ಗಾಯ ಕಥಾ ಸರಣಿ | ಸಂಚಿಕೆ 22| ಶೋಷಿತರ ದನಿಯಾದ ಹುತಾತ್ಮರ ಮೆರವಣಿಗೆ

ಗುರುರಾಜ ದೇಸಾಯಿ
(ಇಲ್ಲಿಯವರೆಗೆ….  ಚೂರಿ ಪರ್ಸ್ಯಾನ ಕೊಲೆಗೆ ನ್ಯಾಯ ಸಿಗಬೇಕೆಂಬ ಪ್ರತಿಭಟನೆ ಸಂಘರ್ಷಕ್ಕೆ ತಿರುಗಿತ್ತು…  ಪೊಲೀಸರ ಲಾಠಿ ರಾಜಣ್ಣ, ಮಲ್ಯಾ ದೇವ್ಯಾರವರ ಪ್ರಾಣವನ್ನು ಕಸಿದುಕೊಂಡಿತ್ತು… ನಾಲ್ಕು ಜನರ ಸಾವು ಇಡೀ ತಪಗಲೂರನ್ನು ಬೆಚ್ಚಿ ಬೀಳಿಸಿತ್ತು….. ಮುಂದೆ ಓದಿ…. ) ಗಾಯ

ಪೊಲೀಸರು ಮೂವರನ್ನು ಹತ್ಯೆ!!! ಮಾಡಿದ ನಂತರ ತಪಗಲೂರಿನಲ್ಲಿ… ಸ್ಮಶಾನ… ಮೌನ… ಆವರಿಸಿತ್ತು. ಘಟನೆಯನ್ನು ನೆನದು ಎಲ್ಲರೆದೆ… ಝಲ್!!! ಎನ್ನುತ್ತಿತ್ತು. ಕೇರಿಯ ಜನರಿಗಾದ ಅನ್ಯಾಯ… ಸುತ್ತ ಹತ್ತುಹಳ್ಳಿಯ ಜನ ಮಮ್ಮಲ ಮರುಗುವಂತಾಗಿತ್ತು.

ನಾಲ್ವರು ಊರ ಹಿರಿಯರು ಜೈಲುಪಾಲಾಗಿದ್ದು, ಊರಿನವರ ನಿದ್ದೆ ಕೆಡಿಸಿತ್ತು. ಕಾಲ… ಬದಲಾಗಿದೆ…, ಬದಲಾಗುತ್ತಿದೆ… ಬದಲಾಗುತ್ತಿರುತ್ತದೆ… ಎಂಬದು ಅವರ ಎದೆಗೆ ನಾಟುತ್ತಿತ್ತು. ದಲಿತರ ಮೇಲೆ ಊರ ಹಿರಿಯರು ನಡೆಸಿದ ದೌರ್ಜನ್ಯ… ಪ್ರತಿಕಾರವಾಗಿ!!! ಸೇಡಾಗಿ!!! ನಮ್ಮನ್ನು ಸುಟ್ಟು ಬೂದಿ ಮಾಡಬಹುದು, ಮುಂದೇನಾಗಬಹುದು? ಎಂಬ ಪ್ರಶ್ನೆ ಮತ್ತು ಆತಂಕ… ಅವರಿಗೆ ಎಲ್ಲವನ್ನೂ ನೆನಪಿಸುವಂತೆ ಮಾಡಿತ್ತು.

ಮನೆಯಿಂದ ಯಾರು… ಹೊರಬರದೆ… ಮನೆಮಂದಿಯೇ… ಕುಳಿತು ಗುಸು ಗುಸು ಮಾತನಾಡಿಕೊಳ್ಳುತ್ತಿದ್ದರು. ಹಸಿವಿನಿಂದ ಮಕ್ಕಳು ಅಳುತ್ತಿದ್ದ!!! ನೋವಿನ ಕೂಗು… ಕೇರಿಯ… ಕಡೆಗೆ… ಗಾಳಿಯಲ್ಲಿ… ತೂರತೊಡಗಿತು….. ಗಾಯ

ಈಗ…. “ಶಾಂತ ಆತೇನ್ರೋ… ನಿಮಗ… ಮೂರು ಬಲಿ ಪಡದು… ನಮ್ಮನ್ನ ಬೀದಿಪಾಲು ಮಾಡಿದ್ರಲ್ಲೋ…”,  ಎಂದು ಸಣ್ಯಾ… ಒಮ್ಮೆ ಜೋರಾಗಿ… ಕೂಗಾಡುತ್ತಿದ್ದ… ಮಗದೊಮ್ಮೆ ಜೋರಾಗಿ… ಅಳುತಿದ್ದ.

ದೇವವ್ವ, ಭರ್ಮವ್ವರಿಗಂತೂ… ಅತ್ತೂ… ಅತ್ತೂ… ಧ್ವನಿ ಕ್ಷೀಣಿಸಿ… ಹೋಗಿತ್ತು. ಕಣ್ಣೀರು ಬತ್ತಿ… ಹೋಗಿತ್ತು…. ಬಾಯಿ ಬಾಯಿ ಬಡೆದುಕೊಳ್ಳುತ್ತಾ… ಎದೆಯೊಳಗಿನ ಸಂಕಟವನ್ನು ಹೊರಹಾಕುತ್ತಿದ್ದರು…

ಕೇರಿಯ ಯುವಕರು ಆರ್ಭಟಿಸತೊಡಗಿದರು!!! ನಾವ ಮ್ಯಾಲೆ ಇರಬೇಕು… ನಾವ ಮ್ಯಾಲೆ ಇರಬೇಕು… ಅಂತ ನಮ್ಮ ಮ್ಯಾಗ ದೌರ್ಜನ್ಯ ನಡ್ಸಿದ್ರಿ… ಊರಿಂದ ನಮ್ಮನ್ನ ಹೊರಗಿಟ್ರಿ….. ನಮ್ಮ ತಲೆ ಕೂದಲ ಕತ್ತರಿಸಿದ್ರ… ಅನಿಷ್ಟ ಹತ್ತತೈತಿ ಅಂತ ನಮ್ಮನ್ನ ದೂರ ಇಟ್ರಿ….. ಈಗ ನಮ್ಮ ಹೆಣ ಬಿಳ್ಸದ್ರಿ… ನಿಮಗ ಇನ್ನೂ ಸಾಕಗಿಲ್ಲ ಅಂದ್ರ ಬರ್ರಿ…. ನಮ್ಮೆಲ್ಲರ್ನೂ ಸಾಯಿಸಿ, ನಮ್ಮ ಮ್ಯಾಲೆ ಕುಂದ್ರುವಂತ್ರಿ!!!  ಎಂದು ರಾಮ್ಯಾ… ಊರವರ ಮನೆಗೆ ಕೇಳುವಂತೆ… ಕೂಗಾಡತೊಡಗಿದ.

ರಾಮ್ಯಾನ… ಆರ್ಭಟಕ್ಕೆ ಊರಿನ ಜನರ ಜೀವ!!! ಹೋಗಿ… ಬಂದಂತೆ… ಆಗಿತ್ತು. ಮನೆಯಲ್ಲಿದ್ದ ಕುಡಗೋಲು, ಕೊಡ್ಲಿ ತಂದು ” ನಮ್ಮನ್ನು ಸಾಯ್ಸಿ” ಎಂದ ರಾಮ್ಯಾನ ಕೂಗಿಗೆ ಊರವರ ಕಿಟಕಿಯ… ಬಾಗಿಲು ಸಹ ಮುಚ್ಚಿಕೊಂಡಿತ್ತು…

ಮಲ್ಯಾ… ದೇವ್ಯಾ… ರಾಜಪ್ಪಣ್ಣ… ಚೂರಿ ಪರ್ಸ್ಯಾರ… ಮೃತದೇಹಕ್ಕೆ ಅಂತಿಮ ತಯಾರಿಗಳು ಸಿದ್ದಗೊಳ್ಳುತ್ತಿರುವಾಗ… ಹತ್ತಾರು ಪೊಲೀಸ್ ಗಾಡಿಗಳು…. ಬಂವ್… ಬಂವ್… ಎಂದು ಹಾರ್ನ್ ಮಾಡುತ್ತಾ… ಕೇರಿಯತ್ತ ಬಂದವು…..

ಗಾಡಿ ಬಂದು ನಿಲ್ಲುತ್ತಿದ್ದಂತೆ……

ಯಪ್ಪಾ….. ಯಪ್ಪಾ….. ಎಂದು ಎದೆ ಬಡಿದುಕೊಳ್ಳುತ್ತಾ…. ಕೆಂಚ ಮತ್ತು ಬಸ್ಯಾ ಓಡೋಡಿ ಬಂದರು…..

ರಾಜಣ್ಣನ ಹೆಂಡತಿ ಎದೆ ಬಡಿದುಕೊಳ್ಳುತಾ… ನಮಗಿನ್ನಾರ್ರಿ ದಿಕ್ಕು…. ಎಂದು ನೆಲಕ್ಕುರುಳಿದರು… ರಾಜಣ್ಣನ ಮಕ್ಕಳು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು…

ನಾಲ್ವರ ಶವಗಳನ್ನು ನೋಡಿ… ಅಳತೊಡಗಿದರು… ಇವರ ಆಕ್ರಂದನ ಮುಗಿಲು ಮುಟ್ಟಿತ್ತು….

ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 20 – ನ್ಯಾಯಕ್ಕಾಗಿ ಕಾವೇರಿದ ಪ್ರತಿಭಟನೆ

ನೋಡೋ… ಬಸ್ಯಾ…. ಹೆಂಗ ಬಿದ್ದಾರಾ… ಅಂತ.. ಲಗೂ ನಿಮ್ಮನ್ನ ಊರಿಗೆ ಕರ್ಸಕೊಂತೀವಿ… ಅಂತ ಹೇಳಿ ಈಗ ರಕ್ತದ ಮಡುವಿನಾಗ ಬಿದ್ದಿಯಲ್ಲೊ… ಯಪ್ಪೋ…. ಎದ್ದೇಳೋ… ಎದ್ದೇಳೋ… ಯಪ್ಪಾ… ನಾನು, ಬಸ್ಯಾ… ಬಂದೀವಿ ಎಂದು ಕೆಂಚ… ಅಳತೊಡಗಿದ…..

ನಮಗ ನ್ಯಾಯ ಕೊಡಸ್ತೀನಿ ಅಂತ, ನಿಮ್ಮ ಜೀವಾನ… ನಮಗಾಗಿ… ಅರ್ಪಣೆ  ಮಾಡಿದ್ರಲ್ರೀ… ರಾಜಣ್ಣಾರ… ಎಂದು ಬಸ್ಯಾ… ಬಾಯಿ… ಬಾಯಿ… ಬಡಿದುಕೊಂಡು… ಅಳತೊಡಗಿದ……

ನೀವು ಸಾಯ್ತೀರಿ… ಅಂತ ಗೊತ್ತಾಗಿನೇ… ನಮನ್ನ ಡಿಸಿ ಸಾಹೇಬರ ಕಡೆಯಿಂದ ಕರ್ಸಿದ್ರೇನ್ರಿ… ರಾಜಣ್ಣ… ಎಂದು ಬಸ್ಯಾ, ಕೆಂಚ ತಬ್ಬಿಕೊಂಡು ಅಳುತ್ತಿರುವಾಗ… ಇಡೀ ಕೇರಿಯ ಜನರ ಕಣ್ಣಲ್ಲಿ… ನೀರು ಹರಿಯಿತು….

ಅಕ್ಕಾರ… ರಾಜಣ್ಣರ ಕಾರ್ಯ ಎಲ್ಲಿ ಮಾಡೋನ್ರಿ ಎಂದು ಕೆಂಚ….

ಅವರಿಗೆ, ನಿಮ್ಮ ಮ್ಯಾಗ ಅಭಿಮಾನ ಜಾಸ್ತಿ ಇತ್ತು… ಯಾವಾಗ್ಲು ನಿಮಗೆ ನ್ಯಾಯ ಕೊಡಸಬೇಕು ಅಂತಿದ್ರು… ನ್ಯಾಯಕ್ಕಾಗಿ ಹೋರಾಡಿ ನನ್ನ ಗಂಡ ಮಡದಾನ…. ಹಂಗಾಗಿ ಅವರ ಕಾರ್ಯ ಇಲ್ಲೆ ಆಗ್ಲಿ ಎಂದಳು ರಾಜಣ್ಣನ ಹೆಂಡತಿ…..

ಕೆಂಚ… ಬಸ್ಯಾನ… ಬಳಿ ಬಂದು ಪೊಲೀಸನೊಬ್ಬ ಮುಂದಿನ ಕಾರ್ಯಗಳನ್ನು ಮಾಡುವಂತೆ ಸೂಚಿಸಿದ….

ಸಣ್ಯಾ… ಎಲ್ಲಾ ತಯಾರಿ ಆಗೈತ್ಯಾ… ಹೇ ಹುಡಗುರ ರಾಜಣ್ಣಗ… ನಾವು ಬಾರ್ಸೊ ಹಲಗಿ ನಾದ, ಬಾಳ ಇಷ್ಟ ಅಕ್ಕಿತ್ತು ಜೋರಾಗಿ ಬಾರಸ್ರೀ… ಎಂದ ಕೆಂಚ…

ಸಣ್ಣ್ಯಾ… ಬಸ್ಯಾ… ಕೇರಿ ಹುಡುಗರೆಲ್ಲ ಸೇರಿ… ನಾಲ್ಕು ಸ್ಯೆದಗಿ ಮಾಡಿದ್ರು…. ಒಂದೊದು ಸ್ಯೆದಗಿಯ ಮ್ಯಾಲೆ ಒಬ್ಬೊಬ್ಬರನ್ನು ಮಲಗಸಿದರು…..

ಇತ್ತ ಹುಡುಗರು ಜೋರಾಗಿ ಘೋಷಣೆ… ಕೂಗಿದರು… ಇನ್ನೇನು ಶವವನ್ನು ಮೇಲೆಕ್ಕೆತ್ತಿ ಹೊರಡಬೇಕು ಎನ್ನುವಷ್ಟರಲ್ಲಿ…..

ತಡಿರೀ… ತಡಿರೀ… ಊರ ತುಂಬ ಮರವಣಿಗೆ ಮಾಡೋಣ… ಅದ್ಯಾರು ನಮ್ಮನ್ನ ತಡಿತಾರ ಅಂತ ನೋಡೋಣು… ಊರು ತುಂಬಾ ಓಡ್ಯಾಡಬೇಕು… ಈ ಸಂಕ್ಟ… ದೌರ್ಜನ್ಯದಿಂದ… ನಮಗ ಮುಕ್ತಿಕೊಡಿಸಬೇಕು ಅಂತ ಇವರು ಪ್ರಾಣ ತ್ಯಾಗ ಮಾಡ್ಯಾರ… ಊರ ತುಂಬ ಮೆರವಣಿಗಿ… ಮಾಡಿ… ಅವರ ಆಸೆ ಇಡೇರ್ಸೊಣು ಎಂದ ಕೆಂಚ…

ಹುಡುಗರೆಲ್ಲ ದುಃಖದಿಂದಲೇ ಒಪ್ಪಿಗೆ ಕೊಟ್ಟರು… ಹಲಗೆಯ ಸದ್ದು ಜೋರಾಯಿತು…

ಇಷ್ಟುದಿನ ಈ ಕೋಲು ಕುಟ್ತಾ… ಬಂದ್ರ… ನೀವು ಒಳಗ ಹೋಗ್ತಿದ್ರಿ… ನಮ್ಮ ನೆರಳು ನಿಮ್ಮ ಮೇಲೆ… ಬಿಳಬಾರ್ದು, ಬಿದ್ರ… ಮೈಲಿಗಿ ಅಕ್ಕೈತಿ ಅಂತಿದ್ರಿ… ಇವತ್ತ… ಈ ಸಂಬಳಿಗೋಲು… ತೊಗೊಂಡು ಊರ ತುಂಬ ಕುಟ್ತಾ ಬರ್ತೀವಿ…. ಎಂದ… ಕೆಂಚ…

ಸಂಬಳಿಗೋಲಿಗೆ ಕೆಂಪು, ನೀಲಿ ಬಣ್ಣದ ಧ್ವಜವನ್ನು  ಸಣ್ಯಾ… ಬಸ್ಯಾ ಇಬ್ಬರು ಕಟ್ಟಿದರು… ಮುಂದೆ ಹಲಗೆಯ ಸದ್ದು… ಹಿಂದೆ… ಹಿಂದೆ… ಹುತಾತ್ಮರ ಮೆರವಣಿಗೆ ಸಾಗಿತು…..

ದಲಿತರು ಬಂದರು ದಾರಿ… ಬಿಡಿ…

ನಿಮ್ಮಂತೆ ನಮ್ಮನ್ನು ಬದುಕಲು ಬಿಡಿ…

ನಮ್ಮ – ನಿಮ್ಮ ರಕ್ತದ ಬಣ್ಣ ಕೆಂಪು…

ಹೀಗೆ ಹಾಡುಗಳು, ಹಲಗೆಯ ಸುದ್ದು ಊರ ತುಂಬೆಲ್ಲಾ ಹರಡಿತು… ಓಣಿ ಓಣಿಯಲ್ಲೂ ಮೆರವಣಿಗೆ ನಡೆಸಿ ಅಗಸಿಕಟ್ಟೆ ಇಳಿಯತೊಡಗಿದರು…. ಗಾಯ

ಇದನ್ನೂ ಓದಿಗಾಯ ಕಥಾ ಸರಣಿ | ಸಂಚಿಕೆ 21- ಲಾಠಿಯ ಏಟಿಗೆ ಹರಿದ ನೆತ್ತರು 

ಇದೆಲ್ಲವನ್ನೂ ಶ್ರೀಧರ ಮನೆಯ ಕಿಟಕಿಯಿಂದ ನೋಡುತ್ತಿದ್ದ…

ಅಪ್ಪಾ… ಕೆಂಚಪ್ಪಣ್ಣ,, ಬಸ್ಸಪ್ಪಣ್ಣ ಎದಿ ಬಡ್ಕೊಂಡು ಅಳ ಕತ್ತಾರ… ಅವರಿಗೆ ಬಾಳ ತ್ರಾಸ ಅಗೈತಿ ಅಲ್ಲ…?

ಶ್ರೀಧರನ ಪ್ರಶ್ನೆಗೆ ಅವರಪ್ಪ ಮೌನವಾದ…

ಊರಾಗ… ಯಾರಾದ್ರು ಸತ್ರು ಎಲ್ಲರೂ ಮಣ್ಣಿಗೆ ಹೋಗ್ತಾರ… ಇವರ್ಗೆ ಯಾಕೆ ಯಾರು ಹೋಗ್ತಿಲ್ಲ ಅಪ್ಪ ಎಂದ ಶ್ರೀಧರ…

ಮಕ್ಕಳು.. ಬೆಳಿತಾ… ಬೆಳಿತಾ… ದೊಡ್ಡವರಗ್ತಾರ… ಅವರ ತಿಳವಳಿಕಿನೂ ದೊಡ್ಡದು ಆಗ್ತದ… ಶ್ರೀಯಾ ಕೇಳೋ  ಪ್ರಶ್ನಿಗೆ ಉತ್ತರ ಕೊಡದವರು… ಊರು ಆಳಿ ಏನ ಬಂತು??? ನಿಮ್ಮ ತಮ್ಮನ ಕಾಲಕ್ಕ ಎಲ್ಲಾವನು ನಿಂತು ಹೋಗ್ಲಿ… ಎಂದಳು ಶ್ರೀಧರನ ಅಮ್ಮ…

ಏನ್ ಮಾಡೋದು ಈಗ??? ಅವರ ಜೀವ ತೆಗೆದಿದ್ದು ಆಯ್ತು.. ಇನ್ನೂ ಏನ್ ನ್ಯಾಯ ಕೊಡಸ್ತಿ.. ಪ್ರತಾಪನ ಆರ್ಭಟ ನಿಲ್ಲಸೋಕೆ ಆಗುತ್ತೇನು? ಎಂದ ಶ್ರೀಧರನ ಅಪ್ಪ

ಇನ್ನೂ ಎಷ್ಟು ಹೆಣ ಬೇಕ್ರಿ ನಿಮ್ಮ ತಮ್ಮಗ…, ಈ ಮನೆತನಕ್ಕ ತದ್ವಿರುದ್ದ ಹುಟ್ಟಿಬಿಟ್ಟ ಪುಣ್ಯಾತ್ಮ… ನೀವ ಏನರ ಮಾಡ್ರಿ  ಹತ್ತಿರೋ ಬೆಂಕಿ ಆರಸ್ರಿ… ನೆಮ್ಮದಿಯಿಂದ ಊರಮಂದಿ ಬಾಳೋತರ ಮಾಡ್ರಿ. ಊರ ಮಂದಿ- ಕೇರಿ ಮಂದಿ ಅಣ್ಣ ತಮ್ಮಂದಿರ ತರ ಬದುಕ್ಲಿ ಎಂದಳು ಶ್ರೀಧರ ಅಮ್ಮ..

ಅಪ್ಪಾ.. ನಾನು ಕಾರ್ಯಕ್ಕ ಹೋಗ್ಲಾ ಎಂದು ಶ್ರೀಧರ ಅವರಪ್ಪನನ್ನು ತಬ್ಬಿಕೊಂಡ…

ಹೀಗಿ ಅವರ ಸಂಭಷಣೆ ನಡೆಯುತ್ತಾ ಇತ್ತು, ಇತ್ತ…   ಊರಿನ ಜನ ಯಾರೊಬ್ಬರೂ… ಮನೆಯಿಂದ ಆಚೆ ಬರಲಿಲ್ಲ… ಅಗಸಿಕಟ್ಟೆಯ ಹತ್ತಿರ ಅಂತಿಮವಾಗಿ ಹಲಗಿ ಬಾರಿಸಲು ಶುರು ಮಾಡಿದರು… ಆಗಲೂ… ಯಾರೂ ಬರಲಿಲ್ಲ….. ಒಬ್ಬರಿಗೊಬ್ಬರು… ಮುಖ ನೋಡಿಕೊಂಡು ಮುಂದೆ ಹೊರಡಬೇಕು ಎನ್ನುವಷ್ಟರಲ್ಲಿ…..

ನಾಗ್ಯಾ…… ಎಂದು ಶ್ರೀಧರ ಕೂಗುತ್ತಾ ಓಡೋಡಿ ಬಂದ…  ಶ್ರೀಧರನ ಹಿಂದೆ ಅವರಪ್ಪ, ಅಣ್ಣ ಓಡೋಡಿ ಬಂದರು…..

ಅಗಸಿಕಟ್ಟಿಯ ಹತ್ತಿರ ಬಂದ ಶ್ರೀಧರ ನಗ್ಯಾನ ಕೈ… ಹಿಡಿದು ನಾನು… ಬರ್ತಿನಿ ಅಂದ…

ಸಣ್ಣ ಧಣಿ… ನೀವು ಬರಬಾರ್ದು ಹೋಗ್ರಿ… ಮನಿಗೆ ಎಂದ ಕೆಂಚ…..

ಇಲ್ಲ ಕೆಂಚ… ಶ್ರೀಧರ ಅಷ್ಟೇ ಅಲ್ಲ… ನಾವೆಲ್ಲ… ಬರ್ತೀವಿ… ನಡೀರಿ… ಮುಂದೆ ಸಾಗ್ಲಿ… ಎಂದ ಶ್ರೀಧರನ ಅಪ್ಪ….

ದೊಡ್ಡ ಧಣಿ ನೀವು….

ಹೌದು ನಡೀರಿ… ನಡೀರಿ……

ಹುತಾತ್ಮರ ಮೆರವಣಿಗೆ ಸಾಗಿತು. ಊರ ಮಂದಿ ಒಬ್ಬೊಬ್ಬರಾಗಿ ಮೆರವಣಿಗೆಗೆ ಜೊತೆಯಾಗತೊಡಗಿದರು……

(ಮುಂದುವರೆಯುವುದು……………)

ವಿಡಿಯೋ ನೋಡಿಸಾವರ್ಕರ್ ಕುರಿತು ಏಳು ಸುಳ್ಳುಗಳು – ಡಾ. ಮೀನಾಕ್ಷಿ ಬಾಳಿ ಮಾತುಗಳು

 

Donate Janashakthi Media

Leave a Reply

Your email address will not be published. Required fields are marked *