ಗಂಡಾಳ್ವಿಕೆ ಸಮಾಜಕ್ಕೆ ಹಿಡಿದ ಕನ್ನಡಿ – ‘ಕಾಕದೋಷ’ ನಾಟಕ

ಬೆಂಗಳೂರು ಥಿಯೇಟರ್ ಕಲೆಕ್ಟಿವ್ ತಂಡದ ಹೊಸ ನಾಟಕ ಕಾಕದೋಷ ಫೆಬ್ರವರಿ 22 ಮತ್ತು 23 ರಂದು ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ಅನುಪಮಾ ಚಂದ್ರಶೇಖರ್ ರವರ ‘When the crows visit’ ಎಂಬ ನಾಟಕವನ್ನು ಕನ್ನಡದಲ್ಲಿ ವೆಂಕಟೇಶ್ ಪ್ರಸಾದ್ ಅವರು ಅನುವಾದಿಸಿ, ನಿರ್ದೇಶನ ಮಾಡಿದ್ದಾರೆ. ನಾಟಕವನ್ನು ವೀಕ್ಷಿಸಿ ಇಬ್ಬರೂ ವಿಮರ್ಶಕರು ಬರೆದ ಲೇಖನ ಓದುಗರಿಗಾಗಿ…..  ಗಂಡಾಳ್ವಿಕೆ 
– ಎಚ್.ಆರ್. ನವೀನ್ ಕುಮಾರ್, ಹಾಸನ

ಪ್ರಸ್ತುತ ಸಮಾಜ ಎದುರಿಸುತ್ತಿರುವ ಆಂತರಿಕ ಮತ್ತು ಬಾಹ್ಯ ಒತ್ತಡ  ಹಾಗೂ ಸಮಸ್ಯೆಗಳನ್ನು ಅತ್ಯಂತ ಮನಮುಟ್ಟುವ ರೀತಿಯಲ್ಲಿ ಕಾಕದೋಷ ನಾಟಕದಲ್ಲಿ ಕಟ್ಟಿಕೊಡಲಾಗಿದೆ.

ಇಂದಿನ ಸಮಾಜ ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಆಚರಣೆಗಳು, ಸಂಪ್ರದಾಯಗಳನ್ನು ಆದುನಿಕ ಜಗತ್ತು ಮರೆತಿದೆ. ಅದರಿಂದಾಗಿಯೇ ನಮ್ಮೆಲ್ಲಾ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡಿವೆ. ನಾವು ಈ ಎಲ್ಲಾ ದೋಷಗಳನ್ನು ನಿವಾರಿಸಿಕೊಳ್ಳಲು ದಹಿಕವಾಗಿ‌ ನಮ್ಮಿಂದ ಇಲ್ಲವಾಗಿರುವ ಹಿರಿಯರಿಗೆ ಕಾರ್ಯ ಮಾಡಿ ಊಟ ಹಾಕಬೇಕು, ಇಲ್ಲದಿದ್ದರೆ  ಅವರು ಕಾಗೆಯ ರೂಪದಲ್ಲಿ ಕಾಡುತ್ತಾರೆ. ಎನ್ನುವ ಮನಸ್ಥಿತಿಯನ್ನು ಇಟ್ಟುಕೊಂಡು ತಮ್ಮ ಸುತ್ತ ನಡೆಯುವ ಎಲ್ಲ ಘಟನೆಗಳಿಗೂ ಆ‌ ದೋಷಗಳೇ ಕಾರಣ ಎಂದು ಭಾವಿಸಿ ಬದುಕು ನಡೆಸುತ್ತಿರುವ ಅಜ್ಜಿ.

ಮತ್ತೊಂದೆಡೆ ತನ್ನ ಗಂಡನಿಂದ ಪಡಬಾದರ ಕಷ್ಟಗಳನ್ನು ಪಟ್ಟು, ಆತನ ದಹಿಕ ಮತ್ತು ಮಾನಸಿಕವಾದ ಎಲ್ಲಾ ಚಿತ್ರ ಹಿಂಸೆಗಳನ್ನು ತನ್ನ ‘ಸಂಸಾರದ ಒಳಿತಿಗಾಗಿ’ ಸಹಿಸಿಕೊಳ್ಳುತ್ತಾ, ಈ ವಾತಾವರಣ ತನ್ನ ಮಗನನ್ನು ಹಾಳು ಮಾಡುತ್ತದೆ. ಹಾಗಾಗಿ ಅವನನ್ನು ಪ್ರತ್ತೇಕವಾಗಿ ಓದಿಸಬೇಕು, ಅವನನ್ನು ಒಳ್ಳೆಯ ಮನುಷ್ಯನನ್ನಾಗಿ‌ ಬೆಳೆಸಬೇಕು ಎಂಬ ಒತ್ತಡಕ್ಕೆ ಸಿಲುಕಿ, ಎಲ್ಲವನ್ನೂ ತ್ಯಾಗ ಮಾಡುತ್ತಾ, ಜೀವನ ಸಾಗಿಸುವ ತಾಯಿ.

ಇನ್ನೊಂದೆಡೆ ಮನೆಯ ವಾತಾವರಣದಿಂದ ದೂರವಿದ್ದು ಅಲ್ಲಿಯ ಪರಿಸರಕ್ಕೆ ಹೊಂದಿಕೊಂಡು ತನ್ನೊಳಗೆ ಒಂದು ಗಂಡಾಳ್ವಿಕೆಯ ವ್ಯಾಘ್ರ ಮನಸ್ಥಿತಿಯನ್ನು ಬೆಳೆಸಿಕೊಂಡು ಹೆಣ್ಣನ್ನು ಒಂದು ಭೋಗದ ವಸ್ತುವಿನಂತೆ ನೋಡುವ ಜವಾಬ್ದಾರಿ ಇಲ್ಲದ ಮಗ

ಪರಿಸ್ಥಿತಿಯ ಲಾಭ ಪಡೆದು ಸತ್ಯವನ್ನ ಮುಚ್ಚಿಹಾಕಿ, ಸಂಕಷ್ಟದಲ್ಲಿದ್ದವರಿಗೆ ನ್ಯಾಯ ದೊರಕದಂತೆ ನೋಡಿಕೊಳ್ಳುವ, ಅಪರಾಧಿಗಳನ್ನು ದುಡ್ಡಿನ ಕಾರಣಕ್ಕಾಗಿ ರಕ್ಷಿಸುವ ಪೊಲೀಸ್ ಅಧಿಕಾರಿ, ಈ ಎಲ್ಲಾ ಪಾತ್ರಗಳು ವ್ಯವಸ್ಥೆಗೆ ಹಿಡಿದ ಕನ್ನಡಿ…

ಇದರ ಸುತ್ತ ನಡೆಯುವ ಮಾನಸಿಕ ತಲ್ಲಣಗಳು ಮತ್ತು ಸಾಮಾಜಿಕ ಪರಿಣಾಮಗಳುಳ್ಳ ಅತ್ಯುತ್ತಮ ಕಥೆ ಆಧಾರಿತ ನಾಟಕ ಕಾಕದೋಷ.

ಸರಳ ಮತ್ತು ಸುಂದರ ರಂಗಸಜ್ಜೆಕೆಯಲ್ಲಿ ಮೂಡಿ ಬಂದ ಈ ನಾಟಕದಲ್ಲಿನ ಹಿನ್ನೆಲೆ ಸಂಗೀತ, ಅದಕ್ಕೆ ತಕ್ಕಂತೆ ರಂಗದ ಮೇಲಿನ ಕಲಾವಿದರ ನಟನೆ ಎರಡು ಗಂಟೆಗಳ ಕಾಲ ನಮ್ಮನ್ನು ಮಂತ್ರ ಮುಗ್ದರನ್ನಾಗಿಸಿತು. ಮಾತ್ರವಲ್ಲ ನಮಗೇ ಗೊತ್ತಿಲ್ಲದೆ ನಮ್ಮೊಳಗೆ ಆಕ್ರೋಶ, ಕಣ್ಣಂಚಲ್ಲಿ ನೀರು ಹೀಗೆ ನಮ್ಮೊಳಗೆ ಹಲವು ತಲ್ಲಣಗಳನ್ನು ಉಂಟು ಮಾಡುವ ಮೂಲಕ ನಾಟಕ ಗೆದ್ದಿದೆ.

ನಾಟಕಕ್ಕಿರುವ ಶಕ್ತಿಯೇ ಹಾಗೆ ಒಂದು ವಿಚಾರವನ್ನ ಕಾವ್ಯಾತ್ಮಕವಾಗಿ ಹೇಳುತ್ತಲೇ ಅದನ್ನು ಹಲವು ಮಗ್ಗುಲಲ್ಲಿ ಚಿಂತನೆಗೆ ಹಚ್ಚುತ್ತದೆ.

ಒಟ್ಟಾರೆ ನಾಟಕದ ಸಂದೇಶ ನಮ್ಮ ನಡವಳಿಕೆ, ಆಲೋಚನೆಗಳು, ಕಷ್ಟಗಳು ನಮ್ಮ ಅರಿವಿಗೆ ಬರದ ದೋಷಗಳಿಂದಾಗಿ ಬರುವಂತಹವಲ್ಲ ಮತ್ತು ಅವುಗಳನ್ನು ದೋಷ ನಿವಾರಣೆಯ ಕಾರ್ಯಗಳಿಂದಲೂ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಒಟ್ಟಾರೆ ಪರಿಸರ ನಮ್ಮನ್ನು ರೂಪಿಸುತ್ತದೆ. ಆ ಪರಿಸರವನ್ನು ಬದಲಾಯಿಸುತ್ತಾ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕೆ ಹೊರತು‌ ದೋಷ ಪರಿಹಾರದ ಶಾಸ್ತ್ರಗಳಿಂದಲ್ಲ..

ಅತ್ಯಂತ ನುರಿತ ಕಲಾವಿದರಾದ  ಗೌರಿ ದತ್ತು, ವಿದ್ಯಾಶ್ರೀ, ನಂದಿನಿ ಪಟವರ್ಧನ್, ಶೃಂಗಾ ಇವರೆಲ್ಲರೂ ನಮ್ಮ ಸುತ್ತಲೇ ಬದುಕುತ್ತಿರುವ ಪಾತ್ರಗಳಂತೆ ನಮ್ಮೊಂದಿಗೆ‌ ಬೆರೆತು ಹೋಗುವಂತೆ ಅಭಿನಹಿಸಿದ್ದಾರೆ. ಅನುಪಮಾ ಚಂದ್ರಶೇಖರ್ ರವರ ಮೂಲ ಇಂಗ್ಲಿಷ್ ಕಥೆಯನ್ನ ಕನ್ನಡಕ್ಕೆ ಅನುವಾದಿಸಿ ವೆಂಕಟೇಶ್ ಪ್ರಸಾದ್ ಅತ್ಯುತ್ತಮವಾಗಿ ನಿರ್ದೇಶಿಸಿದ್ದಾರೆ. ಸುಷ್ಮಾ ನಿರ್ಮಿಸಿದ್ದಾರೆ.


ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು

ಸಿದ್ದ ಮಾದರಿಗಳಲ್ಲಿ ಬದುಕುವ ಹಳೆಯ ತಲೆಮಾರು ಮತ್ತು ವಿದ್ಯಾವಂತ ಪೀಳಿಗೆ ನಡುವೆ ಹೆಚ್ಚೇನು ವ್ಯತ್ಯಾಸ ಇಲ್ಲ. ಮನೆಯ ಎಲ್ಲ ಆಗುಹೋಗುಗಳಿಗೆ ಕಾರಣ ಸತ್ತ ಹಿರಿಯರಿಗೆ ಪ್ರತಿವರ್ಷ ಕಾರ್ಯ ಮಾಡದೇ ಇರುವುದು, ಅದಕ್ಕೆ ಅವರು ಕಾಗೆಗಳಾಗಿ ಪ್ರತಿನಿತ್ಯ ಮನೆ ಹತ್ತಿರ ಬಂದು ಕೂಗುತ್ತವೆ. ಕಾರ್ಯ ಮಾಡಿದರೆ ಎಲ್ಲಾ ಅಡೆತಡೆಗಳು ದೂರಾಗಿ ಶುಭವಾಗುತ್ತದೆ ಎಂದು ನಂಬಿರುವ ಮನೆಯ ಹಿರಿಯಳಾದ ಅಜ್ಜಿ. ವಿದ್ಯಾವಂತೆ ಆಗಿದ್ದರೂ ಹಳೆಯ ನಂಬಿಕೆಗಳಿಗೆ ಜೋತುಬಿದ್ದು ದುಡಿಯುವ ಹೆಣ್ಣನ್ನು ಕೀಳಾಗಿ ಕಾಣುವ ಮನಸ್ಥಿತಿಯ ಜೊತೆಗೆ ತನ್ನ ಮೇಲಾಗುವ ದೌರ್ಜನ್ಯಗಳನ್ನು ತುಟಿ ಬಿಚ್ಚದೆ ಸಹಿಸಿಕೊಂಡು ಬದುಕುವ, ತನ್ನ ಕಷ್ಟಗಳಿಗೆ ಕಿರುಬೆರಳನ್ನು ಎತ್ತಲಾಗದೆ ಅಸಹಾಯಕಳಂತೆ ಕಾಣುವ ಸೊಸೆ. ಸುಳ್ಳುಗಳನ್ನೇ ಹೇಳಿಕೊಂಡು ಕುಡಿದ ಮತ್ತಿನಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಹುಡುಗಿಯ ಮೇಲೆ ಬರ್ಬರವಾಗಿ ಅತ್ಯಾಚಾರ ಮಾಡಿ ಒಳ್ಳೆಯವನ ಸೋಗಿನಲ್ಲಿ ಮನೆ ಸೇರಿಕೊಳ್ಳುವ ಮಗ ಮತ್ತೂ ಮನೆಯಲ್ಲಿ ಕೇರ್ ಟೇಕರ್ ಮೇಲೆ ಅತ್ಯಾಚಾರ ಮಾಡುತ್ತಾನೆ. ಹಿರಿಯರಿಗೆ ತರ್ಪಣ ಕೊಟ್ಟರೂ ಏನೇನೂ ಬದಲಾವಣೆ ಕಾಣದೆ ಕೊನೆಗೆ ಎಲ್ಲಾ ಘಟನೆಗಳಿಗೂ ಈ ಮನೆಯೇ ಕಾರಣವೆಂದೂ ಮನೆಯನ್ನೇ ದೂಷಿಸುತ್ತಾರೆ ಹೊರತು ಮನುಷ್ಯರನ್ನಲ್ಲ. ತನ್ನದೇನೂ ತಪ್ಪಿಲ್ಲದಿದ್ದರೂ ನ್ಯಾಯಕ್ಕಾಗಿ ಪರಿತಪಿಸಿದವನೇ ಜೈಲು ಸೇರುವ ಸನ್ನಿವೇಶ.

ಈ ನಾಟಕದ ನಾಯಕ ಲಿಬಿಡೋ ಅವಸ್ಥೆಯಿಂದ ಈಡಿಪಸ್ ಅವಸ್ಥೆಗೆ ದಾಟಿ ಕ್ರೂರವಾದ ಲೈಂಗಿಕತೆಯ ಮನಸ್ಥಿತಿ ಹೊಂದಿರುತ್ತಾನೆ. ಹೆಣ್ಣೆಂದರೆ ಯಾವ ಗಂಡನ್ನು ತಲೆ ಎತ್ತಿ ನೋಡದವಳು ಒಳ್ಳೆಯವಳು ಎಂಬ ಪಾವಿತ್ರ್ಯದ ಪರಿಕಲ್ಪನೆ ಆರೋಪಿಸಿ ಅತ್ಯಾಚಾರಕ್ಕೆ ಸಮಜಾಯಿಷಿ ಕೊಡುತ್ತಾನೆ. ಅದು ತನ್ನದೇನೂ ತಪ್ಪಿಲ್ಲ ಅವಳು ದಿಟ್ಟಿಸಿ ನನ್ನನ್ನು ನೋಡಿದ್ದೆ ತಪ್ಪು ಎಂಬ ಹಳೆಯ ಸವಕಲು ಮಾದರಿಯಲ್ಲೇ ಜೀನ್ಸ್ ಪ್ಯಾಂಟ್ ಟೀ ಶರ್ಟ್ ತೊಟ್ಟವನು ಉದ್ಗರಿಸುತ್ತಾನೆ. ಆರೋಗ್ಯ ಹದಗೆಟ್ಟ ಮನೆಯ ಹಿರಿಯಳನ್ನು ನೋಡಿಕೊಳ್ಳಲು ಬರುವ ನರ್ಸ್ ಹೊಸಕಾಲದ ಸಮಸ್ಯೆಯೊಂದಿಗೆ ಮುಖಾಮುಖಿಯಾಗುತ್ತಾಳೆ. ಹಳೆಯ ಮರ ಕಡಿಯುವುದರೊಂದಿಗೆ ಹೊಸಬೆಳಕು ಮೂಡುವುದನ್ನು ಆಸ್ವಾದಿಸುವ ಹೊಸ ತಲೆಮಾರು, ಅದೇ ಕತ್ತಲೆ ಬೇಕು ಎಂದು ಹಳೆಯದಕ್ಕೆ ಜೋತು ಬೀಳುವ ಹಳೆಯ ತಲೆಮಾರು ಮೂರು ತಲೆಮಾರುಗಳ ಒಂದೇ ಬಿತ್ತನೆಯ ಅಸ್ತಿತ್ವವಾದದ ಮತ್ತು ಬದಲಾವಣೆಗಳಿಲ್ಲದ ಮನುಷ್ಯನು ಪರಂಪರೆಗೆ ಜೋತುಬೀಳುತ್ತಾನೆ. ಒಟ್ಟಾರೆಯಾಗಿ ಹೇಳುವುದಾದರೆ ನಾಟಕದಲ್ಲಿ ಹಳೆಯ ಚಿಂತನೆಗಳ ಬೇರೆ ಫಲಕೊಡುವ ಮನಸ್ಥಿತಿ ಇದೆ.

 

 

Donate Janashakthi Media

Leave a Reply

Your email address will not be published. Required fields are marked *