ್ಲಿ ಕುಳಿತ ಇಬ್ಬರೂ ಟಾಟಾ ಮಾಡುತ್ತಾ ಅಗಸಿಕೊಟ್ಟೆಯಿಂದ ಹೊರಟರು….

ಶ್ರೀಧರ ಮತ್ತು ನಾಗ್ಯಾ ಊರು ದಾಟುವವರೆಗೂ ಕೆಂಚ ಮತ್ತು ಬಸ್ಯಾ ಟಾಟಾ ಮಾಡುತ್ತಾ ನಿಂತರು…

 

(ಗಾಯ ಕಥಾ ಸರಣಿಯು ಈ ಸಂಚಿಕೆಯೊಂದಿಗೆ ಮುಕ್ತಾಯಗೊಂಡಿದೆ)

ವಿಡಿಯೋ ನೋಡಿಕಿಸಾನ್ ಮಹಾಪಂಚಾಯತ್‌ : ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತ

Donate Janashakthi Media

Leave a Reply

Your email address will not be published. Required fields are marked *