ಗುರುರಾಜ ದೇಸಾಯಿ
(ಇಲ್ಲಿಯವರೆಗೆ… “ಶ್ರೀಧರ್ ಮತ್ತು ನಾಗ್ಯಾನನ್ನು ದೂರ ಮಾಡಿದಷ್ಟು ಅವರ ಸ್ನೇಹ ಗಟ್ಟಿಯಾಗುತ್ತಾ ಹೋಗುತ್ತದೆ. ಧಣಿಯ ಅಣತಿಯಂತೆ ಸಂಗಪ್ಪ ಮಾಸ್ತರ್ ಇವರಿಬ್ಬರನ್ನು ಅಗಲಿಸುವ ಪ್ರಯತ್ನ ಮಾಡಿ ಸೋಲುತ್ತಾರೆ. ಇತ್ತ ಕೇರಿಯ ಜನ ಸಂಘಟಿತರಾಗಿರುವುದನ್ನು ಮುರಿಯುವುದಕ್ಕಾಗಿ ಧಣಿಯ ದೌರ್ಜನ್ಯಗಳು ಹೆಚ್ಚಾಗುತ್ತಲೆ ಹೋಗುತ್ತವೆ.. ಮುಂದೆ ಓದಿ…. ) ಗಾಯ
ಕತ್ತಲು ಕಳೆದು ಬೆಳಗಾಗುವುದರೊಳಗೆ ತಪಗಲೂರು ಮತ್ತೆ ರಕ್ತ ಕಾರಿಕೊಂಡಿತ್ತು!!!! ಜನ ಮನೆಯಿಂದ ಆಚೆ ಬರದೆ, ಚಳಿಯಲ್ಲೂ ಬೆವರತೊಡಗಿದ್ದರು. ಪತ್ರಕರ್ತ ರಾಜಣ್ಣನನ್ನು ಕರೆದುಕೊಂಡು ಬರಲು ಹೋಗಿದ್ದ ಚೂರಿ ಪರ್ಸ್ಯಾ, ಕೇರಿಯ ದುರ್ಗವ್ವನ ಗುಡಿ ಮುಂದೆ ಹೆಣವಾಗಿ ಬಿದ್ದಿದ್ದ!!!!.
ಚೂರಿ ಪರ್ಸ್ಯಾ ಕೊಲೆಯಾಗಿದ್ದ!!! ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಮಾಡಿದವರು, ಮಾಡಿಸಿದವರು ಯಾರು ಎಂಬುದು ನಿಚ್ಚಳವಾಗಿದ್ದರೂ… ಹೇಳುವ ಧೈರ್ಯ ಯಾರಿಗೂ ಇರಲಿಲ್ಲ. ಪ್ರಶ್ನಿಸುವುದು, ಪೊಲೀಸರಿಗೆ ದೂರು ಕೊಡುವುದು ದೂರದ ಮಾತಾಗಿತ್ತು.
ಚೂರಿ ಪರ್ಸಾನ ರುಂಡ ಹಾಗೂ ಮುಂಡ ಬೇರ್ಪಟ್ಟಿತ್ತು. ಗುಡಿಯ ಸುತ್ತಲಿದ್ದ ಜನ ಮನೆಯ ಕಿಟಕಿಯಿಂದ ನೋಡಿ, ಕಣ್ಣುಚ್ಚಿಕೊಂಡು ಎದೆ ಒಡೆದುಕೊಳ್ಳುವಂತೆ ಅಳುತ್ತಿದ್ದರು.
ಸ್ವಲ್ಪ ಸಮಯ ಕಳೆದ ನಂತರ ಮಲ್ಯಾ ಮತ್ತು ದೇವ್ಯಾ ಗುಡಿಯ ಹತ್ತಿರ ಬಂದು, ರುಂಡ… ಮುಂಡ… ಬೇರ್ಪಟ್ಟಿದ್ದ ಚೂರಿ ಪರ್ಸ್ಯಾನ ಹೆಣವನ್ನು ನೋಡಿ ಮಮ್ಮಲ ಮರುಗಿದರು. ಗಟ್ಟಿಯಾಗಿ ಅಲ್ಲದಿದ್ದರೂ “ಕೊಂದೋರು ಯಾರಂತ ಗೊತ್ತೈತಿ… ಇದಕ್ಕೆಲ್ಲ ನಾವು ಹೆದರಂಗಿಲ್ಲ… ಈ ರೀತಿ ಹತ್ತಿಕ್ಕಿದಷ್ಟು ಪುಟಿದೇಳೋದು ಹ್ಯಾಂಗ ಅಂತ ಗೊತ್ತೈತಿ” ಎಂದು ಮಲ್ಯಾ ಕೂಗಾಡುತ್ತಿದ್ದ. ಸಮಯ ಕಳೆದಂತೆ ಕೇರಿಯ ಮಂದಿ ಚೂರಿ ಪರ್ಸ್ಯಾನ ಸುತ್ತುವರಿದರು. ಗಾಯ
ಕೇರಿಯ ಯುವಕರ ರಕ್ತ ಕುದಿಯುತ್ತಿತ್ತು. ಮೊನ್ನೆ ಹಿರಿಯ, ಇಂದು ಚೂರಿ ಪರ್ಸ್ಯಾ ನಾಳೆ ಮತ್ಯಾರನ್ನ ಕೊಲೆ ಮಾಡ್ತಾರೋ!!! ಎಂದು ಪೇಚಾಡುತ್ತಿದ್ದ ಯುವಕರ ಬಳಿ ಮಲ್ಯಾ ಮತ್ತು ದೇವ್ಯಾ ಬಂದು ಸಮಾಧಾನ ಮಾಡಿದರು.
“ ನೋಡ್ರಿ ಹುಡ್ಗುರ… ನಾವು ಒಗ್ಗಟ್ಟ ಆಗಿದ್ದಕ್ಕ ಊರ ಹಿರಿಯರು ಅಂಜ್ಯಾರ… ಅನ್ನೊದು ಗೊತ್ತಾತು. ಅದಕ್ಕೆ ಈ ಕೊಲೆಗಳನ್ನ ಮಾಡಿ ನಮ್ಮ ಒಗ್ಗಟ್ಟನ್ನ ಹೊಡೀಯಾಕ ಹಿಂಗ ದೌರ್ಜನ್ಯ ನಡಿಸ್ಯಾರ… ನಾವು ಅಂಜಬಾರ್ದು ಎಂದ ದೇವ್ಯಾ.
ದೇವಪ್ಪಣ್ಣ, ನಮಗ ಅಂಜಿಕಿ ಏನೂ ಇಲ್ಲ, ಒಬ್ಬೊಬ್ಬರ್ನ ಹಿಂಗ ಕಳಕೊಂತ ಹೋದ್ರ ಮನಿ ಮಂದಿ ಹೆದರ್ತಾರ ಅದು ನಮಗ ಚಿಂತಿ ಆಗೈತಿ ಎಂದ ಒಬ್ಬ ಯುವಕ.
ಇಲ್ಲ… ಇಲ್ಲ…. ಹಂಗ ಆಗಕ ಬಿಡೋದು ಬ್ಯಾಡ… ಈ ವಿಷಯ ರಾಜಣ್ಣಗ ಪಕ್ಕಾ ಗೊತ್ತಾಕ್ಕೈತಿ… ಇಲ್ಲಾ ಅಂದ್ರ ಹೆಂಗರ ಮಾಡಿ ನಾವ… ಸುದ್ದಿ ಮುಟ್ಸೋಣ… ಎಂದ ದೇವ್ಯಾ.
ಈಗೇನು ಮಾಡೋದು? ನಡೀರಿ ಸುಮ್ನೆ ಕುಂತಷ್ಟು ವ್ಯಾಳೆ ಅಕ್ಕೈತಿ!!! ಹಂಗಾಗಿ ಮುಂದಿನ ಕಾರ್ಯ ಏನೈತಿ ಅದನ್ನ ಮಾಡಣ ನಡೀರಿ ಎಂದ ಮಲ್ಯಾ.
ಆತು… ಆತು… ಎಂದು ಯುವಕರು ಹೆಣವನ್ನು ಎತ್ತಲು ಮುಂದಾಗುತ್ತಾರೆ…
ತಡೀರಿ!!! ತಡೀರಿ!!! ಎಂದು ದೇವ್ಯಾ ಕೂಗುತ್ತಾನೆ!!!
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ – 17 | ಜಾತಿ ಮೀರಿದ ಗೆಳೆತನ : ಉಲ್ಬಣಗೊಂಡ ಧಣಿಯ ಕೋಪ
ಯಾಕ ದೇವಣ್ಣ? ಯಾಕ ತಡೀ ಅಂತಿ? ಯಾವಾಗಿದ್ರು ಕಾರ್ಯ ಮಾಡೋದ… ಬರ್ರಿ ಮಾಡಣ… ನಮ್ಮನ್ನ ಬಿಟ್ರ ಪರ್ಸ್ಯಾಗ ಯಾರದರ ಹೇಳು? ಎಂದು ಸಣ್ಣ್ಯಾ… ದೇವಣ್ಣನ ಹೆಗಲು ಮುಟ್ಟಿದ.
ಕಾರ್ಯ ಮಾಡೋಣಂತ… ರಾಜಣ್ಣ ಆವತ್ತು ಹೇಳಿದ್ದು ಎಲ್ಲರಿಗೂ ನೆಪ್ಪ ಐತಾ??? ಅಂಬೇಡ್ಕರ್… ಮಾರ್ಕ್ಸ್…??? ಅನ್ಯಾಯನ ಪ್ರಶ್ನೆ ಮಾಡಲಿಲ್ಲ ಅಂದ್ರ ದೌರ್ಜನ್ಯ ಹೆಚ್ಚಾಕ್ತವ ಅಂತ ಹೇಳಿದ್ರಲ್ಲ…
ಹಾಂ… ಹೌದು!! ಏನ್ ಮಾಡಣ ಅಂತಿರಿ ಈಗ? ಎಂದರು ಕೇರಿಯ ಹುಡುಗರು.
ಈ ಸಾವಿಗೆ ನಾವು ನ್ಯಾಯ ಕೇಳಬೇಕು! ದೇವ್ಯಾನೊಳಗಿದ್ದ ಆಕ್ರೋಶ ಹೊರಹೊಮ್ಮಿತು.
ನ್ಯಾಯ? ಅದು ಹೆಂಗ? ಅರ್ಥವಾಗದವರಂತೆ ಹುಡುಗರು ಪ್ರಶ್ನಿಸಿದರು.
ದೇವ್ಯಾ… ಮಲ್ಯಾನನ್ನು ಹತ್ತಿರ ಕರೆದು ಏನೋ ಮಾತನಾಡಿದ. ಒಲ್ಲದ ಮನಸ್ಸಿನಿಂದ ಮಲ್ಯಾ ಒಪ್ಪಿಕೊಳ್ಳುತ್ತಾ….
ನೀ ಹೇಳೋದ್ರಿಂದ ಪ್ರಯೋಜನ ಅಕ್ಕೈತಿ ಅಂದ್ರ… ಹಂಗ ಮಾಡೋಣ ದೇವಣ್ಣ ಎಂದ ಮಲ್ಯಾ…
ಮಲ್ಯಾ ಸಮ್ಮತಿ ಸೂಚಿಸಿದ್ದರಿಂದ, ದೇವ್ಯಾ ಧೈರ್ಯವಾಗಿ ಹುಡುಗರನ್ನ ಕರೆದು ತಾವಂದುಕೊಂಡಿದ್ದನ್ನು ಹೇಳಿದ. ಅಷ್ಟರಲ್ಲಿ ಪತ್ರಕರ್ತ ರಾಜಣ್ಣ ಇವರಿದ್ದ ಜಾಗಕ್ಕೆ ಬಂದ.
ಸುದ್ದಿ ತಿಳಿತು… ಹಂಗಾಗಿ… ಕೈಯಾಗಿನ ಕೆಲಸ ಬಿಟ್ಟು…. ಲಗೂನ ಬಂದೆ. ಹಿಂಗಾಗಬಾರ್ದಿತ್ತು!!! ಎಂದು ರಾಜಣ್ಣ ಪೇಚಾಡಿದ. ಶವದ ಬಳಿ ಹೋಗಿ ಹೂವಿನ ಹಾರ ಹಾಕಿ ಮಾತಿಲ್ಲದೆ ಎಲ್ಲರನ್ನೂ… ನೋಡಿದ. ತನಗೆ ತಾನೇ… ಸಮಾಧಾನ ಮಾಡಿಕೊಂಡು ಯಾಕೆ ಹಿಂಗಾಯ್ತು? ಎಂದ.
ಮಲ್ಯಾ ನಡೆದ ಘಟನೆ ವಿವರಿಸುತ್ತಾ… ನಿಮ್ಮನ್ನ ಕರ್ಕೊಂಡು ಬರ್ತಿನಿ ಅಂತ ಹೋದಾವ, ಹೆಣ ಆಗಿ ಮಲ್ಗ್ಯಾನ ನೋಡ್ರಿ ಎಂದ…
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ – 18 | ಕೇರಿ ಮಕ್ಕಳ ಅಕ್ಷರ ಕಲಿಕೆಗೆ ಅಡ್ಡಿಪಡಿಸಿದ ಧಣಿ
ಹುಡುಗರೆಲ್ಲ ರಾಜಣ್ಣನನ್ನು ಸುತ್ತುವರೆದು ಕುಳಿತುಕೊಂಡರು. ರಾಜಣ್ಣಾರ… ನೀವು ಬಂದಿದ್ದು ನಮಗ ಭೀಮ ಬಲ ಬಂದಂಗ ಆತು ನೋಡ್ರಿ… ಈ ಕೊಲೆ ಯಾರ ಮಾಡ್ಯಾರ ಅನ್ನೊದು ನಮಗೂ ಗೊತ್ತೈತಿ, ನಿಮಗೂ ಗೊತ್ತೈತಿ… ಈ ಸಾವಿಗೆ ಊರಮಂದಿ ಹತ್ರ ನ್ಯಾಯಕೇಳಬೇಕು ಅಂತ ನಾನು ಮಲ್ಯಾ ಮಾತಾಡ್ಕೊಂಡಿವ್ರಿ… ಹೆಂಗ ಮಾಡೋದು? ಏನೂ ಅಂತ ನೀವ… ನಮಗ ದಾರಿ ತೋರಿಸಬೇಕ್ರಿ… ಎಂದು ಕೇಳಿದ ದೇವ್ಯಾ…
ಹೌದು… ಇವನ ಸಾವಿಗೆ ನ್ಯಾಯ ಕೇಳಾಕಬೇಕು. ಕೇರಿ ಮಂದಿ ಮ್ಯಾಲೆ ನಡೆಯೋ ದೌರ್ಜನ್ಯ ನಿಲ್ಲಬೇಕು ಅನ್ನೋದು ನಮ್ಮ ಚೂರಿ ಪರ್ಸ್ಯಾನ ಕನಸು… ಈಗ ಅವ ಇಲ್ಲ… ಅವನ್ಗೆ ಆದ ಅನ್ಯಾಯನ ಪ್ರಶ್ನೆ ಮಾಡಬೇಕು. ಹೆದ್ರಿಸೋ ಮಂದಿಗೆ ನಾವು ಹೆದರಿಲ್ಲ…, ಹೆದರೋಜನ ಅಲ್ಲ… ಅನ್ನೋದನ್ನ … ತೋರಿಸಬೇಕು ಎಂದ ರಾಜಣ್ಣ….
ಆತ್ರಿ ರಾಜಣ್ಣಾರ… ಈಗ ಏನ್ ಮಾಡೋಣ ಹೇಳ್ರಿ??? ಎಂದು ಹುಡುಗರು ಪ್ರಶ್ನಿಸಿದರು.
ಸ್ವಲ್ಪ ಸಮಯ ಯೋಚಿಸುತ್ತಾ ಕುಳಿತಿದ್ದ ರಾಜಣ್ಣ… ” ನಾಳೇ ನಿಮ್ಮೂರ ಜಾತ್ರಿ ಐತಿ ಅಲಾ” ಎಂದು ಪ್ರಶ್ನಿಸಿದ…
ಹುಬ್ಬುಗಂಟಿಕ್ಕೆ!!! ಹೌದು… ಎಂದು ಹುಡುಗರು ತಲೆ ಅಲ್ಲಾಡಿಸಿದರು…
ನಮಗ ಒಳ್ಳೆ ವ್ಯಾಳೆ ಐತಿ… ಪರ್ಸ್ಯಾನ ಮಣ್ಣು ಇವತ್ತ… ಮಾಡೋದು ಬ್ಯಾಡ…
ಊರ ಜಾತ್ರಿಗೆ ಸುತ್ತೂರ ಮಂದಿ ಬಂದಿರ್ತಾರ… ಈ ಕೊಲೆ ಯಾಕ ಆತು? ಅಂತ ಎಲ್ಲರಿಗೂ ತಿಳಿಸೋಣ… ಜೋರಾಗಿ ಗಲಾಟೆ ಮಾಡೋಣ…. ಪ್ರತಿಭಟನೆ ಮಾಡೋಣ… ಎಂದು ರಾಜಣ್ಣ ಅವರನ್ನು ಹುರಿದುಂಬಿಸಿದ.
ಇದೆಲ್ಲ ಆಕ್ಕೈತಾ ರಾಜಣ್ಣಾರಾ… ಜಾತ್ರಿ ಮಾಡಬೇಕು… ಹೆಣ… ಎತ್ರಿ… ಅಂತ ಊರ ಮಂದಿ ಗಲಾಟಿ ಮಾಡಿದ್ರ? ಎಂದು ಚೆಲ್ವ ಕೇಳಿದ..
ಏನೂ ಆಗಲ್ಲ. ನಿಮ್ಮ ಊರಾಗ ಆ ನಾಲ್ಕು ಮಂದಿ ಬಿಟ್ರ ಅವರ ಬಾಲಂಗೋಚಿಗಳು ಒಂದ್ಹತ್ತು ಮಂದಿ ಕೆಟ್ಟ ಹುಳಗಳು ಅದಾವ… ಇವರ ಬಿಟ್ರ ಉಳಿದ ಮಂದಿ ಬಾಳ ಒಳ್ಳೇರ ಅದಾರ… ವಿರೋಧ ಮಾಡಿದ್ರ ಆ ನಾಲ್ಕು ಮಂದಿಯ ಬಾಲಂಗೋಚಿಗಳು ಗಲಾಟೆ ಮಾಡಬಹುದು ಅಷ್ಟೆ. ಅದನ್ನ ತಡಿಯೋದು ಹೆಂಗ ಅಂತ ನಂಗ ಗೊತ್ತೈತಿ… ನೀವು ಚಿಂತಿ ಮಾಡಬ್ಯಾಡ್ರಿ ಎಂದು ರಾಜಣ್ಣ ಧೈರ್ಯ ನೀಡಿದ.
ಅಲ್ಲಿರುವವರೂ ಒಬ್ಬರೂ… ಮಾತನಾಡದೆ, ಸುಮ್ಮನೆ ಒಬ್ಬರಿಗೊಬ್ಬರು ಮುಖ ನೋಡತೊಡಗಿದರು.
ಬಹಳ ಹೊತ್ತಿನವರೆಗೆ ಇದೇ ಚರ್ಚೆ… ನಡೆಯುತಿತ್ತು… ರಾಜಣ್ಣ ಅವರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದನು. ಆಯಿತು ರಾಜಣ್ಣಾರಾ… ಎಂದು ಎಲ್ಲರೂ ತಲೆ ಅಲ್ಲಾಡಿಸಿದರು.
ಚೆಲ್ವಾ… ನನ್ನ ಗಾಡಿಯೊಳಗ ಧ್ವಜ ಅದಾವ ತೊಗೊಂಡು ಬಾ…. ಮಲ್ಲಪ್ಪ… ದೇವಪ್ಪ… ಒಂದಿಪ್ಪತ್ತು ಕೋಲು ತೊಗೊಂಡು ಬರ್ರಿ… ಎಂದ ರಾಜಣ್ಣ.
ಸ್ವಲ್ಪ ಸಮಯ ಕಳೆದ ನಂತರ… ಕೆಂಪು ಮತ್ತು ನೀಲಿ ಬಣ್ಣದ ಧ್ವಜಗಳು ಸಿದ್ದವಾದವು. ಚೂರಿ ಪರ್ಸ್ಯಾನ ಹೆಣದ ಮುಂದೆ ಎಲ್ಲರೂ ಕುಳಿತುಕೊಂಡು ಘೋಷಣೆಗಳನ್ನು ಮೊಳಗಲಾರಂಭಿಸಿದರು….
ಬೇಕೆ… ಬೇಕು… ನ್ಯಾಯ… ಬೇಕು…
ಬೇಕೆ… ಬೇಕು… ನ್ಯಾಯ… ಬೇಕು…
ದಲಿತರ ಮೇಲೆ ದೌರ್ಜನ್ಯ ನಡೆಸಿದ ಸವರ್ಣೀಯಶಾಹಿಗೆ ಹೇಳಿ ಧಿಕ್ಕಾರ…
ಚೂರಿ ಪರ್ಸ್ಯಾನನ್ನು ಕೊಂದವರಿಗೆ ಶಿಕ್ಷೆಯಾಗಲಿ….
ಸರ್ವಾಧಿಕಾರ ನಾಶವಾಗಲಿ… ಸಮಾನತೆ ಬೆಳೆಯಲಿ….
ಹೀಗೆ ಘೋಷಣೆಗಳು ಮೊಳಗುತ್ತಲೇ ಇದ್ದವು. ಘೋಷಣೆಗಳ ಸದ್ದು ಜೋರಾಗುತ್ತದೆ. ಹೋರಾಟ ಆರಂಭಿಸಿದ ಸುದ್ದಿ ಧಣಿಯ ಮನೆ ತಲುಪಿತು.
( ಮುಂದುವರೆಯುವುದು……….)
ಈ ವಿಡಿಯೋ ನೋಡಿ : ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್