ಗಾಯ ಕಥಾ ಸರಣಿ | ಸಂಚಿಕೆ 24| ಜೈಲಿನಿಂದ ಬಿಡುಗಡೆಯಾದ ಧಣಿ…

(ಇಲ್ಲಿಯವರೆಗ…  ರಾಜಣ್ಣ, ಮಲ್ಯಾ, ದೇವ್ಯಾ, ಚೂರಿ ಪರ್ಸ್ಯಾರ ಕಾರ್ಯ ಮುಗಿದ ನಂತರ ತಪಗಲೂರು ಬದಲಾವಣೆಯತ್ತ ಸಾಗಿತ್ತು, ಜನರು ಹೊಸ ಬದುಕನ್ನು ಕಂಡುಕೊಂಡಿದ್ದರು.. ಮುಂದೆ ಓದಿ….  ) ಗಾಯ

12 ವರ್ಷಗಳ ನಂತರ

ಧಣಿ, ಶಾನುಭೋಗ, ಗೌಡ, ದಳಪತಿ ಜೈಲು ಶಿಕ್ಷೆ ಅನುಭವಿಸಿ , ಜೈಲಿನಿಂದ ಬಿಡುಗಡೆಯಾಗಿ ಹೊರಬಂದರು…

ನಾಲ್ಕು ಜನರ ಮುಖದ ಚರ್ಯೆ ಸಾಕಷ್ಟು ಬದಲಾಗುತ್ತು!!! ವಿಪರೀತ ಗಡ್ಡ, ಮೀಸೆ ಬೆಳಸಿಕೊಂಡಿದ್ದರು…

ಯಾಕ ಧಣಿ ಚಿಂತಿ ಮಾಡಕತ್ತೀರಿ??? ಎಂದ ದಳಪತಿ

ಯಾವ ಮುಖ ಇಟ್ಕೊಂಡು ಊರಾಗ ಹೋಗೋದು ದಳಪತಿ… ನಮ್ಮ ಅಣ್ಣಗ, ಊರ ಮಂದಿಗೆ ಹೆಂಗ ಮುಖ ತೋರ್ಸೋದು??? ಎಂದ ಧಣಿ…

ಉಪ್ಪ ತಿಂದಿದ್ದಕ್ಕ ನೀರ ಕುಡದೀವ್ರಿ ಧಣಿ… ಜೈಲು ನಮಗ ಸಾಕಷ್ಟು ಪಾಠ ಕಲಿಸೈತಿ. ಊರಾಗ ಹೋಗಿ ಈ ದರ್ಬಾರ್… ಎಲ್ಲ ಬಿಟ್ಟು ಚೊಲೋ ಬಾಳ್ವಿ… ನಡ್ಸೋಣ್ರೀ… ಎಂದ ಶಾನುಭೋಗ..

ಆತು… ಆತು… ಸತ್ರ ಊರಾಗ ಸಾಯಬೇಕು… ಅಂತ ನಮ್ಮ ಅಪ್ಪಗ ಮಾತು ಕೊಟ್ಟೀನಿ… ಹಂಗಾಗಿ ಊರಕಡೆ ಬಿಟ್ರೆ… ಬ್ಯಾರೆ ದಾರಿ ಇಲ್ಲ… ಹ್ಯಾಂಗ ಹೋಗುದು ಎಂದ ಧಣಿ!!!

ಊರಕಡೆ ಹೋಗಲು ಏನಾದರೂ ಸಿಗಬಹುದು ಎಂದು ಒಂದಿಷ್ಟು ದೂರ ನಡೆದರು, ಹೀಗೆ ಅವರು ಮಾತನಾಡುತ್ತಾ ಹೊರಟಿರುವಾಗ…

ಝಲ್!!! ಝಲ್!!!! ಝಲ್!!!!! ಎಂದು ಬಂಡಿಯೊಂದು ಸದ್ದು ಮಾಡುತ್ತ… ಇವರಿದ್ದ ಜಾಗಕ್ಕೆ ಸಮೀಪಿಸಿತು.

ಎತ್ತಿನ ಕೋಡಿಗೆ ಹಚ್ಚಿದ್ದ ಕೆಂಪು, ನೀಲಿಯ ಬಣ್ಣ , ಕರಡಿದಾರ, ಮತಾಟಿ, ಗೊಂಡೆ, ದಾಂಡ, ಕಾಲುಗೆಜ್ಜಿ, ಹುರಿಗೆಜ್ಜಿಯಿಂದ ಸಿಂಗಾರಗೊಂಡಿದ್ದ ಎತ್ತುಗಳು ಇವರನ್ನು ಆಕರ್ಷಿಸಿದವು…

ಎತ್ತಿನ ಬಂಡಿ ಬರುತ್ತಿದ್ದಂತೆ ಕೈ ಮಾಡಿದ ಧಣಿ…

ಯೇ!!! ತಮ್ಮ… ಯಾವ ಊರಕಡೆ ಹೊಂಟಿಯೋ????

ನಾನು… ನಾನು… ಎಂದು ಎತ್ತಿನ ಬಂಡಿ ಓಡಿಸುತ್ತಿದ್ದವ ಇವರನ್ನು ನೋಡಿ ತಡವರಿಸಿದ…

ಯೇ!!! ತಮ್ಮಾ… ನಾವು ಮನಷ್ಯರಪಾ… ಗಡ್ಡ ಬಿಟ್ಟೀವಿ ಅಂತ ಹೆದರಬ್ಯಾಡ, ತಪಗಲೂರು ಕಡೆ ಹೋಗಬೇಕು ಹಂಗಾಗಿ ನಿನ್ನ ಬಂಡಿ ನಿಲ್ಸಿ ಕೇಳಿದ್ವಿ ಎಂದ ದಳಪತಿ…

ತಪಗಲೂರು ಎಂದು ಹೆಸರು ಕೇಳುತ್ತಲೇ…  ಹೌದ್ರಿ… ನಾನು ಅದ ಊರವ ಅದೀನ್ರಿ… ಎಂದ ಎತ್ತಿನ ಬಂಡಿಯವ… ಬರ್ರೀ… ಕುಂದರ್ರೀ… ಎಂದು ಅವರನ್ನು ಹತ್ತಿಸಿಕೊಂಡ…

ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 22| ಶೋಷಿತರ ದನಿಯಾದ ಹುತಾತ್ಮರ ಮೆರವಣಿಗೆ

ಧಣಿ, ದಳಪತಿ, ಗೌಡ, ಶಾನುಭೋಗ ಎತ್ತಿನ ಬಂಡಿಯನ್ನು ಹತ್ತಿದರು…  ಬಂಡಿ ನಿಧಾನಕ ಓಡ್ಸಪ್ಪಾ… ಎಂದ ಗೌಡ…

ಆತ್ರೀ…ಆತು… ಯೇ‌… ಯೇ… ಮಾಲಿಂಗ್… ಯೇ… ಯೇ… ಶರಣ… ವೋ… ವೋ… ವೋ… ವೋ… ಎನ್ನುತ್ತಾ… ಎತ್ತಿನ ಬಂಡಿ ಸಾಗುತ್ತಿತ್ತು…

ಕೆಂಚ… ಬಸ್ಯಾರನ್ನು ಪಟಪಟಿಗೆ ಕಟ್ಟಿಕೊಂಡು,  ಎಳೆದಾಡಿಕೊಂಡು ಹೋಗಿದ್ದು ಇದೇ ರಸ್ತೆಯಲ್ಲಿ ಅಲ್ಲವೇ… ಎಂದು ನಾಲ್ವರು ಮನಸಿನಲ್ಲಿ ನೆನಪು ಮಾಡಿಕೊಳ್ಳುತ್ತಿದ್ದರು…  ಹೀಗೆ… ಆಲೋಚಿಸುತ್ತಿರುವಾಗ…

ಎತ್ತಿನ ಬಂಡಿಯವ ಎತ್ತಿನ ಬಾಲವನ್ನು ಜೋರಾಗಿ ಚಿವುಟಿದ ಕಾರಣ ಬಂಡಿವೇಗವನ್ನು ಪಡೆದುಕೊಂಡಿತು…

ನಿಧಾನ್ಕೋ ಮರಾಯ.. ನಿಧಾನ ಓಡಿಸು ಎಂದ ಧಣಿ…

ಹುರುಪಿನಲ್ಲಿದ್ದ ಎತ್ತುಗಳ ವೇಗವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೆಂಚ, ಬಸ್ಯಾ ತಮ್ಮನ್ನು ಎಳೆದುಕೊಂಡು ಹೋಗುವಂತ ಅನುಭವ ನಾಲ್ವರಿಗೆ ಆಗಲು ಆರಂಭಿಸಿತು… ನಾಲ್ಕು ಜನರು ಒಬ್ಬರನ್ನೊಬ್ಬರು ನೋಡಿಕೊಂಡರು… ನಿಧಾನಕ್ಕೆ ಬಂಡಿ ನಿಯಂತ್ರಣಕ್ಕೆ ಬರತೊಡಗಿತು… ಜೀವ ಉಳಿಯಿತು ಎಂದು ಸಮಾಧಾನ ಪಟ್ಟುಕೊಂಡರು.

ನೀವು ತಪಗಲೂರಾಗ ಯಾರ ಮನೀಗೆ ಹೊಂಟಿರಿ?. ಎಂದು ಕೇಳಿದ ಎತ್ತಿನ ಬಂಡಿಯವ…

ನಾವು… ನಾವು…

ಹು, ರೀ, ನೀವ… ಅಲ್ಯಾರಾದ್ರು ನಿಮ್ಮ ಬಳಗದವ್ರು ಅದರೇನ್ರೀ… ಎಂದು ಕೇಳಿದ ಎತ್ತಿನ ಬಂಡಿಯವ…

ಯೇ!!! ತಮ್ಮ ಯಾವ ಬಳಗ ಇಲ್ಲೋ, ಅದು ನಮ್ಮೂರೋ ತಮ್ಮ … ಎಂದ! ಧಣಿ..

ನಿಮ್ದೂ ನಮ್ಮೂರಾ!!! ಎತ್ತಿನ ಮೂಗ್ದಾರವನ್ನು ಎಳೆದು ಬಂಡಿಯನ್ನು ನಿಲ್ಲಿಸಿ ಕೇಳಿದ ಬಂಡಿಯವ…

ಹೌದೋ ತಮ್ಮ… ಎಂದ ದಳಪತಿ…

ಮೂರ್ನಾಲ್ಕು ಬಾರಿ,ತಿರುಗಿ… ತಿರುಗಿ… ನೋಡಿ… ನಾ ಯಾವತ್ತು ನಿಮ್ಮನ್ನ ನೋಡಿಲ್ಲಲ್ರೀ… ಎಂದ ಎತ್ತಿನ ಬಂಡಿಯವ…

ನಾವು ಊರಗ ಇಲ್ದ 12 ವರ್ಷ ಆತೋ ತ…ಮ್ಮ… ಎಂದು ಗೌಡ ಹೇಳುತ್ತಿರುವಾಗ ಶಾನಭೋಗ ಗೌಡನ ಬಾಯಿಗೆ ಕೈ ಅಡ್ಡ  ಇಟ್ಟ…

ಆ ಅಣ್ಣಾರ್ರು ಏನೋ ಅಂದ್ರಲ್ರೀ… ಸರಿಯಾಗಿ ಕೇಳಲಿಲ್ಲ ಎಂದ ಬಂಡಿಯವ

ನೀನು ಯಾರ ತಮ್ಮ ಆ ಊರಾಗ…?? ಎಂದ ಶಾನಭೋಗ…

ಇದನ್ನೂ ಓದಿಗಾಯ ಕಥಾ ಸರಣಿ | ಸಂಚಿಕೆ 23| ಬದಲಾವಣೆಯತ್ತ ಸಾಗಿದ ತಪಗಲೂರು…

ನಾನ್ರೀ… ಕೆಂಚ ಅಂತರಿ… ಎಂದ ಬಂಡಿಯವ…

ಕೆಂಚಾ… ಎಂದು ನಾಲ್ವರು ಒಂದೇ ಸಾರಿ ಕೂಗಿದರು…

ಹೌದ್ರಿ!!!! ಎಂದ ಬಂಡಿಯವ…

ಕೆಂಚ ಅಂದ್ರ…. ಮಾದರ ಕೆಂಚಾನಾ? ಎಂದ ಧಣಿ…

13 ವರ್ಷದ ಹಿಂದ ಮಾದರ ಕೆಂಚ ಆಗಿದ್ದೇರಿ, ಆದರ ಈಗ ಕೆಂಚ ಅಂತ ಅಷ್ಟ ಆಗಿನ್ರೀ… ಇನ್ನೂ ಅವನ ಮಾತು ಪೂರ್ತಿ ಆಗಿರಲಿಲ್ಲ…

ಮಾದರ ಕೆಂಚ ಎಂಬ ಪದ ಕಿವಿಗೆ ಬೀಳುತ್ತಲೆ ಧಣಿ ಎದ್ದು ನಿಂತು…

ಹೌದು ನಾನ್ಯಾವತ್ತು ನಿಮ್ಮನ್ನ ನೋಡಿಲ್ಲಲ್ರೀ… ಎಂದು ಕೆಂಚ ತಿರುಗಿ ನೋಡಿದ… ಯಾಕ್ರೀ… ಅಣ್ಣಾರ‌… ನಿಂತಿರಿ ಕುಂತ್ಕೋರಿ… ಬಿದ್ದಗಿದ್ದೀರಿ ಎಂದ ಕೆಂಚ…

ಕೆಂಚ… ನಾನು ನಿಮ್ಮೂರ ಧಣಿ‌… ಇವ ದಳಪತಿ… ಶಾನಭೋಗ…, ಗೌಡಪ್ಪ… ಎನ್ನುತ್ತಿದ್ದಂತೆ… ಕೆಂಚ ಬಂಡಿಯನ್ನು ನಿಲ್ಲಿಸಿ, ಹಿಂದುರುಗಿ ಕೆಕ್ಕರಿಸಿ ನೋಡುತ್ತಾ ನಿಂತ…

ಕೆಂಚನ ನೋಟ ಇವರನ್ನು ಇರಿಯುವಂತಿತ್ತು… ಅವನ ನೋಟವನ್ನು ಎದುರಿಸದೆ…  ತಲೆ ತಗ್ಗಿಸಿದರು…

ಕೆಂಚ ಸಾವರಿಸಿಕೊಂಡು… ಧಣಿ….  ಹೆಂಗಾಗಿರಲ್ರಿ… ಎನ್ನುತ್ತಾ… ಎತ್ತಿಗೆ ಕಟ್ಟಿದ್ದ ನೊಗದ ಕೊರಳಿಡಿದು ಬಂಡಿಯನ್ನು ನಿಲ್ಲಿಸಿದ…

ಐವರು ಒಂದಿಷ್ಟು ಹೊತ್ತು ನೆಲದ ಮೇಲೆ ಕುಳಿತು ಪರಸ್ಪರ ನೋಡಿಕೊಂಡರು… ಮೌನವೇ ಸುತ್ತಲೂ ಆವರಿಸಿತ್ತು…

ಊರು ಹೆಂಗೈತಿ ಕೆಂಚ ಈಗ ಎಂದ ಧಣಿ…

ಊರು……!

ನಾನು ಹಚ್ಚಿದ ಬೆಂಕಿ ಆರೈತೋ ಇಲ್ಲ… ಊರಾಗಿನ ಮಂದಿ ಹ್ಯಾಂಗ ಅದರ…. ಎಂದ ಧಣಿ…

ಊರು ಈಗ ಬದಲಾಗೈತ್ರಿ….

ದೊಡ್ಡ ಧಣ್ಯಾರ ತೊಗೊಂಡ ತೀರ್ಮಾನ ಊರ ಮಂದಿನ‌ ಚಲೋ ಬಾಳಂಗ ಮಾಡೈತ್ರೀ… ಅಣ್ಣ ತಮ್ಮಾರ ತರ ಈಗ ಜೀವನ ನಡದೈತ್ರಿ …… ಎಂದ ಕೆಂಚ…

ಕೆಂಚನ ಮಾತು ಕೇಳಿ… ಅವರ ಕಣ್ಣುಗಳು ತೇವವಾದವು… ಅವರಿಗೆ ತಪ್ಪಿನ‌ ಅರಿವಾಗಿತ್ತು…..

ಈಗ ಊರಾಗ ಯಾವ ದ್ವೇಷ ಇಲ್ಲ, ಮೇಲ-ಕೀಳು ಅಂತಾ ಇಲ್ರಿ… ಮೇಲಾಗಿ ಊರು ಕೇರಿ ಅಂತಾ ಕರೆಂಗಿಲ್ರಿ…. ಎಂದ ಕೆಂಚ…

ಓಹ್ ಅಷ್ಟೊಂದು ಬದ್ಲಾಗೈತಿ…… ನಡೀ ಕೆಂಚ…. ಊರ ಮಣ್ಣಿನ ವಾಸನಿ ಬಡ್ಸಕೊಳ್ಳೋಣ…..

ಆತ್ರೀ ಧಣಿ… ಎಂದು ಎತ್ತನ್ನು ನೇಗಲ ಕೊರಳಿಗೆ ಕಟ್ಟಿದ… ಎಲ್ಲರೂ ಬಂಡಿ ಹತ್ತಿ ತಪಗಲೂರ ಕಡೆ ಹೊರಟರು…. ಗಾಯ

 

(ಮುಂದುವರೆಯುವುದು……………)

 

ವಿಡಿಯೋ ನೋಡಿಅಚ್ಚೆದಿನದಿಂದ… ಅಮೃತ ಕಾಲದವರೆಗೆ…! ಚುನಾವಣಾ ಬಾಂಡ್ ಮೂಲಕ ಖಾವೋ, ಖಾನೆ ಮಾಡಿದ ಬಿಜೆಪಿ – ಗುರುರಾಜ ದೇಸಾಯಿ

 

 

Donate Janashakthi Media

Leave a Reply

Your email address will not be published. Required fields are marked *